ಹೇಮಾವತಿ ನದಿಗೆ ಹಾರಿ ಶಿಕ್ಷಕ ಆತ್ಮಹತ್ಯೆ
ಅರಕಲಗೂಡು: ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ಅಧಿಕಾರಿ ಚುಚ್ಚು ಮಾತು ಮತ್ತು ಮುಂದೆ ಕ್ರಮ ಕೈಗೊಳ್ಳಬಹುದೆಂಬ ಆತಂಕದಿಂದ ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ತಾಲೂಕಿನ ಯಲಗತವಳ್ಳಿ ಗ್ರಾಮದ ಶಿಕ್ಷಕ ಲೋಕೇಶ (37) ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಮನೆಯಿಂದ ತೆರಳಿದವರು ಮರಳಿ ಮನೆಗೆ ಬಂದಿಲ್ಲ. ಆದರೆ ಬುಧವಾರ ಬೆಳಿಗ್ಗೆ ಲೋಕೇಶನ ಶವ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೇಮಾವತಿ ನದಿಯಲ್ಲಿ ಪತ್ತೆಯಾಗಿದ್ದು, ಶವವನ್ನು ನದಿಯಿಂದ ಹೊರತೆಗೆಯಲಾಗಿದೆ.
ಅಧಿಕಾರಿಯೊಬ್ಬರು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮೃತ ಲೋಕೇಶ ತನ್ನ ಹಲವು ಶಿಕ್ಷಕ ಮಿತ್ರರೊಂದಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ. ಆದರೆ ಮೃತ ಲೋಕೇಶನ ಕುಟುಂಬದವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗೊರೂರು ಜಾತ್ರೆಗೆ ಬಂದ ವೇಳೆ ಶೌಚಕ್ಕೆ ತೆರಳುವಾಗ ಕಾಲು ಜಾರಿ ಆಕಸ್ಮಿಕ ಬಿದ್ದಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಗೊರೂರು ಪಿಎಸ್ಐ ಜಯರಾಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಎನ್ಎಸ್ಎಸ್ ಶಿಬಿರ ಉದ್ಘಾಟನೆ
ಹಾಸನ: ಭಾರತೀಯ ಗ್ರಾಮೀಣ ಸೊಗಡು ಸವಿಯಲು ಎನ್ಎಸ್ಎಸ್ ಶಿಬಿರ ಒಂದು ಉತ್ತಮ ಅವಕಾಶ ಎಂದು ಶಾಸಕ ಎಚ್.ಎಸ್.ಪ್ರಕಾಶ್ ತಿಳಿಸಿದರು.
ನಗರದ ಎ.ವಿ.ಕಾಂತಮ್ಮ ಮಹಿಳಾ ಪದವಿ ಕಾಲೇಜಿನ ರಾಷ್ಷ್ರೀಯ ಸೇವಾ ಯೋಜನೆಯಿಂದ ತಾಲೂಕಿನ ಹಂದಿನಕೆರೆ ಹರಳಹಳ್ಳಿ ಗ್ರಾಮದಲ್ಲಿ ಏರ್ಪಡಿಸಿರುವ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಸಂಸ್ಕೃತಿಯ ಪರಿಚಯ ಶಿಬಿರದ ಮೂಲಕ ಎಲ್ಲರಿಗೂ ತಲುಪುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಜೆ.ಶೈಲಜಾಕುಮಾರಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಹಾಗೂ ಶ್ರಮದಾನದಂತಹ ಪವಿತ್ರ ಕಾರ್ಯದ ಬಗ್ಗೆ ರಾಷ್ಷ್ರೀಯ ಸೇವಾ ಯೋಜನೆಯ ಮಹತ್ವವನ್ನು ವಿಷದವಾಗಿ ತಿಳಿಸಿದರು.
ಕಾಲೇಜಿನ ಪ್ರಾಧ್ಯಾಪಕರು, ಗ್ರಾಮದ ಮುಖಂಡರು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಇದ್ದರು. ಎನ್ಎಸ್ಎಸ್ ಅಧಿಕಾರಿ ಪ್ರೊ. ಎಚ್.ಡಿ.ನಿಂಗಯ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ಮಮತ ವಂದಿಸಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.
ಇಂದು ಎಂದಿನಂತೆ ಶಾಲೆ, ಕಾಲೇಜು: ಡಿಸಿ
ಹಾಸನ: ಜಿಲ್ಲಾದ್ಯಂತ ಶಾಲೆ, ಕಾಲೇಜುಗಳು ಗುರುವಾರ ಎಂದಿನಂತೆ ನಡೆಯುತ್ತವೆ. ರಜೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎಡಪಕ್ಷಗಳು ಬೆಲೆ ಏರಿಕೆ ಖಂಡಿಸಿ ಫೆ. 20 ಮತ್ತು 21 ರಂದು ಬಂದ್ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಫೆ. 21 ರಂದು ರಜೆ ನೀಡುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ಬಸ್ಗಳು ಎಂದಿನಂತೆ ಸಂಚಾರ ಆರಂಭಿಸುತ್ತವೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಅಧಿಕಾರ ಸ್ವೀಕಾರ
ಸಕಲೇಶಪುರ: ತಾಲೂಕು ತಹಶೀಲ್ದಾರ್ ಆಗಿ ಆರ್. ಮಂಜುನಾಥ್ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಮಂಜುನಾಥ್ ತಾಲೂಕು ಕಚೇರಿಯಲ್ಲಿ ಅಹಾರ ಇಲಾಖೆ ಅಧಿಕಾರಿಯಾಗಿದ್ದು, ಇತ್ತೀಚೆಗೆ ಉಪ ತಹಸೀಲ್ದಾರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮುಂಬಡ್ತಿ ಪಡೆದು ವರ್ಗಾವಣೆಯಾದ ತಹಸೀಲ್ದಾರ್ ಚಂದ್ರಮ್ಮ ಅವರು ಮಂಜುನಾಥ್ರಿಗೆ ಅಧಿಕಾರ ಹಸ್ತಾಂತರಿಸಿದರು.
ನಾಳೆ ಕಣತೂರು ದೇವಿರಮ್ಮ ಜಾತ್ರೆ
ಆಲೂರು: ತಾಲೂಕಿನ ಕಣತೂರು ಗ್ರಾಮದಲ್ಲಿ ಫೆ. 22, 23, 24 ರಂದು ದುರ್ಗಮ್ಮ, ದೇವಿರಮ್ಮ ಜಾತ್ರಾ ಮಹೋತ್ಸವ ಹಾಗೂ ಸಿಡಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಮಹಾಮುಷ್ಕರದ ಪ್ರಯುಕ್ತ ಪಟ್ಟಣ ಹಾಗೂ ಜಿಲ್ಲಾ ಕೇಂದ್ರದಿಂದ ಕಣತೂರು ಗ್ರಾಮಕ್ಕೆ ಖಾಸಗಿ ಟೆಂಪೋಗಳ ಸಂಚಾರವಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕಾಗಿ ಕೋರಿದ್ದಾರೆ.
ಸಕಲೇಶಪುರದಲ್ಲಿ ಬಂದ್ ಭಾಗಶ:
ಸಕಲೇಶಪುರ: ಎರಡು ದಿನಗಳ ಭಾರತ್ ಬಂದ್ ಬುಧವಾರ ಪಟ್ಟಣದಲ್ಲಿ ಭಾಗಶ: ಯಶಸ್ವಿಯಾಯಿತು. ಮುಂಜಾನೆಯಿಂದಲೇ ಸಾರಿಗೆ ಬಸ್ಗಳು ರಸ್ತೆಗೆ ಇಳಿಯಲಿಲ್ಲ, ಪಟ್ಟಣದ ಮುಖ್ಯರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದರೆ, ಆಜಾದ್ ರಸ್ತೆಯಲ್ಲಿ ಕೆಲವು ವರ್ತಕರು ಅಂಗಡಿಮುಂಗಟ್ಟುಗಳನ್ನು ತೆರೆದಿದ್ದರು. ಆಟೋ ಓಡಾಟ ಅಲ್ಪ ಪ್ರಮಾಣದಲ್ಲಿತ್ತು. ಆದರೆ ಸಾರಿಗೆ ಬಸ್ಗಳು ರಸ್ತೆಗಿಳಿಯದ ಕಾರಣ ಪಟ್ಟಣದಲ್ಲಿ ಜನ ಸಂಚಾರ ಸಹ ವಿರಳವಾಗಿತ್ತು. ಇದರಿಂದಾಗಿ ಪಟ್ಟಣ ನೀರವ ಮೌನದಂತಹ ವಾತಾವರಣವಿತ್ತು.
ಎಐಟಿಸಿಯು ಸಂಘಟನೇಯ ನೇತೃತ್ವದಲ್ಲಿ ತೋಟಕಾರ್ಮಿಕರು ಹಾಗು ಅಂಗನವಾಡಿ ಕಾರ್ಯಕರ್ತೆಯರು ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.
ಪ್ರಹ್ಲಾದ್ಯಾದವ್ ನಿಧನಕ್ಕೆ ಸಂತಾಪ ಸಭೆ
ಜಾವಗಲ್: ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಮಾಜಿ ಮುಖ್ಯ ಸಂಘಟಕ ಪ್ರಹ್ಲಾದ್ ಯಾದವ್ ನಿಧನಕ್ಕೆ ಹಾಸನ ಜಿಲ್ಲಾ ಕಾಂಗ್ರೆಸ್ ಸೇವಾದಳ ಮುಖ್ಯ ಸಂಘಟಕ ಜೆ.ಎಸ್. ಶ್ರೀಕಂಠಯ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸಭೆ ಸೇರಿ ಸಂತಾಪ ಸೂಚಿಸಿ ಮೌನ ಆಚರಿಸಲಾಯಿತು. ಮೈಸೂರು ವಿಭಾಗೀಯ ಸೇವಾದಳ ಮುಖ್ಯಸ್ಥ ಗೋಪಾಲೇಗೌಡ ಮರ್ಕುಲಿ, ಬೇಲೂರು, ಹಳೇಬೀಡು ಮುಖ್ಯಸ್ಥ ಶೇಖರಪ್ಪ, ಸಿ.ಎನ್.ದಾನಿ, ಸೇವಾದಳ ಸದಸ್ಯ ಬಿಂದುಮಾಧವ ಅವರು ಪ್ರಹ್ಲಾದ್ ಪಕ್ಷಕ್ಕೆ ಸಲ್ಲಿಸಿದ ಸೇವೆ ಬಗ್ಗೆ ಮಾತನಾಡಿದರು.
ದೊಡ್ಡಮಗ್ಗೆ ರಥೋತ್ಸವ ಇಂದು
ದೊಡ್ಡಮಗ್ಗೆ(ಅರಕಲಗೂಡು ತಾ): ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ವಿ.ಶ್ರೀನಿವಾಸ ಅಯ್ಯಂಗಾರ್ ತಿಳಿಸಿದ್ದಾರೆ.
ಸ್ಥಳೀಯ ಚುನಾವಣೆ: ಬಿಜೆಪಿ ಸನ್ನದ್ಧ
ಹಾಸನ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸಲು ಪಕ್ಷ ಸನ್ನದ್ಧವಾಗಿದ್ದು, ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲೋಹಿತ್ ಕುಂದೂರು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ 35 ವಾರ್ಡ್ಗಳಿಗೆ ಪಕ್ಷದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಮತ್ತೆ ಪಕ್ಷಕ್ಕೆ ಹೊಸದಾಗಿ ಸೇರುವಂತಹರು ಕೂಡಾ ಹೆಚ್ಚಾಗುತ್ತಿದೆ ಎಂದರು. ನಗರಾಧ್ಯಕ್ಷ ಮಂಜುನಾಥ್ ಮೊರೆ, ಪ್ರಸನ್ನಕುಮಾರ್, ಶ್ರೀನಿವಾಸ್ ಇದ್ದರು.
28ರಂದು ನಗರಕ್ಕೆ ಸಿ.ಜಿ. ಹುನಗುಂದ
ಹಾಸನ: ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಪ್ರವಾಸ ಕಾರ್ಯಕ್ರಮದನ್ವಯ ಫೆ 28ರಂದು ಮಧ್ಯಾಹ್ನ 1 ಗಂಟೆಗೆ ಹಾಸನಕ್ಕೆ ಆಗಮಿಸುವರು. ಸಂಜೆ.4ಕ್ಕೆ ಮಂಗಳೂರಿಗೆ ಪ್ರಯಾಣ ಮಾಡುವರು. ಮಾರ್ಚ್3 ರಂದು ಮಧ್ಯಾಹ್ನ 1.30ಕ್ಕೆ ಹಾಸನಕ್ಕೆ ಆಗಮಿಸುವರು ಮಧ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

