ಹಾಸನ

ಮೌನ ಮೆರವಣಿಗೆ ಮೂಲಕ ಆದಿಶ್ರೀಗೆ ಶ್ರದ್ಧಾಂಜಲಿ

Published On :

ಸಕಲೇಶಪುರ: ಜನರಲ್ಲಿ ಮೌಢ್ಯತೆ ಹುಟ್ಟುಹಾಕುವವರನ್ನು  ಒಪ್ಪದ ಸಂತ ಅವರಾಗಿದ್ದು, ಜಾತ್ಯತೀತ ಭಾವನೆಗೆ ಬೆಲೆ ಕೊಡುತ್ತಿದ್ದ ಸರ್ವ ಧರ್ಮ ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿ ಎಂದು ಕೆಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್.ಎಂ.ವಿಶ್ವನಾತ್ ಬಣ್ಣಿಸಿದರು. ತಾಲೂಕು ಒಕ್ಕಲಿಗರ ಸಂಘದಿಂದ ಪಟ್ಟಣದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಪೂಜ್ಯರು ರಾಹುಕಾಲ, ಯಮಕಂಟಕ ಹಾಗೂ ಗುಳಿಕಕಾಲ ಎಂಬ ಕಲ್ಪನೆಯನ್ನು ಖಡಾಖಂಡಿತವಾಗಿ ತಳ್ಳಿ ಹಾಕುತ್ತಿದ್ದರಾದರೂ, ಈ ವಿಚಾರ ಹೆಚ್ಚು ಪ್ರಚಾರಕ್ಕೆ ಬರಲಿಲ್ಲ. ಎಷ್ಟೋ ಕಾರ್ಯಕ್ರಮಗಳನ್ನು ಅವರು ರಾಹುಕಾಲದಲ್ಲಿ ಮಾಡಿದ ಉದಾಹರಣೆಗಳಿವೆ ಎಂದು ಹೇಳಿದರು.
 ಸ್ವಾಮೀಜಿ ತಮ್ಮ ಬೋಧನೆ, ಜಾತ್ಯತೀತ ಧೋರಣೆಗಳಿಂದ ದೇಶ ವಿದೇಶಗಳಲ್ಲಿ ಸಂಚಾರ ಹಮ್ಮಿಕೊಂಡು, ನೂರಾರು ವಿದ್ಯಾ ಸಂಸ್ಥೆಗಳನ್ನು ನಿರ್ಮಿಸಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅಕ್ಷರದಾನ ಮಾಡಿದರು. ಅನಾಥಾಶ್ರಮ, ವೃದ್ಧಾಶ್ರಮ, ನಿರ್ಗತಿಕರ ಸೇವಾ ಕೇಂದ್ರ, ಆಸ್ಪತ್ರೆಗಳು ಹಾಗೂ ರಾಜ್ಯವ್ಯಾಪಿ ಇರುವ 9 ಮಠಗಳನ್ನು ಸ್ಥಾಪಿಸಿದರು ಎಂದರು.
 ಅಲ್ಲದೇ ಸ್ವಾಮೀಜಿ ಹವ್ಯಾಸವೆಂಬಂತೆ ಅನೇಕ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ, ಆ ಮೂಲಕ ಬಡವರಿಗೆ ಉಚಿತ ಶಸ್ತ್ರಚಿಕಿತ್ಸೆ, ರಕ್ತದಾನ, ನೇತ್ರದಾನ ಹಾಗೂ ಸಾಧನ, ಸಲಕರಣೆಗಳನ್ನು ಉಚಿತವಾಗಿ ವಿತರಿಸುವ ಮಾದರಿ ಕಾರ್ಯಕ್ರಮ ನಡೆಸುತ್ತಿದ್ದರು. ಸೇವೆಯ ಹಲವು ಮಾರ್ಗಗಳ ನಡುವೆ ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸಿದ್ದರಿಂದ ಅವರು ಅಕಾಲಿಕವಾಗಿ ನಮ್ಮಿಂದ ದೂರಾದರು. ಅವರ ನೆನಪು ಚಿರಸ್ಥಾಯಿ ಎಂದು ನುಡಿದರು.
 ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸ್ವಾಮೀಜಿ ಮಾನವ ರೂಪದ ದೇವರು. ಅವರ ಸರಳತೆ, ಸೂಕ್ಷ್ಮ ಹಾಗೂ ತೂಕಯುಕ್ತ ಮಾತುಗಳು, ಜಾತ್ಯತೀತ ದೃಢ ನಿಲುವು, ತಾಳ್ಮೆ ಮೊದಲಾದವುಗಳಿಂದ ಧರ್ಮ ಭೇದ ರಹಿತ ಸಮಾಜ ಕಟ್ಟಲು ಹೊರಟ ಅವರ ಅಪರೂಪದ ವ್ಯಕ್ತಿತ್ವ ಅವರದ್ದು ಎಂದರು.
 ಪುರಸಭೆ ಅಧ್ಯಕ್ಷ ಎಚ್.ಎ.ಭಾಸ್ಕರ್, ವೀರಶೈವ ಮುಖಂಡ ಕಾಂತರಾಜ್, ದಲಿತ ಮುಖಂಡ ಡಿ.ಸಿ.ಸಣ್ಣಸ್ವಾಮಿ, ಜಾಮೀಯ ಮಸೀದಿ ಉಪಾಧ್ಯಕ್ಷ ಮಲ್ನಾಡ್ ಮಹಬೂಬ್, ಬಂಟರ ಸಂಘದ ಅಧ್ಯಕ್ಷೆ ಚನ್ನವೇಣಿ ಮೋಹನದಾಸ್‌ಶೆಟ್ಟಿ, ಬ್ರಾಹ್ಮಣ ಸಮಾಜದ ಸೂರ್ಯನಾರಾಯಣ, ಕೇರಳಾ ಸಮಾಜದ ಸಿ.ಪಿ.ಪ್ರಸನ್ನ ಕುಮಾರ್, ಬಿಜೆಪಿ ಮುಖಂಡ ಜೈಮಾರುತಿ ದೇವರಾಜು, ಜೆಡಿಎಸ್ ಮುಖಂಡ ಸ.ಬ.ಭಾಸ್ಕರ್, ಸಚಿನ್‌ಪ್ರಸಾದ್, ಬ್ಯಾಕರವಳ್ಳಿ ಜಯರಾಜ್ ವಿವಿಧ ಸಂಘ-ಸಂಸ್ಥೆ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.