ಹಾಸನ

ಮೂಲ ಸೌಲಭ್ಯ ವಂಚಿತ ಬಸ್ ನಿಲ್ದಾಣ

Published On :

ಕ.ಪ್ರ.ವಾರ್ತೆ  ,   ಆಲೂರು  ,  ಏ.17
ಪಟ್ಟಣದಲ್ಲಿರುವ ಬಸ್ ನಿಲ್ದಾಣ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿ ಪರಿಣಮಿಸಿದೆ.
ಜಿಲ್ಲೆಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲೂ ಬಸ್ ನಿಲ್ದಾಣಗಳಿದ್ದರೂ ಎಲ್ಲ ತಾಲೂಕುಗಳಿಗಿಂತಲೂ ಉತ್ತಮ ಗುಣಮಟ್ಟದ ಕಟ್ಟಡ ಹೊಂದಿರುವ ಈ ಬಸ್ ನಿಲ್ದಾಣದಲ್ಲಿ ಹಾಲಿ ಇಬ್ಬರು ಸಂಚಾರಿ ನಿಯಂತ್ರಕರಿದ್ದು, ಅವರು ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಿಲ್ದಾಣಕ್ಕೆ ಬರುವ ಎಲ್ಲ ಬಸ್‌ಗಳಿಗೂ  ಎಂಟ್ರಿ ಹಾಕಲು ಸಾಧ್ಯವಾಗುತ್ತಿಲ್ಲ.
ಬಸ್ ನಿಲ್ದಾಣದ ಒಂದು ಬದಿಯಲ್ಲಿ ಗ್ರಾಮೀಣ ಭಾಗದ ಬಸ್‌ಗಳು ನಿಲ್ಲುತ್ತಿದ್ದರೆ ಇನ್ನೊಂದು ಬದಿಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ಬಂದು ನಿಲ್ಲುತ್ತವೆ. ಈ ನಿಲ್ದಾಣಕ್ಕೆ ಒಮ್ಮೆಲೆ ನಿಯಂತ್ರಣ ಕಳೆದುಕೊಳ್ಳುವಂತಾಗಿದೆ. ಆಲೂರು ಬಸ್ ನಿಲ್ದಾಣದ ಮತ್ತೊಂದು ವಿಶೇಷವೆಂದರೆ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್‌ನ ನಿರ್ವಾಹಕರು ಮಾತ್ರ ಇಲ್ಲಿ ಎಂಟ್ರಿ ಹಾಕಿಸುತ್ತಾರೆ. ಎಕ್ಸ್‌ಪ್ರೆಸ್‌ನ ನಿರ್ವಾಹಕರು ಸಂಚಾರಿ ನಿಯಂತ್ರಕರ ಬಳಿ ಸುಳಿಯುವುದಿಲ್ಲ. ಇದರಿಂದಾಗಿ ಪ್ರಯಾಣಿಕರು ಬಂದು ವಿಚಾರಿಸಿದರೆ ಯಾವ ಬಸ್‌ಗಳು ಬಂದು ಹೋಗಿವೆ, ಯಾವು ಬರಬೇಕು ಎಂಬುದನ್ನು ತಿಳಿಸಲು ಸಂಚಾರಿ ನಿಯಂತ್ರಕರು ಪರದಾಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಇದರ ಲಾಭ ಪಡೆದು ಕೆಲವು ಎಕ್ಸ್‌ಪ್ರೆಸ್ ಬಸ್‌ಗಳು ಆಲೂರಿಗೆ ಬಾರದೆ ಬೈಪಾಸ್ ರಸ್ತೆಯಲ್ಲೇ ಸಂಚರಿಸುತ್ತಾರೆ. ಕೆಲವು ಬಸ್‌ನವರು ಪಟ್ಟಣಕ್ಕೆ ಬಂದರೂ ನಿಲ್ದಾಣದ ಒಳಗೆ ಬಾರದೆ ಪೊಲೀಸ್ ನಿಲ್ದಾಣದ  ಮುಂಭಾಗವೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದು, ಇದರಿಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯಬೇಕಿದೆ.  
ರಾತ್ರಿ ವೇಳೆ ಸ್ಮಶಾನ: ಬಸ್ ನಿಲ್ದಾಣದಲ್ಲಿ ಬೆಳಗಿನ ಸಮಯದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ರಾತ್ರಿ ವೇಳೆಯಲ್ಲಿ  ಯಾರೊಬ್ಬರೂ ಇರದ ಕಾರಣ ಆಗ ನಿಲ್ದಾಣಕ್ಕೆ ಬರಲು ಪ್ರಯಾಣಿಕರು ಹೆದರುವಂತಾಗಿದೆ. ರಾತ್ರಿ  ವೇಳೆಯಲ್ಲಿ ಸ್ಮಶಾನ ಮೌನ ಆವರಿಸುತ್ತಿದ್ದು, ಹೇಳುವವರು ಕೇಳುವವರು ಯಾರೂ ಇಲ್ಲದೆ ನಿಲ್ದಾಣ ಅನೈತಿಕ  ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಾಡುತ್ತಿದೆ.
ನಿಲ್ದಾಣಕ್ಕೆ ಖಾಸಗಿ ವಾಹನಗಳು, ಬಿಡಾಡಿ ದನಗಳು, ಬೀದಿನಾಯಿಗಳು ಬರುತ್ತಿದ್ದು, ಇದರಿದಾಗಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ. ಇಲ್ಲಿಯ ತಂತಿಬೇಲಿಯನ್ನು ಕಿತ್ತು ಹಾಕಲಾಗಿದ್ದು, ಕೆಲವರು ಇದರೊಳಗೆ ತಮ್ಮ ದನಕರುಗಳನ್ನು ಮೇಯಲು  ಬಿಡುತ್ತಿದ್ದಾರೆ. ನಿಲ್ದಾಣದ ಸುತ್ತ ಹಾಕಲಾಗಿರುವ ಕಾಂಪೌಂಡ್ ಅನ್ನೇ ಯಾರೋ ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಬಸ್ ನಿಲ್ದಾಣದ ಅಂದಗೆಡಿಸಲು ನಿಲ್ದಾಣದ ಮುಂಭಾಗದಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿದ್ದು, ಖಾಸಗಿ ದೇವಸ್ಥಾನ ನಿರ್ಮಿಸಿರುವ ವ್ಯಕ್ತಿಯೊಬ್ಬರು ನಿಲ್ದಾಣ ಕಾಣದಂತೆ ಶಾಶ್ವತವಾಗಿ  ಬೋರ್ಡ್‌ವೊಂದನ್ನು ನಿಲ್ದಾಣದ ಮುಂಭಾಗವೇ ಹಾಕಿದ್ದಾರೆ. ಇವರು ಪಟ್ಟಣ ಪಂಚಾಯ್ತಿಯಿಂದ ಅನುಮತಿ ಪಡೆಯದಿರುವುದು ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ.  ನಿಲ್ದಾಣದಲ್ಲಿ ಖಾಸಗಿ ವಾಹನಗಳ ಪಾರ್ಕಿಂಗ್‌ಗೆ ಸ್ಥಳ ಬಿಡದಿರುವುದು ಇನ್ನೊಂದು ವಿಶೇಷ.  ಎಲ್ಲ  ನಿಲ್ದಾಣಗಳಲ್ಲೂ ಪಾರ್ಕಿಂಗ್ ವ್ಯವಸ್ಥೆ ಇದ್ದರೆ ಇಲ್ಲಿ ಮಾತ್ರ ಅದನ್ನು ಕೈ ಬಿಡಲಾಗಿದೆ. ಇದರಿಂದಾಗಿ  ಖಾಸಗಿ ಬೈಕ್, ಕಾರ್‌ಗಳು ಎಲ್ಲಿ ಬೇಕೆಂದರಲ್ಲಿ ನಿಲ್ಲಿಸಿ ಹೋಗಬೇಕಾಗಿದ್ದು, ಇದು  ಸಹ ಅಪಘಾತಕ್ಕೆ ದಾರಿ ಮಾಡಿಕೊಟ್ಟಿದೆ.
ತ್ಯಾಜ್ಯ ತಾಣ: ನಿಲ್ದಾಣದ ಸುತ್ತಲೂ ನಿರ್ಮಿಸಿರುವ ಚರಂಡಿಗೆ ಮಳೆ ನೀರು ಹರಿಯಲು ವ್ಯವಸ್ಥೆ ಮಾಡದೆ ಚರಂಡಿ ತುಂಬಾ ಕಸ ಕಡ್ಡಿಗಳು ಭರ್ತಿಯಾಗಿವೆ. ಇದು ಸಾಲದೆಂಬಂತೆ ಸುತ್ತಮುತ್ತಲ ಮನೆ ಹಾಗೂ ಕಚೇರಿಯವರು ಕಸವನ್ನು  ತಂದು ನಿಲ್ದಾಣದೊಳಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ನಿಲ್ದಾಣ ತ್ಯಾಜ್ಯ ವಸ್ತುಗಳಿಂದ ಗಬ್ಬು ವಾಸನೆ ಬರುತ್ತಿದೆ.
ಅಪಾಯಕ್ಕೆ ಆಹ್ವಾನ: ನಿಲ್ದಾಣದಲ್ಲಿ ಇರುವ ಪುಟ್ಟ ಉದ್ಯಾನವನ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಬಿದ್ದಿದ್ದು, ಸಂಘ ಸಂಸ್ಥೆಯವರು  ಸೇರಿ ಇದರ ಅಭಿವೃದ್ಧಿಗೊಳಿಸಲು ಮುಂದೆ ಬಂದಿದ್ದು, ನೀರಿನ ವ್ಯವಸ್ಥೆ ಇಲ್ಲದೆ ಅದು ಸಹ ನೆನೆಗುದಿಗೆ ಬಿದ್ದಿದೆ.  
ಬಸ್ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಹಾಕಲಾಗಿರುವ ಆಸನಗಳು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಹಾಸನ  ಬಸ್ ನಿಲ್ದಾಣದಲ್ಲಿ ಬಸ್‌ವೊಂದು ಪ್ಲಾಟ್‌ಫಾರಂಗೆ ನುಗ್ಗಿ ಆದ ಅನಾಹುತದ ನಿದರ್ಶನವಿದ್ದರೂ ಇವುಗಳನ್ನು ತೆರವುಗೊಳಿಸಿ ಮೇಲ್ಭಾಗಕ್ಕೆ ಹಾಕಿಲ್ಲ.
ಇಲ್ಲಿರುವ ಆಧುನಿಕ ಶೌಚಾಲಯಕ್ಕೆ ಆಧುನಿಕ ಟಚ್ ನೀಡಬೇಕಿದೆ. ಬೆಳಗಿನ ಸಮಯದಲ್ಲಿ ಹಾಸನಕ್ಕೆ ಹೋಗಲು ವಿದ್ಯಾರ್ಥಿಗಳು ಹಾಗೂ ಸರ್ಕಾರಿ ನೌಕರರ ಪಾಡು ಹೇಳತೀರದಾಗಿದೆ. ಆ ಸಮಯದಲ್ಲಿ  ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕಿದೆ.
ನಿಲ್ದಾಣಕ್ಕೆ ಇನ್ನಿಬ್ಬರು ಸಂಚಾರಿ ನಿಯಂತ್ರಕರನ್ನು ನಿಯೋಜಿಸಿ  ಸೆಕ್ಯುರಿಟಿ ಗಾರ್ಡ್ ಒಬ್ಬರನ್ನು ಹಾಗೂ ರಾತ್ರಿ ಪಾಳಿಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿ ಪ್ರಯಾಣಿಕರು ನಿರ್ಭೀತಿಯಿಂದ ರಾತ್ರಿ ವೇಳೆಯಲ್ಲೂ ನಿಲ್ದಾಣದಲ್ಲಿ ಬರುವಂತೆ ಮಾಡಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ  ಗಮನಹರಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.