ಹಣ ಚೆಲ್ಲಿದರೂ ಗುರುಮಠಕಲ್ಗಿಲ್ಲ ನೀರು!
- ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಗುರುಮಠಕಲ್ ಮೇ 20
ಗುರುಮಠಕಲ್ ಪಟ್ಟಣ ಹಾಗೂ ಮತಕ್ಷೇತ್ರದ ವ್ಯಾಪ್ತಿಯ 27 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಕಳೆದ ನ. 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಅದರೆ ಇಲ್ಲಿನ ಜನತೆಗೆ ಕುಡಿಯುವ ನೀರು ಮಾತ್ರ ದೊರೆಯುತ್ತಿಲ್ಲ.
ಹೌದು. ಇದು ಸತ್ಯ. ಗುರುಮಠಕಲ್ ಪಟ್ಟಣದ ಸುಮಾರು ದಿನಗಳ ಬೇಡಿಕೆಯನ್ನು ಅಗಿನ ಶಾಸಕರಾದ ಮಲ್ಲಿಕಾರ್ಜುನ ಖರ್ಗೆಯವರು ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದರು. ಇದನ್ನು ಯಡಿಯೂರಪ್ಪನವರ ಅಧಿಕಾರದ ಅವಧಿಯಲ್ಲಿ ಅನುಮೋದಿಸಿ ಹಣ ಬಿಡುಗಡೆ ಮಾಡಲಾಯಿತು. ಗುರುಮಠಕಲ್ ಪಟ್ಟಣ ಸೇರಿದಂತೆ ಮತಕ್ಷೇತ್ರದ ವ್ಯಾಪ್ತಿಯಲ್ಲಿನ 27 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಸುಮಾರು 32 ಕೋಟಿ ರೂಪಾಯಿಗಳನ್ನು 2007-08ನೇ ಸಾಲಿನಲ್ಲಿ ಬಿಡುಗಡೆ ಮಾಡಲಾಯಿತು.
ದುಡ್ಡು ಖರ್ಚಾಯಿತು ಅಷ್ಟೇ...ಹಣ ಬಿಡುಗಡೆಯಾದ ಸುಮಾರು ಐದು ವರ್ಷಗಳ ಅವಧಿಯಲ್ಲಿ ಕಾಮಗಾರಿಯೂ ಪೂರ್ಣಗೊಂಡಿತು. ಈ ಭಾಗದ ಜನತೆಯ ಬಹುದಿನಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ ಎನ್ನುವ ಜನತೆಯ ಕನಸು ಇದೀಗ ನನಸಾಯಿತು ಎನ್ನಲಾಗಿತ್ತು. ಆದರೆ ನೀರಿಗಾಗಿ ದುಡ್ಡು ಖರ್ಚಾಯಿತು. ಅದರೆ ನೀರು ಮಾತ್ರ ದೊರೆಯುತ್ತಿಲ್ಲ ಎಂಬ ಜನತೆಯ ಅಳಲು ಈಗಲೂ ಹಾಗೆಯೇ ಉಳಿದಿದೆ.
ಬೃಹತ್ ಯೋಜನೆ: ಕರ್ನಾಟಕ ರಾಜ್ಯದ 30 ಜಿಲ್ಲೆಗಳಲ್ಲಿ ಎಲ್ಲಿಯೂ ಇಲ್ಲದಂತಹ ಬೃಹತ್ ಯೋಜನೆ ಗುರುಮಠಕಲ್ ಮತಕ್ಷೇತ್ರದಲ್ಲಿ ಪ್ರಥಮ ಬಾರಿ ನಡೆದಿದೆ. ಸುಮಾರು 27 ಗ್ರಾಮದ ಜನತೆಗೆ ಶುದ್ಧವಾದ ಕುಡಿಯುವ ನೀರು ಪೂರೈಸಲು ಭೀಮಾನದಿಯಿಂದ 45 ಕಿ. ಮೀ. ದೂರದ ಪಟ್ಟಣಕ್ಕೆ ಪೈಪ್ಲೈನ್ ಮೂಲಕ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. ಭೀಮಾನದಿಯಿಂದ ಸರಬರಾಜು ಅಗುವ ನೀರಿಗೆ ಒಟ್ಟಾರೆ 3 ಕಡೆ ನೀರು ಎತ್ತುವ ಕೇಂದ್ರಗಳನ್ನು ನಿರ್ಮಾಣ ಮಾಡಿದು,್ದ ನದಿ ಬಳಿ ಒಂದು ಮತ್ತು ಅರಕೇರಾ ಹಾಗೂ ಚಿನ್ನಕರ್ ಕೇಂದ್ರಗಳ ಮೂಲಕ ನೀರು ಸರಬರಾಜು ಅಗಲಿದೆ ಎಂದು ಹೇಳಲಾಗಿತ್ತು. ಅದರೆ ಯೋಜನೆಗೆ ಚಾಲನೆ ದೊರೆತು ಸುಮಾರು 6 ತಿಂಗಳು ಕಳೆದರೂ ಒಂದು ಗ್ರಾಮಕ್ಕೂ ನೀರು ದೊರತಿಲ್ಲ.
ಎಲ್ಲಿದೆ ಪ್ರತಿ ದಿನ ಕುಡಿಯಲು ನೀರು? 6 ತಿಂಗಳು ಕಳೆದರು ಯಾವುದೇ ಗ್ರಾಮಕ್ಕೂ ನೀರು ಸರಬರಾಜು ಮಾಡಲು ಆಗಿಲ್ಲ.
ಅದೇ ರೀತಿ ಪಟ್ಟಣಕ್ಕೆ ದಿನವೊಂದಕ್ಕೆ 54.30 ಲಕ್ಷ ಲೀಟರ ಶುದ್ಧಕುಡಿಯುವ ನೀರು ಸರಬರಾಜು ಆಗಲಿದೆ ಎಂದು ಹೇಳಲಾಗಿತ್ತು. ಅದೂ ಕೂಡ ಈಗ ಸುಳ್ಳಾಗಿದೆ. ಪ್ರಾರಂಭದಲ್ಲಿ ಕೆಲವು ದಿನಗಳ ಕಾಲ ನೀರು ಸರಬರಾಜು ಮಾಡಿದ ಅಧಿಕಾರಿಗಳೂ ಇದೀಗ ಕುಂಟು ನೆಪ ಹೇಳಿ ಗುರುಮಠಕಲ್ ಪಟ್ಟಣಕ್ಕೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ 'ಪ್ರತಿ ದಿನ ನೀರು' ಎನ್ನುವ ಮಾತು ಸುಳ್ಳಾಗಿದೆ.
ಎರಡು ದಿನಗಳಿಗೊಮ್ಮೆ ನೀರು: ಈ ಹಿಂದೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಕೆರೆಯ ನೀರನ್ನು ಸಂಗ್ರಹಿಸಿ ಸರಬರಾಜು ಮಾಡುತ್ತಿದ್ದರು. ಅದರೆ ಭೀಮಾನದಿಯ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ದೊರೆತ ಹಿನ್ನೆಲ್ಲೆಯಲ್ಲಿ ಸ್ವಲ್ಪ ದಿನಗಳ ಕಾಲ, ಪ್ರತಿ ದಿನ ನೀರು ಸರಬರಾಜು ಮಾಡಿದಂತೆ ಮಾಡಿ ಇದೀಗ ಮತ್ತೆ ಹಳೆಯ ರಾಗ ಮುಂದುವರೆಸಿದ್ದಾರೆ. ಎರಡು ದಿನಗಳಿಗೊಮ್ಮೆ ನೀರು ಬಿಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಜನತೆ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಒಟ್ಟಾರೆಯಾಗಿ ದುಡ್ಡು ಖರ್ಚಾದರೂ ಗುರುಮಠಕಲ್ ಪಟ್ಟಣಕ್ಕೆ ಮಾತ್ರ ಶುದ್ಧ ಕುಡಿಯುವ ನೀರು ಸಿಗದೆ ಇರುವುದು, ಇಲ್ಲಿನ ಜನತೆಯ ದುರದೃಷ್ಟವೇ ಸರಿ ಎನ್ನಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

