ಹಾಸನ

ಹೊಸದಾಗಿ 58,614 ಮತದಾರರ ಸೇರ್ಪಡೆ

Published On :

ಕನ್ನಡಪ್ರಭ ವಾರ್ತೆ   ಹಾಸನ   ಏ. 20
ವಿಧಾನಸಭೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿದೆ. ಹೊಸ ಪಟ್ಟಿ ಪ್ರಕಾರ ಜಿಲ್ಲೆಯ 7  ಕ್ಷೇತ್ರಗಳಲ್ಲಿ 13,21,784 ಮತದಾರರು ಇದ್ದು, ತಮ್ಮ ಹಕ್ಕನ್ನು ಮೇ 8 ರಂದು ನಡೆಯುವ ಚುನಾವಣೆಯಲ್ಲಿ ಚಲಾಯಿಸಲಿದ್ದಾರೆ.
 ಈ ಪೈಕಿ 6,60,351 ಪುರುಷರು ಮತ್ತು 6,42,737 ಮಹಿಳಾ ಮತದಾರರು ಇದ್ದಾರೆ. ಇದರಲ್ಲಿ 28 ಮಂಗಳಮುಖಿ ಮತದಾರರೂ ಇದ್ದಾರೆ. ಜಿಲ್ಲಾಡಳಿತ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಂಗಳಮುಖಿಯರನ್ನು ಅಧಿಕೃತವಾಗಿ ಗುರುತಿಸಿ, ಮತದಾನಕ್ಕೆ ಅವಕಾಶ ನೀಡಿರುವುದು ಹಾಗೂ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿರುವುದು ವಿಶೇಷ.
ಒಟ್ಟು 58, 614 ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಶಾಂತಿಯುತ ಮತದಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಮೋಹನ್  ರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮತಗಟ್ಟೆಗಳು: 7 ಕ್ಷೇತ್ರಗಳಲ್ಲಿ 1891 ಮತಗಟ್ಟೆ ಸ್ಥಾಪಿಸಲಾಗಿದೆ. 38 ಹೋಬಳಿಗಳಲ್ಲಿ 31 ಸಂಚಾರಿ ತಂಡ ರಚಿಸಲಾಗಿದೆ. ಅವು ವಿಡಿಯೋ ಚಿತ್ರೀಕರಣ ನಡೆಸುತ್ತವೆ. ತಾಲೂಕು ಮಟ್ಟದಲ್ಲಿ ನೀತಿ ಸಂಹಿತೆ ಜಾರಿ ದಳಗಳು ಕೆಲಸ ಮಾಡುತ್ತಿದ್ದು,  ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಅದು ಎಲ್ಲಾ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಗೊಳ್ಳುತ್ತಿರುವ ಬಗ್ಗೆ ಆಗಾಗ್ಗೆ ಪರಿಶೀಲನೆ ನಡೆಸುತ್ತದೆ.  ಅಭ್ಯರ್ಥಿಗಳ ಖರ್ಚು, ವೆಚ್ಚಗಳ ಮೇಲೆ ನಿಗಾ ಇಡಲು ತಾಲೂಕು ಮಟ್ಟದಲ್ಲಿ ಲೆಕ್ಕಪರಿಶೋಧಕರನ್ನು ಒಳಗೊಂಡ ತಂಡವನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
34 ಕೇಸು ದಾಖಲು:  ಅನುಮತಿ ಪಡೆಯದೇ ಮೆರವಣಿಗೆ ನಡೆಸಿದ್ದು ಸೇರಿದಂತೆ 34 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ. ಬೀಗರ ಔತಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಹಬ್ಬ, ಹರಿದಿನಗಳಲ್ಲಿ ಹಮ್ಮಿಕೊಳ್ಳುವ ನಾಟಕಗಳ ಪ್ರದರ್ಶನಕ್ಕೆ ಪರಿಶೀಲಿಸಿ ಅನುಮತಿ ನೀಡಲಾಗುವುದು. ವ್ಯಕ್ತಿಯ ಧಾರ್ಮಿಕ ಹಕ್ಕಿಗೆ ಯಾವುದೇ ರೀತಿಯ ಚ್ಯುತಿ ಆಗದಂತೆ ಕೆಲಸ ನಿರ್ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜಕೀಯ ವ್ಯಕ್ತಿಗಳಿಂದ ಬೋರ್  ವೆಲ್ ಕೊರೆಸುವುದು ತಪ್ಪಾಗುತ್ತದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ತಪಾಸಣೆ ನೆಪದಲ್ಲಿ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದರೇ ಕ್ರಮ ಜರುಗಿಸಲಾಗುವುದು ಎಂದರು.
ಆನೆ ಪೀಡಿತ ಪ್ರದೇಶದಲ್ಲಿ ಭದ್ರತೆ:  ಅಲೂರು, ಸಕಲೇಶಪುರ ಮತ್ತು ಅರಕಲಗೂಡು ತಾಲೂಕುಗಳ 175 ಗ್ರಾಮಗಳ ಆನೆ ಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದು, ಅಲ್ಲಿ 75 ಮತಗಟ್ಟೆ ಸ್ಥಾಪಿಸಲಾಗಿದೆ. ಇಲ್ಲಿ ಮತದಾರರು ಆನೆ ಹಾವಳಿಯಿಂದ ಮುಕ್ತವಾಗಿ ಮತ ಚಲಾಯಿಸಲು ಸೂಕ್ತ ಭದ್ರತೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
10 ಕಡೆ ಚೆಕ್  ಪೋಸ್ಟ್: ಅಕ್ರಮಗಳನ್ನು ತಡೆಗಟ್ಟಲು 10 ಕಡೆ ಚೆಕ್  ಪೋಸ್ಟ್ ನಿರ್ಮಿಸಲಾಗಿದ್ದು, ಅನಿರೀಕ್ಷಿತ ಭೇಟಿ ನೀಡಲು 20 ಸಂಚಾರಿ ದಳ ರಚಿಸಲಾಗಿದೆ. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರ ಮೀಸಲು ಪಡೆ ಪೊಲೀಸರು ಪಥ ಸಂಚಲನ ನಡೆಸುತ್ತಾರೆ.  38 ಹೋಬಳಿ ಕೇಂದ್ರಗಳಲ್ಲೂ ಅಗತ್ಯ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆ ಕಾರ್ಯ ನಿರ್ವಹಿಸುತ್ತಾರೆ ಎಂದು ಎಸ್ಪಿ ಅಮಿತ್  ಸಿಂಗ್ ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕಾ. ರಾಮೇಶ್ವರಪ್ಪ, ಚುನಾವಣಾ ತಹಸೀಲ್ದಾರ್ ಬಾಬುರಾವ್ ಇದ್ದರು.

ತಾಲೂಕುವಾರು  ಮತದಾರರ ವಿವರ
ಶ್ರವಣಬೆಳಗೊಳ   ಪುರುಷರು- 94,326, ಮಹಿಳೆಯರು- 93,301, ಮಂಗಳಮುಖಿಯರು- 6. ಒಟ್ಟು ಮತದಾರರು 1,89, 426.
ಅರಸೀಕೆರೆ         ಪುರುಷರು- 95 317, ಮಹಿಳೆಯರು- 94,567, ಮಂಗಳಮುಖಿಯರು - 2. ಒಟ್ಟು ಮತದಾರರು 1.,92, 936.
ಬೇಲೂರು        ಪುರುಷರು 87, 236, ಮಹಿಳೆಯರು 85,124, ಮಂಗಳಮುಖಿ ಯರು- 3, ಒಟ್ಟು ಮತದಾರರು 1,74,, 846.
ಹಾಸನ           ಪುರುಷರು - 93,884, ಮಹಿಳೆಯರು - 93,901, ಮಂಗಳಮುಖಿಯರು - 10, ಒಟ್ಟು ಮತದಾರರು 1,87,687.
ಹೊಳೆನರಸೀಪುರ  ಪುರುಷರು -97,449,  ಮಹಿಳೆಯರು 97, 420, ಮಂಗಳಮುಖಿಯರು- 2, ಮತದಾರರು 1,97,815.
ಅರಕಲಗೂಡು    ಪುರುಷರು- 96, 481, ಮಹಿಳೆಯರು - 95,881, ಮಂಗಳಮುಖಿಯರು- 2, ಮತದಾರರು 1,97,787.
ಸಕಲೇಶಪುರ       ಪುರುಷರು 90, 226, ಮಹಿಳೆಯರು - 89, 155, ಮಂಗಳಮುಖಿಯರು- 2, ಒಟ್ಟು 1,81, 287.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.