ಗುಲ್ಬರ್ಗಾ

ಕೊಳಚೆ ನೀರಿನ ದುರ್ವಾಸನೆಗೆ ಜನತೆ ತತ್ತರ

Published On :

ಗುಲ್ಬರ್ಗ: ಸುತ್ತಮುತ್ತ ಹರಡಿರುವ ಚರಂಡಿ ನೀರು. ಅದರಲ್ಲಿ ಮುಳುಗೇಳುವ ಎಮ್ಮೆಗಳು. ಕೊಳಚೆ ನೀರಿನ ವಾಸನೆಗೆ ತೊಂದರೆ ಅನುಭವಿಸುತ್ತಿರುವ ಜನತೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಇದರಿಂದ ಪಾರಾಗಲು ಮನೆ ಖಾಲಿ ಮಾಡುವುದೊಂದೇ ಬಾಕಿ.
- ಇದು ನಗರದ 50ನೇ ವಾರ್ಡ್‌ನ ದತ್ತ ನಗರ ನಿವಾಸಿಗಳ ದುಸ್ಥಿತಿ.
15 ದಿನಗಳಿಂದ ಈ ಅವಾಂತರ ಸೃಷ್ಟಿಯಾಗಿದೆ. ಹೊಲಸು ನೀರಿನಿಂದ ಇಲ್ಲೊಂದು ಕೆರೆ ಸೃಷ್ಟಿಯಾಗಿದೆ. ಚರಂಡಿ ನೀರು ಜನರನ್ನು ಹೈರಾಣಾಗಿಸಿದ್ದು, ರೇಲ್ವೆ ಕೆಳ ಸೇತುವೆ ಸಂಚಾರವೂ ಸ್ಥಗಿತವಾಗಿದೆ. ಎರಡು ಪಾರ್ಕ್, ನಾಲ್ಕೈದು ಖಾಲಿ ನಿವೇಶನ, ಪಾದಚಾರಿ ಮಾರ್ಗ, ರಸ್ತೆ, ಆಟದ ಮೈದಾನದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಆ ನೀರಿನಲ್ಲಿ ಪಾಚಿಗಟ್ಟಿದೆ. ಎಮ್ಮೆಗಳು ದಿನವೂ ಹೊರಳಾಡಿ ಮತ್ತಷ್ಟು ಅಧ್ವಾನ ಸೃಷ್ಟಿಸಿವೆ. ನಿವಾಸಿಗಳು ದಾರಿ ಕಾಣದಂತಾಗಿದ್ದಾರೆ.
ಸಮಸ್ಯೆಗೇನು ಕಾರಣ?: ರೇಲ್ವೆ ಸೇತುವೆ ಬಳಿ ಚರಂಡಿ ಕಟ್ಟಿಕೊಂಡಿದ್ದೇ ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ. ಮ್ಯಾನ್ ಹೋಲ್ ಒಳಗಿನ ಕಬ್ಬಿಣದ ಪೈಪ್ ಮೂಲಕ ನೀರು ಮುಂದೆ ಸಾಗುತ್ತಿಲ್ಲ. ಗಲೀಜು ನೀರು ಖಾಲಿ ಸ್ಥಳ ಆವರಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ.
ದನಗಾಹಿಗಳ ವಿಕೃತಿ: ಈ ಅಧ್ವಾನಕ್ಕೆ ದನಗಾಹಿಗಳು ಕಾರಣ ಎನ್ನುತ್ತಾರೆ ನಿವಾಸಿಗಳು. ಪ್ರತಿ ಬೇಸಿಗೆಯಲ್ಲೂ ಇಲ್ಲಿ ಕೃತಕ ಕೆರೆ ಹುಟ್ಟಿಕೊಳ್ಳುತ್ತದೆ. ಬೇಸಿಗೆಯಲ್ಲಿ ನೀರು ಸಿಗುವುದೇ ಕಷ್ಟ. ಇನ್ನು ಜಾನುವಾರಗಳೀಗೆ ನೀರು ಎಲ್ಲಿಂದ ತರುವುದು ಎಂಬುದು ಗೌಳಿಗರ ಚಿಂತೆ. ಕಡು ಬಿಸಿಲಿಗೆ ಎಮ್ಮೆಗಳು ಬಸವಳಿದು ಕೆರೆ ನೀರಿನಲ್ಲಿ ಸ್ನಾನಕ್ಕಾಗಿ ಹಾತೊರೆಯುತ್ತವೆ. ಇದರಿಂದಾಗಿ ದನಗಾಹಿಗಳು ಚರಂಡಿ ನೀರು ಕಟ್ಟುವಂತೆ ಮಾಡಿ ಅವುಗಳಿಗೆ ಅನುಕೂಲ ಕಲ್ಪಿಸುತ್ತಾರೆಂದು ಸ್ಥಳೀಯರು ದೂರುತ್ತಾರೆ.
ಸೇತುವೆ ಸಮೀಪ ಸುಸಜ್ಜಿತ ಪೈಪ್‌ಲೈನ್ ಅಳವಡಿಸಲಾಗಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತದೆ. ಆದರೆ, ಬೇಸಿಗೆಯಲ್ಲಿ ಎಮ್ಮೆ, ಕುರಿ, ಮೇಕೆ ಸಾಕಣೆದಾರರು ಮ್ಯಾನ್‌ಹೋಲ್‌ಗೆ ಇಳಿದು ಪೈಪ್ ಒಡೆದು ನೀರು ಮುಂದೆ ಸಾಗದಂತೆ ತಂತ್ರ ಹೂಡುತ್ತಾರೆ. ನೀರು ಹರಿಯದೆ ಒಂದೇ ದಿನದಲ್ಲಿ ಸುತ್ತಲೂ ಹರಡುತ್ತದೆ. ಬಳಿಕ ಗೌಳಿಗರು ಜಾನುವಾರುಗಳನ್ನು ಇಲ್ಲಿಗೆ ಬಿಡುತ್ತಾರೆ ಎಂದು ದೂರುತ್ತಾರೆ ರಾಚಯ್ಯ ಮಠ.
ಮನೆ ಖಾಲಿ, ಪಾರ್ಕ್ ನಿರ್ಜನ: ಚರಂಡಿ ನೀರು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ನಿಂತ ನೀರಲ್ಲಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ.
ಎಮ್ಮೆಗಳು ಹೊರಳಾಡಿ ನೀರನ್ನು ಮತ್ತಷ್ಟು ಗಲೀಜು ಮಾಡಿವೆ. ದುರ್ವಾಸನೆಯಿಂದ ಮನೆ ಬಾಗಿಲು ತೆರೆಯಲು ಜನ ಹಿಂಜರಿಯುತ್ತಿದ್ದಾರೆ. ವಾಸನೆ ಸಹಿಸಲು ಆಗದವರು ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿದ್ದಾರೆ. ಮನೆಯೊಳಗಿದ್ದರೆ ಬಿಸಿಲ ತಾಪ, ಹೊರ ಬಂದರೆ ದುರ್ವಾಸನೆ. ವಿದ್ಯುತ್ ಕಡಿತಗೊಂಡರೆ ಜನರು ತ್ರಿಶಂಕು ಸ್ಥಿತಿಗೆ ತಲುಪುತ್ತಾರೆ. ಇಲ್ಲಿನ 2 ಪಾರ್ಕ್‌ಗಳು ತುಂಬಾ ನೀರು ಆವರಿಸಿದ್ದು, ವೃದ್ಧರ ವಾಯು ವಿಹಾರ, ಮಕ್ಕಳ ಆಟಕ್ಕೂ ಭಂಗ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.