ಗುಲ್ಬರ್ಗಾ

ಅಭ್ಯರ್ಥಿಗಳ ಹಣೆಬರಹ ಬಹಿರಂಗಕ್ಕೆ ಕ್ಷಣಗಣನೆ

Published On :

ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಮೇ 14
ಗುಲ್ಬರ್ಗ (ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮೇ 16ರಂದು ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಕಟ್ಟಡಗಳಲ್ಲಿ ಬೆಳಗಿನ 8 ರಿಂದ ಪ್ರಾರಂಭವಾಗಲಿದ್ದು, ಈ ಮತಕ್ಷೇತ್ರದ ವ್ಯಾಪ್ತಿಗೊಳಪಡುವ 8 ವಿಧಾನಸಭಾ ಕ್ಷೇತ್ರವಾರು ಮತಗಳ ಎಣಿಕೆ ಕಾರ್ಯಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈವರೆಗೆ ಸ್ವೀಕರಿಸಿದ 753 ಅಂಚೆ ಮತಪತ್ರಗಳು ಹಾಗೂ ಒಟ್ಟು 9.96 ಲಕ್ಷ ಮತದಾರರ ಮತಗಳ ಎಣಿಕೆ ಕಾರ್ಯ ಮೇ 16ರಂದು ನಡೆಯಲಿದೆ. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ವಿವಿ ಆವರಣದಲ್ಲಿ ಮಾಡಲಾಗಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ಹೇಳಿದ್ದಾರೆ.
ಅಂಚೆ ಮತಪತ್ರಗಳ ಸ್ವೀಕಾರ: ಮತ ಎಣಿಕೆ ಕಾರ್ಯದ ಪೂರ್ವ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮೇ 16ರಂದು ಬೆಳಗಿನ 8 ಗಂಟೆವರೆಗೆ ಬರುವ ಅಂಚೆ ಮತಪತ್ರಗಳನ್ನು ಸಹ ಸ್ವೀಕರಿಸಲಾಗುವುದು ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‌ಗಳಿದ್ದು, ಪ್ರತಿ ಟೇಬಲ್‌ಗೆ ಓರ್ವ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್ ಇರುವರು. ಒಟ್ಟು 450 ಜನ ಸಿಬ್ಬಂದಿ ಮತಗಳ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದಾರೆ. ಈ ಸಿಬ್ಬಂದಿಗೆ ಮೇ 14ರಂದು ಮತ ಎಣಿಕೆಯ ಸೂಕ್ತ ತರಬೇತಿ ನೀಡಲಾಗಿದೆ ಎಂದರು. ಮತ ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮರಾಗಳು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ.
ಆನ್‌ಲೈನ್ ಮೂಲಕ ಡಿಸ್‌ಪ್ಲೇ: ಇದಲ್ಲದೆ ಪ್ರತಿ ಮತ ಎಣಿಕೆ ಕೇಂದ್ರದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಇಂಟರ್‌ನೆಟ್‌ನಲ್ಲಿ ಸ್ಟ್ರೀಮ್ ಆಗುತ್ತಿರುತ್ತದೆ ಹಾಗೂ ಪ್ರತಿ ಎಣಿಕೆ ಕೇಂದ್ರದಲ್ಲಿ ನಡೆಯುವ ಪ್ರಕ್ರಿಯೆಯನ್ನು ಗಮನಿಸಬಹುದು. ಎಣಿಕೆಯ ಪ್ರಗತಿಯನ್ನು ಆನ್‌ಲೈನ್ ಮೂಲಕ ಡಿಸ್‌ಪ್ಲೇ ಮಾಡಲಾಗುವುದು.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಅನ್ವಯ ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ನೌಕರರು, ವಿವಿಧ ಪಕ್ಷಗಳ ಏಜೆಂಟರು ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಒಳಗಡೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದೊಳಗೆ ಬೆಂಕಿ ಪೊಟ್ಟಣ, ಸಿಗರೇಟ್, ಬೀಡಿ, ಸಿಗರೇಟ್ ಲೈಟರ್, ಗುಟಕಾ ಪಾಕೆಟ್, ಫೌಂಟನ್ ಪೆನ್ ಮತ್ತು ಮೊಬೈಲ್ ತರುವುದನ್ನು ನಿಷೇಧಿಸಲಾಗಿದೆ. ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತ ಈ ಸಲ ಮತದಾನದ ಪ್ರಮಾಣ ಶೇ.8.72 ರಷ್ಟು ಹೆಚ್ಚಾಗಿದ್ದು, ಫಲಿತಾಂಶ ಬೇಗ ಪ್ರಕಟವಾಗಬಹುದು ಎಂದು ಡಾ. ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
800 ಜನ ಭದ್ರತಾ ಸಿಬ್ಬಂದಿ ನಿಯೋಜನೆ: ಜಿಲ್ಲಾ ಪೊಲೀಸ್ ಅಧೀಕ್ಷಕ ಅಮೀತಸಿಂಗ್ ಈ ಸಂದರ್ಭದಲ್ಲಿ ಮಾತನಾಡಿ, ಮತ ಎಣಿಕೆ ಕಾರ್ಯಕ್ಕಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಿದ್ದು, 800 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಜಿಲ್ಲಾದ್ಯಂತ ಎಲ್ಲ ತರಹದ ಮದ್ಯ ಮಾರಾಟದ ಹಾಗೂ ಮೆರವಣಿಗೆ, ಪಟಾಕಿ ಸಿಡಿಸುವುದನ್ನು ನಿಷೇಧಿಸುವ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಟಿ.ಎಚ್.ಎಂ. ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಸಹಾಯಕ ಚುನಾವಣಾಧಿಕಾರಿಗಳಾದ ಭೀಮಾಶಂಕರ್, ಇಲಿಯಾಸ್ ಅಹ್ಮದ್, ಶ್ರೀಕಾಂತ್ ಕಟ್ಟಿಮನಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದು, ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಕೈಗೊಳ್ಳುತ್ತಿರುವ ಸಿದ್ಧತೆಯನ್ನು ಪರಿಶೀಲಿಸಿದರು.
ಯಾವ ಕಟ್ಟಡದಲ್ಲಿ, ಯಾವ ಅಸೆಂಬ್ಲಿ ಕ್ಷೇತ್ರದ ಮತ ಎಣಿಕೆ: ಗುಲ್ಬರ್ಗ (ಪ.ಜಾ.) ಮೀಸಲು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಅಸೆಂಬ್ಲಿ ಕ್ಷೇತ್ರದ ಮತ ಎಣಿಕೆ ಯಾವ ಕಟ್ಟಡದಲ್ಲಿ ನಡೆಯಲಿದೆ ಎಂಬುದರ ಮತ ಎಣಿಕೆ ಪ್ರಕ್ರಿಯೆಯ ವಿವರ ಹೀಗಿದೆ.
1) ಭೌತಶಾಸ್ತ್ರ ವಿಭಾಗ- ಅಫಜಲಪುರ ವಿಧಾನಸಭಾ ಮತಕ್ಷೇತ್ರ, 2) ಪರೀಕ್ಷಾ ವಿಭಾಗ- ಜೇವರ್ಗಿ ಮತ್ತು ಗುಲ್ಬರ್ಗ (ಗ್ರಾ) ವಿಧಾನಸಭಾ ಮತಕ್ಷೇತ್ರಗಳು, 3) ಗಣಿತಶಾಸ್ತ್ರ ವಿಭಾಗ- ಅಂಚೆ ಮತಪತ್ರಗಳ ಎಣಿಕೆ ಮತ್ತು ಗುರುಮಿಟಕಲ್ ವಿಧಾನಸಭಾ ಮತಕ್ಷೇತ್ರ, 4)  ಸಸ್ಯಶಾಸ್ತ್ರ ವಿಭಾಗ- ಚಿತ್ತಾಪುರ ಮತ್ತು ಸೇಡಂ ವಿಧಾನಸಭಾ ಮತಕ್ಷೇತ್ರಗಳು
5) ಕನ್ನಡ ವಿಭಾಗ- ಗುಲ್ಬರ್ಗ (ದಕ್ಷಿಣ) ವಿಧಾನಸಭಾ ಮತಕ್ಷೇತ್ರ, 6) ಸೂಕ್ಷ್ಮ ಜೀವಶಾಸ್ತ್ರ ವಿಭಾಗ- ಗುಲ್ಬರ್ಗ (ಉತ್ತರ) ವಿಧಾನಸಭಾ ಮತಕ್ಷೇತ್ರ. ಪ್ರತಿಯೊಂದು ವಿಧಾನಸಭಾ ಮತಕ್ಷೇತ್ರಕ್ಕೆ 14 ಎಣಿಕೆ ಟೇಬಲ್ ಹಾಗೂ 1-ಸಹಾಯಕ ಚುನಾವಣಾಧಿಕಾರಿಯ ಟೇಬಲ್ ಸೇರಿದಂತೆ ಒಟ್ಟು 15 ಟೇಬಲ್‌ಗಳನ್ನು ಮತ ಎಣಿಕೆಗಾಗಿ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.