ಹಾಸನ

104 ಯೋಜನೆ ಜಾರಿಗೆ ಚಿಂತನೆ: ಲಿಂಬಾವಳಿ

Published On :

ಹಾಸನ: 108ರ ಸೇವೆಯಂತೆ ನಂ.104ಕ್ಕೆ ಕರೆ ಮಾಡಿ ಸಣ್ಣಪುಟ್ಟ ಕಾಯಿಲೆಗಳಿಗೆ ವೈದ್ಯರಿಂದ ಸಲಹೆ ಪಡೆಯುವಂಥ ನೂತನ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಸಂಯುಕ್ತಾಶ್ರದಲ್ಲಿ ಶುಕ್ರವಾರ ನಗರದ ಸರ್ಕಾರಿ ಕಲಾ ಕಾಲೇಜಿನ ಮೈದಾನದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಉದ್ಘಾಟನಾ ಸಮಾರಂಭ ಹಾಗೂ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
 108ರ ಸೇವೆ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ಅದೇ ರೀತಿ ವೈದ್ಯಕೀಯ ಸೇವೆ ಪಡೆಯುವ 104ರ ಸೇವೆಯನ್ನು ರಾಜ್ಯಾದ್ಯಂತ ತಕ್ಷಣವೇ ಚಾಲನೆ ನೀಡಲು ತೀರ್ಮಾನಿಸಲಾಗಿದೆ ಎಂದರು.
 ಸಾಮೂಹಿಕ ಹೆರಿಗೆ ಕಾರ್ಯಕ್ರಮ ನಡೆಸುತ್ತಿದ್ದು, ಇದರಿಂದ ಶೇ.98ರಷ್ಟು ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಹೆರಿಗೆ ಆದ ನಂತರ ತಾಯಿ ಮತ್ತು ಮಗುವನ್ನು ಮನೆಗೆ ತಲುಪಿಸುವಂತಹ ಕಾರ್ಯಕ್ಕೆ  ಹ್ಯಾಪಿ ಡ್ರಾಪ್ ಎಂಬ ಹೆಸರಿನ ನೂತನ ಯೋಜನೆ ತರಲು ಚಿಂತನೆ ನಡೆದಿದೆ. ಈ ಮೂಲಕ ರಾಜ್ಯದ ಜನತೆಗಾಗಿ ನಾನಾ ರೀತಿಯ ಸೇವೆ ನಡೆಸಲು ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
  ಬಿಜೆಪಿ ಸರ್ಕಾರ ಉರುಳಿಸಲು ರಾಜಕೀಯ ನಾಯಕರು ನಾನಾ ಕಸರತ್ತು ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಅವಧಿ ಪೂರ್ಣಗೊಳಿಸುತ್ತದೆ. ಹಾಗೆಯೇ ನಾನಾ ಯೋಜನೆಗಳನ್ನು ಜಾರಿಗೆ ತರಲಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದು ಈ ಮುನ್ನ ಜಾರಿಗೊಳಿಸಿದ ಎಲ್ಲಾ ಯೋಜನೆಗಳನ್ನು ಮುಂದುವರಿಸಲಾಗುವುದು ಎಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.
ಮಹಿಳಾ ರೋಗಿ ಕರೆತಂದರೆ 350 ರು. ಸಹಾಯಧನ:   ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಆಶಾ ಕಾರ್ಯಕರ್ತರನ್ನು ಸಂಪೂರ್ಣವಾಗಿ ನೇಮಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಿಂದ ಆಶಾ ಕಾರ್ಯಕರ್ತೆಯರು ರೋಗಿಗಳನ್ನು ಕರೆತಂದು ಈ ಯೋಜನೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಬೇಕು. ಕಾರ್ಯಕರ್ತೆಯರು ಒಬ್ಬ ರೋಗಿಯನ್ನು ಕರೆತಂದರೆ 250 ರು. ಸಹಾಯ ಧನ ಹಾಗೂ ಮಹಿಳಾ ರೋಗಿಯನ್ನು ಕರೆತಂದರೆ 350 ರು. ನೀಡಲಾಗುವುದು. ಈ ಹೋಸ ಯೋಜನೆ ಬಗ್ಗೆ ಕೇಂದ್ರ ಆರೋಗ್ಯ ಮಂತ್ರಿ ಸಹಮತ ನೀಡಲಿಲ್ಲ. ಆದರೂ ನಾವು ನೂತನವಾಗಿ ಪ್ರಯೋಗ ಮಾಡಿದ್ದೇವೆ ಎಂದರು.
 ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲರೂ ಈ ಯೋಜನೆಯನ್ನು ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ. ಪ್ರಸ್ತುತ ರಾಜ್ಯದಲ್ಲಿ 132 ಆಸ್ಪತ್ರೆಗಳಲ್ಲಿ ಈ ಯೋಜನ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಟ್ಯಾಕ್ಸ್ ಪಾವತಿಸದಂತಹ ಎಪಿಎಲ್ ಕಾರ್ಡ್ದಾರರಿಗೂ ವಿಸ್ತರಿಸುವ ಪ್ರಯತ್ನ ಮಾಡಲು ಚಿಂತಿಸಲಾಗುತ್ತಿದೆ. ಇದರಿಂದ ಬಡ ರೋಗಿಗಳು ಒಂದೇ ಒಂದು ರು. ಖರ್ಚು ಇಲ್ಲದೇ ಈ ಯೋಜನೆ ಮೂಲಕ ಚಿಕಿತ್ಸೆ ಪಡೆಯಬಹುದು ಎಂದು ವಿವರಿಸಿದರು.
 ಶಾಸಕ ಎಚ್.ಎಸ್.ಪ್ರಕಾಶ್  ಮಾತನಾಡಿ, ಯಾವುದೇ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದರೂ ಅದು ಯಶಸ್ವಿಯಾಗುವುದು ಜನರಿಂದ ಮಾತ್ರ ಸಾಧ್ಯ. ಆದ್ದರಿಂದ ಯೋಜನೆಯ ಬಗ್ಗೆ ಮೊದಲು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಆಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ರೋಗಿಗಳಿಗೆ ಅನುಕೂಲವಾಗುವಂತೆ ಸ್ಥಳೀಯ ವೈದ್ಯರಿಗೆ ಈ ಯೋಜನೆಯಲ್ಲಿ ಚಿಕಿತ್ಸೆ ನೀಡುವಂತಹ ವ್ಯವಸ್ಥೆಯನ್ನು ಕಲ್ಪಿಸುವಂತಾಗಬೇಕು ಎಂದು ಹೇಳಿದರು.
ಇನ್ನು ಹೆಚ್ಚು ಹೆಚ್ಚು ಆರೋಗ್ಯ ಶಿಬಿರ:   ಅಂಗವಿಕಲರು ಗ್ರಾಮೀಣ ಪ್ರದೇಶದಿಂದ ಬಂದು ನಗರಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಅವರು ನಗರ ಪ್ರದೇಶಕ್ಕೆ ಬಂದ ಸಂದರ್ಭದಲ್ಲಿ ಸಂಬಂಧಪಟ್ಟ ವೈದ್ಯರ ಸಿಗದಿದ್ದಾಗ ವಾಪಸ್ ತೆರಳಬೇಕಾಗುತ್ತದೆ. ಅಂತವರಿಗೆ ತಮ್ಮ ತಮ್ಮ ಸ್ಥಳದಲ್ಲೇ ಚಿಕಿತ್ಸೆ ಪಡೆಯುವಂತಹ ವ್ಯವಸ್ಥೆಯಾಗಬೇಕು. ಇದೇ ರೀತಿ ಇನ್ನು ಹೆಚ್ಚು ಹೆಚ್ಚು ಆರೋಗ್ಯ ಶಿಬಿರಗಳು ನಡೆಯುವ ಮೂಲಕ ಬಡ ರೋಗಿಗಳಿಗೆ ಅನುಕೂಲವಾಗಬೇಕು ಎಂದು ಅಭಿಪ್ರಾಯಿಸಿದರು.
 ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಎಪಿಎಲ್ ಕಾರ್ಡ್ದಾರರಿಗೆ ಇಂಥ ಯೋಜನೆ ರೂಪಿಸಿರುವುದು ಉತ್ತಮ ಬೆಳವಣಿಗೆ. ನಿಜವಾದ ಬಡವರಿಗೆ ಇನ್ನೂ ಸರಿಯಾಗಿ ಬಿಪಿಎಲ್ ಕಾರ್ಡ್ಗಳು ಲಭ್ಯವಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತಹ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರಥಮವಾಗಿ ಬೆಂಗಳೂರಿನಲ್ಲಿ ಸಿಎಂ ಚಾಲನೆ:   ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕ ಡಾ.ಪಿ.ಬೋರೇಗೌಡ ಮಾತನಾಡಿ, ಈ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಚಾಲನೆ ನೀಡಿದರು. ನಂತರ ಮೈಸೂರಿನಲ್ಲಿ ಆನಂತರ ಹಾಸನದಲ್ಲಿ ಚಾಲನೆ ನೀಡಲಾಗಿದೆ.  ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ದಾರರು ಸದುಪಯೋಗ ಪಡಿಸಿಕೊಳ್ಳಬಹುದು. 1.5 ಲಕ್ಷ ರು.ನಿಂದ 2 ಲಕ್ಷ. ರು.ಗಳ ವರೆಗೆ ಬಡ ರೋಗಿಗಳು ಆಪರೇಷನ್ ಅಥವಾ ಚಿಕಿತ್ಸೆಯನ್ನು ಪಡೆಯಬಹುದು ಎಂದು ನುಡಿದರು.
 ದೇಶದಲ್ಲಿ ಗುಜರಾತ್ ಮಾದರಿ ರಾಜ್ಯ ಎಂದು ಹೇಳಲಾಗುತ್ತಿದೆ. ಆದರೆ ನಾವು ಅಲ್ಲಿ ಹೋಗಿ ನಾನಾ ಯೋಜನೆಗಳನ್ನು ನೋಡಿದ್ದೇವೆ. ಆದರೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಗುಜರಾತ್ನವರು ನೋಡಿಕೊಂಡು ಅಲ್ಲಿ ಸಹ ಇಂತಹ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ ಈ ಯೋಜನೆಗೆ ವರ್ಡ್
ಬ್ಯಾಂಕ್ ನಿಂದಲೂ ಸಹಾಯಧನ ಲಭ್ಯವಾಗುತ್ತಿದೆ. ಈಗಾಗಲೇ ಈ ಯೋಜನೆಯಡಿ 31 ಸಾವಿರ ರೋಗಿಗಳಿಗೆ 175 ಕೋಟಿ ರು.ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಉಚಿತ ಆರೋಗ್ಯ ತಪಾಸಣೆ: ಇದೇ ಸಂದರ್ಭದಲ್ಲಿ ಸಾವಿರಾರು ಮಂದಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ, ಔಷಧಿ ವಿತರಿಸಲಾಯಿತು. ಆರೋಗ್ಯ ಇಲಾಖೆ ವೈದ್ಯರು, ನರ್ಸ್ಗಳು ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
  ನಗರಸಭೆ ಅಧ್ಯಕ್ಷ ಸಿ.ಆರ್.ಶಂಕರ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಜಿಪಂ ಮುಖ್ಯ ಕಾರ್ಯರ್ನಿಹವಣಾಧಿಕಾರಿ ಕೆ.ಎಚ್.ನಾಗರಾಜ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನವಿಲೆ ಅಣ್ಣಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೃಷ್ಣೇಗೌಡ, ಡಿಎಚ್ಓ ಡಾ.ಶ್ಯಾಮಲಾ ದೇವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಂಕರ್, ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ರಾಜೇಗೌಡ, ಆಯುಷ್ ಮುಖ್ಯಸ್ಥ ನಂಜರಾಜ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.