ಗುಲ್ಬರ್ಗಾ

ಮನೆಮನೆಗೆ ತೆರಳಿ ರೇವು ನಾಯಕ ಬೆಳಮಗಿ ಮತಯಾಚನೆ

Published On :

ಶಹಾಬಾದ್: ಗುಲ್ಬರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಗುರುವಾರ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಭಂಕೂರ ಗ್ರಾಮದಲ್ಲಿ ಮನೆಮನೆಗೆ ತೆರಳಿ ಮತ ಯಾಚಿಸಿದರು.
 ಗ್ರಾಮದೇವತೆ ಕರೆಯಮ್ಮಾ ದೇವಿಯ ದರ್ಶನ ಪಡೆದ ಬೆಳಮಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಶಹಾಬಾದ್ ನಗರ ಘಟಕದ ಅಧ್ಯಕ್ಷ ಶಾಂತರೆಡ್ಡಿ ದಂಡಗುಲಕರ್, ತಾಪಂ ಸದಸ್ಯ ನಿಂಗಣ್ಣ ಹುಳಗೋಳ, ಭಂಕೂರ ಶಕ್ತಿ ಕೇಂದ್ರದ ಅಧ್ಯಕ್ಷ ಅನೀಲಕುಮಾರ ಅಲ್ಲಮಶೆಟ್ಟಿ, ಡಾ. ಅಶೋಕ ಜಿಂಗಾಡೆ, ಅರುಣಕುಮಾರ ಪಟ್ಟಣಕರ್, ಕನಕಪ್ಪ ದಂಡಗುಲಕರ್, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಶ್ರೀಧರ ಜೋಶಿ, ನವನಾಥ ಕುಸಾಳೆ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡರು.
ಬೆಳಮಗಿ, ಸಿ. ಗುರುನಾಥ ಭೇಟಿ: ಭಂಕೂರ ಗ್ರಾಮದಲ್ಲಿ ಪಾದಯಾತ್ರೆಯ ಮೂಲಕ ಪ್ರಚಾರ ನಡೆಸಿದ ರೇವುನಾಯಕ ಬೆಳಮಗಿ ಶಹಾಬಾದ್ ನಗರಕ್ಕೆ ಆಗಮಿಸಿ ಮಾಜಿ ಸಚಿವ ಸಿ. ಗುರುನಾಥರನ್ನು ಭೇಟಿ ಮಾಡಿ, ಬೆಂಬಲಿಸಲು ಕೋರಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸಿ.ಗುರುನಾಥರು ಸ್ಥಳೀಯವಾಗಿ ತಂಡ ನಿರ್ಮಿಸಿ ಬೆಳಮಗಿಯವರ ಗೆಲವಿಗೆ ಶ್ರಮಿಸುವುದಾಗಿ ಆಶ್ವಾಸನೆ ನೀಡಿದರು.

ಶಿಸ್ತಿಗೆ ಸ್ಕೌಟ್ಸ್, ಗೈಡ್ಸ್ ಸಹಕಾರಿ
ಯಾದಗಿರಿ: ಸ್ಕೌಟ್ಸ್, ಗೈಡ್ನಂತಹ ಸಂಘಟನೆಗಳು ವಿದ್ಯಾರ್ಥಿಗಳಲ್ಲಿ ಎಳವೆಯಲ್ಲೇ ಜೀವನದಲ್ಲಿ ಶಿಸ್ತನ್ನು ಅಳವಡಿಸಲು ಸಹಕಾರಿಯಾಗಿವೆ ಎಂದು ಡಾನ್ ಬಾಸ್ಕೊ ಶಿಕ್ಷಣ ಸಂಸ್ಥೆಯ ನಿದೇರ್ಶಕ ಫಾ. ಸಜ್ಜಿ ಜಾರ್ಜ್ ಹೇಳಿದ್ದಾರೆ.  ನಗರದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ, ನಾಲ್ಕು ದಿನಗಳ ಭಾರತ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಹಾಗೂ ದ್ವೀತಿಯ ಸೋಪಾನ ಸ್ಕೌಟ್  ಮಕ್ಕಳ ಪೂರ್ವಭಾವಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಬಿರದಲ್ಲಿ ಸ್ಕೌಟ್ ವಿಭಾಗಕ್ಕೆ ಡಿ. ಬಸವರಾಜ ನಾಯಕರಾಗಿದ್ದರು.  ಗೈಡ್ ವಿಭಾಗಕ್ಕೆ ಬೆಂಜಮಿನ್  ನಾಯಕರಾಗಿ  ಕೆಲಸರ್ಟ್ಸ್ವಹಿಸಿದರು. ಶಿಬಿರದಲ್ಲಿ ಬಾಬುರಾವ ನಿಂಬೂರೆ, ಸುರೇಶ, ಬಸವರಾಜ ಗೋಗಿ, ಜಿಲ್ಲಾ ಸಂಘಟನಾ ಆಯುಕ್ತ ರಾಘವೇಂದ್ರ, ಶಂಕರ ಸೋನಾರ್ ಇದ್ದರು.

ವೆಂಕಟೇಶಗೆ ಗೌಡಾ: ಬಂಟನೂರ ಹರ್ಷ
ಕೆಂಭಾವಿ: ಹಿಂದುಸ್ತಾನಿ ಗಾಯಕ ವೆಂಕಟೇಶ ಕುಮಾರ ಅವರಿಗೆ ಧಾರವಾಡ ಕವಿವಿ ಗೌರವ ಡಾಕ್ಟರೇಟ್ ನೀಡಿದ್ದಕ್ಕೆ ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯ ಬಸವರಾಜ ಬಂಟನೂರ ಹರ್ಷ ವ್ಯಕ್ತಪಡಿಸಿದ್ದಾರೆ. ಗದಗಿನ ಪಂ. ಪುಟ್ಟರಾಜ ಗವಾಯಿಗಳಲ್ಲಿ ಸಂಗೀತ ಅಭ್ಯಾಸ ಮಾಡಿದ ಅವರಿಗೆ ಗೌಡಾ  ನೀಡಿದ್ದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

ಐಟಿಐ, ಐಟಿಸಿ ನೌಕರರ ಸಭೆ
ಗುಲ್ಬರ್ಗ: ಕೆಪಿಟಿಸಿಎಲ್, ಐಟಿಐ, ಐಟಿಸಿ ನೌಕರರ ಸಂಘದ ವತಿಯಡಿ ಇತ್ತೀಚೆಗೆ ನಗರದ ಪರ್ಯಾಯ ಸಮಾಜ ಕಾರ್ಯ ಪದವಿ ಕಾಲೇಜು ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯನ್ನುದ್ಧೇಶಿಸಿ ಮಾತನಾಡಿದ ರಾಜ್ಯ ಸಂಚಾಲಕ ಮಹ್ಮದ ಶಮಿವುಲ್ಲಾ,  ನೌಕರರ ಅಧ್ಯಕ್ಷ ಸ್ಥಾನ ಅಲಂಕರಿಸಿದ ಎಂ. ನಾಗರಾಜರವರು ತಮ್ಮ  ಹುದ್ದೆ ಕಡೆ ಗಮನ ಹರಿಸಿದರೇ ಹೊರತು ಐಟಿಐ ಮತ್ತು ಐಟಿಸಿ ನೌಕರರ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಸಂಘದ ಬೇಡಿಕೆಗಳನ್ನು ಕೂಡಾ ಈಡೇರಿಸುವಲ್ಲಿ ವಿಫಲರಾದರು ಎಂದು ಆರೋಪಿಸಿದರು.  ನೌಕರರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಸಭೆಯಲ್ಲಿ ಐಟಿಐ, ಐಟಿಸಿ ನೌಕರರ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾಠೋಡ ಇದ್ದರು.  ರಾಜ್ಯದಲ್ಲಿ 10 ಸಾವಿರ ಐಟಿಐ, ಐಟಿಸಿ ನೌಕರರು ಇದ್ದಾರೆ. ಇವರೆಲ್ಲರನ್ನೂ ಸೇರಿಸಿ ಬೆಂಗಳೂರಿನಲ್ಲಿ  ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ

ಕಾರ್ಯಾಗಾರ ಇಂದು
ಗುಲ್ಬರ್ಗ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ  ಮಾ.28ರಂದು ಯುವ ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗುವಿವಿ ಕುಲಸಚಿವ ಡಾ. ಚಂದ್ರಕಾಂತ ಉದ್ಘಾಟಿಸುವರು. ಜಿಲ್ಲಾ ವಿಜ್ಞಾನ ಅಧಿಕಾರಿ ಲಕ್ಷ್ಮಿನಾರಾಯಣ ಅತಿಥಿಗಳಾಗಿ ಆಗಮಿಸುವರು. ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸುವರು.

ಜೆಡಿಎಸ್ ಆಹ್ವಾನ
ಗುಲ್ಬರ್ಗ: ಕೆಜೆಪಿ ಪಕ್ಷ ಬಿಜೆಪಿಯಲ್ಲಿ ವಿಲೀನವಾದ ನಂತರ ರಾಜಕೀಯವಾಗಿ ದೂರವಾಗಿದ್ದ ಯುವ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಅವರನ್ನು ಜೆಡಿಎಸ್ ಮುಖಂಡ ಡೇವಿಡ್ ಸಿಮೇಯಾನ್ ಹಾಗೂ ಗುಲ್ಬರ್ಗ ಲೋಕಸಭಾ ಅಭ್ಯರ್ಥಿ ಡಿ.ಜೆ. ಸಾಗರ, ಪಾಲಿಕೆ ಸದಸ್ಯ ಮಹ್ಮದ್ ಫೈಜಲ್, ಮಾಜಿ ಸದಸ್ಯ ಖಾಜಿಂ ಬೇಗ ಇಬ್ರಾಹಿಂ ಸೇರಿದಂತೆ ಸೂರ್ಯಕಾಂತ ನಿಂಬಾಳಕರ್ ಇತರರು ಜೆಡಿಎಸ್ ಸೇರುವಂತೆ ಒತ್ತಾಯ ಮಾಡಿದರು. ಅದಕ್ಕೆ ಪ್ರತಿಕ್ರಯೆ ನೀಡಿದ ನಾಸಿರ್ ಹುಸೇನ್ ಉಸ್ತಾದ್, ಕೆಲ ಪ್ರಮುಖ ಮುಖಂಡರು ಮತ್ತು ಬೆಂಬಲಿಗರ ಜೊತೆ ಚರ್ಚಿಸಿ ಮಾ.28ರಂದು ನಿರ್ಧಾರ ತಿಳಿಸುವುದಾಗಿ ಹೇಳಿದರು ಎಂದು ಮಹ್ಮದ್ ಖಲೀಲ್ ತಿಳಿಸಿದ್ದಾರೆ. ಪಾಟೀಲ ನರಿಬೋಳ, ಮಹ್ಮದ್ ಮೋಹಿನ್ ಸೇಠ್ ಇತರರು ಇದ್ದರು.

ಸಜ್ಜನಶೆಟ್ಟಿಗೆ ಪ್ರಶಸ್ತಿ
ಗುಲ್ಬರ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ವಿಶ್ವ ಟಿ.ಬಿ ದಿನಾಚರಣೆ' ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣದ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವರಾಜ ಸಜ್ಜನಶೆಟ್ಟಿ ಅವರಿಗೆ ಅತ್ಯುತ್ತಮ ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಶಸ್ತಿ ಲಭಿಸಿದೆ. ಜಿಲ್ಲಾ ಖಜಾಂಚಿ ಚಂದ್ರಕಾಂತ ಏರಿ, ವಿಭಾಗೀಯ ಉಪಾಧ್ಯಕ್ಷ ಆನಂದ ತೀರ್ಥ ಜೋಶಿ, ಷಿ. ಕಮಲಾಪುರ ಘಟಕದ ಅಧ್ಯಕ್ಷ ನಾಗೇಂದ್ರಪ್ಪ ಅವರಾದಿ, ಸೈಯದ ಶೌಕತ್ ಅಲಿ, ಭರತ ಹಾಗೂ ಸತೀಶ ಜೋಶಿ, ಖಲೀಲ ಉಲ್ ರೆಹಮಾನ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಅಧ್ಯಕ್ಷ ರಾಜು ಲೇಂಗಟಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.