ಅಕಾಲಿಕ ಮಳೆಯಿಂದ ಕಾಫಿ ನಷ್ಟ: ಪರಿಹಾರಕ್ಕೆ ಆಗ್ರಹ
ಸಕಲೇಶಪುರ: ಅಕಾಲಿಕ ಮಳೆಯಿಂದ ಕಾಫಿ ಬೆಳೆಯ ಮೇಲೆ ತೀವ್ರ ದುಷ್ಫರಿಣಾಮ ಉಂಟಾಗಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಅರೇಬಿಕಾ ಕಾಫಿಗೆ ಬೆಂಬಲ ಬೆಲೆ ಘೋಷಿಸ ಬೇಕು ಎಂದು ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಆಲಂ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿ ಬೇಗ ಮಳೆಯಾಗಿರುವುದು, ಮುಂದಿನ ವರ್ಷದ ಅರೇಬಿಕಾ ಫಸಲಿನಲ್ಲಿ ಸಾಕಷ್ಟು ಕುಸಿತ ಉಂಟಾಗಿದೆ. ರೋಬಸ್ಟಾ ಕಾಫಿ ಕಟಾವಿನ ಕಾರ್ಯ ನಡೆಯತ್ತಲೇ ಇದ್ದು, ಈಗ ಸುರಿದ ಮಳೆಯಿಂದ ಗಿಡದಲ್ಲಿದ್ದ ಕಾಫಿಯು ಹೆಚ್ಚಿನ ಪ್ರಮಾಣದಲ್ಲಿ ನೆಲಕ್ಕುದುರಿದೆ ಎಂದು ತಿಳಿಸಿದ್ದಾರೆ.
ಬಿದ್ದ ಕಾಫಿಯನ್ನು ಹೆರಕಿಸಲಾರದೆ, ಬೆಳೆಗಾರರು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಾಫಿಯು ನೆಲಕ್ಕುದುರಿರುವುದರಿಂದ ಮುಂದಿನ ಸಾಲಿಗೆ ಬೆರ್ರಿ ಬೋರರ್ರೋಗವು ತೀವ್ರ ತರನಾಗಿ ಹರಡುವುದರಲ್ಲಿ ಸಂಶಯವಿಲ್ಲ. ಇಷ್ಟಲ್ಲದೆ ಹೂವಿನ ಮಳೆಯಾಗಿರುವುದು ಮುಂದಿನ ವರ್ಷದ ಫಸಲಿನ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಉಂಟುಮಾಡಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯು ಸಹ ಮಳೆಯಲ್ಲಿ ನೆನೆದು ತನ್ನ ಗುಣಮಟ್ಟವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಈಗಾಗಲೇ ಅರೇಬಿಕಾ ಕಾಫಿಯ ಬೆಲೆ ಸಂಪೂರ್ಣವಾಗಿ ಕುಸಿದಿದ್ದು, ಅರೇಬಿಕಾ ಬೆಳೆಗಾರರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಈ ಅಕಾಲಿಕ ಮಳೆಯಿಂದ ಬೆಳೆಗಾರರು ಇದ್ದ ಫಸಲನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾರೆ. ಅರೇಬಿಕಾ ಕಾಫಿಗೆ ಸೂಕ್ತ ಬೆಲೆ ನೀಡದಿದ್ದ ಪಕ್ಷದಲ್ಲಿ, ಅರೇಬಿಕಾ ತೋಟಗಳು ಕಣ್ಮರೆಯಾಗಿರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕಾಫಿ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅರೇಬಿಕಾ ಕಾಫಿಗೆ ಸೂಕ್ತ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿದ್ದು, ಬೆಳೆಗಾರರು ಸಮಯಕ್ಕೆ ಸರಿಯಾಗಿ ಗೊಬ್ಬರ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ರಾಸಾಯನಿಕ ಗೊಬ್ಬರವನ್ನು ಸಹಾಯಧನ ಅಡಿಯಲ್ಲಿ ಒದಗಿಸಬೇಕು ಮತ್ತು ಅಕಾಲಿಕ ಮಳೆಯಿಂದ ನಷ್ಟ ಹೊಂದಿರುವ ತೋಟಗಳಿಗೆ, ಭೇಟಿ ನೀಡಿ ಸಮೀಕ್ಷೆ ನಡೆಸಲು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

