ಹಾಸನ

ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Published On :

ಬೆಲೆ ಏರಿಕೆ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ, ಗುತ್ತಿಗೆ ಕಾರ್ಮಿಕ ಪದ್ಧತಿ ವಿರೋಧಿಸಿ 10 ಸಾವಿರ ರು. ಕನಿಷ್ಠ ವೇತನ, ಕಾರ್ಮಿಕಪರ-ಜನಪರ ನೀತಿಗಳ ಜಾರಿಗೆ ಒತ್ತಾಯಿಸಿ 48 ತಾಸುಗಳ ಕಾಲ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಜನರು ಸರ್ಕಾರಿ ಕಚೇರಿಗಳಿಗೆ ಬರಲಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬಹುತೇಕ ಸರ್ಕಾರಿ ಕಚೇರಿಗಳೂ ಸಹ ಬಿಕೋ ಎನ್ನುತ್ತಿದ್ದವು. ಸಂಜೆ 4.30 ರ ನಂತರ ನಗರದ ಮಧ್ಯೆ ಇದ್ದ ಹೊಟೇಲ್, ಅಂಗಡಿಗಳು ಮತ್ತಿತರ ಚಟುವಟಿಕೆಗಳು ಎಂದಿನಂತೆ ನಡೆದವು

ಹಾಸನ: ಬೆಲೆ ಏರಿಕೆ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ, ಗುತ್ತಿಗೆ ಕಾರ್ಮಿಕ ಪದ್ಧತಿ ವಿರೋಧಿಸಿ 10 ಸಾವಿರ ರು. ಕನಿಷ್ಠ ವೇತನ, ಕಾರ್ಮಿಕಪರ-ಜನಪರ ನೀತಿಗಳ ಜಾರಿಗೆ ಒತ್ತಾಯಿಸಿ 48 ತಾಸುಗಳ ಕಾಲ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬುಧವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಿಂದ ಸಂಚರಿಸುವ ಎಲ್ಲಾ 620 ಸಾರಿಗೆ ಬಸ್‌ಗಳನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.  ಪ್ರಯಾಣಿಕರು ಪರದಾಡುವಂತಾಯಿತು. ಆಟೋ ಸಂಚಾರ ವಿರಳವಾಗಿತ್ತು. ಸದಾ ಗಿಜಿಗುಡುತ್ತಿದ್ದ ಬಿಎಂ ರಸ್ತೆ, ಹೇಮಾವತಿ ಪ್ರತಿಮೆ ರಸ್ತೆ ಬಿಕೋ ಎನ್ನುತ್ತಿದ್ದವು. ನಗರದ ಹೃದಯಭಾಗದಲ್ಲಿ ಅಂಗಡಿ ಮುಂಗಟ್ಟು ಮುಚ್ಚಿದ್ದರೆ, ನಗರದ ಹೃದಯ ಭಾಗಗಳಿಂದ ಹೊರಗಿರುವಂತಹ ಇತರೆಡೆಗಳಲ್ಲಿ ಅಂಗಡಿ, ಹೋಟೆಲ್‌ಗಳು ತೆರೆದಿದ್ದವು.
ಆಟೋ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಸಿನಿಮಾ ಮಂದರಿಗಳು ಎಂದಿನಂತೆ ಪ್ರದರ್ಶನಗೊಂಡವು. ಸಾರಿಗೆ ಬಸ್ ಸಂಪೂರ್ಣ ಬಂದ್ ಆಗಿದ್ದರಿಂದ ಪ್ರಯಾಣಿಕರು ಟೆಂಪೋ, ಖಾಸಗಿ ಕಾರುಗಳು ಮತ್ತು ಬಸ್‌ಗಳನ್ನು ಅವಲಂಬಿಸಿ ತಮ್ಮ ಸ್ಥಳಗಳಿಗೆ ತೆರಳಿದರು. ಅಲ್ಲದೇ ಬೈಕ್ ರ್ಯಾಲಿ ತೆರಳಿ, ತೆರೆದಿದ್ದ ವ್ಯಾಪಾರ ಕೇಂದ್ರಗಳನ್ನು ಮುಚ್ಚಿಸಿದರು. ಶಾಲಾ ಕಾಲೇಜುಗಳಿಗೆ ಜಿಲ್ಲಾದ್ಯಂತ ರಜೆ ಘೋಷಿಸಲಾಗಿತ್ತು. ಆದರೂ ಕೆಲವೊಂದು ಶಾಲಾ ಕಾಲೇಜುಗಳು ತೆರಿದಿದ್ದವು.  ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನದ ನಂತರ ನಗರದೊಳಗೆ ಕೆಲವು ಅಂಗಡಿ-ಮುಂಗಟ್ಟು ತೆರೆದು ವ್ಯಾಪಾರ ನಡೆಸಿದರು.
ಬೇಲೂರು, ಸಕಲೇಶಪುರ, ಚನ್ನರಾಯಪಟ್ಟಣ, ಅರಸೀಕೆರೆ, ಆಲೂರು, ಅರಕಲಗೂಡು ತಾಲೂಕು ಕೇಂದ್ರಗಳಲ್ಲಿ ಬಂದ್‌ಗೆ ನಿರೀಕ್ಷಿತ ಬೆಂಬಲ ದೊರಕಲಿಲ್ಲ. ಬಸ್, ಆಟೋ ಸಂಚಾರ ಸ್ಧಗಿತಗೊಂಡಿದ್ದನ್ನು ಬಿಟ್ಟರೇ ಎಂದಿನಂತೆ ವಹಿವಾಟು ನಡೆದವು.
ಇದ್ದೂ ಇಲ್ಲದಂತಿದ್ದ: ಜನರು ಎಂದಿನಂತೆ ಸರ್ಕಾರಿ ಕಚೇರಿಗಳು ಬರಲಿಲ್ಲ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮದುವೆ, ಮುಂಜಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಿಂದ ಬಹುತೇಕ ಸರ್ಕಾರಿ ಕಚೇರಿಗಳೂ ಸಹ ಬಿಕೋ ಎನ್ನುತ್ತಿದ್ದವು. ಸಂಜೆ 4.30 ರ ನಂತರ ನಗರದ ಮಧ್ಯೆ ಇದ್ದ ಹೊಟೇಲ್, ಅಂಗಡಿಗಳು ಮತ್ತಿತರ ಚಟುವಟಿಕೆಗಳು ಎಂದಿನಂತೆ ನಡೆದವು
ಮಾನವ ಸರಪಳಿ ರಚನೆ, ಮೆರವಣಿಗೆ:  ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರೆ ಸಂಘಟನೆಗಳು ಹಾಸನ ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ನಡೆಸಿ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿದರು. ನಂತರ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಿದರು.  
ದೇಶದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಈ ಕಾಲಾವಧಿಯಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಗೆ ಬಂದಿರುವುದು ಅತ್ಯಂತ ವಿಶಾಲವಾದ ಕಾರ್ಮಿಕರ ಐಕ್ಯತೆಗೆ ನಾಂದಿ ಹಾಡಿದೆ. ಕಾರ್ಮಿಕರ ಹಿತ ಒಂದೇ ಎನ್ನುವ ದಿಶೆಯಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳು ಒಂದಾಗಿ ಐತಿಹಾಸಿಕವಾದ ಎರಡು ದಿನಗಳ ದೇಶವ್ಯಾಪಿ ಐಕ್ಯ ಕಾರ್ಮಿಕರ ಮುಷ್ಕರ ನಡೆಸಲಾಗುತ್ತಿದೆ.
ಕಾರ್ಮಿಕ ಕಾನೂನುಗಳ ಜಾರಿಗೊಳಿಸದೇ ಸಾಮಾಜಿಕ ಭದ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ. ವರ್ಷವಿಡೀ ನಿರಂತರವಾಗಿ ಮಾಡಬೇಕಾದ ಖಾಯಂ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ಕಾರ್ಮಿಕರನ್ನು ತೀವ್ರ ಶೋಷಣೆಗೆ ಗುರಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಡಿಯಲ್ಲಿ ಗುತ್ತಿಗೆ ಪದ್ದತಿಯಲ್ಲಿ ದುಡಿಯುವ ಕಾರ್ಮಿಕರಿಗೂ ಒಳಗೊಂಡು ಸಾರ್ವಜನಿಕ ಕ್ಷೇತ್ರದ ಹಾಗೂ ಖಾಸಗಿ ರಂಗದ ಕೈಗಾರಿಕೆಗಳಲ್ಲಿಯೂ ಕನಿಷ್ಠ ವೇತನ, ಭವಿಷ್ಯನಿಧಿ, ಇಎಸ್‌ಐ, ಬೋನಸ್, ಗ್ರಾಚ್ಯುಟಿ ಸೌಲಭ್ಯ ಜಾರಿಗೊಳಿಸದೇ ನಿರಾಕರಿಸಲಾಗುತ್ತಿದೆ ಎಂದು ದೂರಿದರು.
ಕಾರ್ಮಿಕರ ಸಂಘಟನಾ ಹಕ್ಕನ್ನೇ ಮೊಟಕು ಗೊಳಿಸಲು ಬಹುರಾಷ್ಟ್ರೀಯ ಕಂಪನಿಗಳು ದಾಳಿ ನಡೆಸುತ್ತಿರುವಾಗ ಸರ್ಕಾರಗಳು ವಿದೇಶಿ ಹಾಗೂ ದೇಶಿಯ ಬಂಡವಾಳಗಾರರೊಂದಿಗೆ ಶಾಮೀಲಾಗಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದರು.
ಪಿಂಚಣಿ ಖಾತ್ರಿ:  ಬೋನಸ್, ಭವಿಷ್ಯ ನಿಧಿಗೆ ಅರ್ಹತೆ ಹಾಗೂ ಪಾವತಿ ಮೇಲಿನ ಎಲ್ಲಾ ಮಿತಿಗಳನ್ನು ತೆಗೆದು ಹಾಕಿ ಉಪಧನ ಗಾತ್ರವನ್ನು ಹೆಚ್ಚಿಸಬೇಕು. 45 ದಿನದೊಳಗಾಗಿ ಕಾರ್ಮಿಕ ಸಂಘವನ್ನು ಕಡ್ಡಾಯವಾಗಿ ನೊಂದಣಿ ಮಾಡಬೇಕು, ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಂಘ ಕಟ್ಟುವ ಸ್ವತಂತ್ರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕಿನ ಒಡಂಬಡಿಕೆ 87 ಹಾಗೂ 98ನ್ನು ಸಂಸತ್ತು ಅನುಮೋದಿಸಬೇಕು ಮತ್ತು ಸರ್ವರಿಗೂ ಪಿಂಚಣಿ ಖಾತ್ರಿಗೊಳಿಸಬೇಕು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಅರವಿಂದ್, ಪೃಥ್ವಿ, ಎಐಯುಟಿಯುಸಿಯ ರಾಜ್ಯ ಸಹ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ರಾಜ್ಯ ನಾಯಕ ರಂಗನಾಥ್, ಮಂಜುಳ, ಲಕ್ಷ್ಮಿ, ಸೌಭಾಗ್ಯ, ರೂಪ, ಸವಿತಾ, ರಶ್ಮಿ, ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟ ಜಿಲ್ಲಾಧ್ಯಕ್ಷ ಪರಮಶಿವಯ್ಯ, ರಂಗನಾಥ್, ಮಂಜುನಾಥ್, ಚಂದ್ರಶೇಖರ್, ಮನೋಜ್, ಗೌರಮ್ಮ, ಪಾರ್ವತಿ, ರೇಖಾ, ಮಲ್ಲಮ್ಮ, ಸರೋಜಮ್ಮ, ಪಲ್ಲವಿ, ರೂಪ, ಕವಿತಾ, ಲತಾ, ನೇತ್ರಾವತಿ, ಪುಷ್ಪಲತಾ, ರಮ್ಯಾ, ಅನಸೂಯ, ಬಿ.ಜೆ.ಚಂದ್ರು, ಪ್ರವೀಣಕುಮಾರ್ ಸತೀಶ್, ಮೋಹನಕುಮಾರ್ ಮಂಜು, ರಾಜು ಇತರರಿದ್ದರು.

ಅರಸೀಕೆರೆಯಲ್ಲೂ...
ಅರಸೀಕೆರೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ನಾನಾ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಲಾಗಿದ್ದ ಬಂದ್ ಕರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬ್ಯಾಂಕ್ ನೌಕರರು, ಎಪಿಎಂಸಿ ಹಮಾಲರ ಸಂಘ ಹಾಗೂ ವಕೀಲರ ಸಂಘ ಬೆಂಬಲಿಸಿ ತಮ್ಮ  ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದವು.  ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.  ಮುಷ್ಕರಕ್ಕೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿಯದಿದ್ದ ಪರಿಣಾಮ ಶುಭ ಸಮಾರಂಭಗಳಿಗೆ ತೆರಳುವವರಿಗೆ ತೊಂದರೆ ಅನುಭವಿಸಿದರು. ಇದರ ಲಾಭವನ್ನು ಪಡೆದ ಖಾಸಗಿ ವಾಹನಗಳು ದುಪ್ಪಟ್ಟು ದರಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು  ಬ್ಯಾಂಕುಗಳ ಸೇವೆ ಸ್ಥಗಿತಗೊಂಡಿದ್ದರೆ, ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಬಂದ್‌ಗೆ ಬೆಂಬಲ ನೀಡಿದರೆ, ಎಪಿಎಂಸಿ ಹಮಾಲರ ಸಂಘ ಕೂಡ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಮೆರವಣಿಗೆ ನಡೆಸಿದರು.

ಹೊಳೆನರಸೀಪುರ; ಉತ್ತಮ ಪ್ರತಿಕ್ರಿಯೆ
ಮಹಿಳಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿದ ವರ್ತಕರು
ಹೊಳೆನರಸೀಪುರ: ನಾನಾ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಸಿಐಟಿಯು ನೇತೃತ್ವದಲ್ಲಿ ಬುಧವಾರ ಪಟ್ಟಣ ಯಶಸ್ವಿಯಾಗಿ ನಡೆದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
 ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪಟ್ಟಣದಾದ್ಯಂತ ವರ್ತಕರು ಸ್ವಯಂಪ್ರೇರಿತರಾಗಿ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಸಹಕಾರ ನೀಡಿದರು.
ಅಲ್ಲಲ್ಲಿ ಕೆಲವು ಬೀದಿ ಬದಿಯ ವ್ಯಾಪಾರಿಗಳು ಎಂದಿನಂತೆಯೇ ತಮ್ಮ ವ್ಯಾಪಾರ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಮಹಿಳಾ ಕಾರ್ಯಕರ್ತರುಗಳೇ ಖುದ್ದಾಗಿ ತೆರಳಿ ಎರಡು ದಿನಗಳ ಕಾಲ ಎಲ್ಲರ ಒಳಿತಿಗಾಗಿ ಕರೆ ನೀಡಿರುವ ದೇಶವ್ಯಾಪಿ ಬಂದ್‌ಗೆ ಸ್ವಯಂಪ್ರೇರಿತರಾಗಿ ಸಹಕಾರ ನೀಡುವಂತೆ ಕೋರಿದರು. ಇದಕ್ಕೆ ವರ್ತಕರು ಸ್ಪಂದಿಸಿದರು. ಸಂಜೆಯವರೆವಿಗೂ ಪಟ್ಟಣದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳೂ ಮುಚ್ಚಿದ್ದರೆ, ಔಷಧಾಲಯಗಳು ಮಾತ್ರ ತೆರೆದು ಎಂದಿನಂತೆಯೇ ಕಾರ್ಯನಿರ್ವಹಿಸಿದವು.
 ಕೆಲವು ಕಚೇರಿಗಳು ಮುಚ್ಚಿದ್ದರೆ ಇನ್ನೂ ಕೆಲವು ಕಚೇರಿಗಳು ತೆರೆದಿದ್ದರೂ ಸಿಬ್ಬಂದಿ ಇಲ್ಲದೇ ನಿತ್ಯದ ಕಾರ್ಯನಿರ್ವಹಿಸಲು ಪರದಾಡಿದವು. ಸಿಐಟಿಯು ನೇತೃತ್ವದಲ್ಲಿ ನೂರಾರು ಮಹಿಳಾ ಕಾರ್ಯಕರ್ತೆಯರು ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದರು.
 ಸಿಐಟಿಯು ತಾಲೂಕು ಸಂಘಟನೆಯ ಅಧ್ಯಕ್ಷೆ ವಿ.ಲತಾ, ಉಪಾಧ್ಯಕ್ಷ ಮಲ್ಲಿಕಾರ್ಜುನ್ ನೇತೃತ್ವ ವಹಿಸಿದ್ದರು.      ಜಾವಗಲ್: ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಜಾವಗಲ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೇ ಬಿಕೋ ಎನ್ನುತ್ತಿತ್ತು.

ಬೇಲೂರಿನಲ್ಲೂ...
ಬೇಲೂರು: ಬಂದ್‌ಗೆ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ವಿವಿಧ ಸಂಘ, ಸಂಸ್ಥೆ ಹಾಗೂ ಸಿಐಟಿಯು ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಸ್, ಆಟೋ ಸಂಚಾರ ಸ್ಥಗಿತಗೊಂಡಿತ್ತು. ಶಾಲೆ, ಕಾಲೇಜುಗಳು ಬಂದ್ ಆಗಿದ್ದವು. ಅಲ್ಲಲ್ಲಿ ಹೊಟೇಲ್ ಹಾಗೂ ಅಂಗಡಿಗಳು ತೆರೆದಿದ್ದವು.
ಪ್ರತಿಭಟನಾನಿರತರು ಮಾತನಾಡಿ, ಜನರನ್ನು ಎಪಿಲ್, ಬಿಪಿಎಲ್ ಎಂದು ವಿಂಗಡಿಸುವುದು ಬಿಟ್ಟು ಸಾರ್ವತ್ರಿಕ ಪಡಿತರ ವ್ಯವಸ್ಥೆ ಮಾಡಬೇಕು, ಉತ್ತೇಜಕ ಪ್ಯಾಕೇಜ್ ಬದಲು, ಉದ್ಯೋಗ ರಕ್ಷಣೆಯನ್ನು ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟ ನಿಲ್ಲಿಸಬೇಕು, ಅಂಗನವಾಡಿ ಕಾರ್ಯಕರ್ತೆಯರಿಗೆ ಪಿಂಚಣಿ ಕಡ್ಡಾಯವಾಗಿ ಕೊಡಬೇಕು ಎಂಬಿತ್ಯಾಡಿ ಹಲವಾರು ಬೇಡಿಕೆಗಳನ್ನು ಸರ್ಕಾರ ಕೂಡಲೇ  ಈಡೇರಿಸಬೇಕು ಎಂದು ಆಗ್ರಹಿಸಿದರು.  

ಆಲೂರು ಪಟ್ಟಣದಲ್ಲಿ ಬಂದ್ ನೀರಸ
ಆಲೂರು: ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಮುಷ್ಕರಕ್ಕೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದು, ತಮ್ಮ ವ್ಯಾಪಾರ ವಹಿವಾಟು ನಡೆಸಿದವು. ಎಲ್ಲ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೆ, ಬ್ಯಾಂಕ್, ಎಲ್ಲಾ ಹೋಟೆಲ್ ಮಾಲೀಕರು ಬಂದ್ ಮಾಡಿದ್ದರು. ಸರ್ಕಾರಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿತ್ತು. ಬಸ್‌ಗಳ ಸಂಚಾರ ಸಂಪೂರ್ಣ ನಿಂತು ಹೋಗಿದ್ದರ ಪರಿಣಾಮ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿನ ಬಿಸಿ ತಟ್ಟಿತು. ಸಂತೆಯ ದಿನವಾದ ಬುಧವಾರ ಎಂದಿನಂತೆ ಸಂತೆ ನಡೆಯಿತು. ಬಸ್‌ಗಳಿಲ್ಲದ ಪರಿಣಾಮ ವ್ಯಾಪಾರ, ವಹಿವಾಟು ಕುಂಠಿತಗೊಂಡಿತು. ವಕೀಲರು ಬೆಂಬಲ ನೀಡದಿದ್ದ ಪರಿಣಾಮ ಕೋರ್ಟ್ ಕಲಾಪಗಳು ನಡೆದವು.
ಕೆಇಬಿ ವೃತ್ತದಲ್ಲಿ  ಸಿಐಟಿಯು ಕಾರ್ಯಕರ್ತರಿಗೂ ಹಾಗೂ ಅಂಗಡಿ ಮಾಲೀಕರಿಗೂ ಮಾತಿನ ಚಕಮಕಿ ನಡೆಯಿತು. ಎಲ್ಲರನ್ನು  ಬಲವಂತವಾಗಿ ಬಾಗಿಲು ಹಾಕಿಸಲು ಬಂದ ಕಾರ್ಯಕರ್ತರು ಇಡೀ ಭಾರತದಲ್ಲಿ ಮುಷ್ಕರಕ್ಕೆ ಬೆಂಬಲ ನೀಡುತ್ತಿದ್ದಾರೆ. ನೀವು ಹಾಕಿಲ್ಲ. ನೀವೇನೂ ಪಾಕಿಸ್ತಾನದವರೇ ಎಂದಾಗ ಸ್ಥಳೀಯರು ಅಂಗಡಿ ಮಾಲೀಕರೊಂದಿಗೆ ಸೇರಿ ಬಂದ್ ಮಾಡಲು ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡರು.
ಮಾತಿನ ಚಕಮಕಿ: ಈ ನಡುವೆ ಸಾರ್ವಜನಿಕರಿಗೂ ಹಾಗೂ ಪ್ರತಿಭಟನಾನಿತರ ಸಿಐಟಿಯು ಕಾರ್ಯಕರ್ತೆಯರ ನಡುವೆ ಅರ್ಧಗಂಟೆವರೆಗೂ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಗಂಭೀರ ಸ್ವರೂಪ ಪಡೆದು, ಅಂಗಡಿಯವರು ಪಟ್ಟಣ ಠಾಣೆ ಹಾಗೂ ತಹಸೀಲ್ದಾರರಿಗೆ ದೂರು ನೀಡಿದರು. ಮುಷ್ಕರ ನಾವು  ಬೆಂಬಲಿಸುತ್ತೇವೆ. ಆದರೆ ಸ್ವಲ್ಪ ತಡವಾಗಿದ್ದಕ್ಕೆ ಬಲವಂತಾಗಿ ಮುಚ್ಚಿಸಿದರು ಹಾಗೂ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ದೂರು ನೀಡಿದರು.
ಮಾಲೀಕರಲ್ಲಿ ಕ್ಷಮೆ:   ಸಬ್ ಇನ್‌ಸ್ಪೆಕ್ಟರ್ ಸ್ಥಳಕ್ಕೆ ಆಗಮಿಸಿ  ಅಂಗಡಿ ಮಾಲೀಕರು ಹಾಗೂ ಸಿಐಟಿಯು ಕಾರ್ಯಕರ್ತೆಯರನ್ನು ಠಾಣೆಗೆ ಕರೆಸಿಕೊಂಡು ಸಂಧಾನ ನಡೆಸಿದಾಗ ಸಿಐಟಿಯು ಕಾರ್ಯದರ್ಶಿ ಅಂಗಡಿ ಮಾಲೀಕರಲ್ಲಿ ಕ್ಷಮೆ ಕೇಳಿದರು.

ಅರಕಲಗೂಡಲ್ಲಿ ಯಶಸ್ವಿ
ಅರಕಲಗೂಡು: ಸಿಐಟಿಯು ಕರೆಯ ಮೇರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬುಧವಾರ ನೀಡಿದ್ದ ಬಂದ್ ಇಲ್ಲಿ ಯಶಸ್ವಿಯಾಯಿತು. ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸಲಿಲ್ಲ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು..ಸಿಐಟಿಯು ಕಾರ್ಯಕರ್ತರು ಪಟ್ಟಣದಲ್ಲಿ ಸಂಚರಿಸಿ ಅಂಗಡಿಗಳ ಬಾಗಿಲು ಮುಚ್ಚಿಸಿದರು. ಈ ನಡುವೆ ಅಲ್ಲಲ್ಲಿ ರಸ್ತೆಯಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. ಸುಬ್ರಹ್ಮಣ್ಯ, ಮಹಮದ್ ರಫೀಕ್, ಗೋಪಾಲ್ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.