ಹಾಸನ

5ನೇ ದಿನಕ್ಕೆ ಅರಣ್ಯ ಇಲಾಖೆ ನೌಕರರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ಹಾಸನ ಆ. 24
ವೇತನ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಆಶ್ರಯದಲ್ಲಿ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಗಳ ದಿನಗೂಲಿ ನೌಕರರು ಕೈಗೊಂಡಿರುವ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಶನಿವಾರ ಸಿಸಿಎಫ್ ರಂಗರಾವ್ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ಮುಂದುವರಿಸಿದರು.
ದಿನಗೂಲಿ ನೌಕರರು ನಗರದ ಅರಣ್ಯ ಭವನದಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಂಗರಾವ್ ಅವರ ಪ್ರತಿಕೃತಿ ಸಿದ್ದಪಡಿಸಿ, ನಗರದ ನಾನಾ ಬೀದಿಗಳಲ್ಲಿ ಪ್ರತಿಕೃತಿಯ ಶವಯಾತ್ರೆ ನಡೆಸಿದರು. ನಂತರ ಎನ್.ಆರ್.ವೃತ್ತದಲ್ಲಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಹಾಸನ ವೃತ್ತದ ವಲಯಗಳಲ್ಲಿ ಕಳೆದ 10 ರಿಂದ 20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಕೆಲಸ ನಿರ್ವಹಿಸುತ್ತಾ ಬಂದಿರುವ ನೌಕರರಿಗೆ ಕಳೆದ 9 ತಿಂಗಳನಿಂದ ಹಾಗೂ ಕೆಲವರಿಗೆ 5 ತಿಂಗಳಿನಿಂದ ವೇತನ ನೀಡಿಲ್ಲ. ವೇತನ ನೀಡುವಂತೆ ಒತ್ತಾಯಿಸಿದ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಸರ್ಕಾರದ ಆದೇಶ ಹಾಗೂ ನ್ಯಾಯಾಲಯದ ತೀರ್ಪನ್ನು ಸಹ ಅರಣ್ಯ ಇಲಾಖೆ ಸಂಪೂರ್ಣವಾಗಿ ಉಲ್ಲಂಘನೆ ಮಾಡಿದೆ ಎಂದು ದೂರಿದರು.
ನೌಕರರ ಬೇಡಿಕೆ ಬಗ್ಗೆ ಉದಾಸೀನ:   ರಾಜ್ಯ ಸಂಘಟನೆಯು ಹಲವು ಬಾರಿ ವೃತ್ತ ಕಚೇರಿಗೆ ಭೇಟಿ ನೀಡಿ ಹಾಸನ ವಿಭಾಗದ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ ಹಾಗೂ ತುಮಕೂರು ವಿಭಾಗದ ಕುಣಿಗಲ್, ಹುಲಿಯೂರು ದುರ್ಗ ಹಾಗೂ ಸಾಮಾಜಿಕ ವಲಯದ ನೌಕರರ ಹಲವು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಕಚೇರಿಗಳಿಗೆ ಈ ಬಗ್ಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ನೌಕರರ ಬೇಡಿಕೆಗಳ ಬಗ್ಗೆ ಉದಾಸೀನ ತಾಳಿದ್ದಾರೆ ಎಂದು ಆರೋಪಿಸಿದರು.
ಅರಕಲಗೂಡು, ಹೊಳೆನರಸೀಪುರ, ಬೇಲೂರು, ಹಳೇಬೀಡು ವಲಯಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಬ್ಯಾಂಕ್ ಮುಖೇನ ಸಂಬಳ ಪಾವತಿಸುತ್ತಿಲ್ಲ. ಹೊಳೆನರಸೀಪುರ ವಲಯದಲ್ಲಿ ಪ್ರತಿ ನೌಕರನಿಗೆ 2 ಸಾವಿರ ರು. ಅರಕಲಗೂಡು ವಲಯದಲ್ಲಿ 3 ಸಾವಿರ ರು.ವೇತನ ನೀಡಲಾಗುತ್ತಿದೆ. ಸುಳ್ಳು ಮಾಹಿತಿ ನೀಡಿ ವಂಚಿಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ತುಮಕೂರು ವಿಭಾಗದ ಕುಣಿಗಲ್, ಹುಲಿಯೂರು ದುರ್ಗ ವಲಯಗಳಲ್ಲಿ ಮೇಲಿನ ರೀತಿಯಲ್ಲಿ ವೇತನದಲ್ಲಿ ತಾರತಮ್ಯವಿದೆ. ಎಲ್ಲಾ ನೌಕರರಿಗೂ ಸಮಾನ ವೇತನವನ್ನು ನೀಡುವಂತೆ ಒತ್ತಾಯಿಸಿದರು.
ಸರ್ಕಾರದ ಆದೇಶವನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಎಲ್ಲಾ ನೌಕರರಿಗೆ ಇಲಾಖೆಯ ನಿಗಧಿಪಡಿಸಿರುವ ದರಪಟ್ಟಿಯಂತೆ ವೇತನ ಪಾವತಿ ಮಾಡಬೇಕು. ಪ್ರತಿ ನೌಕರರನ ಹೆಸರಿನಲ್ಲಿ ಎಫ್‌ಎಸಿ-63 ವೋಚರ್ ತಯಾರಿಸಿ ಸಹಿ ಪಡೆದು ಅವರವರ ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು.
ಆದರೆ ರಾಜ್ಯದ ಎಲ್ಲಾ ವೃತ್ತಗಳಲ್ಲಿ ಸರ್ಕಾರಿ ಆದೇಶದಂತೆ 10 ವರ್ಷದ ಪಿಸಿಪಿ ಸೇವೆ ಸಲ್ಲಿಸಿರುವ ನೌಕರರಿಗೆ ಏ.1, 2009ರಿಂದಲೇ ಜಾರಿಗೆ ಬರುವಂತೆ 1 ಸಾವಿರ ರು.ಹೆಚ್ಚುವರಿ ವೇತನ ಮತ್ತು ಏ.1, 2012ರಿಂದ 10 ವರ್ಷ ಪೂರೈಸಿರುವ ನೌಕರರಿಗೆ 1 ಸಾವಿರ ರು.ಪಾವತಿ ಮಾಡಲು ಆದೇಶವಿದೆ. ಆದರೆ ಹಾಸನ ವೃತ್ತದ ವ್ಯಾಪ್ತಿಯಲ್ಲಿ ಹೆಚ್ಚಿನ ಪಿಸಿಪಿ ನೌಕರರಿಗೆ ಈ ಸೌಲಭ್ಯ ಸಿಕ್ಕಿಲ್ಲ ಮತ್ತು ಹತ್ತು ವರ್ಷ ಪೂರೈಸಿರುವ ನೌಕರರ ಮಾಹಿತಿಯನ್ನು ವಲಯ ಕಚೇರಿಗಳಿಂದ ಕಳುಹಿಸಿಲ್ಲ ಎಂದು ಕಿಡಿಕಾರಿದರು.
ಕೂಲಿ ಹಣದಲ್ಲಿ ಪಾಲು:  ಇಲಾಖೆಯು ಮಂಜೂರು ಮಾಡಿರುವ ವೇತನ ಪಾವತಿಸದೆ ಕಡಿಮೆ ವೇತನ ಪಾವತಿ ಮಾಡಿ ನೌಕರರಿಗೆ ವಂಚನೆ ಮಾಡಿರುವ ವಲಯ ಅರಣ್ಯಾಧಿಕಾರಿ ಹಾಗೂ ಕೂಲಿ ಹಣದಲ್ಲಿ ಪಾಲು ಪಡೆಯುತ್ತಿರುವ ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಒತ್ತಾಯಿಸಿದರು.
ಅರಕಲಗೂಡು ವಲಯದ ನೌಕರರಿಗೆ 28 ಲಕ್ಷ ರು. ಕುಣಿಗಲ್, ಹುಲಿಯೂರು ದುರ್ಗಾ
ನೌಕರರಿಗೆ 22 ಲಕ್ಷ ರು. ಗುಬ್ಬಿ ವಲಯ ಮತ್ತು ಹೊಳೆನರಸೀಪುರ ವಲಯ ನೌಕರರಿಗೆ 3 ಲಕ್ಷ ರು. ವೇತನ ಬಾಕಿಯನ್ನು 2008-09ನೇ ಸಾಲಿನಿಂದ ಕೊಡಬೇಕಾಗಿದೆ. ಆದರೂ ಇನ್ನು ವೇತನ ನೀಡಿಲ್ಲ ಎಂದು ದೂರಿದರು.
ಇಲಾಖೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಗೆ ಪಿಸಿಪಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಹೆಚ್ಚಿನ ವೇತನ ಸಾವಿರ ರು. ಪಾವತಿಲು ಸರ್ಕಾರ ಆದೇಶ ಮಾಡಿದ್ದರೂ ಹಾಸನ ವೃತ್ತದ ನಾನಾ ವಲಯಗಳಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಇನ್ನೂ ನೀಡಿಲ್ಲ. 1984ರ ಪೂರ್ವದಲ್ಲಿ ಕೆಲಸಕ್ಕೆ ನೇಮಕಗೊಂಡು ಸಕ್ರಮಾತಿಗೊಳ್ಳದೆ ಬಾಕಿ ಉಳಿದಿರುವ ನೌಕರರನ್ನು ಕೂಡಲೇ ಕಾಯಂಗೊಳಿಸಬೇಕು ಎಂದು ಪಟ್ಟು ಹಿಡಿದರು. ಕೂಡಲೇ ದಿನಗೂಲಿ ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ, ಖಜಾಂಚಿ ಜಿ.ಕೃಷ್ಣ, ಬಿ.ವಿ.ನಾಗರಾಜು, ಸಂಘಟನಾ ಕಾರ್ಯದರ್ಶಿ ಜಯರಾಮು, ನಿರ್ದೇಶಕ ರುದ್ರಪ್ಪ, ದಲಿತ ಸಂಘಟನೆ ಮುಖಂಡ ವಿಜಯಕುಮಾರ್, ಮರಿ ಜೋಸೆಫ್ ಇತರರು ಇದ್ದರು.

ಇಲಾಖೆಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಗೆ ಪಿಸಿಪಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಹೆಚ್ಚಿನ ವೇತನ ಸಾವಿರ ರು. ಪಾವತಿಲು ಸರ್ಕಾರ ಆದೇಶ ಮಾಡಿದ್ದರೂ ಹಾಸನ ವೃತ್ತದ ನಾನಾ ವಲಯಗಳಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವವರಿಗೆ ಇನ್ನೂ ನೀಡಿಲ್ಲ. 1984ರ ಪೂರ್ವದಲ್ಲಿ ಕೆಲಸಕ್ಕೆ ನೇಮಕಗೊಂಡು ಸಕ್ರಮಾತಿಗೊಳ್ಳದೆ ಬಾಕಿ ಉಳಿದಿರುವ ನೌಕರರನ್ನು ಕೂಡಲೇ ಕಾಯಂಗೊಳಿಸಬೇಕು. ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ
-ಧರಣಿ ನಿರತರ ಎಚ್ಚರಿಕೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.