ಹಾಸನ

'ಯೋಜನೆ ಪ್ರಾಮಾಣಿಕ ಜಾರಿಗೆ ಶ್ರಮಿಸಿ'

Published On :

ಹಾಸನ: ಬಿಪಿಎಲ್ ಕುಟುಂಬ ಸದಸ್ಯರು 7 ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅತ್ಯುತ್ತಮ ದರ್ಜೆಯ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಒದಗಿಸುವಂತಹ ನೂತನ ಯೋಜನೆ ವಾಜಪೇಯಿ ಆರೋಗ್ಯ ಶ್ರೀಯಾಗಿದೆ. ಇಂತಹ ಮಹತ್ತರ ಯೋಜನೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಶಸ್ತ್ರ ಚಿಕಿತ್ಸಕರು ಶ್ರಮಿಸಬೇಕು  ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
 ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಕುರಿತ ಮಾಹಿತಿ ನೀಡಲು ಶುಕ್ರವಾರ ಹಮ್ಮಿಕೊಂಡಿದ್ದ 8 ಜಿಲ್ಲೆಗಳ ಆರೋಗ್ಯಾಧಿಕಾರಿ ಮತ್ತು ಶಸ್ತ್ರ ಚಿಕಿತ್ಸಕರ ವಿಭಾಗೀಯ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
 ಹೃದಯ ರೋಗ, ಕ್ಯಾನ್ಸರ್, ಮೂತ್ರಪಿಂಡದ ತೊಂದರೆ, ನರರೋಗ, ಸುಟ್ಟಗಾಯ, ಅವಘಾತ, ನವಜಾತ ಶಿಶುಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸೌಲಭ್ಯ ನೀಡುವಂತಹ ಯೋಜನೆ ಇದಾಗಿದೆ ಎಂದು ಹೇಳಿದರು.
ಕಾರ್ಯಾಗಾರ:   8 ಜಿಲ್ಲೆಯಿಂದ ಬಂದಿರುವ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸರಿಗೆ ಈ ಯೋಜನೆಯ ಬಗ್ಗೆ ತರಬೇತಿ ಕಾರ್ಯಗಾರ ನಡೆಸುತ್ತಿರುವುದು ಅವರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮಾಡಿಸುವ ಸಲುವಾಗಿ ಎಂದರು. ಅಧಿಕಾರಿಗಳು ಸಂಪೂರ್ಣವಾಗಿ ತರಬೇತಿ ಪಡೆದು ಹೆಚ್ಚು ಜನರಿಗೆ ಈ ಯೋಜನೆಯ ಸೌಲಭ್ಯ ತಲುಪುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳಿಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.
 ಆರೋಗ್ಯ ಕ್ಷೇತ್ರದ ಮಹತ್ವಾಕಾಂಕ್ಷಿಯ ಖಾಸಗಿ ಸಹಭಾಗಿತ್ವ ಕಾರ್ಯಕ್ರಮ ಇದು. ಆರೋಗ್ಯ ತಪಾಸಣೆ ಶಿಬಿರಗಳ ಮೂಲಕ ರಾಜ್ಯದ ಮೂಲೆ ಮೂಲೆಯ ಗ್ರಾಮೀಣ ಪ್ರದೇಶದ ಜನರನ್ನು ಅತ್ಯಾಧುನಿಕ, ಅಂತಾರಷ್ಟ್ರೀಯ ಮಟ್ಟದ ಆಸ್ಪತ್ರೆಗಳ ಜೊತೆಗೆ ಬೆಸೆಯಲಾಗಿದೆ.
132 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ:   ರಾಜ್ಯದಲ್ಲಿ 132 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 402 ಬಗೆಯ ಶಸ್ತ್ರ ಚಿಕಿತ್ಸೆ ಸೌಲಭ್ಯ ಪಡೆಯಲು ಆವಕಾಶ ಕಲ್ಪಿಸಲಾಗಿದೆ. ಪ್ರತಿ ತಾಲೂಕು ಮತ್ತು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಿಂಗಳಿಗೊಮ್ಮೆ, ನಿರ್ಧಿಷ್ಟ ದಿನ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ ಸೂಕ್ತ ಆಸ್ಪತ್ರೆಗೆ ಕಳುಹಿಸಿ ಉಚಿತವಾಗಿ 1.5 ಲಕ್ಷ ರು.ನಿಂದ 2ಲಕ್ಷರು.ಗಳ ವರೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
 ನೋಂದಾಯಿತ ಆಸ್ಪತ್ರೆಗಳು ಈ ಯೋಜನೆಯಲ್ಲಿ ಬರುವ ರೋಗಿಗಳಿಗೆ ಪ್ರತ್ಯೇಕ ವಿಭಾಗಗಳ ಸೌಲಭ್ಯ, ತಾರತಮ್ಯವಿಲ್ಲದೆ ಚಿಕಿತ್ಸೆ ಮತ್ತು ಆರೈಕೆ ನೀಡುತ್ತವೆ.
ರೋಗಿಗಳನ್ನು ಸಂಪೂರ್ಣ ಆರೋಗ್ಯವಂತರಾಗಿ ಮಾಡಿ ಅವರು ಹೊಸ ಚೈತನ್ಯದಿಂದ ಹೊಸ ಬದುಕಿಗೆ ಕಾಲಿಡುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ರೋಗಿಗಳು ಹಣ ನೀಡದೆ ಆಸ್ಪತ್ರೆಯಿಂದ ಆರೋಗ್ಯ ಪಡೆದುಕೊಂಡು ಹೋಗುವ ಕಾರ್ಯಕ್ರಮ ಎಂದು ಹೇಳಿದರು.  ಈ ಯೋಜನೆಯಲ್ಲಿ ಶೇ.30ರಷ್ಟ ಹೆಚ್ಚಿನ ಪ್ರೋತ್ಸಾಹ ಧನ ವೈದ್ಯರಿಗೆ ಸಿಗುವುದರಿಂದ ಖಾಸಗಿಯಲ್ಲಿ ವೈದ್ಯರು ಹೋಗದೆ ಇಲ್ಲೆ ಹೆಚ್ಚಿನ ಆಸಕ್ತಿ ತೋರಬೇಕು. ಜಿಲ್ಲೆಯಲ್ಲಿ ಇರುವಂತಹ ಆಸ್ಪತ್ರೆಗಳು ಅತ್ಯುತ್ತಮ ದರ್ಜೆಯ, ಸ್ಪೆಷಾಲಿಟಿಯಾಗಿ ಪರಿವರ್ತಿಸಿ ಈ ಯೋಜನೆಯನ್ನು ಇಲ್ಲೇ ಜನರಿಗೆ ಸಿಗುವಂತೆ ಮಾಡುವಲ್ಲಿ ಶ್ರಮಿಸುವ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
8 ಜಿಲ್ಲೆಯ ಡಿಎಚ್ಓ ಮತ್ತು ಡಿಎಸ್:  ಮೈಸೂರು, ಕೊಡಗು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಿಕ್ಕಮಗಳೂರು, ಉಡುಪಿ,  ಚಾಮರಾಜನಗರ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.   ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಜಿಲ್ಲಾ ಎಸ್ಪಿ ಅಮಿತ್ ಸಿಂಗ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿನಾಗರಾಜ್, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ನ್ ಕಾರ್ಯಕಾರಿ ನಿರ್ದೇಶಕ ಡಾ.ಬೋರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.