ಗುಲ್ಬರ್ಗಾ

ಕಳಪೆ ಪುಸ್ತಕಗಳ ನಿಗ್ರಹ ಪ್ರಕಾಶಕರ ಹೊಣೆ

Published On :

ಕ.ಪ್ರ. ವಾರ್ತೆ, ಗುಲ್ಬರ್ಗ, ಮೇ 20
ಹೊಲದಲ್ಲಿ ಬೆಳೆಯೊಂದಿಗೆ ಕಳೆ ಬೆಳೆಯುವುದು ಪ್ರಕೃತಿ ಸಹಜ ಕ್ರಿಯೆ. ಅದೇ ರೀತಿ ಪುಸ್ತಕಲೋಕದಲ್ಲೂ ಅತ್ಯತ್ತಮ ಪುಸ್ತಕಗಳೊಂದಿಗೆ ಕಳಪೆ ಹೊತ್ತಿಗೆಗಳು ಪ್ರಕಟವಾಗುತ್ತಿವೆ. ಇವುಗಳನ್ನು ನಿಗ್ರಹಿಸುವುದು ಪ್ರಕಾಶಕರ ಜವಾಬ್ದಾರಿ ಎಂದು ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಲಹೆ ನೀಡಿದರು.
ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಹಾಗೂ ಬಸವ ಪ್ರಕಾಶನ ಆಶ್ರಯದಲ್ಲಿ ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 61 ಪುಸ್ತಕಗಳ ಲೋಕಾರ್ಪಣೆ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳಪೆ ಪುಸ್ತಕಗಳಿಂದ ಘನತೆ ಕ್ಷೀಣ: ಇಂತಹ ಕಳಪೆ ಮಟ್ಟದ ಪುಸ್ತಕಗಳು ಪ್ರಕಟವಾಗುವುದರಿಂದ ಸಮಾಜದಲ್ಲಿ ಘನತೆ ಉಳಿಸಿಕೊಳ್ಳುವುದು ಕಷ್ಟಕರವಾಗುತ್ತದೆ. ಹೀಗಾಗಿ ಪ್ರಕಾಶಕರೇ ಹೆಚ್ಚಿನ ಜವಾಬ್ದಾರಿ ಹೊತ್ತು ಅಂತಹ ಪುಸ್ತಕಗಳನ್ನು ಪ್ರಕಟವಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಸಾಮಾನ್ಯವಾಗಿ ಯಾವುದೇ ಕ್ಷೇತ್ರ ಅಭಿವೃದ್ಧಿಯ ಹಾದಿಯಲ್ಲಿದ್ದರೆ ಈ ತೆರನಾದ ಸವಾಲುಗಳು ಎದುರಾಗಲೇಬೇಕು. ಅದೇ ರೀತಿಯಲ್ಲಿ ಪುಸ್ತಕ ಲೋಕಕ್ಕೂ ಕಳೆಯಾಗಿ ಅಂಟಿಕೊಳ್ಳಬಲ್ಲ ಪುಸ್ತಕಗಳು ಹೆಚ್ಚಿವೆ. ಹೀಗಾದಲ್ಲಿ ಬರುವ ದಿನಗಳಲ್ಲಿ ಓದುವ ವರ್ಗಕ್ಕೆ ಉತ್ತಮ ಪುಸ್ತಕಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಕಾಶಕರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದರು.
ಮನೆಯಲ್ಲೊಂದು ಗ್ರಂಥಾಲಯವಿರಲಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮನೆಯೊಂದಕ್ಕೆ ಕಡ್ಡಾಯವಾಗಿ ಉತ್ತಮ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯವನ್ನು ಸ್ಥಾಪಿಸಬೇಕು. ಈ ಮೂಲಕ ಮನೆಯಿಂದಲೇ ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ಇಮ್ಮಡಿಗೊಳಿಸುವ ಕಾರ್ಯ ಆರಂಭವಾಗಬೇಕು. ಓದಿನ ಪುಸ್ತಕಗಳನ್ನು ಸಂವಾದ ರೂಪದಲ್ಲಿ ಅನುಭವ ಹಂಚಿಕೊಳ್ಳಲು ಸೂಕ್ತ ವೇದಿಕೆಯನ್ನು ಕಲ್ಪಿಸುವ ಕೆಲಸವಾಗಬೇಕೆಂದರು.
ಇಂದಿನ ಯುವಪೀಳಿಗೆಯಲ್ಲಿ ಓದುವ ಸಂಸ್ಕೃತಿಯೇ ಮಾಯವಾಗಿದೆ. ಹೀಗಾಗಿ ವಾರದ ಪುಸ್ತಕ ಎಂಬಂತಹ ಕಾರ್ಯಕ್ರಮಗಳನ್ನು ನಡೆಸಬೇಕು. ಈ ಮೂಲಕ ತರುಣ- ತರುಣಿಯರನ್ನು ಸಾರಸ್ವತ ಪ್ರಪಂಚಕ್ಕೆ ಕರೆತರುವ ಪ್ರಯತ್ನಗಳಾಗಬೇಕು. ತಂತ್ರಜ್ಞಾನದ ಯುಗದಲ್ಲಿ ಯಾರಿಗೂ ಓದುವುದಕ್ಕಾಗಿ ಸಮಯವಿಲ್ಲದಾಗಿದೆ. ಹೀಗಾಗಿ ಓದಿನ ಹವ್ಯಾಸ ಪ್ರತಿಯೊಬ್ಬರಲ್ಲೂ ರೂಢಿಸಬೇಕು ಎಂದರು.
ಪುಸ್ತಕಗಳ ಪ್ರಕಟಣೆ ಗಣನೀಯ ಹೆಚ್ಚಳ: ಪುಸ್ತಕಗಳು ಅರಿವನ್ನು ವಿಸ್ತಾರ ಮಾಡುವ ಸಾಧನ ಹಾಗೂ ದಾರಿ ತೋರುವ ಕೈದೀಪವಾಗಿವೆ. ಆಧುನಿಕ ಪ್ರಪಂಚದಲ್ಲಿ ಯಾರಿಗೂ ಓದುವ ವ್ಯವಧಾನವಿಲ್ಲದಾಗಿದೆ. ಕಳೆದೆರಡು ದಶಕಗಳ ಹಿಂದೆ ದೃಶ್ಯ ಮಾಧ್ಯಮದ ಅಧಿಪತ್ಯಕ್ಕೆ ಮುದ್ರಣ ಮಾಧ್ಯಮ ಇಲ್ಲದಂತಾಗುತ್ತದೆ ಎಂಬ ಭಯ ಮನೆ ಮಾಡಿತ್ತು. ವಿಪರ್ಯಾಸವೆಂದರೆ ಈ ಹಿಂದೆ 1,500 ಪುಸ್ತಕಗಳು ಮಾತ್ರ ಪ್ರಕಟವಾಗುತ್ತಿದ್ದವು. ಆದರೀಗ ಅವುಗಳ ಸಂಖ್ಯೆ 3,500- 4000ಕ್ಕೆ ತಲುಪಿದೆ ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ. ಸೂಗಯ್ಯ ಹಿರೇಮಠ, ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ರಾಜಶೇಖರ ಹತಗುಂದಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಕೆ.ನೀಲಾ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶಕರಾದ ಸಿದ್ಧಲಿಂಗ ಕೊನೇಕ್, ಶರಣಬಸವ ಕೊನೇಕ್, ಬಸವರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.