ಅಂತೂ ಅನಿಷ್ಠ ಪದ್ಧತಿಯಿಂದ ಬಾಣಂತಿ, ಋತುಮತಿಯರಿಗೆ ಮುಕ್ತಿ
ಹಾಸನ: ಬಾಣಂತಿ ಹಾಗೂ ಋತುಮತಿ ಮಹಿಳೆಯರಿಗೆ ಗ್ರಾಮದಲ್ಲಿನ ಅನಿಷ್ಠ ಪದ್ಧತಿಯಿಂದ ಕೊನೆಗೂ ಮುಕ್ತಿ ಸಿಕ್ಕಿದೆ. ಏನೆಂದರೆ, ಹೆರಿಗೆಯಾದ ಬಾಣಂತಿ 7 ದಿನಗಳು ಮತ್ತು ಋತುಮತಿಯಾದ ಮಹಿಳೆಯರು 3 ದಿನ ಮನೆಯಲ್ಲಿ ಇರುವಂತಿಲ್ಲ. ಊರ ಹೊರಗೆ ಇರುವ ಗುಡಿಸಲೋ ಅಥವಾ ಪಾಳು ಮನೆಯಲ್ಲೋ ಇರಬೇಕು. ಅವರೆಡು ಇಲ್ಲದಿದ್ದರೆ ಗ್ರಾಮದವರೇ ಗುಡಿಸಲು ನಿರ್ಮಿಸಿ ಅಲ್ಲಿ ಮೂರು ದಿನಗಳವರೆಗೆ ಇರುವಂತೆ ಮಾಡುತ್ತಾರೆ. 3 ದಿನಗಳ ನಂತರವಷ್ಟೇ ಮನೆಗೆ ಕರೆಸಿಕೊಳ್ಳುತ್ತಾರೆ.
ಮಹಿಳೆಗೆ ಸಂತಾನ ಭಾಗ್ಯ ಪ್ರಾಪ್ತಿಯಾದರೆ ಇಡೀ ಕುಟುಂಬಕ್ಕೆ ಕುಟುಂಬವೇ ಸಂಭ್ರಮಿಸುವುದು ಸಹಜ. ಆದರೆ ಬಾಣಂತಿ ಮತ್ತು ಜಗತ್ತನ್ನು ಕಣ್ಣು ಬಿಟ್ಟು ನೋಡದ ಕಂದಮ್ಮನನ್ನು ಚಳಿ, ಮಳೆಯನ್ನೂ ಲೆಕ್ಕಿಸದೇ ಊರ ಹೊರಗೆ ಇರಿಸುವುದು ನಿಜಕ್ಕೂ ಅಮಾನವೀಯ ಏನ್ನಬೇಕೋ, ಇಲ್ಲಾ ದೇವರ ಹೆಸರಲ್ಲಿ ಕುರುಡು ಆಚರಣೆ ಎನ್ನಬೇಕೋ ತಿಳಿಯದಾಗಿತ್ತು.
ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಇಂತಹ ಅತ್ಯಂತ ವಿಚಿತ್ರವಾದ ಸಂಪ್ರದಾಯ ಆಚರಣೆಗೆ ಕೊನೆಗೂ ಕಡಿವಾಣ ಬಿದ್ದಿದೆ. ಅಂತೂ ಅನಿಷ್ಠ ಪದ್ಧತಿಯಿಂದ ಮುಕ್ತಿ ಸಿಕ್ಕಿದ್ದರಿಂದ ಗ್ರಾಮದ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಒಪ್ಪಿದ್ದಾರೆ: 2 ದಿನಗಳ ಹಿಂದೆ ತಾಲೂಕು ಆಡಳಿತ, ಪೊಲೀಸ್, ಸಮಾಜ ಕಲ್ಯಾಣ ಇಲಾಖೆ, ಇಬ್ಬರು ವೈದ್ಯರ ತಂಡ, ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಇತರರು ಸೇರಿಕೊಂಡು ಎನ್.ಗೊಲ್ಲರಹಟ್ಟಿ, ಕೆ.ಗೊಲ್ಲರಹಟ್ಟಿ ಹಾಗೂ ಅಜ್ಜನಹಟ್ಟಿಯ ಜನರನ್ನು ಸೇರಿಸಿ ಅವರಿಗೆ ಈ ಅನಿಷ್ಠ ಪದ್ಧತಿಯ ಬಗ್ಗೆ ಅರಿವು ಮೂಡಿಸಿದ್ದಾರೆ. ಹಿರಿಯರು ಹಾಗೂ ಗ್ರಾಮಸ್ಥರು ಈ ಅನಿಷ್ಠ ಪದ್ಧತಿ ಕೈಬಿಡುವುದಾಗಿ ಒಪ್ಪಿಕೊಂಡಿದ್ದಾರೆ.
ಗ್ರಾಮದಲ್ಲಿ ಸುಮಾರು 200 ಜನಸಂಖ್ಯೆಯಿದ್ದು, ಯಾದವ ಸಮುದಾಯ (ಗೊಲ್ಲರು) ದವರು ಹಿಂದಿನಿಂದ ಆಚರಿಸಿಕೊಂಡು ಬಂದ ಸಂಪ್ರದಾಯವನ್ನು ಹಾಗೆಯೇ ನಡೆಸಿಕೊಂಡು ಬರುತ್ತಿದ್ದರು. ಮಗುವಿಗೆ ಜನ್ಮನೀಡಿದ ಮಹಿಳೆ ಮನೆಬಿಟ್ಟು 7 ದಿನ ಗುಡಿಸಲಿನಲ್ಲಿ ನೆಲಸ ಬೇಕು. ಹಾಗೆಯೇ ಋತುಮತಿಯಾದ ಯುವತಿ ಅಥವಾ ಮುಟ್ಟಾದ ಮಹಿಳೆಯರಿಗೆ 3 ದಿನ ಊರ ಹೊರಗಿನ ಹಾಳು ಮನೆಯಲ್ಲೇ ಇರುವುದು ಕಡ್ಡಾಯವಾಗಿತ್ತು. ವಾಸ, ಊಟ, ವಸತಿ ಎಲ್ಲವೂ ಅಲ್ಲೇ. ಈ ಆಚರಣೆಯನ್ನು ಉಲ್ಲಂಘನೆ ಮಾಡಿದರೆ ದೇವರು ಕೇಡು ಮಾಡುತ್ತಾನೆ ಅನ್ನೋ ವಿಚಿತ್ರ ನಂಬಿಕೆಗೆ ಕಟ್ಟುಬಿದ್ದಿದ್ದರು. ಯಾದವ ಜನಾಂಗದವರು ನೆಲೆಸಿರುವ ಊರುಗಳಲ್ಲಿ ಆಚರಣೆಯಲ್ಲಿರುವ ಪದ್ಧತಿ ಇಂದಿನವರಿಗೆ ಒಂದು ರೀತಿ ಅಚ್ಚರಿಯಾಗಿ ಕಾಣುತ್ತಿತ್ತು. ವಿಚಿತ್ರವೆಂದರೇ ಮನೆಯಿಂದ ಹೊರಹಾಕಿದವರನ್ನು ಅಚಾನಕ್ ಆಗಿ ಮುಟ್ಟಿದವರು ಸ್ನಾನ ಮಾಡಿ ನಂತರ ಮನೆ ಪ್ರವೇಶ ಮಾಡಬೇಕಿತ್ತು.
ಊರಿನಲ್ಲೇ ಇದಕ್ಕೆ ವಿರೋಧ: ಆದ್ರೆ ಇದಕ್ಕೆ ಊರಿನಲ್ಲೇ ವಿರೋಧವಿದೆ. ಅಕ್ಷರಸ್ಥರು ಈ ಅನಿಷ್ಠ ಪದ್ಧತಿ ಹೋಗಲಾಡಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಆಚರಣೆಗೆ ಪರ ವಿರೋಧ ಅಭಿಪ್ರಾಯ ಇದ್ದರೂ, ಹಿರಿಯರು ಮಾತ್ರ ಇದನ್ನು ಬಿಡುವುದು ಅಸಾಧ್ಯ ಎನ್ನುತ್ತಿದ್ದರು. ನಾವು ಜುಂಜಪ್ಪ ಕುಲದವರು. ಆತನಿಗೆ ಸೂತಕ ಆಗುವುದಿಲ್ಲ ಎಂದು ವಾದಿಸುತ್ತಿದ್ದರು. ಅಂತೂ ಇದೀಗ ಅದಕ್ಕಿಲ್ಲಿ ಮುಕ್ತಿ ಸಿಕ್ಕಿದೆ.
- ಪಿ.ರವಿಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

