ಛಲ, ದೃಢ ಸಂಕಲ್ಪದಿಂದ ಸಾಧನೆಗೈದ ಮಹಮದ್ ಸಲ್ಮಾನ್
-ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ಸಾಧಿಸುವ ಛಲ ಮತ್ತು ದೃಢ ಸಂಕಲ್ಪವೊಂದಿದ್ದರೆ, ಜೀವನದ ಹಾದಿಯಲ್ಲಿ ಎದುರಾಗುವ ಯಾವುದೇ ಸಮಸ್ಯೆ ಸಾಧನೆಗೆ ಅಡ್ಡಿಯಾಗಲಾರವು ಎಂಬುದಕ್ಕೆ ಉದಾಹರಣೆ ಇದು.
ಸ್ವಾವಲಂಬಿ ಜೀವನಕ್ಕಾಗಿ ನಿತ್ಯವೂ ಮನೆ ಮನೆಗಳಿಗೆ ಪೇಪರ್ ಹಾಕುತ್ತಿದ್ದ ಹುಡುಗನೊಬ್ಬ ಕಡು ಬಡತನದ ನಡುವೆಯೂ ಕಠಿಣ ಪರಿಶ್ರಮದಿಂದ ಬಿ.ಇ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ತನ್ನ ಕುಟುಂಬಕ್ಕೆ ಆಸರೆಯಾಗುವ ಕನಸು ಕಟ್ಟುತ್ತಿದ್ದಾನೆ.
ಜೀವನ ನಿರ್ವಹಣೆಗಾಗಿ ಪ್ಲಾಸ್ಟಿಕ್ ಚೀಲಗಳನ್ನು ಹೊಲಿದು ಮಾರುತ್ತಿದ್ದ ತಂದೆಯನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಹುಟ್ಟಿದ ಮಹಮದ್ ಸಲ್ಮಾನ್(22) ನಂತರದಲ್ಲಿ ತಾಯಿಯ ಆಶ್ರಯದಲ್ಲಿಯೇ ಬೆಳೆದ. ಪಟ್ಟಣದ ಹೇಮಾವತಿ ಬಡಾವಣೆಯ ಗಲ್ಲಿಯಲ್ಲಿ ವಾಸವಿರುವ ಈತನಿಗೆ ತಾಯಿ ರಿಹಾನ ಫಾತುನ್ ಏಕೈಕ ಆಸರೆ. ಗಂಡನನ್ನು ಕಳೆದುಕೊಂಡು ಇರುವ ಒಬ್ಬ ಹೆಣ್ಣುಮಗಳು ಹಾಗೂ ಮಹಮದ್ ಸಲ್ಮಾನ್‌ನನ್ನು ಸಾಕುವ ಸಲುವಾಗಿ ತಾಯಿ ಅವರಿವರ ಮನೆಯ ಕೆಲಸ ಮಾಡುವುದಲ್ಲದೇ, ಉಳಿದ ಸಮಯದಲ್ಲಿ ಎಲೆ ಚುಚ್ಚುವ ಕೆಲಸ ಮಾಡಿಕೊಂಡೇ ತಮ್ಮ ಮಕ್ಕಳನ್ನು ಸಾಕಿದರು. ಸುಖ ಸಂತೋಷವೆಂಬುದನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡ ಈ ಕುಟುಂಬಕ್ಕೆ ಇವರ ಸಂಬಂಧಿಕರು ಒಂದು ಪುಟ್ಟ ಮನೆ ಮಾಡಿಕೊಟ್ಟಿದ್ದಾರೆ. ಚಿಕ್ಕಂದಿನಿಂದಲೂ ಮನೆಯಲ್ಲಿನ ಬಡತನ ಅರಿತಿದ್ದ ಮಹಮದ್ ಸಲ್ಮಾನ್ ಓದಿನ ದಿನಗಳಲ್ಲಿಯೇ ಸ್ವಾವಲಂಬಿ ಜೀವನ ಹಾಗೂ ತಾಯಿಗೆ ನೆರವಾಗುವ ಉದ್ದೇಶದಿಂದ ಹಲವಾರು ವರ್ಷ ಮನೆ ಮನೆಗೆ ಪೇಪರ್ ಹಾಕುವ ಕಾಯಕ ಮಾಡುತ್ತಿದ್ದ. ಇದರಿಂದ ಬರುವ ಪುಡಿಗಾಸು ಯಾವುದಕ್ಕೂ ಸಾಲದಿದ್ದರೂ, ಮನೆಯ ಸಂಕಷ್ಟದ ಹೊರೆಯನ್ನು ಕಡಿಮೆ ಮಾಡಬೇಕೆನ್ನುವ ಈ ಹುಡುಗನ ಛಲ ಮತ್ತು ಆತ್ಮವಿಶ್ವಾಸಕ್ಕೇನೂ ಕೊರತೆಯಿರಲಿಲ್ಲ. ತನ್ನ ವಯಸ್ಸಿನ ಎಲ್ಲಾ ಹುಡುಗರಂತೆ ಆಡಿ ಕುಣಿದು ಬೆಳೆಯುವ ವಯಸ್ಸಿನಲ್ಲಿ ಬಡತನ ಬೆನ್ನಿಗೆ ಹೊತ್ತು ತಂದಿದ್ದ ಸಲ್ಮಾನ್ ಓದುವ ಹಂಬಲವನ್ನು ಬಲವಾಗಿಸಿಕೊಂಡು, ಈ ದಿಸೆಯಲ್ಲಿ ಯಾವುದೇ ಎಡರು ತೊಡರು ಎದುರಾದರೂ ತಾಯಿ ಹಾಗೂ ನೆರೆ ಹೊರೆಯವರ ಆತ್ಮವಿಶ್ವಾಸದ ಆಶೀರ್ವಾದ ಮತ್ತು ಹಾರೈಕೆಗಳನ್ನು ಹುಸಿ ಮಾಡದೇ ಎಸ್‌ಎಸ್‌ಎಲ್‌ಸಿಯನ್ನು ಶೇ.85 ಅಂಕಗಳೊಂದಿಗೆ ಪಾಸು ಮಾಡಿದ್ದಾನೆ.
ಅಲ್ಲದೆ ಹಾಸನದ ಎಲ್.ವಿ.ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮವನ್ನು ಶೇ.73.5ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿದ. ನಂತರದಲ್ಲಿ ಹಾಸನದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್
ವಿಭಾಗದಲ್ಲಿ ಉಚಿತ ಸೀಟು ಪಡೆದ ಮಹಮದ್ ಸಲ್ಮಾನ್, ಹಾಸ್ಟೆಲ್‌ಗೆ ಕಟ್ಟಲು ಹಣವಿಲ್ಲದೆ ನಿತ್ಯವೂ ಹೊಳೆನರಸೀಪುರದಿಂದ ಬಸ್‌ನಲ್ಲಿ ಓಡಾಡುತ್ತಲೆ ಈಗ ತನ್ನ ಬಿ.ಇ ಪದವಿಯಲ್ಲಿ ಶೇ.70ಕ್ಕೂ ಅಧಿಕ ಅಂಕಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾನೆ.
ತನ್ನ ಮನೆ ಹಾಗೂ ಮನೆಯ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ತಾಯಿ ದುಡಿಮೆಗೆ ವಿಶ್ರಾಂತಿ ನೀಡಿ, ಬಿ.ಇಡಿ ಪದವಿ ಪಡೆದಿರುವ ಅಕ್ಕನ ಮದುವೆ ಮಾಡುವ ಕನಸು ಈ ಯುವಕನದ್ದು. ಮುಂದೆ ಉನ್ನತ ವ್ಯಾಸಂಗ ಮಾಡುವ ಹಂಬಲವಿದ್ದರೂ ತನ್ನ ಪರಿಸ್ಥಿತಿ ಅರಿತು ಸದ್ಯಕ್ಕೆ ಯಾವುದಾದರೂ ಒಂದು ಉದ್ಯೋಗಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗುವ ಹಂಬಲ ಸಲ್ಮಾನ್‌ನದ್ದು. ಎಷ್ಟೋ ಪೋಷಕರು ಎಲ್ಲಾ ಸವಲತ್ತು ನೀಡಿಯೂ ಓದದೆ ಬೀದಿ ಸುತ್ತುವ ಇತರ ಯುವಕರಿಗೆ ಸಲ್ಮಾನ್ ಮಾದರಿ. ಏನಾದರಾಗಲಿ ಈತನ ಪರಿಶ್ರಮ-ಕನಸು ಹಾಗೂ ಯಶಸ್ಸಿಗೆ ಎಲ್ಲರೂ ಒಂದು ಥ್ಯಾಂಕ್ಸ್ ಹೇಳೋಣವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

