ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನು ಮನುಜ
ಅರಸೀಕೆರೆ: ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ, ತಪ್ಪನ್ನು ತಿದ್ದಿಕೊಂಡು ನಡೆಯುವುದು ನ್ಯಾಯ. ಹೀಗೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವ ಮೂಲಕ ಇತರರಿಗೆ ಮಾದರಿ ಆಗಬೇಕು ಎಂದು ಪಟ್ಟಣದ ಜೆಎಂಎಫ್ಸಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ದೇವಾನಂದ್ ಕೈದಿಗಳಿಗೆ ಕಿವಿಮಾತು ಹೇಳಿದ್ದಾರೆ.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಉಪ ಬಂಧಿಖಾನೆ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಪಟ್ಟಣದ ಉಪಬಂಧಿಖಾನೆಯಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹುಟ್ಟಿನಿಂದ ಯಾರು ಕೂಡ ಅಪರಾಧಿಗಳಲ್ಲ, ಸಮಯ, ಸನ್ನಿವೇಶಗಳು ಮನುಷ್ಯನನ್ನು ಅಪರಾಧಿ ಸ್ಥಾನಕ್ಕೆ ಅನಿರೀಕ್ಷಿತವಾಗಿ ತಂದು ನಿಲ್ಲಿಸಿದೆ ಎಂದರು.
ಅಂತಹ ಅಪರಾಧಿಗಳು ತಾವು ಮಾಡಿದ ತಪ್ಪನ್ನು ನ್ಯಾಯಾಲಯದ ಮುಂದೆ ಮನಪೂರಕ ಒಪ್ಪಿಕೊಳ್ಳುವ ಮೂಲಕ ಶಿಕ್ಷೆಯ ಮಟ್ಟದಲ್ಲಿ ಚೌಕಾಸಿ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಅಲ್ಲದೆ ಆರ್ಥಿಕವಾಗಿ ಹಿಂದುಳಿದಿರುವ ವಿಚಾರಣಾಧೀನ ಕೈದಿಗಳಿಗೆ ವಕೀಲರನ್ನು ನೇಮಕ ಮಾಡಿಕೊಡಲು ಸರ್ಕಾರ ಸಂವಿಧಾನ ಬದ್ಧ ಕಾನೂನು ಜಾರಿಗೆ ತಂದಿರುವುದರಿಂದ ತಾವುಗಳು ಇದರ ಪ್ರಯೋಜನಗಳನ್ನು ಪಡೆದು ಆರೋಪ ಮುಕ್ತರಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು. ವಕೀಲ ಮಹೇಶ್ವರಪ್ಪ ಮಾತನಾಡಿ, ಚೌಕಾಸಿ ಕಾನೂನು ಬಗ್ಗೆ ಮಾಹಿತಿ ನೀಡಿ ದೇಶದ ಐಕ್ಯತೆಗೆ ಭಂಗ ಉಂಟು ಮಾಡುವ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಅಲ್ಲದೆ 7 ವರ್ಷಗಳ ಮೇಲ್ಪಟ್ಟು ಶಿಕ್ಷೆಗೆ ಒಳಗಾಗುವ ಅಪರಾಧಕ್ಕೆ ಚೌಕಾಸಿ ಕಾನೂನಿನ ಪ್ರಯೋಜನ ಪಡೆಯಲು ಸಾಧ್ಯವಿಲ್ಲ, ಇನ್ನುಳಿದ ಎಲ್ಲಾ ರೀತಿಯ ಅಪರಾಧಕ್ಕೆ ಈ ಕಾನೂನಿನಲ್ಲಿ ಶಿಕ್ಷೆಯ ಮಟ್ಟದಲ್ಲಿ ಚೌಕಾಸಿ ಪಡೆದುಕೊಳ್ಳಲು ಸಂವಿಧಾನಬದ್ದ ಅವಕಾಶವಿದ್ದು, ಈ ಬಗ್ಗೆ ನ್ಯಾಯಾಲಯ ನೀಡುವ ತೀರ್ಪು ಕೂಡ ಅಂತಿಮವಾಗಿರುತ್ತದೆ ಎಂದರು.
ವಕೀಲ ವಿಜಯಕುಮಾರ್ ಮಾತನಾಡಿ, ಪೊಲೀಸರಿಂದ ದಸ್ತಗಿರಿಯಾದ ವ್ಯಕ್ತಿಗೆ ಇರುವ ಕಾನೂನು ಬಗ್ಗೆ ಮಾಹಿತಿ ನೀಡಿ ಪ್ರತಿಯೊಬ್ಬ ಪ್ರಜೆಗೂ ಕಾನೂನು ನೇರವು ನೀಡಲು ಸರ್ಕಾರ ಕಾನೂನು ಸಲಹಾ ಚಿಕಿತ್ಸಾ ಕೇಂದ್ರವನ್ನು ಪಟ್ಟಣದ ನ್ಯಾಯಾಲಯ ಅವರಣದಲ್ಲಿ ಸ್ಥಾಪಿಸಿದೆ, ವಾರದಲ್ಲಿ ಎರಡು ದಿನಗಳು ಮಾತ್ರ ತಾಲೂಕು ಕಚೇರಿಯಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಕಾನೂನು ನೆರವು ಪಡೆಯಲು ಇಚ್ಛಿಸುವರು ಈ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಕಾನೂನು ಸೇವೆಯನ್ನು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು. ಉಪ ಬಂಧಿಖಾನೆ ಅಧಿಕಾರಿ ಗೋವಿಂದಯ್ಯ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

