ಗುಲ್ಬರ್ಗಾ

ರೈತರಿಗೆ ಶಾಸಕರ ಹುಸಿ ಭರವಸೆ: ಮಾಜಿ ಸಚಿವ

Published On :

ಸುರಪುರ: ಮಾ. 31ರವರೆಗೆ ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸುವ ವಿಷಯದಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕರು ರೈತರಿಗೆ ಸುಳ್ಳಿನ ಭರವಸೆ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಲುವೆ ನೀರಿಗಾಗಿ ಸುರಪುರದಿಂದ ನಾರಾಯಣಪುರದವರೆಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಶಾಸಕರು ಈಗ ರೈತರನ್ನು ಕಡೆಗಣಿಸಿದ್ದಾರೆ. ರೈತರ ಹಿತಾಸಕ್ತಿಯೇ ನನ್ನ ಜೀವಾಳ ಎಂದು ಹೇಳುತ್ತಿದ್ದವರಿಗೆ ಈಗ ರೈತರ ಬಗ್ಗೆ ಕಾಳಜಿ ಏಕಿಲ್ಲ ಎಂದು ಪ್ರಶ್ನಿಸಿದರು.
ಬೆಳೆ ನಷ್ಟ: ಮಾ. 31ರ ವರೆಗೆ ನೀರು ಹರಿಸುವುದಾಗಿ ಶಾಸಕರು ನೀಡಿದ್ದ ಭರವಸೆ ಮೇಲೆ ರೈತರು ಬೆಳೆಯನ್ನು ಬಿತ್ತಿದ್ದಾರೆ. ಮಾ. 22ರಂದೇ ಕಾಲುವೆಗೆ ನೀರು ಸ್ಥಗಿತಗೊಳಿಸಲಾಗಿದೆ. ನೀರಿಲ್ಲದೆ ಬೆಳೆ ಬತ್ತಿಹೋಗಿ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರ ಸಾವಿರಾರು ಕೋಟಿ ರು. ನಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು. ನನ್ನ ಅಧಿಕಾರವಧಿಯಲ್ಲಿ ಬರಗಾಲವಿತ್ತು. ಆಗ ನಾನು ಸಿಎಂ ಹಾಗೂ ನೀರಾವರಿ ಸಚಿವರ ಮೇಲೆ ಒತ್ತಡ ತಂದು ಮಾರ್ಚ್ ಅಂತ್ಯದವರೆಗೂ ನೀರು ಬಿಡಿಸಿ ರೈತರ ಹಿತ ಕಾಪಾಡಿದ್ದೇನೆ. ಈಗಿನ ಶಾಸಕರಲ್ಲಿ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇದ್ದರೆ ಸಿಎಂ ಹಾಗೂ ನೀರಾವರಿ ಸಚಿವರ ಮನೆ ಮುಂದೆ ಧರಣಿ ಮಾಡಿ ನೀರು ಬಿಡಸಬೇಕಾಗಿತ್ತು. ಅದು ಬಿಟ್ಟು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇನೆ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದರು.
ರಾಜಕೀಯ ವ್ಯಕ್ತಿಗಳ ಹುನ್ನಾರ: ತಾಲೂಕಿನ ಶೆಳ್ಳಗಿ ಸೂಗೂರು ಹಾಗೂ ಹೆಮನೂರು ಬಳಿ ಕೃಷ್ಣಾ ನದಿಯಿಂದ ಹಾಡು ಹಗಲೇ ಆಕ್ರಮವಾಗಿ ಮರುಳು ಸಾಗಾಟ ನಡೆದಿದೆ. ಪ್ರಭಾವಿ ರಾಜಕೀಯ ವ್ಯಕ್ತಿಗಳೇ ಇದರ ನೇತೃತ್ವ ವಹಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ಈ ಆಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಿಯರು ಮನೆ ಕಟ್ಟಿಕೊಳ್ಳಲು ಉಸುಕು ತೆಗೆದುಕೊಂಡು ಹೋಗುತ್ತಿರುವ ಟ್ರ್ಯಾಕ್ಟರ್, ಬಂಡಿಗಳನ್ನು ಹಿಡಿದು ಸಾವಿರಾರು ರೂಪಾಯಿ ದಂಡ ವಸೂಲಿ ಮಾಡಬೇಕು. ಪರ್ಮಿಟ್ ಇಲ್ಲದೆ ಪ್ರತಿ ನಿತ್ಯ ಟನ್‌ಗಟ್ಟಲೆ ಆಕ್ರಮವಾಗಿ ಮರಳು ಸಾಗಿಸುವ ನೂರಾರು ಲಾರಿ-ಟಿಪ್ಪರ್‌ಗಳನ್ನು ಹಿಡಿಯುವ ಕೆಲಸ ಮಾಡಿ. ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವುದನ್ನು ತಪ್ಪಿಸಲು ನಾನು ನನ್ನ ಕಾರ್ಯಕರ್ತರೊಂದಿಗೆ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿ ಹಾಗೂ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ತಮ್ಮ ನೌಕರಿ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜಾರಾಮಪ್ಪ ನಾಯಕ ಜೇಜಿ, ಸಿದ್ದನಗೌಡ ಕರಿಭಾವಿ, ಭೀಮಣ್ಣ ಕಟ್ಟಿಮನಿ, ಮಹೇಶ ವಾಲಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.