ನೀರಿನ ಸಮಸ್ಯೆ ನಿವಾರಣೆಗೆ ಬೇಕಿದೆ ಕಾಯಕಲ್ಪ
ಕ.ಪ್ರ. ವಾರ್ತೆ ಆಳಂದ ಮೇ 1
ಗುಲ್ಬರ್ಗ ನಗರದ ಹೊರಪ್ರದೇಶ ಒಳಗೊಂಡು ಆಳಂದ, ಅಫಜಲ್ಪುರ ತಾಲೂಕಿನ ಕೆಲ ಹಳ್ಳಿಗಳಲ್ಲಿ ಬೇಸಿಗೆ ಬಂದರೆ ಸಾಕು ಕೆರೆಕಟ್ಟೆಗಳು ನೀರಿಲ್ಲದೆ ಪೂರ್ಣವಾಗಿ ಬತ್ತಿ ನಿಲ್ಲುತ್ತವೆ. ಮತ್ತೊಂದೆಡೆ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಎಷ್ಟೇ ಬೋರ್ವೆಲ್ ಕೊರೆಸಿದರೂ, ಬಾವಿ ತೋಡಿದರು ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ನೀರು ದೊರೆಯದಂತಾಗಿದೆ.
ಈ ಭಾಗದಲ್ಲಿ ಹತ್ತಾರು ವರ್ಷಗಳಿಂದ ಮಳೆ ಕೊರತೆ ಮತ್ತು ಬಿದ್ದ ಮಳೆ ನೀರು ವೈಜ್ಞಾನಿಕವಾಗಿ ಹಿಡಿದಿಟ್ಟುಕೊಳ್ಳದೆ ಇರುವ ಹಲವು ತಪ್ಪಿನಿಂದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದ ದುಃಸ್ಥಿತಿಯಿಂದ ನೀರಿನ ಹಾಹಾಕಾರ ಮುಗಿಲು ಮುಟ್ಟುವಂತಾಗಿ ಹಳ್ಳಿಗರ ಪರದಾಟಕ್ಕೆ ಕಾರಣವಾಗಿದೆ. ನೀರಿಗಾಗಿ ಸರ್ಕಾರ ಹತ್ತಾರು ಕೋಟಿ ರೂಪಾಯಿಗಳು ಖರ್ಚು ಮಾಡಿದಾಗಲೂ ಜನರಿಗೆ ಕುಡಿಯವ ನೀರಿನ ದಾಹ ತಣಿಸಲು ಇದುವರೆಗೂ ಸಾಕಷ್ಟು ಕಡೆ ಸಾಧ್ಯವಾಗದಂತಾಗಿದೆ.
ಕೆರೆ ತುಂಬಿಸಿಕೊಳ್ಳಬೇಕು:ಮಳೆಯ ಕೊರತೆಯಿಂದಾಗಿ ಪ್ರತಿ ವರ್ಷ ನೀರು ತುಂಬಿಕೊಳ್ಳದ ಕೆರೆಕಟ್ಟೆಗಳಿಗೆ ಮಳೆಗಾಲದ ಮುಕ್ತಾಯ ದಿನಗಳಲ್ಲಿ ಹತ್ತಿರದ ನದಿಗಳಿಂದ ಪೈಪ್ಲೈನ್ ಮೂಲಕ ನೀರು ತುಂಬಿಸಿಕೊಂಡರೆ ಈ ಪ್ರದೇಶದಲ್ಲಿನ ಬಾವಿ, ಬೋರ್ವೆಲ್ಗಳಿಗೆ ನೀರು ಮರುಪೂರಣಗೊಂಡು ಬೇಸಿಗೆ ನೀರಿನ ಸಮಸ್ಯೆ ನಿವಾರಣೆಯ ಜತೆಗೆ ಕೃಷಿಗೆ ಪೂರಕವಾಗಿ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತಿದೆ.
ನೀರು ಭರ್ತಿ ಎಂಬ ಯೋಜನೆ ರೂಪಿಸುವ ಮೂಲಕ ನೀರಿನ ಶಾಶ್ವತ ಸಮಸ್ಯೆ ನಿವಾರಣೆಗೆ ಇದು ಸಕಾಲವಾಗಿದೆ ಎಂಬುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಇದಕ್ಕಾಗಿ ಈ ಭಾಗದ ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ಈ ಯೋಜನೆಯ ಯಶಸ್ಸಿಗಾಗಿ ಶ್ರಮಿಸುವುದು ಅಗತ್ಯವಾಗಿದೆ.
ನನಸಾಗಲಿ ಸಿಎಂ ಭರವಸೆ: ತಾಲೂಕಿಗೆ 200 ಕೆರೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಶಾಸಕ ಬಿ.ಆರ್. ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಳೆದ ತಿಂಗಳ ಆಳಂದ ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಒತ್ತಾಯಿಸಿದ್ದಾಗ ಮುಖ್ಯಮಂತ್ರಿಗಳು ಈ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಭರವಸೆ ಈಡೇರಿದರೆ ಭವಿಷ್ಯದಲ್ಲಿ ಕುಡಿಯುವ ನೀರಿನ ಬರ ನಿವಾರಣೆಯಾದಂತಾಗುತ್ತದೆ.
ಆಳಂದ ತಾಲೂಕಿನಲ್ಲಿ ಕೆರೆ ನಿರ್ಮಾಣಕ್ಕೆ ಪೂರಕ ವಾತಾವರಣವಿದ್ದಾಗಲೂ ನಿರೀಕ್ಷಿತ ಸಂಖ್ಯೆಯಲ್ಲಿ ಕೆರೆಗಳಿಲ್ಲ. ಸದ್ಯ 17 ಕೆರೆ, 13 ಜಿನುಗು ಕೆರೆಗಳಿವೆ. ಒಂದಿಷ್ಟು ಕೆರೆಗಳು ಪೂರ್ಣ ಬತ್ತಿಹೋಗಿದ್ದರೆ, ಇನ್ನುಳಿದ ಶೇ. 50-80 ರಷ್ಟು ಕೆರೆಗಳು ಬತ್ತುವ ಹಂತದಲ್ಲಿವೆ.
ನೀಲ ನಕಾಶೆ ಅಗತ್ಯ: ಹತ್ತಾರು ಹಳ್ಳಿಯ ಜನರಿಗೆ ಕುಡಿಯಲು ನೀರು ಒದಗಿಸುವುದು ಹಾಗೂ ಸಾವಿರಾರು ಎಕರೆ ನೀರಾವರಿಗೆ ಅಪರೋಕ್ಷವಾಗಿ ನೀರುಣಿಸಿಕೊಳ್ಳಬೇಕಾದರೆ ನೀರು ಭರ್ತಿಯಾಗದ ಕೆರೆಗಳಿಗೆ ಮಳೆಗಾಲ ಮುಕ್ತಾಯ ದಿನಗಳಲ್ಲಿ ನೀರು ತುಂಬಿಸುವ ಕೆಲಸ ಆಗಬೇಕಾಗಿದೆ.
ಭೀಮಾನದಿ ದಂಡೆಯ ಅಫಜಲ್ಪುರ ತಾಲೂಕಿನ ಸೊನ್ನ ಬ್ಯಾರೇಜ್ನಿಂದ ಬಳೂರ್ಗಿ ಮಾರ್ಗವಾಗಿ ಮಾಶಾಳ ಮತ್ತು ಆಳಂದ ತಾಲೂಕಿನ ನಿಂಬಾಳ, ಮಾದನಹಿಪ್ಪರಗಾ, ಸರಸಂಬಾ ಕೆರೆಗೆ ನೀರು ತುಂಬಿಸಿದರೆ ಕೆಳಭಾಗದಲ್ಲಿ ಸಾವಳೇಶ್ವರ, ಜಮಗಾ ಜಿಡಗಾ ಸೀಮೆಗಳು, ಮಂಟಕಿ ಕೆರೆಯಿಂದ ಪಡಸಾವಳಿ, ನಿರುಗುಡಿ ಅನೇಕ ಹಳ್ಳಿಯ ಬಾವಿ-ಬೋರ್ಗಳಿಗೆ ನೀರು ದೊರೆತು ಅನುಕೂಲವಾಗುತ್ತದೆ.
ಶೇ. 60ರಷ್ಟು ಕೃಷಿಗೂ ಅನುಕೂಲವಾಗುತ್ತದೆ: ದೇವಲಗಾಣಗಾಪುರ ಬ್ಯಾರೇಜ್ನಿಂದ ಕಡಗಂಚಿ ಕೆರೆ ಮಾರ್ಗವಾಗಿ ಗಡಿಭಾಗದ ಆಳಂಗಾ ಗ್ರಾಮದ ಕೆರೆ ವರೆಗೆ ಸುಮಾರು 60 ರಿಂದ 80 ಕಿ.ಮೀ. ಅಂತರದ ಪೈಪಲೈನ್ ನಿರ್ಮಿಸಿದರೆ ಮಧ್ಯ ಭಾಗದಲ್ಲಿ ಬರುವ ಜವಳಗಾ, ಬಬಲೇಶ್ವರ ಕೆರೆಗಳಿಗೆ ನೀರು ಭರ್ತಿಯಾಗುತ್ತದೆ. ಇದೇ ಮಾರ್ಗದ ಸಾಲೇಗಾಂವ ಕೆರೆಗೆ ನೀರು ಹರಿಸಿದರೆ ಅಮರ್ಜಾ ಅಣೆಕಟ್ಟೆಗೆ ನೀರು ಹರಿಯುವುದು. ಇದರಿಂದ ಹತ್ತಾರು ಸಾವಿರ ಎಕರೆ ನೀರಾವರಿ ಜೀವಂತವಾಗಿರುತ್ತದೆ. ಕಿಣ್ಣಿಸುಲ್ತಾನ್, ಶುಕ್ರವಾಡಿ, ಬೋಳಣಿ, ದಣ್ಣೂರ ತಾಂಡಾ, ತೆಲೂರ, ಗುಲ್ಬರ್ಗ ವ್ಯಾಪ್ತಿಯ ಹುಣಸಿ ಹಡಲಗಿ, ಅಫಜಲ್ಪುರ ವ್ಯಾಪ್ತಿಯ ಗೊಬ್ಬುರ, ಚಿಣಮಗೇರಾ ಕೆರೆಗೆ ನೀರು ಭರ್ತಿಯಾದರೆ, ಹಾಗೂ ಆಳಂದ ತಾಲೂಕಿನ ವೈಜಾಪೂರ ಕೆರೆಗೆ ನೀರು ಭರ್ತಿಯಾದರೆ, ಹೋಬಳಿ ಕೇಂದ್ರ ನಿಂಬರಗಾ, ವೈಜಾಪೂರ, ಬೊಮ್ಮನಹಳ್ಳಿ, ಹಿತ್ತಲಶಿರೂರ ಬೆಣ್ಣೆಶಿರೂರ ಕೆಳಭಾಗದ ಸ್ಟೇಶನ್ ಗಾಣಗಾಪೂರಕ್ಕೆ ನೀರು ವ್ಯಯಿಸಿ ಈ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಬೇಸಿಗೆಯಲ್ಲಿ ಬಾವಿ-ಬೋರ್ಗಳಿಗೆ ಅಂತರ್ಜಲ ಹೆಚ್ಚಾಗಿ ಶೇ. 60ರಷ್ಟು ಕೃಷಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ನೀರಾವರಿ ತಜ್ಞರು.
ಮತ್ತೊಂದಡೆ ಗಂಡೊರಿ ನಾಲಾದ ಡ್ಯಾಂನಿಂದ ಮಡಕಿ ತಾಂಡಾ ವಿ.ಕೆ. ಸಲಗರ ಬೆಳಮಗಿ ಕೆರೆಗಳಿಗೆ ನೀರು ಹರಿಸಿದರೆ, ನರೋಣಾ, ಗೋಳಾ ಹೀಗೆ ಹತ್ತಾರು ಹಳ್ಳಿಯ ಜನ, ಜಾನುವಾರು ಹಾಗೂ ಕೃಷಿಗೆ ಅನುಕೂಲವಾಗುತ್ತದೆ.
ಅಂದಾಜು 100 ಕೋಟಿ: ಪ್ರಾಮಾಣಿಕ ಹಾಗೂ ಕಾಳಜಿ ವಹಿಸಿದ್ದರೆ ಕೇವಲ ನೂರು ಕೋಟಿ ಆಸುಪಾಸಿನಲ್ಲೇ ಈ ಕೆರೆಗಳಿಗೆ ನೀರು ತುಂಬಿ ಅನುಕೂಲಕಲ್ಪಿಸಲು ಸಾಧ್ಯವಾಗಿ ಶಾಶ್ವತ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿಯ ಜನರ ಅಭಿಪ್ರಾಯವಾಗಿದೆ.
ಶಾಸಕರು ಏನಂತಾರೆ: ನೋಡಿ ನನ್ನಲ್ಲಿ ಸಾಕಷ್ಟು ಪ್ಲಾನ್ಗಳಿವೆ. ಆದರೆ ಸರ್ಕಾರ ದುಡ್ಡುಕೊಟ್ಟಂತೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇದೆ.
ಕುಡಿಯುವ ನೀರಿನ ಶಾಶ್ವತ ಸಮಸ್ಯೆ ನಿವಾರಣೆ ಹಾಗೂ ನೀರಾವರಿ ಉತ್ತೇಜನಕ್ಕಾಗಿ ಅಫಜಲ್ಪುರ ತಾಲೂಕಿನ ಸೂನ್ನ ಬ್ಯಾರೇಜ್ನಿಂದ ಆಳಂದ ಪಟ್ಟಣಕ್ಕೆ ಮತ್ತು ಮಳೆ ಕೊರತೆಯಾದಾಗ ಅಮರ್ಜಾಅಣೆಕಟ್ಟೆ ನೀರು ತರುವ ಎರಡು ಪ್ರಮುಖ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ ಮೇಲೆ ಸಮೀಕ್ಷೆ ಮಾಡಿ ಕ್ರಿಯಾಯೋಜನೆ ರೂಪಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೆಲಸ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ತೀವ್ರತರ ಪ್ರಯತ್ನ ಮಾಡುವುದಕ್ಕೆ ಎಲ್ಲರ ಸಹಕಾರ ಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

