ಮತದಾನ ಜಾಗೃತಿ ಜೋರು, ಪ್ರಚಾರ ಚೂರು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಮಾ.27
ಪ್ರಚಾರಕ್ಕೆ ಕೇವಲ 21 ದಿನ ಬಾಕಿ. ಆದರೂ ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಇನ್ನೂ ಚುರುಕುಗೊಂಡಿಲ್ಲ. ಬೇಸಿಗೆ ಖಡಕ್ ಬಿಸಿಲಿನ ಪ್ರಖರತೆ ಮುಂದೆ ಪ್ರಚಾರದ ಅಬ್ಬರವೇ ಇಲ್ಲ.
ಮಹಾರಾಷ್ಟ್ರದ ಗಡಿಯಲ್ಲಿರುವ ಅಫಜಲ್ಪುರದಿಂದ ಆಂಧ್ರಪ್ರದೇಶದ ಗಡಿಯಲ್ಲಿರುವ ಗುರುಮಠಕಲ್ವರೆಗಿನ ವ್ಯಾಪ್ತಿಯನ್ನು ಈ ಕ್ಷೇತ್ರ ಹೊಂದಿದೆ. ಆದರೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ಯಾವ ಪ್ರಮಾಣದಲ್ಲಿ ಪ್ರಚಾರ ಕೈಗೊಳ್ಳಬೇಕಾಗಿತ್ತೋ ಆ ಪ್ರಮಾಣದಲ್ಲಿ ಪ್ರಚಾರಕ್ಕೆ ಇಳಿದಿಲ್ಲ.
ಬೇರ ಕ್ಷೇತ್ರಗಳಂತೆ ಇಲ್ಲಿ ಯಾವುದೇ ಪಕ್ಷಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಗೊಂದಲಗಳಿಲ್ಲ. ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಕಾಂಗ್ರೆಸ್ಸಿನಿಂದ ರೇಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ರೇವುನಾಯಕ ಬೆಳಮಗಿ ಬಹುತೇಕ ಖಚಿತವಾಗಿತ್ತು. ಅದೇ ರೀತಿ ಜೆಡಿಎಸ್ನಿಂದ ಡಿ.ಜಿ. ಸಾಗರ್ ಕಣಕ್ಕಿಳಿಯುವುದು ಖಾತರಿಯಾಗಿತ್ತು.
ಖರ್ಗೆ, ರೇವುನಾಯಕ ಹಾಗೂ ಡಿ.ಜಿ. ಸಾಗರ್ ಅವರಲ್ಲದೇ ಆಪ್ ಪಕ್ಷದಿಂದ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ , ಬಿಎಸ್ಪಿಯಿಂದ ಮಹಾದೇವ ಧನ್ನಿ, ಸಂಯುಕ್ತ ಜನತಾದಳದಿಂದ ತಿಪ್ಪಣ್ಣ ಒಡೆಯರ್ ಅವರು ನಾಮಪತ್ರ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಆದರೆ, ಯಾವುದೇ ಪಕ್ಷಗಳ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಸುತ್ತಿಲ್ಲ.
ರ್ಯಾಲಿ ನಂತರ ಎಲ್ಲರೂ ಕೂಲ್ ಕೂಲ್: ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಂದು 'ಭಾರತ ಗೆಲ್ಲಿಸಿ ರ್ಯಾಲಿ' ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿ ಹೋಗಿದ್ದಾರೆ. ಅದಕ್ಕೂ ಮೊದಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಗುಲ್ಬರ್ಗ ವಿಭಾಗ ಮಟ್ಟದ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಹೋಗಿದ್ದಾರೆ. ಇದರ ಜೊತೆಗೆ ಕೆಪಿಸಿಸಿ ಆದೇಶದಂತೆ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ನ 'ಭಾರತ ನಿರ್ಮಾಣ ಯಾತ್ರೆ' ನಡೆದಿದೆ. ಈ ಜಾಥಾಗಳಲ್ಲಿ ಆಡಳಿತರೂಢ ಕಾಂಗ್ರೆಸ್ ಶಾಸಕರು ಪಾಲ್ಗೊಂಡಿದ್ದರು. ಬಿಜೆಪಿ ಕಾಂಗ್ರೆಸ್ಸಿನ ಜಾಥಾದ ನಂತರ ಪ್ರಚಾರದ ವೇಗ ಹೆಚ್ಚಾಗಬೇಕಾಗಿತ್ತು. ಆದರೆ, ಎಲ್ಲಿಯೂ ಅಂತಹ ಅಬ್ಬರ ಕಾಣಿಸುತ್ತಿಲ್ಲ.
ಸೂರ್ಯನ ಪ್ರ'ತಾಪ' ಅಡ್ಡಿ: ಈ ಭಾಗ ಖಡಕ್ ಬಿಸಿಲಿಗೆ ಪ್ರಸಿದ್ಧಿಯಾಗಿದೆ. ಬೇಸಿಗೆ ಬಿಸಿಲು ಹೆಚ್ಚುತ್ತಲೇ ಇದೆ. ಇದು ಕೂಡ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪ್ರಚಾರಕ್ಕೆ ಸ್ವಲ್ಪ ಮಟ್ಟಿಗೆ ಅಡ್ಡಿಯಾಗಿದೆ. ನಿತ್ಯವೂ ಬೆಳಗಿನ 8 ಗಂಟೆಯಿಂದಲೇ ಸೂರ್ಯದೇವ ತನ್ನ ಪ್ರತಾಪ ಪ್ರದರ್ಶಿಸುತ್ತಿದ್ದಾನೆ. ಬೆಳಗಿನಿಂದಲೇ ಶುರುವಾಗುವ ಬಿಸಿಲಿನ ತಾಪ ಸಂಜೆ 6 ಗಂಟೆಯವರೆಗೆ ಮುಂದುವರೆಯುತ್ತದೆ. ಹೀಗಾಗಿ ಕಾರ್ತಕರ್ತರು ಮನೆ ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಗುಲ್ಬರ್ಗ ಗ್ರಾಮೀಣ, ಚಿತ್ತಾಪುರ, ಗುರುಮಠಕಲ್ ಮತ್ತಿತರ ಕಡೆ ಪ್ರಚಾರ ಸಭೆಗಳನ್ನು ನಡೆಸಿ ಬಂದಿದ್ದಾರೆ. ಆದರೆ, ಬಿರುಸಿನ ಪ್ರವಾಸ ಇನ್ನೂ ಪ್ರಾಂರಂಭವಾಗಿಲ್ಲ.
ಕುಸ್ತಿಪಟು ರೇವುನಾಯಕ ಬೆಳಮಗಿ ಸಹ ಬಿಸಿಲಿನಿಂದಾಗಿ ಪ್ರಚಾರಕ್ಕೆ ಕಾವು ನೀಡಲಾಗಿಲ್ಲ. ಕೆಲವು ಗ್ರಾಮಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ್ದರೂ ಪ್ರಚಾರದ ವೇಗ ಇನ್ನೂ ಹೆಚ್ಚಿಲ್ಲ. ಇನ್ನು ಜೆಡಿಎಸ್ನಲ್ಲಿ ಬಿಸಿಲು ಸ್ವಲ್ಪ ಸಂಚಲನ ಮೂಡಿಸಿದೆ. ಇದೇ ಮಾ.29 ನಾಮಪತ್ರ ವಾಪಸ್ಸು ಪಡೆಯುವ ದಿನ. ನಂತರವೇ ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುವ ಸಾಧ್ಯತೆಗಳಿವೆ.
ಜನಮನ ಸೆಳೆಯುತ್ತಿರುವ ನಿಮ್ಮಮತ - ನಿಮ್ಮ ಹಕ್ಕು
ಬಿಸಿಲಿನಿಂದಾಗಿ ಪ್ರಮುಖ ಪಕ್ಷಗಳವರು ಮನೆ ಸೇರಿದ್ದರೆ, ಇತ್ತ ಜಿಲ್ಲಾಡಳಿತ ಮತದಾನ ಅಧಿಕವಾಗಲಿ ಎಂದು ಭರದ ಪ್ರಚಾರ ನಡೆಸಿದೆ. 'ನಿಮ್ಮ ಮತ, ನಿಮ್ಮ ಹಕ್ಕು' ಎಂದು ಜನಮನವನ್ನೆಲ್ಲ ಸೆಳೆಯುತ್ತಿದೆ. ದಾರಿಯುದ್ದಕ್ಕೂ ಪೋಸ್ಟರ್ ಹಚ್ಚುತ್ತ, ಫ್ಲೆಕ್ಸ್ ಹಾಕಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಇದಲ್ಲದೆ ಶಾಲೆಗಳು, ಕಾಲೇಜುಗಳಲ್ಲಿನ ಮಕ್ಕಳು, ಉಪನ್ಯಾಸಕರನ್ನು ಬಳಸಿಕೊಂಡು ಮತದಾನ ಪವಿತ್ರ ಕೆಲಸ ಎಂಬ ಅರಿವಿನ ಜಾಗೃತಿಯನ್ನು ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ.
ಉರಿ ಬಿಸಿಲಿದ್ದರೂ ಲೆಕ್ಕಿಸದೆ ಜಿಲ್ಲಾಡಳಿತದ ಮತದಾನ ಜಾಗೃತಿ ಸಮಿತಿಯ ಸದಸ್ಯರು ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮತದಾನ ಕಡ್ಡಾಯವಾಗಿ ಮಾಡಿ ಎಂಬ ಸಂದೇಶ ಸಾರುತ್ತ ಹೊರಟಿದ್ದಾರೆ.
ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆಯಲ್ಲಿನ ಮಕ್ಕಳು ಗುರುವಾರ ಮತದಾನ ಜಾಗೃತಿ ಜಾಥಾದಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನ ಸೆಳೆದರು.
ಮತದಾನ ಪವಿತ್ರ ಕರ್ತವ್ಯ, ನಿಮ್ಮ ಹಕ್ಕು ಚಲಾಯಿಸಿರಿ, ಉದಾಸೀನತೆ ಬೇಡ. ಉತ್ತಮ ಆಡಳಿತಕ್ಕೆ ನಿಮ್ಮ ಮತವೇ ಮುಖ್ಯ ಎಂಬ ಧ್ಯೇಯ ವಾಕ್ಯಗಳಿರುವ ಫಲಕಗಳನ್ನು ಕೈಯಲ್ಲಿಟ್ಟುಕೊಂಡು ಅಂಧ ಮಕ್ಕಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಇದಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆಯಡಿ ಮತದಾನ ಜಾಗೃತಿ ಕಾರ್ಯಕ್ರಮಗಳು ಭರದಿಂದ ಸಾಗಿವೆ. ಡಿಡಿಪಿಐ ಪರಮೇಶ ನೇತೃತ್ವದಲ್ಲಿ ಗುರುವಾರ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಿದರು.
ವಯಸ್ಕರ ಶಿಕ್ಷಣಾಧಿಕಾರಿ ಅರ್ಚನಾ, ಪಾಲಿಕೆಯ ಸಿಎಒ ವಿಜಯಲಕ್ಷ್ಮೀ ಪಟ್ಟೇದಾರ್, ನಾಗಮ್ಮ ಬೆನಕನಳ್ಳಿ, ಪ್ರಕಾಶ, ಸೇರಿದಂತೆ ನೆರೆಹೊರೆ ಸಮಿತಿಯವರು ಹಾಗೂ ಇತರೆ ಸಂಘಟನೆಗಳ ಸದಸ್ಯರು ಮತದಾನ ಅರಿವಿನ ದೀಪ ಹಚ್ಚುವ ಕೆಲಸಕ್ಕೆ ಮುಂದಾಗಿ ಜನಮನ ಸೆಳೆದರು.
ಮತದಾರರ ಜಾಗೃತಿ ಜಾಥಾ
ಶಹಾಬಾದ್: ಮಾಲಗತ್ತಿ ಗ್ರಾಮದಲ್ಲಿ ಯುವಜನ ಸೇವಾ ಮತ್ತು ಕ್ರೀಡಾಇಲಾಖೆ ಗುಲ್ಬರ್ಗ ಹಾಗೂ ಹೀರೋಡೇಶ್ವರ ಸ್ವಸಹಾಯ ಯುವಕ ಸಂಘ ಮಾಲಗತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು. ನಂತರ ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ. ಲೋಣಿ ಮಾತನಾಡಿ, ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಜಾತಿ, ಮತ, ಪಂಥವನ್ನು ನೋಡಿ ಮತ ಚಲಾಯಿಸದೆ, ಸಮಾಜದ ಬಗ್ಗೆ ಹಾಗೂ ದೇಶದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿರುವ ಪ್ರಾಮಾಣಿಕ ವ್ಯಕ್ತಿಗೆ ಮತ ನೀಡಬೇಕೆಂದು ಹೇಳಿದರು.
ಜಾಥಾದಲ್ಲಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಹಾಗೂ ಊರಿನ ಮುಖ್ಯ ಬೀದಿಗಳಲ್ಲಿ ಶಾಲೆಯ ಮಕ್ಕಳು ಹಾಗೂ ಸಂಘದ ಪದಾಧಿಕಾರಿಗಳು ನಿಮ್ಮ ಮತ ನಿಮ್ಮ ಹಕ್ಕು ಎಂಬ ಘೋಷಣೆ ಕೂಗುತ್ತಾ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಕಾರ್ಯಕಮದಲ್ಲಿ ಹೀರೋಡೇಶ್ವರ ಸಂಘದ ಅಧ್ಯಕ್ಷ ಸಿದ್ದಪ್ಪ ಎಸ್.ಅಲ್ಲೂರ, ಕಾರ್ಯದರ್ಶಿ ಮಲ್ಲಿಕಾರ್ಜುನ ಎಚ್.ಇಟಗಿ, ಪ್ರೌಢಶಾಲೆಯ ಮುಖ್ಯಗುರುಗಳಾದ ಉಮಾಪತಿ ರಾಜು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪಂಡಿತರಾವ ಸೂಲೇಕರ್ ಸಹಶಿಕ್ಷಕರಾದ ಬಸವರಾಜ, ಪ್ರತಿಭಾ, ಶಿರಿನ್ ಬಾನು, ಚಂದ್ರಶೇಖರ ರದ್ದೇವಾಡಿ, ನಾಗರಾಜ ಚನ್ನಗೊಂಡ, ಕಾಲಿಚರಣ ಅಲ್ಲಿಪೂರಕರ್ ಇದ್ದರು.
3 ನಾಮಪತ್ರ ತಿರಸ್ಕೃತ
ಗುಲ್ಬರ್ಗ: ಏಪ್ರಿಲ್ 17ರಂದು ನಡೆಯುವ ಗುಲ್ಬರ್ಗ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರದ ಚುನಾವಣೆಗಾಗಿ ಒಟ್ಟು 17 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನಾ ಕಾರ್ಯ ಗುರುವಾರ ಜರುಗಿತು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಗೋಪಿ, ಸೈಯ್ಯದ್ ಸೋಫಿ, ಕುಪಾವತ್ ವೆಂಕಟೇಶ್ವರರಾವ್ ಅವರ ನಾಮಪತ್ರಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ. ಮಾರ್ಚ್ 29 ರವರೆಗೆ ಉಮೇದುವಾರಿಕೆ ಹಿಂದಕ್ಕೆಪಡೆಯಬಹುದು. ಡಿ.ಜಿ. ಸಾಗರ- ಜೆಡಿಎಸ್, ಮಲ್ಲಿಕಾರ್ಜುನ ಖರ್ಗೆ- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಧನ್ನಿ ಮಹಾದೇವ ಬಿ.- ಬಹುಜನ ಸಮಾಜ, ರೇವುನಾಯಕ ಬೆಳಮಗಿ- ಬಿಜೆಪಿ, ತಿಪ್ಪಣ್ಣ ಒಡೆಯರಾಜ- ಜನತಾದಳ(ಸಂಯುಕ್ತ), ಬಿ.ಟಿ. ಲಲಿತಾನಾಯಕ್- ಆಮ್ ಆದ್ಮಿ ಪಾರ್ಟಿ, ಎಸ್.ಎಂ. ಶರ್ಮಾ- ಸೋಷಿಯಲ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಶಂಕರ ಜಾಧವ-ಭಾರತೀಯ ಪೀಪಲ್ಸ್ ಪಾರ್ಟಿ, ಗುರುಶಾಂತ ಪಟ್ಟೇದಾರ- ಪಕ್ಷೇತರ, ನರೇಶಕುಮಾರ ಕೋಲಿ- ಪಕ್ಷೇತರ, ಬಾಬುರಾವ- ಪಕ್ಷೇತರ, ರಮೇಶ- ಪಕ್ಷೇತರ, ರಾಮು- ಪಕ್ಷೇತರ ಮತ್ತು ಸೀತಾರಾಮ- ಪಕ್ಷೇತರ.
725 ಲೀ. ಮದ್ಯ ವಶ
ಗುಲ್ಬರ್ಗ: ಲೋಕಸಭೆ ಚುನಾವಣೆ ಪ್ರಯುಕ್ತ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಮಾ.27ರ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 57 ಪ್ರಕರಣಗಳನ್ನು ದಾಖಲಿಸಲಾಗಿದೆ. 725.85 ಲೀಟರ್ ಮದ್ಯ ವಶಪಡಿಸಿಕೊಂಡು 52 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮಾರ್ಚ್ 27ರಂದು ಅಬಕಾರಿ ಇಲಾಖೆಯಿಂದ ಐದು ಪ್ರಕರಣ ದಾಖಲಿಸಿದ್ದು, 18.92 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ದಾಖಲಿಸಿದ ಒಟ್ಟು 57 ಪ್ರಕರಣಗಳಲ್ಲಿ ಅಬಕಾರಿ ಇಲಾಖೆಯಿಂದ ದಾಖಲಿಸಿದ 45 ಪ್ರಕರಣಗಳಿಂದ 521.57 ಲೀಟರ್ ಮದ್ಯ ಹಾಗೂ 3.60 ಕೆ.ಜಿ. ಗಾಂಜಾ, ಎರಡು ಬೈಕ್ ಹಾಗೂ ಪೊಲೀಸ್ ಇಲಾಖೆಯಿಂದ ದಾಖಲಿಸಿದ 12 ಪ್ರಕರಣಗಳಿಂದ 204.28 ಲೀಟರ್ ಮದ್ಯ ಹಾಗೂ 1.5 ಕೆಜಿ ಸಿಎಚ್ ಪೌಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

