ಹಾಸನ

ಸ್ಥಳೀಯ ಸಂಸ್ಥೆ ಫಲಿತಾಂಶ ಜನಾದೇಶ ಅಲ್ಲ: ಸಿದ್ದು

Published On :

ಅರಕಲಗೂಡು: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ಜನಾದೇಶವೂ ಅಲ್ಲ, ದಿಕ್ಸೂಚಿಯೂ ಅಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಪಾದನೆ ಮಾಡಿದ್ದಾರೆ.
ಅರಕಲಗೂಡಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಒಟ್ಟು  ಶೇ.30 ರಷ್ಟು ನಗರ ಮತ್ತು ಪಟ್ಟಣ ಮತದಾರರು ಮಾತ್ರ ಸ್ಥಳೀಯ ಸಂಸ್ಥೆಗಳಲ್ಲಿ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಹೀಗಾಗಿ ಲೋಕಲ್‌ಬಾಡಿ ಚುನಾವಣೆ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಯಾಗದು. ಆದರೆ ಜನರ ನಾಡಿಮಿಡಿತ ಎನಿದೆ ಎಂಬುದು ಕೊಂಚ ಮಟ್ಟಿಗೆ ತಿಳಿಯಲಿದೆ ಎಂದರು.  
ಬೇರೆ ಬೇರೆ ಪಕ್ಷಗಳಿಂದ ಕಾಂಗ್ರೆಸ್‌ಗೆ ಬರುವವರೆಲ್ಲರನ್ನೂ ಸೇರಿಸಿಕೊಳ್ಳುವುದಿಲ್ಲ. ಯಾರು ಬೇಕು, ಯಾರು ಬೇಡ ಅನ್ನೋದನ್ನು ಹೈಕಮಾಂಡ್ ನಿರ್ಧರಿಸಲಿದೆ. ಈಗಾಗಲೇ ಕಾಂಗ್ರೆಸ್ ಸೇರುತ್ತೇವೆ ಎಂದು ಅರ್ಜಿ ಹಾಕಿರುವವರ ಹೆಸರುಗಳನ್ನು ಹೈಕಮಾಂಡ್‌ಗೆ ಕಳಿಸಲಾಗಿದ್ದು, ಈ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು ಅನುಮಾನ ಅನ್ನೋ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ನನ್ನನ್ನು ಸಿಎಂ ಮಾಡೋದು ದೇವೇಗೌಡರ ಕುಟುಂಬದವರಲ್ಲ, ನಮ್ಮ ಹೈಕಮಾಂಡ್ ಹಾಗೂ ಎಂಎಲ್‌ಎಗಳು ಎಂದು ತಿರುಗೇಟು ನೀಡಿದರು.
ಅವರ್ಯಾರು: ನಾನು ಸಿಎಂ ಆಗೋದು ಕಷ್ಟ ಎಂದು ಹೇಳೋಕೆ ಅವರ್ಯಾರು ಎಂದ ಸಿದ್ದರಾಮಯ್ಯ, ಅವರ ಹೇಳಿಕೆಗೆ ಕವಡೆ ಕಿಮ್ಮತ್ತಿನ ಬೆಲೆಯೂ ಇಲ್ಲ ಎಂದರು. ಜೆಡಿಎಸ್‌ನವರು ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದು, ಅದು ಸಾಧ್ಯವಿಲ್ಲ ಎಂದು ನುಡಿದರು. ಬಿಜೆಪಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿಲ್ಲ. ಇನ್ನು ಮೂರ್ನಾಲ್ಕು ಶಾಸಕರು ರಾಜೀನಾಮೆ ನೀಡಿದರೆ ಮಾತ್ರ ಬಿಜೆಪಿ ಸರ್ಕಾರ ಪತನವಾಗೋದು ನಿಶ್ಚಿತ. ಮೊದಲೇ ಕೋಮಾದಲ್ಲಿರುವ ಬಿಜೆಪಿ ಸರಕಾರ ಅದೇ ಬಿದ್ದು ಹೋಗಲಿ ಎಂದು ನಾವು ಸುಮ್ಮನಿದ್ದೇವೆ. ರಾಜ್ಯಪಾಲರ ಮೇಲೆ ಒತ್ತಡ ಹೇರಿ ಸತ್ತುಹೋಗಿರುವ ಸರ್ಕಾರ ಬೀಳಿಸಿದ ಅಪಖ್ಯಾತಿ ನಾವೇಕೆ ಹೊತ್ತುಕೊಳ್ಳಬೇಕು  ಎಂದು ಪ್ರಶ್ನಿಸಿದರು. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯಕ್ಕೆ ಬಿಜೆಪಿ ಸರ್ಕಾರವೇ ನೇರ ಹೊಣೆ. ಇದರ ಜವಾಬ್ದಾರಿಯನ್ನು ಸಿಎಂ ಶೆಟ್ಟರ್ ಹಾಗೂ ನೀರಾವರಿ ಸಚಿವ ಬೊಮ್ಮಾಯಿ ಅವರೇ ಹೊರಬೇಕು ಎಂದು ಹೇಳಿದರು. ಶಾಸಕ ಎ.ಮಂಜು, ಮುಖಂಡರಾದ ಪುಟ್ಟಸ್ವಾಮಿ, ಶೇಷೇಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.