ಗುಲ್ಬರ್ಗಾ

ಚುನಾವಣೆಗೆ 12,150 ಸಿಬ್ಬಂದಿ ಬಳಕೆ: ಪ್ರಸಾದ್

Published On :

ಗುಲ್ಬರ್ಗ: ಲೋಕಸಭೆ ಚುನಾವಣೆಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಅಂಗವಾಗಿ ಶನಿವಾರ ಇಲ್ಲಿನ ಅನೇಕ ಕಾಲೇಜುಗಳಲ್ಲಿ ಮತಗಟ್ಟೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
ಸಾರ್ವತ್ರಿಕ ಚುನಾವಣೆಯ ಮತದಾನ ಏ. 17ರಂದು ಗುರುವಾರ ನಡೆಯಲಿದ್ದು, ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ 3,000 ಪ್ರಿಸೈಡಿಂಗ್ ಅಧಿಕಾರಿಗಳು, ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಮತದಾನ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವ ಹಾಗೂ ವಿದ್ಯುನ್ಮಾನ ಮತಯಂತ್ರ ನಿರ್ವಹಣೆ ಮಾಡುವ ಮೊದಲ ಸುತ್ತಿನ ತರಬೇತಿ ಕಾರ್ಯಕ್ರಮ ಶನಿವಾರ ನಡೆಯಿತು. ಒಟ್ಟು 12,150 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್. ವಿ. ಪ್ರಸಾದ್ ತಿಳಿಸಿದ್ದಾರೆ.
ಗುಲ್ಬರ್ಗ ನಗರದ ನೂತನ ವಿದ್ಯಾಲಯ ಮತ್ತು ಗುಲ್ಬರ್ಗ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗುಲ್ಬರ್ಗ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಪ್ರಿಸೈಡಿಂಗ್ ಅಧಿಕಾರಿಗಳ ಮತ್ತು ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳ ತರಬೇತಿ ನಡೆದಿದ್ದು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಈ ಅಧಿಕಾರಿಗಳಿಗೆ ನೇಮಕಾತಿ ಆದೇಶವನ್ನು ಸಹ ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಈ ಅಧಿಕಾರಿಗಳಿಗೆ ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಅನುಸರಿಸಬೇಕಾದ ನಿಯಮಗಳ ಬಗ್ಗೆ ನುರಿತ ಮಾಸ್ಟರ್ ಟ್ರೇನರ್‌ಗಳು ತರಬೇತಿ ನೀಡಿದರು.
ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
ಚಿಂಚೋಳಿ ವರದಿ: ಏ.17ರಂದು ಲೋಕಸಭೆ ಮತದಾನ ನಡೆಯಲಿದ್ದು ಚುನಾವಣೆ ಸುಸೂತ್ರವಾಗಿ ನಡೆಯಲು ಚುನಾವಣಾ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಿ. ಮಂಜುನಾಥ ಹೇಳಿದರು.
ಪಟ್ಟಣದ ಚಂದಾಪುರ ನಗರದ ಸಿ.ಬಿ. ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ಪ್ರೆಸಿಡಿಂಗ್ ಆಫೀಸರ್ ಮತ್ತು ಅಸಿಸ್ಟೆಂಟ್ ಪ್ರೆಸಿಡಿಂಗ್ ಆಫೀಸರ್‌ಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಚುನಾವಣೆಗೆ ಒಟ್ಟು 587 ಸಿಬ್ಬಂದಿಗಳಿದ್ದಾರೆ. ಚುನಾವಣಾ ಸಿಬ್ಬಂದಿ ಚುನಾವಣೆಯಲ್ಲಿ ತಮ್ಮ ಮತವನ್ನು ಕರ್ತವ್ಯದೊಂದಿಗೆ ತಪ್ಪದೇ ಚಲಾಯಿಸಬೇಕೆಂದು ಹೇಳಿದರು.
ತಹಸೀಲ್ದಾರ ಮೋಹನ ಜೋಶಿ, ಬಿಇಓ ಹಣಮಂತರಾವ್ ನಾಟೀಕಾರ, ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಜಲಾನಯನ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಬೆಡಸುರ, ಅಕ್ಷರ ದಾಸೋಹ ಅಧಿಕಾರಿ ಅರ್ಜುನ ದೊಡ್ಡಮನಿ, ಜಿಪಂ ಎಇಇ ರೇವಣಸಿದ್ದಪ್ಪಾ ಹಾಗರಗಿ, ಸಮಾಜ ಕಲ್ಯಾಣಾಧಿಕಾರಿ ವಿಜಯಕುಮಾರ ಪುಲಾರಿ ಇದ್ದರು.
ಮತದಾರರ ಜಾಗೃತಿ ಜಾಥಾ
ಚಿತ್ತಾಪುರ ವರದಿ: ಜಿಲ್ಲೆಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣಿಯಲ್ಲಿ ಪ್ರತಿ ಮತದಾರನೂ ಕಡ್ಡಾಯ ಮತದಾನ ಮಾಡಲು ಚುನಾವಣೆ ಅಯೋಗ ಜಾಗೃತಿ ಮೂಡಿಸಲು ಪುರಸಭೆ ವತಿಯಿಂದ ಮತದಾರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು. ಪುರಸಭೆಯಲ್ಲಿ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಾದ ನಾಗಾವಿ ಚೌಕ, ಜನತಾ ಚೌಕ, ಚಿತಾವಲಿ ಚೌಕ, ಬಸವೇಶ್ವರ ಚೌಕ, ಭುವನೇಶ್ವರ ಚೌಕ್, ಅಂಬೇಡ್ಕರ ಚೌಕ್‌ಗಳಲ್ಲಿ ಮತದಾನದ ಬಗ್ಗೆ ಭಿತ್ತಿಪತ್ರ ಪ್ರದರ್ಶಿಸಿ ಮತದಾನದ ಜಾಗೃತಿ ಮೂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.