ಹಾಸನ

ಇಂದು ಎಲೆಕ್ಟ್ರಾನಿಕ್ಸ್ ರಿಪೇರಿದಾರರ ಸಭೆ

Published On :

ಹಾಸನ: ಜಿಲ್ಲಾ ಎಲೆಕ್ಟ್ರಾನಿಕ್ಸ್ ರಿಪೇರಿದಾರರ ಮಾಸಿಕ ಸಭೆ ಫೆ. 24 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಪಾಂಡುರಂಗ ದೇವಸ್ಥಾನ ರಸ್ತೆಯಲ್ಲಿರುವ ಕಂಬದ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದೆ. ಸಭೆಗೆ ಜಿಲ್ಲೆಯ ಎಲ್ಲಾ ಎಲೆಕ್ಟ್ರಾನಿಕ್ಸ್ ರಿಪೇರಿದಾರರು ಭಾಗವಹಿಸಲು ಕೋರಲಾಗಿದೆ.

ಮಾ. 1ರಿಂದ ಆಧ್ಯಾತ್ಮಿಕ ಶಿಬಿರ
ಬೇಲೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಆಧ್ಯಾತ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಾ.ಮುಖ್ಯಸ್ಥೆ ಬಿ.ಕೆ.ಚಂದ್ರಿಕಾ ತಿಳಿಸಿದ್ದಾರೆ.ಮಾರ್ಚ್ 1ರಿಂದ 4ರ ವರೆಗೆ ಮನಸ್ಸಿನ ನಿರ್ವಹಣೆಗಾಗಿ ಆಧ್ಯಾತ್ಮಿಕ ಶಿಬಿರನ್ನು ಪಟ್ಟಣದ ಶಿಕ್ಷಕರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಿಬಿರದಲ್ಲಿ ಆಧ್ಯಾತ್ಮಿಕದ ಬಗ್ಗೆ ಪ್ರಚಾರ ನಡೆಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.

ಜಾವಲಿನ್ ಎಸೆತ: ಪ್ರಥಮ ಸ್ಥಾನ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾ ಕೂಟದಲ್ಲಿ ಹೆರಗು ಜನತಾ ಪ್ರೌಢಶಾಲೆ ವಿದ್ಯಾರ್ಥಿ ಎಚ್.ಆರ್. ದಿವಾಕರ ಗುಂಡು ಎಸೆತ ಮತ್ತು ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಪ್ರಥಮ  ಸ್ಥಾನಗಳಿಸಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ವಿಕಲ ಚೇತನರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾನೆ.

ರೈತ ಸಂಘ ಬೆಂಬಲಿತ ಅಭ್ಯರ್ಥಿ ವಿಶ್ವನಾಥ್ ನಾಮಪತ್ರ ಸಲ್ಲಿಕೆ
ಸಕಲೇಶಪುರ: ಪಟ್ಟಣ ಪುರಸಭೆ ವಾರ್ಡ್ 12 ರಿಂದ ರೈತ ಸಂಘದ ಬೆಂಬಲಿತ ಅಭ್ಯರ್ಥಿಯಾಗಿ ಸಾ.ಸು.ವಿಶ್ವನಾಥ್ ಬೆಂಬಲಿಗರಿಂದಿಗೆ ಶುಕ್ರವಾರ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ರೈತ ಸಂಘದಿಂದ ಕಣಕ್ಕಿಳಿದಿರುವ ಏಕೈಕ ಅಭ್ಯರ್ಥಿಯಾಗಿದ್ದಾರೆ. ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ರಾಜಕಿಯ ಪಕ್ಷದಲ್ಲಿ ಗುರುತಿಸಿಕೊಂಡರೆ, ಆ ಪಕ್ಷದ ಸಿದ್ಧಾಂತಗಳಿಗೆ ಒಳಪಟ್ಟು ಕೆಲಸ ಮಾಡಲೇಬೇಕಾಗುತ್ತದೆ. ವೈಯಕ್ತಿಕ ವರ್ಚಸ್ಸಿಗೆ ಅವಕಾಶ ಇಲ್ಲದಂತಾಗುವ ಜೊತೆಗೆ ಸ್ವತಂತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರೈತ ಸಂಘದ ಸಹಕಾರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ತಿಳಿಸಿದರು.

ಚನ್ನರಾಯಪಟ್ಟಣ: ಪ್ರಮುಖ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ
ಚನ್ನರಾಯಪಟ್ಟಣ: ಪುರಸಭೆ ಮಾಜಿ ಅಧ್ಯಕ್ಷ ಬಿ.ನಾಗರಾಜು, ಮೀನಾಕ್ಷಿರಘು, ಅನುಸೂಯ ಪ್ರಕಾಶ್, ಭಾಗ್ಯ, ಪುಷ್ಪರವಿಕುಮಾರ್, ಭಾಗ್ಯ ನಾಗರಾಜು, ಮಾಜಿ ಉಪಾಧ್ಯಕ್ಷ ಗೋಪಾಲಕೃಷ್ಣ, ಭಾರತಿ ರಂಗಸ್ವಾಮಿ  ನಾಮಪತ್ರ ಸಲ್ಲಿಸಿದರು.
   ಗೋಪಾಲಕೃಷ್ಣ 7ನೇ ಬಾರಿಗೆ ಪುರಸಭೆ ಪ್ರವೇಶಿಸಲು ನಾಮಪತ್ರ ಸಲ್ಲಿಸಿದ್ದು, ಇವರು 5 ಬಾರಿ ಗೆಲವು ಸಾಧಿಸಿದ್ದರೆ ಒಮ್ಮೆ ಸೋಲುಂಡಿದ್ದಾರೆ.
 ಪುರಸಭೆಯ 23 ವಾರ್ಡ್‌ಗಳಲ್ಲಿ ಜೆಡಿಎಸ್ 20 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅವರಿಗೆ ಬಿ.ಫಾರಂ ನೀಡಿದ್ದು, ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಾಗಿರುವ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ಪ್ರಕಟಿಸುವಲ್ಲಿ ವಿಫಲವಾಗಿದೆ.  

ಸಕಲೇಶಪುರ ಪುರಸಭೆ: ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಸಕಲೇಶಪುರ: ಪಟ್ಟಣದ ರಾಘವೇಂದ್ರನಗರ ಬಡಾವಣೆಯಿಂದ ಮುಂಬರುವ ಪುರಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮೋಹನ್ ಲೋಕೋಪಯೋಗಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಅವಧಿಯಲ್ಲಿ ಸಕಲೇಶಪುರ ಪುರಸಭೆ ಜೆಡಿಎಸ್ ಹಿಡಿತದಲ್ಲಿದ್ದರೂ ನಾನು ನನ್ನ ವಾರ್ಡಿಗೆ ಬೇರೆಲ್ಲಾ ವಾರ್ಡ್‌ಗಿಂತ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಈ ಹಿನ್ನೆಲೆಯಲ್ಲಿ ಮತದಾರರು ಈ ಬಾರಿಯೂ ನನ್ನನ್ನೂ ಜಯಶೀಲನನ್ನಾಗಿ ಮಾಡುವರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಮೊದಲನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಅನಿತಾ, ಮೂರನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ಲೋಕೇಶ್ ನಾಮಪತ್ರ ಸಲ್ಲಿಸಿದರು.

ಆಲೂರು: 47 ನಾಮಪತ್ರ ಸಲ್ಲಿಕೆ
ಆಲೂರು: ಪಟ್ಟಣ ಪಂಚಾಯ್ತಿ ಚುನಾವಣೆಯ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶನಿವಾರ ಮುಗಿದಿದ್ದು, ಸ್ವೀಕೃತವಾದ ನಾಮಪತ್ರಗಳ ಪಕ್ಷವಾರು ವಿವರ: ಕಾಂಗ್ರೆಸ್-9, ಬಿಜೆಪಿ-3, ಜನತಾದಳ(ಜಾ)11, ಬಿಎಸ್‌ಆರ್-2, ಸ್ವತಂತ್ರರು-13, ಕೆಜೆಪಿ-9 ಒಟ್ಟು 47 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಿಧಾನವಾಗಿ ಚುನಾವಣ ಕಾವು ಏರುತ್ತಿದೆ.

ಶಾಲೆಯಲ್ಲಿ ಕಲೆ, ವಿಜ್ಞಾನ ಪ್ರದರ್ಶನ
ಹಾಸನ: ನಗರದ ಯೂರೋ ಶಾಲೆಯಲ್ಲಿ ಕಲೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಮೇಳ ಶಾಲೆಯ ಆವರಣದಲ್ಲಿ ನಡೆಯಿತು. ಸುಮಾರು 60 ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ನಮೂನೆಯ ಅನೇಕ ಮಾದರಿಗಳನ್ನು  ಪ್ರದರ್ಶನಕ್ಕೆ ಇಟ್ಟಿದ್ದು, ನೋಡುಗರಿಗೆ ಮಾಹಿತಿ ಜೊತೆಗೆ ಸ್ಥಳದಲ್ಲಿಯೇ ಪ್ರಾತ್ಯಕ್ಷಿಕೆ ತೋರಿಸಿದರು. ಭಾರತದ ರೆಂಬ್ರಾಂಟ್ ಎಂಬ ಹೆಸರು ಪಡೆದ ಎಸ್.ಎಂ. ಪಂಡಿತ್ ಹೆಸರಿನ ಗ್ಯಾಲರಿಯಲ್ಲಿ ಮಕ್ಕಳು ರಚಿಸಿದ ಸುಮಾರು 1260 ಪೇಯಿಂಟ್ಸ್‌ಗಳನ್ನು  ಪ್ರದರ್ಶನಕ್ಕೆ ಇಡಲಾಗಿತ್ತು. ಮಕ್ಕಳ ಮನಸ್ಸಿನಿಂದ ಮೂಡಿ ಬಂದ ಅಭಿವ್ಯಕ್ತಿಗಳನ್ನು ತಮ್ಮ ಕಲಾಕೃತಿಗಳಲ್ಲಿ ಮೂಡಿಸಿದ್ದಾರೆ. ಪ್ರಕೃತಿ ದುರಂತ, ಶಾಂತಿ ಮತ್ತು ಯುದ್ಧ, ಪ್ರಕೃತಿ ದೃಶ್ಯಗಳನ್ನು ಮನೋಜ್ಞವಾಗಿ ಚಿತ್ರ್ರಿಸಿದ್ದರು. ಈ ಮೇಳದ ವಿಶೇಷವೆಂದರೆ, ಪ್ಲಾಸ್ಟಿಕ್‌ನಿಂದ ಆಗುವ ಅನಾಹುತಗಳನ್ನು ಬಿಂಬಿಸುವ ಪ್ರತಿಷ್ಠಾಪನಾ ಕಲೆಯನ್ನು ಮಾಡಲಾ ಯಿತು. ಪ್ರಾಣಿಗಳು ಪ್ಲಾಸ್ಟಿಕ್ ತಿನ್ನುತ್ತವೆ. ಇದರಿಂದ ಭಾರೀ ಅನಾಹುತಗಳಾಗುತ್ತವೆ. ಇವುಗಳನ್ನು ತಡೆಗಟ್ಟಬೇಕು ಎಂದು ಎಲ್ಲಾ ಪೋಷಕರು ತಮ್ಮ ಹಸ್ತಗಳನ್ನು ಬಣ್ಣಗಳಲ್ಲಿ ಅದ್ದಿ ತಮ್ಮ ಹಸ್ತ ಮುದ್ರೆಗಳನ್ನು ಚಿತ್ರಗಳ ಮೇಲೆ ಮೂಡಿಸಿದ್ದರು. ಬೃಹತ್ ಆಕಾರದ ಒಂಟೆ ಮತ್ತು ಹಸುವಿನ ಚಿತ್ರಗಳು ಬಣ್ಣಗಳ ಹಸ್ತ ಮುದ್ರೆಯಿಂದ ತುಂಬಿ ಹೋಗಿದ್ದವು.

ಜಾವಗಲ್ ದರ್ಗಾದ ಉರುಸ್ ಕಾರ್ಯಕ್ರಮ
ಜಾವಗಲ್: ಪಟ್ಟಣದಲ್ಲಿ ಶುಕ್ರವಾರ ಇಲ್ಲಿನ ದರ್ಗಾದಲ್ಲಿ ಗ್ಯಾರ್ವಿ ಷರೀಫ್ ಉರುಸ್ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಉರುಸ್ ಕಾರ್ಯಕ್ರಮದ ಸಂದಲ್ ಮೆರವಣಿಗೆ ಅದ್ದೂರಿಯಿಂದ ನಡೆಯಿತು. ಬಾಬಾ ಅವರ ವಂಶಸ್ಥ ಮಹಮದ್ ಖಲೀಂ ಸಂದಲ್ ಹೊತ್ತು ಡೊಳ್ಳು ಕುಣಿತದೊಂದಿಗೆ ಹೊಸ ವಸ್ತ್ರಗಳು ಹೂವಿನ ಹಾರ ಸೇರಿದಂತೆ ಭಕ್ತರೊಂದಿಗೆ ಬಾಬಾ ಸಮಾಧಿಗೆ ತರಲಾಯಿತು. ನಾತೇಶರೀಫ್, ಪೂಕ್ರಾ, ಖಾಜಾ ಮತ್ತು ಸಂಗಡಿಗರು ಮುಸ್ಲಿಂ ಪದ್ಧತಿಯೊಂದಿಗೆ ವಿಧಿವಿಧಾನಗಳನ್ನು  ನೆರವೇರಿಸಿದರು. ಮೌಲಾನ ಅನ್ಸರ್, ಸಿಜಿರಾ ಕುರಾನ್ ಪಠಣ ಮಾಡಿದರು. ಸಮಾಧಿಗೆ ಧ್ವಜ ಅರ್ಪಿಸಿ ಮಲ್ಲಿಗೆ ಮತ್ತು ಗುಲಾಬಿ ಹಾರಗಳಿಂದ ಅಲಂಕಾರಗೊಳಿಸಿದ್ದರು. ರಾಜ್ಯ ಮತ್ತು ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಗೌರವ ಅರ್ಪಿಸಿದರು.  ಟ್ರಸ್ಟ್ ವತಿಯಿಂದ ಭಕ್ತಾದಿಗಳಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು. ದರ್ಗಾ ಟ್ರಸ್ಟ್ ಅಧ್ಯಕ್ಷ ಅಬೂಬುಕರ್, ಕಾರ್ಯದರ್ಶಿ ಅಬ್ಬಾಸ್‌ಖಾಜಿ, ಇಸಾಕಾಖಾಜಿ, ಟ್ರಸ್ಟ್ ಸದಸ್ಯ ಸರ್ದಾರ್‌ಪಾಷಾ, ಹಿಲಾಯಿಸಾಬ್ ಬಬ್ಬೇಲೂರು ಮಹಮದ್, ಬ್ರಾದರ್, ಮಹಮದ್‌ಶಕೀರ್, ಕೊಲ್ಲಾಪುರ ಸತ್ತಾರ್ ಇಲಾಯಿಸಾಬ್ ಬಬ್ರಫಿಕ್ ಮೊಯಿದ್ದೀನ್ ಇದ್ದರು. ಅರಸೀಕೆರೆ ಸಿಪಿಐ ಗಂಗಾಧರಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಅಕ್ರಮ ಮದ್ಯ: ಇಬ್ಬರ ಬಂಧನ
ಚನ್ನರಾಯಪಟ್ಟಣ: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು  ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ನುಗ್ಗೇಹಳ್ಳಿ ಹೋಬಳಿ, ಎನ್. ಹೊಸೂರು ಗ್ರಾಮದ ಮಂಜಣ್ಣ (40) ಬಂಧಿತ ಆರೋಪಿ. ಮಂಜಣ್ಣ ಮನೆಯ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಂಜಣ್ಣನನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ ಮದ್ಯ 1500 ರು. ಬೆಲೆಯ 180 ಎಂಎಲ್ ಓರಿಜಿನಲ್ ಚಾಯ್ಸ್ 38 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.  ಮತ್ತೊಂದು ಪ್ರಕರಣದಲ್ಲಿ ಬೇಲೂರು ತಾಲೂಕಿನ ಕಸಬಾ ಹೋಬಳಿ, ಬೆಣ್ಣೂರು ಗ್ರಾಮದ ಹತ್ತಿರ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾಗ ನಂಜೇಗೌಡ (45) ಎಂಬವರನ್ನು ಬಂಧಿಸಿದ್ದು, ಮಾರಾಟಕ್ಕಿಟ್ಟಿದ್ದ 1309 ಬೆಲೆಯ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ
ಹಾಸನ: ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ  ಆಚರಿಸಲಾಯಿತು. ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಾಹಿತ್ಯ ಸ್ಪಂದನ ವೇದಿಕೆಯಿಂದ ಶನಿವಾರ ನಡೆದ ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯನ್ನು ಸಾಹಿತಿ ಚಂದ್ರಕಾಂತ್ ಪಡೆಸೂರು ಉದ್ಘಾಟಿಸಿ ಮಾತನಾಡಿದರು.ಮಾತೃ ಭಾಷೆ ಕನ್ನಡ ಪ್ರೀತಿಸಿ, ಇತರೆ ಭಾಷೆಯನ್ನು ಕಲಿಯಿರಿ. ಕನ್ನಡ ಭಾಷೆ ಉಳಿಸಿ ಬೆಳೆಸಿದಲ್ಲಿ ಬದುಕು ಸುಂದರಮಯ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.  ಸುಂದರ ಬದುಕಿಗಾಗಿ ಕನ್ನಡ ಉಳಿಸಿ ಬೆಳೆಸಬೇಕು. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಭಾಷಾ ಅಭಿಮಾನ ನಡೆಸಲಾಗುವುದು ಎಂದ ಅವರು, ಪ್ರತಿಯೊಬ್ಬರು ಕನ್ನಡ ಭಾಷೆ ನಮ್ಮದು ಎಂಬ ಕೆಚ್ಚು ಹೊಂದಿದ್ದರೆ ಮಾತ್ರ ನಾಡಿನಲ್ಲಿ ಕನ್ನಡ ಭಾಷೆಯನ್ನು ಕಟ್ಟಲು ಮತ್ತು ಉಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಕ್ರಮ ಮದ್ಯ ಮಾರಾಟ: ಬಂಧನ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿ ಸಂತೆಮರೂರು ಗ್ರಾಮದ ಬಸ್ ನಿಲ್ದಾಣ ಹತ್ತಿರ ಪರಮೇಶ (50) ಎಂಬಾತ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು  ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಮದ್ಯ ಮಾರಾಟಕ್ಕಿಟ್ಟಿದ್ದ 1270 ರು. ಮೌಲ್ಯದ 180 ಎಂಎಲ್‌ನ ಓಲ್ಡ್ ಅಡ್ಮಿರಲ್ ಒಪಿ ಬ್ರಾಂದಿ 4 ಪ್ಯಾಕೇಟ್‌ಗಳು, 180 ಎಂಎಲ್‌ನ ವಿಸ್ಕಿ 20 ಪ್ಯಾಕೇಟ್ ವಶಪಡಿಸಿಕೊಂಡಿರುವ  ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಯುವತಿ ನಾಪತ್ತೆ
ಚನ್ನರಾಯಪಟ್ಟಣ: ಪಟ್ಟಣದ ಕಿಡ್ಸ್ ಕಾನ್ವೆಂಟ್ ಹತ್ತಿರ ಸರೋಜಿನಿ ಮಹಿಳಾ ಪುನಶ್ಚೇತನ ಕೇಂದ್ರದಲ್ಲಿದ್ದ ಮಲ್ಲವ್ವನಘಟ್ಟದ ರಂಗಸ್ವಾಮಿ ಎಂಬುವರ ಪುತ್ರಿ  ಶೋಭ (24) ಬುದ್ದಿಮಾಂದ್ಯಳಾಗಿ 3 ವರ್ಷದಿಂದ ಪುನಶ್ಚೇತನ ಕೇಂದ್ರದಲ್ಲಿದ್ದು ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ. 5.4  ಅಡಿ ಎತ್ತರ, ದುಂಡುಮುಖ ಕನ್ನಡ ಬಾಷೆ ಮಾತನಾಡುತ್ತಾಳೆ. ಆಶ್ರಮದಿಂದ ಹೋಗುವಾಗಿ ನೀಲಿ ಬಣ್ಣದ ನ್ಶೆಟಿ ಧರಿಸಿದ್ದಳು ಎಂದು  ಅಂಬಿಕಾ  ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಬಾಲಕ ನಾಪತ್ತೆ
ಆಲೂರು: ತಾಲೂಕಿನ ಭೈರಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅರುಣ್‌ಕುಮಾರ್  (15) ವಸತಿಶಾಲೆಯಿಂದ ಹೊರಗೆ ಹೋದವನು ನಾಪತ್ತೆಯಾಗಿದ್ದಾನೆ. 10 ನೇ ತರಗತಿ ವಿದ್ಯಾರ್ಥಿ ಅರುಣ್‌ಕುಮಾರ್ 5.5  ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ಇಂಗ್ಲಿಷ್ ಮಾತನಾಡುತ್ತಾನೆ. ವಸತಿ ಶಾಲೆಯ ಪ್ರಾಂಶುಪಾಲೆ ಸುನಿತಾ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ವ್ಯಕ್ತಿ ನಾಪತ್ತೆ
ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ, ಬೂದನೂರು ಗ್ರಾಮದ ಶಿವಣ್ಣ (45) ಎಂಬಾತ  ಮನೆಯಿಂದ ಹೂವಿನ ತೋಟಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
5 ಅಡಿ ಎತ್ತರ, ಕಪ್ಪು ಬಣ್ಣ, ಕೋಲುಮುಖ, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಆಕಾಶ್ ಕಲರ್ ಪಂಚೆ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿದ್ದರು ಎಂದು ಆತನ  ಪತ್ನಿ ಮಹದೇವಿ  ಕೊಣನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಆರೋಪಿಗೆ 5 ವರ್ಷ ಶಿಕ್ಷೆ
ಹಾಸನ: ಶ್ರೀಗಂಧದ ಮರ ಕಳ್ಳತನ ಮಾಡಿದ ಆರೋಪಿಗೆ ಇಲ್ಲಿನ   ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಶಿಕ್ಷೆ ವಿಧಿಸಿದೆ. ಅಶೋಕ ಎಂಬಾತ ಶಿಕ್ಷೆಗೆ ಒಳಗಾದವನು. ಈತ ಬೇಲೂರು ತಾಲ್ಲೂಕು ವ್ಯಾಪ್ತಿಗೆ ಸೇರಿದ ರಕ್ಷಿತಾರಣ್ಯ ಪ್ರದೇಶಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಶ್ರೀಗಂಧದ ಮರಗಳನ್ನು ಅಕ್ರಮವಾಗಿ ಕಡಿದು ಸಾಗಣೆ ಮಾಡುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ  ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ  ನಡೆಸಿದ  ನ್ಯಾಯಾಧೀಶರು ಆರೋಪವು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದ್ದು ಅಶೋಕನಿಗೆ 5 ವರ್ಷ ಶಿಕ್ಷೆ  ವಿಧಿಸಿದೆ.

ಕೊಲೆ: ಶವ ಪತ್ತೆ
ಹಾಸನ: ಅಪರಿಚಿತ ವ್ಯಕ್ತಿಯ ಕೊಲೆ ಮಾಡಿರುವುದು ಹೊಂಗೆರೆ ಗ್ರಾಮ ಸಮೀಪ ಶನಿವಾರ ಪತ್ತೆಯಾಗಿದೆ.
ತಾಲೂಕಿನ ಶಾಂತಿಗ್ರಾಮ ಹೋಬಳಿ, ಹೊಂಗೆರೆ ಗ್ರಾಮದ ಶಶಿಗೌಡ ತಮ್ಮ ಊರಿನ ರಾಜಣ್ಣ ಎಂಬುವರ ಮನೆ ಗೃಹಪ್ರವೇಶದ ನಿಮಿತ್ತ ದೇವರನ್ನು ಗ್ರಾಮಕ್ಕೆ ತರಲು ಹೊಂಗೆರೆ ಅಪ್ಪಾಜಿಗೌಡರ ಕಬ್ಬಿನ ಬೆಳೆಯಿರುವ ಜಮೀನಿನ ಪಕ್ಕ ಗಾಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯ ಮಧ್ಯದಲ್ಲಿ ಅಪರಿಚಿತ ಗಂಡಸಿನ ಶವ ಬಿದ್ದಿತ್ತು. ಹತ್ತಿರ ಹೋಗಿ ನೋಡಲಾಗಿ ತಿಳಿಯಿತು.ಶಶಿಗೌಡರ ದೂರಿನ ಮೇರೆಗೆ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ನಾಪತ್ತೆ
ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಸಂಕೋಡನಹಳ್ಳಿ ಗ್ರಾಮದ ಎಸ್.ಆರ್. ಹಾಲಪ್ಪ ಎಂಬುವರು ಅರಸೀಕೆರೆ ಸಾರಿಗೆ ಬಸ್‌ನಿಲ್ದಾಣದಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ.ಹಾಲಪ್ಪ 5.5 ಅಡಿ ಎತ್ತರ, ಕೆಂಪುಬಣ್ಣ, ಕೋಲುಮುಖ. ಮಗ ಶೇಖರಪ್ಪ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.