ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕ.ಪ್ರ. ವಾರ್ತೆ ಯಾದಗಿರಿ ಮೇ 27
ಜಿಲ್ಲೆಯಲ್ಲಿ ಜನರಿಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ಜವಳಿ ಮತ್ತು ಜಿಲ್ಲಾ ಉಸ್ತುವರಿ ಸಚಿವ ಬಾಬುರಾವ್ ಚಿಂಚನಸೂರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಕಾರ್ಯಾಲಯದಲ್ಲಿ ಮಂಗಳವಾರ ಕುಡಿಯುವ ನೀರಿನ ಸಮಸ್ಯೆ ಮತ್ತು ಬರ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದ ಅವರು ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಮನ ನೀಡಬೇಕು. ಸಮಸ್ಯೆ ಇರುವ ಗ್ರಾಮಗಳ ಜನರಿಗೆ ತಕ್ಷಣ ನೀರು ಒದಗಿಸುವ ಕಾರ್ಯ ಮಾಡಬೇಕು. ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಸಕಲಕ್ಕೆ ಮತ್ತು ಆದ್ಯತೆ ಮೇಲೆ ಪೂರ್ಣಗೊಳಿಸಿ ಸೂಕ್ತ ಸಮಯದಲ್ಲಿ ಜನರಿಗೆ ನೀರಿನ ಸೌಲಭ್ಯ ದೊರಕಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮೇವಿನ ಕೊರತೆಯಾಗಬಾರದು: ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸ್ಥಳೀಯವಾಗಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅದರಂತೆ ಈಗಾಗಲೇ ಕುಡಿಯುವ ನೀರಿನ ಯೋಜನೆಗಳಿಗೆ ಮಂಜೂರಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.
ರಸ್ತೆಗಳನ್ನು ಸರಿಪಡಿಸಿ: ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ದುರಸ್ತಿಗೊಳಿಸಬೇಕೆಂದು ಸೂಚಿಸಿದ ಅವರು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಮತ್ತು ನಗರಾಭಿವೃದ್ಧಿ ಕೋಶದ ಹಾಗೂ ಪಂಚಾಯತರಾಜ್ ಇಂಜಿನಿಯರಿಂಗ್ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳನ್ನು ಯುದ್ಧದೋಪಾದಿಯಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಆದ್ಯತೆ: ಲೋಕೋಪಯೋಗಿ ಇಲಾಖೆ ಮೂಲಕ ಗುರುಮಠಕಲ್ ಮತ್ತು ನಂದೆಪಲ್ಲಿ ನಿರೀಕ್ಷಣಾ ಮಂದಿರಗಳ ನಿರ್ವಹಣೆ, ನವೀಕರಣ ಹಾಗೂ ಮೂಲ ಸೌಕರ್ಯ ಕಲ್ಪಿಸಲು ತಲಾ 10 ಲಕ್ಷ ರೂ. ಹಾಗೂ ಸೈದಾಪೂರ ನಿರೀಕ್ಷಣಾ ಮಂದಿರಕ್ಕೆ 20 ಲಕ್ಷ ರೂ. ಮಂಜೂರಾಗಿದ್ದು, ಆದ್ಯತೆ ಮೇಲೆ ಈ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಅದರಂತೆ ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ನೆಟ್ಟು ಸೌಂದರ್ಯೀಕರಣಗೊಳಿಸಬೇಕೆಂದು ಸೂಚಿಸಿದರು.
ಸಚಿವರು ಇದೇ ಸಂದರ್ಭದಲ್ಲಿ ವಿವಿಧ ಕುಡಿಯುವ ನೀರಿನ ಯೋಜನೆಗಳ ಪ್ರಗತಿಯ ಬಗ್ಗೆ ಪರಿಶೀಲಿಸಿದರು. ಸಭೆಯಲ್ಲಿ ಜಿಪಂ ಸಿಇಒ ಎಸ್.ಎ. ಜಿಲಾನಿ ಅವರು ಉಪಸ್ಥಿತರಿದ್ದು ಅವಶ್ಯಕ ಮಾಹಿತಿ ನೀಡಿದರು.
ತಾವರವಡಗೇರಾ ಗ್ರಾಮಕ್ಕೆ ಸಚಿವರ ಭೇಟಿ: ಶಹಾಪೂರ ತಾಲೂಕಿನ ತಾವರವಡಗೇರಾ ಗ್ರಾಮಕ್ಕೆ ಮಂಗಳವಾರ ಸಚಿವ ಚಿಂಚನಸೂರ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಊರಿನಲ್ಲಿ 4,000 ಸಾವಿರಕ್ಕೂ ಹೆಚ್ಚು ಜನತೆ ವಾಸಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಜನತೆ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಬೋರವೆಲ್ ಕೊರೆಸಿದರೂ ಸರಿಯಾಗಿ ನೀರು ಸಿಗುತ್ತಿಲ್ಲ. ಹಯ್ಯಾಳ ಬಿ ಗ್ರಾಮದ ಕೃಷ್ಣಾ ನದಿಯಿಂದ ಪೈಪ್‌ಲೈನ್ ಮಾಡಿದ್ದಲ್ಲಿ ಮಾತ್ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.
10 ಲಕ್ಷ ರೂ. ಬಿಡುಗಡೆ: ಜಿಲ್ಲಾ ಪಂಚಾಯತ್ ಅಧಿಕಾರಿಗಳು ನೆರೆಯ ಗ್ರಾಮವಾದ ಹಂಚಿನಾಳ ಗ್ರಾಮದಲ್ಲಿ ಹೊಸ ಬೋರವೆಲ್ ಹಾಕಿ ವಡಗೇರಾ ಗ್ರಾಮಕ್ಕೆ ಪೈಪ್‌ಲೈನ್ ಮಾಡಬೇಕು. ಇದಕ್ಕಾಗಿ ಅಂದಾಜು 12 ಲಕ್ಷ ಹಣ ರೂ. ಬೇಕಾಗುವುದು ಎಂದು ವಿವರಿಸಿದಾಗ ಸಚಿವರು ಕೂಡಲೇ 10 ಲಕ್ಷ ರೂ. ಹಣ ಬಿಡುಗಡೆ ಮಾಡಬೇಕೆಂದು ಜಿಲಾನಿ ಅವರಿಗೆ ಸೂಚಿಸಿದರು. ಸ್ಥಳದಲ್ಲಿ ಬಸವರಾಜ್, ಅಧಿಕಾರಿಗಳು ಇದ್ದರು.
ಏತ ನೀರಾವರಿ: ಪಾಟೀಲ್ ಹೆಸರಿಡಲು ಆಗ್ರಹ
ಹುಣಸಗಿ: ರಾಜನಕೋಳೂರು ಏತ ನೀರಾವರಿ ಯೋಜನೆಗೆ ಹೈ-ಕ ನಾಯಕ, ಗುಲ್ಬರ್ಗದ ದಿ. ಡಾ. ಎಂ.ಎಸ್.ಪಾಟೀಲ್ ಅವರ ಹೆಸರಿಡಲು ಜಿಪಂ ಸದಸ್ಯ ಎಚ್.ಸಿ. ಪಾಟೀಲ್ ನೀರಾವರಿ ಸಚಿವ ಎಂ.ಬಿ. ಪಾಟೀಲರಿಗೆ ಒತ್ತಾಯಿಸಿದ್ದಾರೆ. ರಾಜನಕೋಳೂರು ಏತ ನೀರಾವರಿ ಯೋಜನೆಗೆ ಕಳೆದ ಹದಿನೈದು ವರ್ಷಗಳ ಹಿಂದೆ ಆಗಿನ ನೀರಾವರಿ ಸಚಿವ ಎಚ್.ಕೆ. ಪಾಟಿಲ್, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಎಸ್.ಎ. ಪಾಟೀಲ್ ಅವರನ್ನು ಕರೆತಂದು, ಕಾಲುವೆ ನಿರ್ಮಾಣಕ್ಕೆ ಅತಿ ಹೆಚ್ಚು ಭೂಮಿ ನೀಡಿದ ಗ್ರಾಮದ ಮೂರು ಸಾವಿರ ಎಕರೆಗೆ ನೀರಾವರಿ ಲಭ್ಯವಿಲ್ಲಾ. ಈ ಭೂಮಿಗಳಿಗೆ ನೀರು ಒದಗಿಸಿದರೆ, ಜನತೆ ನಿಮಗೆ ಸದಾ ಋಣಿಯಾಗಿರುವರು ಎಂದು ಆಗ ಡಾ. ಎಮ್. ಎಸ್. ಪಾಟಿಲ್ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದರಂತೆ ಆಗಿನ ತಜ್ಞರು ನೀಡಿದ ವರದಿಯ ಆಧಾರದ ಮೇಲೆ ಯೋಜನೆ ಜಾರಿಗೆ ಬಂದಿತ್ತು. ಇದೀಗ ಅಂದಾಜು 8 ಕೋಟಿ ರೂ.ಗಳಲ್ಲಿ ಕಾಲುವೆ ಜಾಲ, 4 ಕೋಟಿ ರೂ.ಗಳಲ್ಲಿ ಯಂತ್ರಗಳನ್ನು ಅಳವಡಿಸಿ ನೀರು ಹರಿಸಲಾಗಿದೆ. ಭೂ ಪರಿಹಾರ, ಇನ್ನು ಹೆಚ್ಚಿನ ಜಮೀನುಗಳಿಗೆ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ಯೋಜನೆಯ ಕಾರಣಕರ್ತ: ನಮ್ಮ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಮುಂದಾಲೋಚನೆಯಿಂದ ಶ್ರಮಿಸಿದ ಡಾ. ಎಮ್.ಎಸ್. ಪಾಟೀಲ್ ಅವರ ಹೆಸರನ್ನು ರಾಜನಕೋಳೂರು ಏತ ನೀರಾವರಿಗೆ ಯೋಜನೆಗೆ ಇಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಎಚ್.ಸಿ ಪಾಟೀಲ್ ತಿಳಿಸಿದ್ದಾರೆ. ಈಗಾಗಲೆ ಗುತ್ತಿಬಸವಣ್ಣ ಯೋಜನೆ, ಸನ್ನತಿ, ಹೀಗೆ ಅನೇಕ ನಾಮಾಕರಣಗಳನ್ನು ಸರ್ಕಾರ ಮಾಡಿದೆ. ಅದರಂತೆ ಈ ಯೋಜನೆಗೆ ಖ್ಯಾತ ವೈದ್ಯರಾದ ದಿ. ಎಂ. ಎಸ್ ಪಾಟೀಲ್ ಅವರ ಹೆಸರು ಇಡಬೇಕು ಎಂದು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

