ಹಾಸನ

ಹೊಳೆನರಸೀಪುರ ಸರ್ಕಾರಿ ಕಾಲೇಜಿನಲ್ಲಿ ಮಲ್ಟಿ ಜಿಮ್

Published On :

ಹೊಳೆನರಸೀಪುರ: ಸರ್ಕಾರಿ ಕಾಲೇಜು ಶಿಕ್ಷಣ ಎಂದರೆ ವಿದ್ಯಾರ್ಥಿಗಳು ಮೂಗು ಮುರಿಯುವ ಈ ಕಾಲದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವೆಲ್ಲವುಗಳಿಗೂ ಅಪವಾದವೆಂಬಂತೆ ಸಾಹಿತ್ಯ, ಶಿಕ್ಷಣ, ಕ್ರೀಡೆ ಹೀಗೆ ಹತ್ತು ಹಲವು ಕ್ರಿಯಾಶೀಲ ಚಟುವಟಿಕೆಗಳಿಂದ ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲಿಯೇ ಉತ್ತಮ ಸರ್ಕಾರಿ ಕಾಲೇಜಾಗಿ ರೂಪುಗೊಂಡಿದೆ.
 ಈಗ ಕಾಲೇಜಿನಲ್ಲಿ ಮಲ್ಟಿ ಜಿಮ್ ಆರಂಭಿಸುವ ಮೂಲಕ ಕ್ರೀಡಾ ವಿಭಾಗದಲ್ಲಿ ಮತ್ತೊಂದು ಸಾಧನೆಗೆ ಮುನ್ನುಡಿ ಬರೆಯಲು ಸಜ್ಜುಗೊಂಡಿದೆ.
  ಏನನ್ನಾದರೂ ಹೊಸತು ಸಾಧಿಸುವ ಕ್ರಿಯಾಶೀಲತೆ, ಹುಮ್ಮಸ್ಸು ಹಾಗೂ ಪ್ರೋತ್ಸಾಹವಿದ್ದಲ್ಲಿ ಸಾಧನೆಯ ಹಾದಿ ಕಷ್ಟವೆನಿಸದು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಇತ್ತೀಚೆಗಷ್ಟೆ ನಿವೃತ್ತಿ ಹೊಂದಿದ ಪ್ರೊ. ಟಿ.ಎಂ.ಪರಮೇಶ್ವರಯ್ಯ, ಪ್ರಸ್ತುತ ಪ್ರಾಂಶುಪಾಲ ಸದಾ ಕ್ರಿಯಾಶೀಲ ವ್ಯಕ್ತಿತ್ವದ ಪ್ರೊ. ಎಂ.ಬಿ.ಇರ್ಷಾದ್ ಹಾಗೂ ಉತ್ಸಾಹಿ ಮತ್ತು ಹೊಸ ಚಿಂತನೆಗೆ ತುಡಿಯುವ ಯುವ ದೈಹಿಕ ಶಿಕ್ಷಣ ಎಸ್.ಕಿರಣರಾವತ್ ಅವರುಗಳ ಶ್ರಮದ ಫಲವಾಗಿ ಕಾಲೇಜು ಮಲ್ಟಿ ಜಿಮ್ ಆರಂಭಕ್ಕೆ ಸಜ್ಜುಗೊಂಡಿದೆ.
ಸಾಧನೆಯ ಹಾದಿ:  ಶೈಕ್ಷಣಿಕವಾಗಿ ಕಾಲೇಜು ದಿನೇ ದಿನೇ ಉತ್ತಮ ಫಲಿತಾಂಶದೊಂದಿಗೆ ಸಾಧನೆಯ ಹಾದಿ ತುಳಿಯುತ್ತಿರುವ ಬೆನ್ನಲ್ಲೇ, ಕಾಲೇಜಿಯಿಂದ ಈಗಾಗಲೇ ವಿಶ್ವ ವಿದ್ಯಾನಿಲಯ ಮಟ್ಟದ ವಿವಿಧ ಕ್ರೀಡಾ ಕೂಟಗಳನ್ನು ನಡೆಸಿ ಯಶಸ್ವಿಯಾದ ಜೊತೆಗೆ ದೈಹಿಕ ಶಿಕ್ಷಣ ನಿರ್ದೇಶಕ ಕಿರಣರಾವತ್ ಆಸಕ್ತಿ ಫಲವಾಗಿ ಕಾಲೇಜಿನ ವಿದ್ಯಾರ್ಥಿಗಳ ದೈಹಿಕ ಸದೃಢತೆಗಾಗಿ ಮಲ್ಟಿ ಜಿಮ್ ಸಿದ್ದಗೊಂಡಿದ್ದು ಉದ್ಘಾಟನೆಗಾಗಿ ಕಾದಿದೆ.
ಮೊದಲ ಕಾಲೇಜು ಎಂಬ ಹೆಗ್ಗಳಿಕೆ:  ಯುಜಿಸಿಯಿಂದ 11ನೇ ಹಣಕಾಸು ಯೋಜನೆಯಡಿಯಲ್ಲಿ 1.50 ಲಕ್ಷ ರು. ವೆಚ್ಚದಲ್ಲಿ ಕಾಲೇಜಿನಲ್ಲಿ ಮಲ್ಟಿ ಜಿಮ್ ಅಳವಡಿಸಲಾಗಿದೆ.
  ಪದವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದಲ್ಲಿ ಅದರಲ್ಲೂ ಸರ್ಕಾರಿ ಕಾಲೇಜಿನಲ್ಲಿ ಈ ರೀತಿಯ ಮಲ್ಟಿ ಜಿಮ್ ಅಳವಡಿಸಿರುವುದು ಮೈಸೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾಯಶಹ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೂ ಇಲ್ಲಿನ ಕಾಲೇಜು ಪಾತ್ರವಾಗಲಿದೆ. ಪ್ರಸ್ತುತ ಅಳವಡಿಸಲಾಗಿರುವ ಮಲ್ಟಿ ಜಿಮ್‌ನಲ್ಲಿ ಏಕಕಾಲಕ್ಕೆ 15-20 ವಿದ್ಯಾರ್ಥಿಗಳು ಒಟ್ಟಿಗೆ ಜಿಮ್ ಬಳಸುವ ಅವಕಾಶ ಕಲ್ಪಿಸಲಾಗಿದೆ.
 ಕ್ಷೇತ್ರ ಶಾಸಕ ಎಚ್.ಡಿ.ರೇವಣ್ಣ ಅವರ ವಿಶೇಷ ಆಸಕ್ತಿಯ ಫಲವಾಗಿ ಕಾಲೇಜಿನ ಸುತ್ತಲೂ ಸುಮಾರು 4.50 ಲಕ್ಷ ರು. ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ಕಾಮಗಾರಿ ಕೂಡ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ.
 ಯುಜಿಸಿ 12ನೇ ಹಣಕಾಸು ಯೋಜನೆ ಆರಂಭಗೊಂಡ ಕೂಡಲೇ ಈ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನಾನಾ ಒಳಾಂಗಣ ಕ್ರೀಡೆಗಳಿಗೆ ಒದಗುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ಹಾಗೂ ಈಜು ಕೊಳವನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ನಿರ್ಮಿಸುವ ದೊಡ್‌ಡ ಕನಸನ್ನು ಕಾಲೇಜಿನ ಎಲ್ಲ ಆಡಳಿತ ಮಂಡಳಿಯು ಹೊಂದಿದೆ. ಈ ಒಳಾಂಗಣ ಕ್ರೀಡಾಂಗಣದ ಕನಸೇನಾದರೂ ಈಡೇರಿದಲ್ಲಿ ಪ್ರಾಯಶಃ  ಸರ್ಕಾರಿ ಕಾಲೇಜುಗಳ ಮಟ್ಟದಲ್ಲಿ ಇಲ್ಲಿನ ಕಾಲೇಜು ರಾಜ್ಯದಲ್ಲಿಯೇ ನಂ.1 ಆದರೂ ಅಚ್ಚರಿಯಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.