ಹಾಸನ

ಸಮಾಜದ ಅಂಕುಡೊಂಕು ತಿದ್ದುವ ಪತ್ರಕರ್ತ ಅತೀತನಲ್ಲ

Published On :

ಕ.ಪ್ರ. ವಾರ್ತೆಹಾಸನಆ. 31
ಪತ್ರಕರ್ತರು ವಿನೀತ ಸ್ವಭಾವ ರೂಢಿಸಿಕೊಳ್ಳಬೇಕು. ಸಮಾಜದ ಅಂಕುಡೊಂಕು ತಿದ್ದುವ ಜವಾಬ್ದಾರಿ ನಿರ್ವಹಿಸಬೇಕಾಗಿರುವ ಪತ್ರಕರ್ತ ಅತೀತನಲ್ಲ ಎಂಬ ಅರಿವು ಇರಬೇಕು ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಹೇಳಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಾಸನ ವರದಿಗಾರರ ಕೂಟ ಉದ್ಘಾಟನೆ ಹಾಗೂ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರ ತರುತ್ತಿರುವ ಪ್ರಾಯೋಗಿಕ ನಿಯತಕಾಲಿಕೆ ಸಂವಹನ ವೇದಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜನ ಸಾಮಾನ್ಯರಿಗೆ ಗೌರವ ಕೊಡಲೇಬೇಕು. ಹಾಗೆಯೇ ಸಮಾಜದ ಸುಧಾರಣೆಯ ವಕೀಲಿಕೆಯನ್ನು ಮಾಡಿ ಸರ್ಕಾರ ಜನ ಸಮುದಾಯಕ್ಕೆ ಪೂರಕವಾದ ಕೆಲಸವನ್ನು ಮಾಡಲೇಬೇಕೆಂದು ಪ್ರತಿಪಾದಿಸುವ ಪಕ್ಷಪಾತಿಯಾಗಿ, ಕಾರ್ಯಾನುಷ್ಠಾನದಲ್ಲಿ ಅನ್ಯಾಯಗಳಾದಾಗ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನೂ ಪತ್ರಕರ್ತ ಮಾಡಬೇಕಾದ ಮಹತ್ತರ ಜವಾಬ್ದಾರಿ ಇದೆ ಎಂಬ ಎಚ್ಚರಿಕೆ ಇರಬೇಕು ಎಂದು ಹೇಳಿದರು.
ಆರ್ಥಿಕ ಹಿಂಜರಿತ ಮತ್ತಿತರ ಕಾರಣಗಳಿಂದಾಗಿ ವಿವಿಧ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಏರಿಳಿತಗಳಾಗಬಹುದು. ಆದರೆ ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಲೇ ಹೋಗುತ್ತವೆ. 1980 ರ ದಶಕದಲ್ಲಿ ಭಾರತದ ಪತ್ರಿಕೋದ್ಯಮದ ವಹಿವಾಟು 1800 ಕೋಟಿ ರು. ಇದ್ದದ್ದು ಈಗ 85 ಸಾವಿರ ಕೋಟಿ ರು.ಗಳಿಗೆ ಏರಿದೆ. ಇನ್ನು 2 - 3 ವರ್ಷಗಳಲ್ಲಿ ಈ ವಹಿವಾಟು 1.25 ಲಕ್ಷ ಕೋಟಿ ರು. ಗಳಿಗೆ ಏರುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು. 2- 3 ವರ್ಷಗಳಿಂದ ಪತ್ರಿಕೋದ್ಯಮಕ್ಕೆ ಮಹಿಳೆಯರ ಪ್ರವೇಶ ಹೆಚ್ಚುತ್ತಿದೆ. ಈಗ ಪತ್ರಿಕೋದ್ಯಮದಲ್ಲಿ ಶೇ.8 ರಷ್ಟು ಮಹಿಳೆಯರಿದ್ದಾರೆ. ಪತ್ರಿಕೋದ್ಯಮದಲ್ಲಿ ಮಹಿಳೆಯರ ಪ್ರಮಾಣ  ಶೇ.40 ರಷ್ಟಾದರೂ ಇರಬೇಕು. ಪತ್ರಿಕೋದ್ಯಮ ಶಿಕ್ಷಣದಲ್ಲಿ ಈಗ ಬೋಧಕ ಸಿಬ್ಬಂದಿಯ ಕೊರತೆಯಿರಬಹುದು. ಈಗ ರಾಜ್ಯದಲ್ಲಿ 80 ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ಶಿಕ್ಷಣ ನೀಡಲಾಗುತ್ತಿದ್ದು ಬೋಧಕ ಸಿಬ್ಬಂದಿಯ ಕೊರತೆ ನೀಗಲಿದೆ. ಆದ್ದರಿಂದ ಹಾಸನದ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಅಭಿವೃದ್ಧಿ ಪಡಿಸಬೇಕೆಂದು ಸಲಹೆ ನೀಡಿದರು.  ಪತ್ರಿಕೋದ್ಯಮ ಪವಿತ್ರ ಕ್ಷೇತ್ರ. ಎಲ್ಲಿ ಮುಕ್ತ ಸಂವಹನ ಹಾಗೂ ವಾಕ್ ಸ್ವಾತಂತ್ರ್ಯ ಇರುತ್ತದೆಯೇ ಅಲ್ಲಿ ಉತ್ತಮ  ಆಡಳಿತ ಇರುತ್ತದೆ. ಹಾಗಾಗಿ ಪ್ರಜಾಪ್ರಭುತ್ವವನ್ನು ಪತ್ರಿಕೋದ್ಯಮ ಬೆಂಬಲಿಸುತ್ತಾ, ಗಟ್ಟಿಗೊಳಿಸುತ್ತಾ ಬಂದಿದೆ. ಪತ್ರಿಕೋದ್ಯಮದ ಮೇಲೂ ಆಪಾದನೆಗಳು ಬರುತ್ತವೆ. ಇದನ್ನು ಸಮುದಾಯ ತೀರ್ಮಾನಿಸುತ್ತದೆ ಎಂದು ನುಡಿದರು. ಪತ್ರಿಕೋದ್ಯಮದ ಸಕಾರಾತ್ಮಕ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಾಣವನ್ನು ಪ್ರತಿಪಾದಿಸುವ ಸಂಘಟನೆಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ಹಾಸನದ ವರದಿಗಾರ ಕೂಟ ಅಸ್ತಿತ್ವಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಪತ್ರಿಕೋದ್ಯಮ ಬಹಳ ವಿಸ್ತಾರವಾದ ಕ್ಷೇತ್ರ. ಇಲ್ಲಿ ತುಂಬಾ ಅವಕಾಶಗಳೂ ಇವೆ. ಪತ್ರಿಕೋದ್ಯೋಗಿಯಾಗಲು ಭಾಷಾ ಜ್ಞಾನಮೊಂದೇ ಸಾಲದು. ಆಳವಾದ ಜ್ಞಾನಬೇಕು. ಹಾಗಾಗಿ ಮಾಧ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅನುಭವಿಗಳೊಂದಿಗೆ ಸಂವಾದದ ಮೂಲಕ ಅನುಭವವನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಹಾಸನದ ವರದಿಗಾರ ಕೂಟವು ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಕೈಜೋಡಿಸುವ ಸುತ್ಯಾರ್ಹ ಕೆಲಸ ಮಾಡಿದೆ. ವರದಿಗಾರರ ಕೂಟವು ಸಮಾಜಮುಖಿ ಕೆಲಸ ಮಾಡಲಿ ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ  ರೂಪ್‌ರಾಜಚಂದನ್ ಮಾತನಾಡಿದರು. ರೂಪಾ ಹಾಸನ್, ಕೆ.ಟಿ.ಜಯಶ್ರೀ, ಹಿರಿಯ ಪತ್ರಕರ್ತ ಗುಲಾಂಸತ್ತಾರ್, ಎಂ.ವಿ.ಶಿವರಾಂ ಇದ್ದರು.   ವಿದ್ಯಾರ್ಥಿನಿಯರು ಮೌಲಿಕ ವಿಷಯಗಳ ಬಗ್ಗೆ ಸಂವಾದ ನಡೆಸಿದರು. ಪತ್ರಕರ್ತರ ಕೂಟದ ಯು. ಉದಯ ರೂಪಿಸಿದರು. ಎನ್.ನಂಜುಂಡೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ದಿಲೀಪ್‌ಕುಮಾರ್ ಮಾತನಾಡಿದರು. ಎಂ.ಕೆ. ಮಹೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.