ಗುಲ್ಬರ್ಗಾ

ಮಳೆ ನೀರು ಸಂಗ್ರಹಿಸಿ, ತೇವಾಂಶ ಹೆಚ್ಚಿಸಿ

Published On :

ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಳೆ ಹೆಚ್ಚಿನ ಇಳುವರಿ ಸಿಗುತ್ತಿಲ್ಲ. ಇದನ್ನು ತಪ್ಪಿಸಲು ಮಳೆ ನೀರು ಸಂಗ್ರಹಿಸಿ ತೇವಾಂಶ ಹೆಚ್ಚಿಸುವ ಮೂಲಕ ಅಧಿಕ ಇಳುವರಿ ಪಡೆಯುವಂತೆ ಕೃಷಿ ಮಿಷನ್ ಮಾಜಿ ಅಧ್ಯಕ್ಷ ಡಾ.ಎಸ್.ಎ. ಪಾಟೀಲ್ ಸಲಹೆ ನೀಡಿದರು.
ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ವಿಕಾಸ ಅಕಾಡೆಮಿ ಇಲ್ಲಿನ ಭಾರತೀಯ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಕೃಷಿ  ಕಾರ್ಯಾಗಾರದಲ್ಲಿ ಮಾತನಾಡಿದರು. ಕೃಷಿ ವೆಚ್ಚ ಕಡಿಮೆ ಮಾಡಿ, ಹೆಚ್ಚು ಆದಾಯ ಗಳಿಸುವಂತೆ ಮಾಡುವುದೇ ಸಮಗ್ರ ಕೃಷಿ ಪದ್ಧತಿಯ ಮುಖ್ಯ ಉದ್ದೇಶವಾಗಿದೆ. ಮಣ್ಣು ಮತ್ತು ನೀರನ್ನು ಸಮರ್ಪಕವಾಗಿ ಮತ್ತು ಅಗತ್ಯವಾಗಿ ಬಳಸುವುದು ಅಗತ್ಯವಾಗಿದೆ. ಮಳೆ ನೀರು ಹಿಡಿದಿಡುವುದೇ ಮೂಲ ಬಂಡವಾಳವಾಗಿದೆ. ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಒತ್ತನ್ನು ಕೊಡಬೇಕೆಂದು ಹೇಳಿದರು.
ಕೃಷಿ ವಿಕಾಸ: ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಒಂದು ಕಣ್ಣೀರು ಹನಿ ಒರೆಸುವಂಥ ಕೃಷಿ ಸಂಶೋಧನೆಯಾಗಬೇಕು. ಆಗ ಮಾತ್ರ ಕೃಷಿ ವಿಕಾಸ ಹೊಂದಲು ಸಾಧ್ಯ. ನಕಲು ಯಾವಾಗಲೂ ಮೂಲವಾಗಲು ಸಾಧ್ಯವಿಲ್ಲ. ಭಾರತ ದೇಶ ಭಾರತವಾಗಿಯೇ ಸ್ವಾಲಂಬನೆ ಸಾಧಿಸಬೇಕು. ಸ್ವದೇಶಿ ಚಿಂತನೆಯಿಂದ ಮುಂದೆ ಬರಬೇಕು. ಮಣ್ಣು-ನೀರಿನ ಪಾವಿತ್ರ್ಯತೆ ಉಳಿಯಬೇಕು. ಗಿಡಗಂಟಿಗಳು, ಪಶುಗಳನ್ನು ಉಳಿಸಬೇಕು. ನಿಸರ್ಗದೊಂದಿಗೆ ಹೊಂದಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರು. ನಾಡೋಜ ಎಲ್. ನಾರಾಯಣ ರೆಡ್ಡಿ ಸಾವಯುವ ಸಮಗ್ರ ಕೃಷಿ ಬಗ್ಗೆ ಉಪನ್ಯಾಸ ನೀಡಿದರು. ವಿಕಾಸ ಅಕಾಡೆಮಿಯ ಕೃಷಿ ವಿಭಾಗದ ಪ್ರಮುಖ ವಿ. ಶಾಂತ ರೆಡ್ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೋಹನ್ ಪಾಟೀಲ್  ಪ್ರಾರ್ಥಿಸಿದರು. ಡಾ. ಅಲ್ಲಮಪ್ರಭು ಗುಡ್ಡಾ ಸ್ವಾಗತಿಸಿದರು. ಪ್ರಗತಿಪರ ರೈತರು, ರೈತ ಮಹಿಳೆಯರು ಪಾಲ್ಗೊಂಡಿದ್ದರು.
ಮಣ್ಣಿನ ಪಾವಿತ್ರ್ಯತೆ: ಸಾವಯವ ಕೃಷಿಯಿಂದ ಮಾತ್ರ ಮಣ್ಣಿನ ಪಾವಿತ್ರ್ಯತೆ ಕಾಪಾಡಲು ಸಾಧ್ಯ. ಹೈಕ ಭಾಗದ 7 ಜಿಲ್ಲೆಗಳ 48 ತಾಲೂಕುಗಳಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಮಾದರಿ ರೈತರೊಬ್ಬರನ್ನು ತಯಾರಿಸುವ ಉದ್ದೇಶದಿಂದ ವಿಕಾಸ ಅಕಾಡೆಮಿಯ ಸಾವಯುವ ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ ಎಂದು ಬಸವರಾಜ ಪಾಟೀಲ್ ಸೇಡಂ ತಿಳಿಸಿದರು. ಈ ಭಾಗದ ರೈತರನ್ನು ಸ್ವಾವಲಂಬಿಗಳಾಗಿ ಮಾಡುವ ಮೂಲಕ ರೈತರು ತಲೆ ಎತ್ತಿ ನಿಲ್ಲುವಂತಾಗಬೇಕು. ಆ ಮೂಲಕ ದೇಶಕ್ಕೆ ಅಪರೂಪದ ಕೊಡುಗೆ ಸಲ್ಲಿಸುವಂತಗಬೇಕು. ಆಗ ಮಾತ್ರ ದೇಶದ ಗಮನ ನಮ್ಮ ಕಡೆ ಹರಿಯಲು ಸಾಧ್ಯ. ಭೂಮಿಯ ಫಲವತ್ತತೆ ಹೆಚ್ಚಳವಾದರೆ ಮಾತ್ರ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳುವ ಜೊತೆಗೆ ಅಮೂಲ್ಯವಾದ ಭೂಮಿಯನ್ನು ಮುಂದಿನ ತಲೆಮಾರಿನವರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲು ಸಾಧ್ಯ ಎಂದರು.
ಫಲವತ್ತು: ಕೃಷಿಕರಿಗಿಂತಲೂ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸಿ ಕಡಿಮೆ ಬಂಡವಾಳದೊಂದಿಗೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುವುದು. ವಿಶ್ವದ ಇತರ ದೇಶಗಳಲ್ಲಿ ಶೇ. 16ರಷ್ಟು ಭೂಮಿ ಮಾತ್ರ ಫಲವತ್ತಾಗಿದ್ದರೆ, ಭಾರತದಲ್ಲಿ ಶೇ.36 ರಷ್ಟು ಫಲವತ್ತಾಗಿದೆ. ಅದನ್ನು ಉಳಿಸಿ ಬೆಳೆಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.