ರಸ್ತೆ ನಿರ್ಮಿಸುವುದಷ್ಟೇ ಅಭಿವೃದ್ಧಿಯಲ್ಲ: ಎಚ್ಕೆ
ಕ.ಪ್ರ.ವಾರ್ತೆ ಹಾಸನ ಆ. 31
ಗ್ರಾಮೀಣ ಜನರು ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಸ್ನಾನದ ಮನೆ ನಿರ್ಮಿಸಿ ಕೊಳ್ಳುವುದು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಬಗ್ಗೆ ನಿರ್ಲಕ್ಷ್ಯ ತಳೆದಿದ್ದಾರೆ ಎಂದು ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಹೊಳೆನರಸೀಪುರ ತಾಲೂಕು ಬೆಟ್ಟದ ಗುಳ್ಳದಪುರದಲ್ಲಿ ಶ್ರೀ ವೆಂಕರಮಣಸ್ವಾಮಿ ದೇವಾಲಯದ ರಸ್ತೆ ನಿರ್ಮಾಣ ಮತ್ತಿತರ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆಗಳನ್ನು ನಿರ್ಮಿಸುವುದೆ ಅಭಿವೃದ್ಧಿಯಲ್ಲ. ಜನರ ಜೀವನ ಶೈಲಿಯ ಗುಣಮಟ್ಟ ಉತ್ತಮಗೊಳ್ಳಲು ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಸ್ನಾನಗೃಹ ಮತ್ತು ಪರಿಸರ ನೈರ್ಮಲ್ಯ ರಕ್ಷಣೆ ಮಾಡಬೇಕು. ಇತ್ತ ಮುಂದಿನ ದಿನಗಳಲ್ಲಿ ಜನರು ಗಮನಹರಿಸಿ, ಅವುಗಳನ್ನು ಸರ್ಕಾರದಿಂದ ಪಡೆಯಲು ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ಸ್ಪರ್ಧೆ ಉತ್ತಮ: ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳ ನಡುವೆ ಸ್ಪರ್ಧೆ ಏರ್ಪಡುವುದು ಉತ್ತಮ ಬೆಳವಣಿಗೆ. ಗ್ರಾಮೀಣ ಜನರು ಒಕ್ಕಣೆ ಮಾಡಲು ಕಣಗಳನ್ನು ನಿರ್ಮಾಣ ಮಾಡುವ ಮತ್ತು ಸೂಕ್ತ ಸ್ಥಳದಲ್ಲಿ ರುದ್ರಭೂಮಿ ವ್ಯವಸ್ಥೆಯತ್ತ ಗಮನಹರಿಸಬೇಕು. ರೈತರು ರಾಷ್ಟ್ರೀಯ ಹೆದ್ದಾರಿಗಳಲ್ಲೇ ರಾಗಿ ಮತ್ತಿತರ ಬೆಳೆಗಳನ್ನು ಒಕ್ಕಣೆ ಮಾಡುವುದು ಸರಿಯಲ್ಲ. ಗ್ರಾಮೀಣ ಅಭಿವೃದ್ಧಿ ಹಿನ್ನಲೆಯಲ್ಲಿ ಗ್ರಾಮಸ್ಥರ ನೈಜ ಬೇಡಿಕೆಗಳನ್ನು ಕೈಗೆತ್ತಿಕೊಂಡು ಜನಮನದಲ್ಲಿ ಉಳಿಯುವಂತ ಅಭಿವೃದ್ಧಿ ಕೆಲಸಗಳನ್ನು ರಾಜಕಾರಣಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಗುಳ್ಳದಪುರದ ಬೆಟ್ಟದ ಶ್ರೀವೆಂಕಟರಮಣ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಗ್ರಾಮಸ್ಥರು ದೇವಸ್ಥಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ಸೋಲಾರ್ ಲೈಟ್ ಅಳವಡಿಸಲು ಕ್ರಮವಹಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿಯವರಿಗೆ ಸೂಚನೆ ನೀಡಿದರು. ದೇವಸ್ಥಾನದ ಅಭಿವೃದ್ಧಿ ಕೆಲಸಗಳಿಗೆ ಆರ್ಥಿಕ ಕೊರತೆಯಾಗದಂತೆ ಶಾಸಕರ ನಿಧಿ ಹಾಗೂ ಲೋಕಸಭಾ ಸದಸ್ಯರ ನಿಧಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಬದುಕಿನ ಗುಣಮಟ್ಟ: ಶುದ್ಧ ಕುಡಿಯುವ ನೀರು, ಶೌಚಾಲಯ, ಮಕ್ಕಳಿಗೆ ಆಟದ ಮೈದಾನ, ರೈತರಿಗೆ ಒಕ್ಕಣೆಗೆ ಕಣ ಇಂತಹ ಗ್ರಾಮೀಣ ಅಭಿವೃದ್ಧಿ ಕಾರ್ಯ ಹೆಚ್ಚು ಹೆಚ್ಚು ಆಗಬೇಕು ಎಂದರು. ಸರ್ಕಾರ ಅನ್ನ ಭಾಗ್ಯ,ಕ್ಷೀರ ಭಾಗ್ಯ,ಶುದ್ಧ ಕುಡಿಯುವ ನೀರು,ಶೌಚಾಲಯ,ನಮ್ಮ ದಾರಿ ನಮ್ಮಹೊಲ,ಕೆರೆ ನಿರ್ಮಾಣದಂತ ಕೆಲಸಗಳನ್ನು ಕೈಗೆತ್ತಿಕೊಂಡು ಜನರ ಬದುಕಿನ ಗುಣಮಟ್ಟ ಹೆಚ್ಚಿಸಲು ಮುಂದಾಗುತ್ತಿದೆ ಎಂದು ವಿವರಿಸಿದರು.
ಶಾಸಕ ಎಚ್.ಡಿ.ರೇವಣ್ಣ ಕಿರು ನೀರು ಸರಬರಾಜು ಕಾಮಗಾರಿಗೆ ಚಾಲನೆ ನೀಡಿ, ವೆಂಕಟರಮಣ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಆಗುವುದರಿಂದ ಭಕ್ತಾಧಿಗಳು ಸುಲಭವಾಗಿ ಬಂದು ಹೋಗಲು ಅನುಕೂಲವಾಗುತ್ತದೆ. ಪತ್ರಕರ್ತ ಯತಿರಾಜ್ ಸೇರಿದಂತೆ ತಮ್ಮ ಊರಿನ ಬಗ್ಗೆ ಅಭಿಮಾನವಿಟ್ಟುಕೊಂಡು ಅಗತ್ಯವಿರುವ ಕೆಲಸಗಳ ಬಗ್ಗೆ ಗಮನನೀಡಿದರೆ ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಶಾಸಕ ಎ.ಮಂಜು ಅಧ್ಯಕ್ಷತೆ ವಹಿಸಿದ್ದು, ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದಾಗ ಸಮಾಜಕ್ಕೆ ಗೌರವ ನೀಡಿದಂತಾಗುತ್ತದೆ.ಈ ನಿಟ್ಟಿನಲ್ಲಿ ಜನಪ್ರತಿ ನಿಧಿಗಳು ಜವಾಬ್ದಾರಿಯುತವಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಒಂದು ಲಕ್ಷದ ಕೆಲಸಗಳನ್ನು ಟೆಂಡರ್ ಮಾಡುತ್ತಿದ್ದು, ಇದನ್ನು 5 ಲಕ್ಷದವರೆಗೆ ಸಡಿಲ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಒಪ್ಪಿಗೆ ನೀಡಿದ ಸಚಿವ: 5 ಲಕ್ಷ ರು.ವರೆಗೂ ಕಾಮಗಾರಿ ಟೆಂಡರ್ ನೀಡಬಾರದು ಎಂದು ಶಾಸಕ ಮಂಜು ಲಿಖಿತ ಮನವಿ ಸಲ್ಲಿಸಿದ್ದಾರೆ. ಅದನ್ನು ಕಾರ್ಯಗತ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಬೈರಾಜ್, ಹೊಳೆನರಸೀಪುರ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಕೆ.ಎಂ. ಪುಷ್ಪಾ ಗೌಡೇಗೌಡ, ದೊಡ್ಡಕಾಡನೂರು ಗ್ರಾಪಂ ಅಧ್ಯಕ್ಷೆ ಎಚ್.ಎಂ. ವಿಶಾಲಾಕ್ಷಿ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪಸಿಂಗ್, ತಹಸೀಲ್ದಾರ್ ಮಂಜುಳ, ವೆಂಕರಮಣಸ್ವಾಮಿ ದೇವಾಲಯ ಪ್ರಧಾನ ಆರ್ಚಕ ಏಕಾಂತಯ್ಯ, ಮಮತ ಮತ್ತಿತರರು ಇದ್ದರು. ದೊಡ್ಡಕಾಡನೂರು ಜೆಎಸ್ಎಸ್ ಶಾಲೆಯ ರಜಿನಿ, ರಂಜಿತಾ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಚಿನ್ನರಾಯಿ ಸ್ವಾಗತಿಸಿದರು.
ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ: ಸಚಿವ ಪಾಟೀಲ್
ಕ.ಪ್ರ.ವಾರ್ತೆ ಹಾಸನ ಆ. 31
ರಾಜ್ಯದಲ್ಲಿ ಪಂಚಾಯತ್ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪಂಚಾಯತ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಹೊಳೆನರಸೀಪುರ ತಾಲೂಕು ಬೆಟ್ಟದಗುಳ್ಳದಪುರ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಈಗ ಗ್ರಾಮಾಂತರ ಪ್ರದೇಶದ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡಲು ಕುಡಿವ ನೀರಿನ ಯೋಜನೆ ಜಾರಿಗೊಳಿಸಲು ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಲಾಗುತ್ತಿದೆ. ಹಿಂದೆ ಅವರೆಡು ಜವಾಬ್ದಾರಿ ಜಿಲ್ಲಾ ಪಂಚಾಯ್ತಿಗೆ ಇತ್ತು ಎಂದು ಹೇಳಿದರು.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಲು ಆಯುಕ್ತರನ್ನೇ ನೇಮಕ ಮಾಡಲಾಗುತ್ತಿದೆ. ಹಿಂದೆ ಅದಕ್ಕಾಗಿ ನಿರ್ದೇಶನಾಲಯ ಇತ್ತು. ಕೃಷಿ ವಿಶ್ವವಿದ್ಯಾನಿಲಯ ಕೂಡಾ ಆರಂಭಿಸಲು ಉದ್ದೇಶಿಸಲಾಗಿದೆ. ಹೀಗೆ ಪಂಚಾಯತ್ರಾಜ್ ವ್ಯವಸ್ಥೆಯನ್ನು ಪುನರ್ ವ್ಯಾಖ್ಯಾನಿಸುವ ಮುಖೇಣ ಗ್ರಾಮೀಣ ಭಾಗದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿ, ಮೂಲಕ ಜನರ ಜೀವನ ಶೈಲಿಯ ಗುಣಮಟ್ಟವನ್ನು ಹೆಚ್ಚಿಸಲು ಪಂಚಾಯತ್ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು.
ಪಿಡಿಓಗಳ ನೇಮಕ: ಸಂವಿಧಾನದ 371 ಕಲಂ ಎ. ಪ್ರಕಾರ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದು, ಈ ಹಿನ್ನೆಲೆಯಲ್ಲಿ ರಚಿಸಿರುವ ಉಪ ಸಮಿತಿ ಸಭೆ ಸೆ. 2 ರಂದು ನಡೆಯಲಿದೆ. ನಂತರ ಗ್ರಾಮ ಪಂಚಾಯ್ತಿಗಳಿಗೆ ಒಂದು ಸಾವಿರ ಪಿಡಿಓಗಳನ್ನು ನೇಮಕ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಪಿಡಿಓಗಳಿಗೆ ಗ್ರಾಪಂ ಸದಸ್ಯರು ಕಿರುಕುಳ ನೀಡುವುದಾಗಲಿ ಅಥವಾ ಪಿಡಿಓಗಳು ಗ್ರಾಪಂ ಸದಸ್ಯರಿಗೆ ತೊಂದರೆ ನೀಡುವುದು ತಪ್ಪು. ಯಾರು ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅವರನ್ನು ಸರ್ಕಾರ ರಕ್ಷಿಸುತ್ತದೆ ಎಂದು ಸಚಿವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

