ಶಿಕ್ಷಣ ವ್ಯಾಪಾರೀಕರಣ ತಡೆಗಟ್ಟಿ: ಶಾಸಕ ರೇವಣ್ಣ
ಕ.ಪ್ರ.ವಾರ್ತೆ ಹೊಳೆನರಸೀಪುರ ಆ. 28
ಪ್ರಸ್ತುತ ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣ ಆಗುತ್ತಿರುವುದನ್ನು ತಪ್ಪಿಸಿ, ಸರ್ಕಾರಿ ಶಾಲೆ ಮುಚ್ಚುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಹೆಚ್ಚಿನ ಶಿಕ್ಷಕರನ್ನು ನೇಮಕಗೊಳಿಸಿ ಮೌಲ್ಯಯುತ ಶಿಕ್ಷಣ ನೀಡುವತ್ತ ಗಮನಹರಿಸುವಂತೆ ಶಾಸಕ ಎಚ್.ಡಿ.ರೇವಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅವರು ಬುಧವಾರ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಕಟ್ಟಡದ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಮಟ್ಟ ತೀವ್ರ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಬಡಜನರಿಗೆ 1ರುಪಾಯಿಗೆ ಅಕ್ಕಿ ನೀಡುವ ಯೋಜನೆ ಜಾರಿಗೆ ತಂದ ರೀತಿಯಲ್ಲಿಯೇ, ಗ್ರಾಮೀಣ ಮಕ್ಕಳಿಗೂ ಸಮಾನ ಹಾಗೂ ಉನ್ನತ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಸೂಕ್ತ ಯೋಜನೆಯನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಅವರು, ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣದ ಪ್ರಗತಿಗಾಗಿ ಹೆಚ್ಚಿನ ಮುತುವರ್ಜಿ ಕೈಗೊಳ್ಳಬೇಕಿದೆ ಎಂದರು.
ಕಳೆದ 50 ವರ್ಷಗಳಲ್ಲಿ ಯಾವುದೇ ಸರ್ಕಾರಗಳೂ ಮಾಡದಂತಹ ಶೈಕ್ಷಣಿಕ ಕ್ರಾಂತಿಯನ್ನು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕೈಗೊಳ್ಳಲಾಯಿತು ಎಂದ ಅವರು, ಈ ಅವಧಿಯಲ್ಲಿ ರಾಜ್ಯದಲ್ಲಿ 9 ಎಂಜಿನಿಯರಿಂಗ್ ಕಾಲೇಜು, 36 ಪಾಲಿಟೆಕ್ನಿಕ್, 250 ಪ್ರಥಮ ದರ್ಜೆ, 600 ಪದವಿ ಪೂರ್ವ ಕಾಲೇಜುಗಳಲ್ಲದೇ, 1200 ಕ್ಕೂ ಹೆಚ್ಚು ಪ್ರೌಢಶಾಲೆಗಳನ್ನು ರಾಜ್ಯಾದ್ಯಂತ ತೆರೆಯಲಾಯಿತು ಎಂದು ತಿಳಿಸಿದರು.
ಹೊಳೆನರಸೀಪುರ ಕ್ಷೇತ್ರವೊಂದರಲ್ಲಿಯೇ 24 ಪದವಿ ಪೂರ್ವ ಕಾಲೇಜುಗಳು, 38 ಪ್ರೌಢಶಾಲೆಗಳನ್ನು ಸ್ಥಾಪಿಸಲಾಗಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಯಾವುದೇ ತೊಂದರೆಯಿಲ್ಲದೇ ದೊರಕುವಂತಾಗಬೇಕು ಎಂಬುದು ತಮ್ಮ ಅಭಿಲಾಷೆ ಎಂದರು.
ಪ್ರಸಕ್ತ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1400ಕ್ಕೂ ಹೆಚ್ಚು ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿರುವ ಹಿನ್ನೆಲೆಯಲ್ಲಿ, ಕೊಠಡಿಗಳ ಅವಶ್ಯಕತೆ ಹೆಚ್ಚಿಗೆ ಇರುವ ಕಾರಣದಿಂದ 72 ಲಕ್ಷ ರು. ತಾಪಂ ಅನುದಾನ ಬಳಸಿಕೊಂಡು ಜಿಲ್ಲಾ ಪಂಚಾಯ್ತಿಯಿಂದ ಒಟ್ಟು 12 ಕೊಠಡಿಗಳ ಶಾಲಾ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪಾರ್ಕ್ ಪಕ್ಕದ ಶಾಸಕ ಎಚ್.ಡಿ.ರೇವಣ್ಣ ಹಾಗೂ ಸಹೋದರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ, 36 ಲಕ್ಷ ರು. ಅಂದಾಜು ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ನುಡಿದರು.
ತಾಪಂ ಅಧ್ಯಕ್ಷೆ ಕೆ.ಎಂ.ಪುಷ್ಪಗೌಡೇಗೌಡ, ಉಪಾದ್ಯಕ್ಷ ನಂಜುಂಡಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್, ಬಿಸಿಯೂಟ ಇಲಾಖೆಯ ನಿರ್ದೇಶಕ ಕುಮಾರ್, ಜಿಪಂ ಕಾರ್ಯಕಾರಿ ಎಂಜಿನಿಯರ್ ಕೆ.ಎಂ. ನಾಗರಾಜ್, ಇಓ ತಮ್ಮಣ್ಣಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸ್, ಸದಸ್ಯ ಎಚ್.ಎಸ್.ಮಂಜುನಾಥಗುಪ್ತ, ಕಾಲೇಜು ಪ್ರಾಂಶುಪಾಲ ಎ.ನಾಗರಾಜ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

