ಇಲ್ಲಿನವರಿಗೆ ಪಪೂ ಶಿಕ್ಷಣ ಗಗನಕುಸುಮ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 10
ಸರ್ಕಾರ ನಿಗದಿಪಡಿಸಿದ ಸಂಖ್ಯೆಗಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆಂಬ ನೆಪವೊಡ್ಡಿ ನಾಲ್ಕು ವರ್ಷಗಳ ಹಿಂದೆ ಕಾಲೇಜನ್ನೇ ವರ್ಗಾವಣೆ ಮಾಡಿದ್ದು, ಇದೀಗ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಈ ಭಾಗದ ವಿದ್ಯಾರ್ಥಿಗಳ ಪಿಯು ಶಿಕ್ಷಣ ಗಗನಕುಸುಮವಾಗಿದೆ.
ಯಾದಗಿರಿ ತಾಲೂಕು ವಡಗೇರಾ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಅಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ಆರಂಭಿಸಲು ರಾಜ್ಯ ಸರ್ಕಾರ 2002ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಮತ್ತು ಡಾ. ಮಾಲಕರಡ್ಡಿ ಆರೋಗ್ಯ ಸಚಿವರಾಗಿದ್ದಾಗ ಕಾಲೇಜಿಗೆ ಅನುಮತಿ ನೀಡಿತ್ತು.
ಬಳಿಕ 2009-10ರಲ್ಲಿ ಬಿಜೆಪಿ ಸರ್ಕಾರ ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲಿ ಇಂತಿಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿರಬೇಕೆಂಬ ನಿಯಮ ಜಾರಿಗೆ ತಂದಿತು. ಆ ವೇಳೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆ ಬಂದ ಕಾರಣ ವಡಗೇರಾ ಕಾಲೇಜಿನಲ್ಲಿ ಪಿಯುಸಿಗೆ ಪ್ರವೇಶ ಪಡೆದವರ ಸಂಖ್ಯೆ ಕಡಿಮೆಯಿತ್ತು.
ಇದನ್ನೇ ನೆಪ ಮಾಡಿಕೊಂಡ ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿರಸಿಯ ಸರ್ಕಾರಿ ಮಾರಿಕಾಂಬ ಹಿರಿಯ ಪ್ರಾಥಮಿಕ ಶಾಲೇಯ ಆವರಣದಲ್ಲಿರುವ ಕಾಲೇಜಿಗೆ ವರ್ಗಾವಣೆ ಮಾಡಿ ಆದೇಶವನ್ನೇ ಹೊರಡಿಸಿಬಿಟ್ಟರು. ಅಂದಿನಿಂದ ಇಂದಿನವರೆಗೂ ಪಿಯು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ದೂರದ ಯಾದಗಿರಿ ಇಲ್ಲವೇ ಶಹಾಪುರಕ್ಕೇ ತೆರಳಬೇಕಿದೆ.
2011ರಲ್ಲಿ ಕಾಲೇಜು ವರ್ಗಾವಣೆ: 2009-10ರಲ್ಲಿ ಪ್ರಥಮ ಪಿಯುಗೆ ಸರ್ಕಾರ ನಿಗದಿಪಡಿಸಿದ ಸಂಖ್ಯೆ (ಕನಿಷ್ಠ 25 ವಿದ್ಯಾರ್ಥಿಗಳಿರಬೇಕು)ಗಿಂತ ಕಡಿಮೆ ವಿದ್ಯಾರ್ಥಿಗಳು ಪ್ರಥಮ ವರ್ಷಕ್ಕೆ ಪ್ರವೇಶವನ್ನು ಪಡೆದಿದ್ದರು. ಅದಕ್ಕಾಗಿ ಸರ್ಕಾರ ಕಾಲೇಜಿನ ವರ್ಗಾವಣೆಗೆ ಆದೇಶಿಸಿತು. ಬಳಿಕ ಜೂನ್ 2011ರಲ್ಲಿ ವರ್ಗಾವಣೆಯನ್ನೂ ಮಾಡಿತು.
ಬಡ ಮಕ್ಕಳಿಗೆ ತೀವ್ರ ತೊಂದರೆ: ಉಳ್ಳವರ ಮಕ್ಕಳು ದೂರದ ಸ್ಥಳಗಳಿಗೆ ಹೋಗಿ ಕಾಲೇಜು ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಬಡ ಹಾಗೂ ವಿದ್ಯಾರ್ಥಿನಿಯರು ದೂರದ ಪಟ್ಟಣಗಳಿಗೆ ತೆರಳಲಾಗದೆ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಬೆಂಡೆಬೆಂಬಳಿ ಮೊರಾರ್ಜಿ ವಸತಿ ಶಾಲೆ, ಕೊಂಕಲ್, ಶಿವಪುರ, ಹಾಲಗೇರಾ, ಬಿಳ್ಹಾರ, ವಡಗೇರಾ ಸರ್ಕಾರಿ ಪ್ರೌಢಶಾಲೆಗಳ ಫಲಿತಾಂಶ ಶೇ.90ರಷ್ಟಿದೆ. ಈ ವರ್ಷ 340 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ. ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಿದೆ. ಆದರೆ ಈ ಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲದ ಕಾರಣ ಅನೇಕ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದಿಂದ ವಂಚಿತರಾಗುವ ಆತಂಕ ಎದುರಾಗಿದೆ ಎನ್ನುತ್ತಿದ್ದಾರೆ ಸ್ಥಳೀಯ ಶಿಕ್ಷಣಪ್ರೇಮಿಗಳು.
ಘೋಷಿತ ತಾಲೂಕು ಕೇಂದ್ರದಲ್ಲಿಲ್ಲ ಕಾಲೇಜು!: ಸುಮಾರು 40 ಹಳ್ಳಿಗಳಿಗೆ ಕೇಂದ್ರ ಸ್ಥಾನದಲ್ಲಿರುವ ಈಗಾಗಲೇ ತಾಲೂಕು ಕೇಂದ್ರವೆಂದು ಘೋಷಣೆಯಾದ ಈ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಇದರ ಬಗ್ಗೆ ಈ ಭಾಗದ ರಾಜಕೀಯ ಮುಖಂಡರು ಹಾಗೂ ಅನೇಕ ಸಂಘ ಸಂಸ್ಥೆಯವರು ಮಾಡಿದ ಮನವಿಗೆ ಸಂಬಂಧಪಟ್ಟವರು ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ.
ಒಂದೆಡೆ ಸರ್ಕಾರ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲಾ- ಕಾಲೇಜು ತೆರೆದು ಶಿಕ್ಷಣಕ್ಕೆ ಆದ್ಯತೆ ಕೊಡುತ್ತಿದ್ದೇವೆ ಎಂದು ಹೇಳಿದರೆ, ಇನ್ನೊಂದೆಡೆ ಕಡಿಮೆ ದಾಖಲಾತಿ ನೆಪವೊಡ್ಡಿ ಕಾಲೇಜುಗಳನ್ನು ಮುಚ್ಚುತ್ತಿದೆ. ಈಗ ಶೈಕ್ಷಣಿಕ ವರ್ಷ ಆರಂಭವಾಗಲು ಕೆಲವೇ ದಿನಗಳಿದ್ದು, ಈ ಭಾಗದ ಜನಪ್ರತಿನಿಧಿಗಳು, ಹಾಲಿ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಅವರು ಸರ್ಕಾರದ ಮೇಲೆ ಒತ್ತಡ ಹೇರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜನ್ನು ಆರಂಭಿಸಲು ಕ್ರಮ ಕೈಗೊಳ್ಳುವರೇ ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

