ಸುದ್ದಿ ಸಂಕ್ಷೇಪ
'ರಾಷ್ಟ್ರ ಧ್ವಜಕ್ಕೆ ಅವಮಾನಿಸಿದರೆ ಕಠಿಣ ಕ್ರಮ'
ಬೇಲೂರು: ದೇಶದ ರಾಷ್ಟ್ರಧ್ವಜ ಯಾವುದೇ ವ್ಯಕ್ತಿಗಿಂತ ಹಿರಿತನ ಹೊಂದಿದ್ದು, ಯಾರೇ ಆಗಲಿ ಇದಕ್ಕೆ ಅಗೌರವ ತೋರಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಾರತ ಸೇವಾದಳದ ಮುಖ್ಯಸ್ಥೆ ರಾಣಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ರಾಷ್ಟ್ರಧ್ವಜ ಹಾರಿಸುವ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಸರ್ಕಾರ ಎಲ್ಲ ಸರ್ಕಾರಿ ಕಚೇರಿ ಕಟ್ಟಡದ ಮೇಲೆ ವರ್ಷಪೂರ್ತಿ ರಾಷ್ಟ್ರಧ್ವಜ ಹಾರಿಸಬೇಕು ಎಂಬ ನಿಯಮ ಮಾಡಿದ್ದು, ಅಧಿಕಾರಿಗಳು ರಾಷ್ಟ್ರಧ್ವಜವನ್ನು ಹಾರಿಸುವ ಹಾಗೂ ಇಳಿಸುವ ಬಗ್ಗೆ ಕ್ರಮಬದ್ಧತೆಯ ಕುರಿತು ತಿಳಿದುಕೊಳ್ಳಬೇಕು.
ಉದಾಸೀನತೆಯಿಂದ ವರ್ತಿಸಿದರೆ ಅಂಥವರು ಉಗ್ರ ಶಿಕ್ಷೆಗೆ ಒಳಪಡುತ್ತಾರೆ ಎಂದರು. ರಾಷ್ಟ್ರಧ್ವಜ ಹರಿದು ಅಥವಾ ಕೊಳಕಿನಿಂದ ಕೂಡಿದ್ದರೆ ಯಾವುದೇ ಕಾರಣಕ್ಕೂ ಹಾರಿಸಬಾರದು. ಹೊಸದಾಗಿ ಖಾದಿ ಅಂಗಡಿಯಲ್ಲಿ ಖರೀದಿಸುವಂತೆ ಸಲಹೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ರಾಷ್ಟ್ರಧ್ವಜವನ್ನು ಪ್ರತಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಹಾರಿಸಿ ರಾಷ್ಟ್ರಕ್ಕೆ ಗೌರವ ಸಲ್ಲಿಸುವಂತೆ ಮನವಿ ಮಾಡಿದರು.
ಭಾರತ ಸೇವಾದಳದ ಮಹೇಶ್ ಮಾತನಾಡಿ 1950 ರಲ್ಲಿ ರಾಷ್ಟ್ರಧ್ವಜ ನೀತಿ ಕಾನೂನು ಜಾರಿಗೆ ಬಂದಿದ್ದು, ವರ್ಷದಲ್ಲಿ 4 ಭಾರಿ ಮಾತ್ರ ಧ್ವಜ ಹಾರಿಸಬೇಕು ಎಂಬ ನಿಯಮವಿತ್ತು. ಆದರೆ ಈಗ ಈ ನಿಯಮ ಬದಲಾಗಿದೆ. ರಾಷ್ಟ್ರ ನಾಯಕರು ಮರಣ ಹೊಂದಿದಾಗ ಮಾತ್ರ ಅವರ ಅಂತ್ಯಕ್ರಿಯೆ ಕಾರ್ಯಕ್ರಮ ಮುಕ್ತಾಯದವರೆಗೂ ಬಾವುಟವನ್ನು ಅರ್ಧ ಮಟ್ಟದಲ್ಲಿ ಹಾರಿಸ ಬೇಕು ಎಂಬ ನಿಯಮವಿದೆ ಎಂದು ವಿವರಿಸಿದರು.
ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಬೆಳಗ್ಗೆ 7-05 ರಿಂದ 9-30 ಒಳಗೆ ಮಾತ್ರ ಧ್ವಜ ಹಾರಿಸಬೇಕು. ಧ್ವಜದ ಕಂಬಕ್ಕೆ ತ್ರಿವರ್ಣ ಬಣ್ಣ ಬಳಿಯಬಾರದು ಮತ್ತು ಧ್ವಜದ ಕಂಬದ ಕೆಳಗೆ ದೇವರ ಭಾವಚಿತ್ರ ಅಥವಾ ರಾಷ್ಟ್ರ ನಾಯಕರ ಭಾವಚಿತ್ರ ಹಾಗೂ ಧ್ವಜ ಕಂಬದ ಸುತ್ತ ಭಾರತ ದೇಶದ ನಕ್ಷೆ ಇವುಗಳ ಬಳಕೆಗೆ ನಿಷೇಧವಿದೆ ಎಂದರು.
ರಾಷ್ಟ್ರಧ್ವಜ ಹಾರಿಸುವ ಪ್ರಥಮದಲ್ಲಿ ವಂದೇ ಮಾತರಂ ಗೀತೆ ಮತ್ತು ರಾಷ್ಟ್ರ ಬಾವುಟ ಹಾರಿಸುವ ಸಂದರ್ಭದಲ್ಲಿ ರಾಷ್ಟ್ರ ಗೀತೆಯನ್ನು ಕ್ರಮ ಬದ್ದವಾಗಿ ಹಾಡಿ ರಾಷ್ಟ್ರ ಧ್ವಜಕ್ಕೆ ವಂದನೆ ಸಲ್ಲಿಸಬೇಕು. ಸಂಜೆ ರಾಷ್ಟ್ರಧ್ವಜ ಇಳಿಸುವಾಗಲೂ ಬಾವುಟಕ್ಕೆ ವಂದನೆ ಸಲ್ಲಿಸಿ ಇಳಿಸಬೇಕು. ಅಪವಿತ್ರ ಬಾವುಟವನ್ನು ತಾಲೂಕು ದಂಡಾಧಿಕಾರಿ ಕಚೇರಿ ಅಥವಾ ಭಾರತ ಸೇವಾದಳಕ್ಕೆ ನೀಡಬಹುದು ಎಂದು ತಿಳಿಸಿದರು. ಬೋರಣ್ಣಗೌಡ ಮತ್ತು ದೈಹಿಕ ಶಿಕ್ಷಕ ರಂಗಸ್ವಾಮಿ.
ತಂತಿ ಬಿದ್ದು ಲೈನ್ಮನ್ ಸಾವು
ಕಿಕ್ಕೇರಿ: ಪಟ್ಟಣದ ಹೊರವಲಯದ ಸೆಸ್ಕಾಂ ವಿದ್ಯುತ್ ಪ್ರಸರಣ ಘಟಕದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದ ಪರಿಣಾಮ ನೌಕರನೊಬ್ಬ ಮೃತಪಟ್ಟ ಘಟನೆ ಭಾನುವಾರ ಮುಂಜಾನೆ ಜರುಗಿದೆ.
ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿಯ ಕಬ್ಬತ್ತಿ ಗ್ರಾಮದ ಕೆ.ಎಸ್.ಮೋಹನ್ (28) ಮೃತಪಟ್ಟವರು. 7 ವರ್ಷಗಳಿಂದ ಸೆಸ್ಕಾಂ ಕಚೇರಿಯಲ್ಲಿ ಲೈನ್ಮನ್ ಸೇವೆ ಸಲ್ಲಿಸುತ್ತಿದ್ದರು. ಭಾನುವಾರ ಬೆಳಿಗ್ಗೆ ವಿದ್ಯುತ್ ಲೈನ್ ಬದಲಾವಣೆ ಮಾಡಲು ಮುಂದಾದಾಗ ತಂತಿ ಬಿದ್ದಿತು. ಇದರಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಜೂಜು: 4 ಬಂಧನ
ಸಕಲೇಶಪುರ: ತಾಲೂಕಿನ ಆನೆಮಹಲ್ ಗ್ರಾಮದ ಶಾಂತರಾಜು ಅವರ ಕಾಫಿ ತೋಟದ ಹತ್ತಿರ ಅಂದರ್ಬಾಹರ್ ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆನೆಮಹಲ್ನ ಎ.ಪಿ. ಕುಮಾರಸ್ವಾಮಿ (30), ಮಹೇಶ್ವರಿ ನಗರದ ಮುರುಗೇಶ, ದೋಣಿಗಾಲ್ನ ಸಂತೋಷ (20), ಆರೀಪ್ (24) ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 7475 ರು. ನಗದು ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

