ಕರ್ತವ್ಯದ ಅರಿವಿನೊಂದಿಗೆ ಕಾರ್ಯನಿರ್ವಹಿಸಿ
ಯಾದಗಿರಿ: ನಡೆಯಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಮಾಡಬೇಕಾದ ಕರ್ತವ್ಯಗಳ ಬಗ್ಗೆ ಚುನಾವಣೆ ನಿಯೋಜಿಸಿದ ಅಧಿಕಾರಿಗಳು ಸಂಪೂರ್ಣ ಅರಿವು ಹೊಂದಿರಬೇಕೆಂದು ರಾಯಚೂರು ಮತಕ್ಷೇತ್ರದ ಚುನಾವಣಾಧಿಕಾರಿ ನಾಗರಾಜ್ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ಹಾಗೂ ತರಬೇತುದಾರರಿಗೆ ಏರ್ಪಡಿಸಿದ್ದ ತರಬೇತಿಯಲ್ಲಿ ಮಾತನಾಡಿ, ಚುನಾವಣೆ ಕಾರ್ಯಕ್ಕಾಗಿ ನೇಮಿಸಿದ ಸೆಕ್ಟರ್ ಅಧಿಕಾರಿಗಳು ತಮ್ಮ ಮತದಾನ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಮತದಾನ ಕೇಂದ್ರದ ಒಳಗೆ ಹಾಗೂ ಹೊರಗೆ ನಡೆಯುವ ಎಲ್ಲ ಪ್ರಕ್ರಿಯೆಗಳ ಬಗ್ಗೆ ಗಮನ ವಹಿಸಬೇಕು ಎಂದು ಹೇಳಿದ್ದರು.
ಎಚ್ಚರ ವಹಿಸಿ: ಮತದಾನಕ್ಕೆ ಆಗಮಿಸುವ ಮತದಾರರಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಚಲಾಯಿಸಲು ಅನುಕೂಲ ಮಾಡಿಕೊಡುವ ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿರಬೇಕು. ಸಣ್ಣಪುಟ್ಟ ದೋಷಗಳನ್ನು ಬರದಂತೆ ಎಚ್ಚರ ವಹಿಸಿ ಸರಿಪಡಿಸಿಕೊಳ್ಳಬೇಕು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಮತ್ತು ಮತದಾರರ ಹೆಸರುಗಳ ಪಟ್ಟಿಯನ್ನು ಕೇಂದ್ರದಲ್ಲಿ ಲಗತ್ತಿಸಿರಬೇಕು. ಬ್ಯಾಲಟ್ ಯೂನಿಟ್ ಮತ್ತು ಕಂಟ್ರೋಲಿಂಗ್ ಯುನಿಟ್ ಸಂಪೂರ್ಣ ತಿಳಿದುಕೊಂಡಿರಬೇಕು. ಒಟ್ಟಾರೆ ಚುನಾವಣಾ ಪ್ರಕ್ರಿಯೆ ಸುಗಮವಾಗಿ ಮತ್ತು ಮತದಾನ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು
ಜಿಲ್ಲಾಧಿಕಾರಿ ಎಫ್.ಆರ್ ಜಮಾದಾರ್ ಮಾತನಾಡಿ, ಸೆಕ್ಟರ್ ಅಧಿಕಾರಿಗಳು ಚುನಾವಣಾ ಉಲ್ಲಂಘನೆ ಮತ್ತು ಚುನಾವಣೆ ಸಂಬಂಧಪಟ್ಟ ಕಾನೂನಿನ ಸಂಪೂರ್ಣ ಜ್ಞಾನ ಹೊಂದಬೇಕು. ಪೋಲಿಂಗ್ ಅಧಿಕಾರಿಗಳಿಗೆ ಅವಶ್ಯಕ ಮಾಹಿತಿ ನೀಡಬೇಕು. ನಿರ್ಭಯವಾಗಿ ಕೆಲಸ ನಿಭಾಯಿಸುವ ಮನೊಭಾವ ಬೆಳೆಸಿಕೊಳ್ಳಬೇಕು. ಅರ್ಹ ಮತದಾರರು, ಅಂಗವಿಕಲ ಮತದಾರರು ನಿಯಮಾವಳಿಯಂತೆ ಮತ ಚಲಾಯಿಸುವ ಬಗ್ಗೆ, ಇವಿಎಂ ಮೆಷನ್ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸಬೇಕು ಎಂದರು.
ಗುರುತಿನ ಚೀಟಿ: ಪೋಲಿಂಗ್ ಆಫೀಸರ್ ಮತದಾರರ ಪಟ್ಟಿಯನ್ನು ಹೊಂದಿದ್ದು, ಮತದಾರರನ್ನು ಗುರ್ತಿಸುವ ಜವಾಬ್ದಾರಿ ಹೊಂದಿರುತ್ತಾರೆ. ನಿಮ್ಮ ಗುರುತಿನ ಚೀಟಿಯನ್ನು ಅವರಿಗೆ ತೋರಿಸಬೇಕು. ಜೊತೆಗೆ ತಮ್ಮ ಮಾಹಿತಿಯನ್ನೊಳಗೊಂಡ, ಅನಧಿಕೃತ ಚೀಟಿಯನ್ನೂ ತೋರಿಸಬಹುದು. ಆದರೆ ಅನಧಿಕೃತ ಚೀಟಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ನೆರವಾಗುವುದೇ ಹೊರತು, ಅದು ಗುರುತಿನ ಚೀಟಿಯಾಗಲು ಸಾಧ್ಯವಿಲ್ಲ. ಅಧಿಕಾರಿಯು ಮತದಾರರ ಹೆಸರು ಹಾಗೂ ಕ್ರಮ ಸಂಖ್ಯೆಯನ್ನು ಓದಿ ಹೇಳುತ್ತಾರೆ. ಆಗ ಮತಗಟ್ಟೆ ಏಜೆಂಟರು ಮತದಾರರ ಉಪಸ್ಥಿತಿಯನ್ನು ಗಮನಿಸುತ್ತಾರೆ ಎಂದು ತಿಳಿಸಿದರು.
ಮತದಾನದ ವಿಧಾನ: ಮತಯಂತ್ರದಲ್ಲಿ ಮತದಾರರು ಮತದಾನ ಮಾಡಲು ಇಚ್ಛಿಸುವ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರಿಗಿರುವ ನೀಲಿ ಗುಂಡಿಯನ್ನು ಒತ್ತಬೇಕು. ಗುಂಡಿಯನ್ನು ಒಂದು ಬಾರಿ ಮಾತ್ರ ಒತ್ತಿರಿ. ಅಭ್ಯರ್ಥಿಯ ಗುಂಡಿಯನ್ನು ಒತ್ತಿದಾಗ ಅದರ ಎದುರಿಗೆ ಕೆಂಪು ದೀಪ ಉರಿಯುತ್ತದೆ. ಜೊತೆಗೆ ಬೀಪ್ ಸದ್ದು ಸಹ ಕೇಳಿಸುತ್ತದೆ. ನಿಮ್ಮ ಮತವನ್ನು ದಾಖಲಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ನಿಯಂತ್ರಣ ಘಟಕದಲ್ಲಿ ಬ್ಯುಸಿ ಎಂದು ಸೂಚಿಸುವ ದೀಪವೂ ಆರಿಹೋಗುತ್ತದೆ ಎಂದು ತಿಳಿ ಹೇಳಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ, ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನ್‌ಕರ್ ಸೇರಿದಂತೆ ಚುನಾವಣೆಗೆ ನಿಯೋಜಿಸಿದ ಅಧಿಕಾರಿಗಳು ಉಪಸ್ಥಿತರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

