ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಕನ್ನಡಪ್ರಭ ವಾರ್ತೆ ಯಾದಗಿರಿ ಮೇ 27
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲಾತಿ ಬದಲಾಗಿದ್ದು, ಪುರುಷರಿಗೆ ಅವಕಾಶ ನೀಡಲಾಗಿದೆ. 40 ತಿಂಗಳು ಮಹಿಳೆಯರಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವು ಈ ಬಾರಿ ಪುರುಷರಿಗೆ ಒಲಿದಿದೆ.
ಜಿಲ್ಲಾ ಪಂಚಾಯಿತಿಯ ಮೊದಲ ಎರಡು ಅವಧಿಗೆ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಾಗಿತ್ತು. ಅಲ್ಲದೇ ಉಪಾಧ್ಯಕ್ಷ ಸ್ಥಾನವು ಎರಡು ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಿದ್ದರೂ ಇಬ್ಬರು ಮಹಿಳೆಯರಿಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಅಲ್ಲದೇ ಮೂರನೇ ಅವಧಿಗೂ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಇದೀಗ ಮೀಸಲಾತಿ ಬದಲಾಯಿಸಿದ್ದು, ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ.
28ಕ್ಕೆ ಚುನಾವಣೆ: ಮೂರನೆಯ ಹಾಗೂ ಅಂತಿಮ 20 ತಿಂಗಳ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೇ 28 ರಂದು ಮಧ್ಯಾಹ್ನ 3 ಗಂಟೆಗೆ ಜಿಪಂ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರವನ್ನು ಜಿಪಂ ಉಪ ಕಾರ್ಯದರ್ಶಿಗಳಿಗೆ ಬುಧವಾರ ಮಧ್ಯಾಹ್ನ 1 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಗುಲ್ಬರ್ಗ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹಾಗೂ ಜಿಪಂ ಸಿಇಒ ಎಸ್.ಎ. ಜಿಲಾನಿ ತಿಳಿಸಿದ್ದಾರೆ.
40 ತಿಂಗಳಲ್ಲಿ 13 ಜನರಿಗೆ ಅಧಿಕಾರ: ಜಿಲ್ಲಾ ಪಂಚಾಯಿತಿಯ ಒಟ್ಟು 40 ತಿಂಗಳ ಅವಧಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ 13 ಸದಸ್ಯರು ಅಧಿಕಾರ ಅನುಭವಿಸಿದ್ದಾರೆ. 40 ತಿಂಗಳಲ್ಲಿ ನಾಲ್ವರು ಅಧ್ಯಕ್ಷರು, ನಾಲ್ವರು ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಮೂರು ಸ್ಥಾಯಿ ಸಮಿತಿಗಳಿಗೆ ಐದು ಜನರು ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಒಟ್ಟಾರೆ ಒಟ್ಟು 15 ಸದಸ್ಯರ ಪೈಕಿ, 13 ಸದಸ್ಯರು ಈಗಾಗಲೇ ಅಧಿಕಾರ ಪಡೆದಿದ್ದಾರೆ.
ಗೌಡರಿಗೆ ಅಧ್ಯಕ್ಷ ಸ್ಥಾನ: ಹೊಸ ಮೀಸಲು ಪ್ರಕಾರ ಅಧ್ಯಕ್ಷ ಸ್ಥಾನ, ಕೆಂಭಾವಿ ಕ್ಷೇತ್ರವನ್ನು ಪ್ರತಿನಿಧಿಸುವ ಸಿದ್ದಣ ಪೊಲೀಸ್ ಪಾಟೀಲರಿಗೆ ಒಲಿಯವ ಸಾಧ್ಯತೆ ಇದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಎದುರಾಗಿದೆ.
ಕಳೆದ ಎರಡು ಅವಧಿಯಲ್ಲಿ, ಅಂದರೆ 40 ತಿಂಗಳು ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಸಿದ್ದನಗೌಡ ಪೊಲೀಸ್ ಪಾಟೀಲರಿಗೆ ಯಾವುದೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನೂ ನೀಡಿಲ್ಲ. ಹೀಗಾಗಿ ಅವರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ಸಿಗಬೇಕು ಎನ್ನುವುದು ಬಹುತೇಕ ಜಿಲ್ಲಾ ಪಂಚಾಯಿತಿ ಸದಸ್ಯರ ಅಭಿಪ್ರಾಯವಾಗಿದೆ.
ಇದರ ಜತೆಗೆ ತಾಲೂಕು ಲೆಕ್ಕಾಚಾರವೂ ಸಿದ್ದನಗೌಡರ ಪರವಾಗಿದೆ. ಮೊದಲ 20 ತಿಂಗಳ ಅವಧಿಯಲ್ಲಿ ಯಾದಗಿರಿ ಹಾಗೂ ಶಹಾಪುರ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ಸಿಕ್ಕಿತ್ತು. ಎರಡನೇ ಅವಧಿಯ 20 ತಿಂಗಳಲ್ಲಿ ಶಹಾಪುರ ಹಾಗೂ ಯಾದಗಿರಿ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ದೊರೆತಿದೆ. ಸುರಪುರ ತಾಲ್ಲೂಕಿಗೆ ಇದುವರೆಗೆ ಅಧ್ಯಕ್ಷ ಸ್ಥಾನ ನೀಡಲಾಗಿಲ್ಲ. ಹಾಗಾಗಿ ಸುರಪುರ ತಾಲ್ಲೂಕಿಗೆ ಸೇರುವ ಕೆಂಭಾವಿ ಕ್ಷೇತ್ರದ ಸಿದ್ದನಗೌಡರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ವಾದ ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಈ ಬಾರಿಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಯಾದಗಿರಿ ತಾಲೂಕಿನ ಬಳಿಚಕ್ರ, ಶಹಾಪುರ ತಾಲ್ಲೂಕಿನ ಹಯ್ಯಾಳ (ಬಿ). ಹಾಗೂ ಸುರಪುರ ತಾಲ್ಲೂಕಿನ ಕಕ್ಕೇರಾ ಕ್ಷೇತ್ರವನ್ನು ಪ್ರತಿನಿಧಿಸುವ ಸದಸ್ಯರು ಮಾತ್ರ ಅರ್ಹರಾಗಿದ್ದಾರೆ.
ಆದರೆ ಈ ಬಾರಿ ಸುರಪುರ ತಾಲ್ಲೂಕಿಗೆ ಅಧ್ಯಕ್ಷ ಸ್ಥಾನ ನೀಡುವುದರಿಂದ, ಉಪಾಧ್ಯಕ್ಷ ಸ್ಥಾನವನ್ನು ಬೇರೆ ತಾಲೂಕಿಗೆ ನೀಡಬೇಕು ಎನ್ನುವ ಬೇಡಿಕೆ ಎದುರಾಗಿದೆ. ಹೀಗಾಗಿ ಕಕ್ಕೇರಾ ಕ್ಷೇತ್ರವನ್ನು ಪ್ರತಿನಿಧಿಸುವ ಹಣಮವ್ವ ಸೊಲ್ಲಾಪುರೆ ಸ್ಪರ್ಧೆಯಿಂದ ಹೊರಗೆ ಉಳಿಯಬೇಕಾಗಿದೆ.
ಇನ್ನು ಹಯ್ಯಾಳ ಬಿ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹನುಮೇಗೌಡ ಮರಕಲ್ ಹಾಗೂ ಬಳಿಚಕ್ರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಲ್ಲಮ್ಮ ಕಣೇಕಲ್ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಆದರೆ ಕಳೆದ ಎರಡು ಅವಧಿಯಲ್ಲಿ ಎರಡು ಬಾರಿ ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ನೀಡಿದ್ದು, ಈ ಬಾರಿ ಉಪಾಧ್ಯಕ್ಷ ಸ್ಥಾನವನ್ನು ಪುರುಷರಿಗೆ ನೀಡಬೇಕು ಎನ್ನುವ ಬೇಡಿಕೆ ಎದುರಾಗಿದೆ. ಹೀಗಾಗಿ ಹನುಮೇಗೌಡ ಮರಕಲ್ ಅವರಿಗೆ ಉಪಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹೀಗಾಗಿ ಈಗಿನಿಂದಲೇ ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ ಕುತೂಹಲ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

