ಹಾಸನ

ಬಂದ ಪುಟ್ಟ ಹೋದ ಪುಟ್ಟ!

Published On :

ಹಾಸನ: ಅಪರೂಪಕ್ಕೆ ಒಮ್ಮೆ ಆರು ತಿಂಗಳ ನಂತರ ನಗರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರ ಒಟ್ಟಾರೆ  ಗಮನ 'ಬಂದ ಪುಟ್ಟ ಹೋದ ಪುಟ್ಟ' ಎಂಬಂತಾಯಿತು ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಕಳೆದ 25ರಂದು ಮಧ್ಯಾಹ್ನ ಬಂದು 26 ರಂದು ಮಧ್ಯಾಹ್ನ ಹೋದ ಸಚಿವರು ಗಣರಾಜ್ಯೋತ್ಸವ, ಕೆಲ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಆರೋಗ್ಯ ಇಲಾಖೆಯ ಕಾರ್ಯಾಗಾರ, ವಾಜಪೇಯಿ ಆರೋಗ್ಯಶ್ರೀ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಹೊರತು,  ಎಲ್ಲಾ ಇಲಾಖೆಗಳ ಉನ್ನತಾಧಿಕಾರಿ ಸಭೆ ಕರೆದು ಈಗಾಗಲೇ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ, ರಸ್ತೆಗಳ ದುರಸ್ತಿ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವ ಔದಾರ್ಯ ತೋರಲಿಲ್ಲ. ಬೇಲೂರು ಸಮೀಪ ಯಗಚಿ ಜಲಾಶಯದಿಂದ ಶೀತ ಪೀಡಿತವಾಗಿರುವ ಗ್ರಾಮಕ್ಕೆ ಭೇಟಿ ನೀಡಿದ್ದನ್ನು ಬಿಟ್ಟರೆ ಸಾರ್ವಜನಿಕವಾಗಿ ಇರುವ ಸಮಸ್ಯೆಗಳತ್ತ ಗಮನಹರಿಸಲೇ ಇಲ್ಲ.
ಅಭಿವೃದ್ಧಿ ವಿಚಾರ ಇರಲಿ.. ಜಿಲ್ಲಾದ್ಯಂತ ಬಿಜೆಪಿ ಹೇಳ ಹೆಸರಿಲ್ಲದಂತ ಪರಿಸ್ಥಿತಿ ತಲುಪುತ್ತಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಬಂದ ಮೇಲಂತೂ ಬಿಜೆಪಿಯನ್ನು ಜಿಲ್ಲೆಯಲ್ಲಿ ಆ ಶಿವನೇ ಕಾಪಾಡಬೇಕಪ್ಪಾ..ಎಂಬಂತಾಗಿದೆ. ಇದನ್ನಾದರೂ ಅರಿತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಮಾಡಿ ಪಕ್ಷ ಸಂಘಟನೆಯತ್ತನೂ ಗಮನಹರಿಸಲಿಲ್ಲ. ಪ್ರವಾಸಿ ಮಂದಿರಕ್ಕೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಾವಾಗಿಯೇ ಬಂದ ಕೆಲ ಮುಖಂಡರನ್ನು ಮಾತನಾಡಿಸಿದರೇ ಹೊರತು, ಎಲ್ಲರನ್ನು ಒಂದು ಕಡೆ ಸೇರಿಸಿ ಪಕ್ಷದ ಆಗು ಹೋಗುಗಳ ಬಗ್ಗೆ ವಿಚಾರ ವಿನಿಮಯ ಮಾಡಲಿಲ್ಲ ಎಂದು ಹೆಸರನ್ನು ಹೇಳಲೊಪ್ಪದ ಕೆಲ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಸಮಸ್ಯೆಗಳೇನು: ಹಾಸನ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ಬಹುತೇಕ ರಸ್ತೆಗಳು ಸಂಚರಿಸಲು ಯೋಗ್ಯವಾಗಿಲ್ಲ.
ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ಕೆರೆ, ಕಟ್ಟೆಗಳು ತುಂಬಿಲ್ಲ, ಪರಿಣಾಮ ಜನ- ಜಾನುವಾರುಗಳಿಗೆ ಕುಡಿಯಲ ನೀರಿಲ್ಲ.
ಇರುವ ಬೋರ್‌ವೆಲ್‌ಗಳ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್ ಪೂರೈಕೆ ಇಲ್ಲದೇ ಕಿರು ನೀರು ಸರಬರಾಜು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ.
ವಿದ್ಯುತ್ ಅಭಾವ ಜಿಲ್ಲಾದ್ಯಂತ ಸಿಕ್ಕಾಪಟ್ಟೆ ಇದೆ ಎಂದೇ ಹೇಳಬಹುದು. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಬಿತ್ತಿದ ಬೆಳೆಗಳು ಒಣಗುತ್ತಿವೆ. ಪ್ರತಿದಿನ ಕಾಡಾನೆಗಳು ಸಕಲೇಶಪುರ ಮತ್ತು ಆಲೂರು ತಾಲೂಕಿನಲ್ಲಿ ಬೆಳೆ ನಾಶ ಮಾಡುತ್ತಿವೆ.
ಗಮನ ನೀಡಲೇ ಇಲ್ಲ: ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆಯ ಆಗರವಾಗಿವೆ. ಬಡ ರೋಗಿಗಳಿಗೆ ನಿರೀಕ್ಷಿತ ರೀತಿಯಲ್ಲಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಹೀಗೆ ಜಿಲ್ಲೆಯಲ್ಲಿ ಹತ್ತಾರು ಸಮಸ್ಯೆಗಳು ಇದ್ದು, ಕುಡಿಯುವ ನೀರಿಗೆ ಹಣ ನೀಡಬೇಕೆಂದು ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ 29 ಕೋಟಿ ರು. ನೀಡಬೇಕೆಂದು ನಿರ್ಣಯ ಮಾಡಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಹಣ ಬಿಡುಗಡೆ ಮಾಡಿಸುವ ಬಗ್ಗೆಯೂ ಚಿಂತನೆ ಮಾಡಲಿಲ್ಲ. 6 ತಿಂಗಳ ನಂತರ ಉಸ್ತುವಾರಿ ಸಚಿವರು ಅಭಿವೃದ್ಧಿ ಮತ್ತಿತರ ಸಾರ್ವಜನಿಕ ಸಮಸ್ಯೆಗಳ ಕಿಂಚಿತ್ತಾದರೂ ಗಮನಹರಿಸದೆ ಹೋಗಿದ್ದು, ಸರಿಯಲ್ಲ ಎಂದು ನಾಗರಿಕ ವೇದಿಕೆ ಸಂಚಾಲಕ ಶಿವಣ್ಣ ತೀವ್ರವಾಗಿ ಖಂಡಿಸಿದ್ದಾರೆ.
ಸಕಾಲ ಯೋಜನೆ ಹೆಸರಿಗಷ್ಟೆ: ರಾಜ್ಯದಲ್ಲಿ ಬಿಜೆಪಿ ಮತ್ತು ಕೆಜಿಪಿ ನಡುವಿನ ವೈಷಮ್ಯದಿಂದ ರಾಜಕೀಯ ಅಸ್ಥಿರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಸಕಾಲ ಯೋಜನೆ ಹೆಸರಿಗಷ್ಟೆ. ಯಶಸ್ಸಿ ಅನುಷ್ಠಾನಕ್ಕಲ್ಲ ಎಂಬಂತಾಗಿದೆ ಈ ಜಿಲ್ಲೆಯಲ್ಲಿ. ನೆಮ್ಮದಿ ಕೇಂದ್ರಗಳಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ನೆರವು ಸಿಗುತ್ತಿಲ್ಲ. ವೃದ್ಧಾಪ್ಯ, ವಿಧವಾ ವೇತನ, ಪಡಿತರ ವಿತರಣೆ ಕಾರ್ಯವೂ ಪರಿಣಾಮಕಾರಿ ಜಾರಿಯಾಗುತ್ತಿಲ್ಲ.  
ಉಸ್ತುವಾರಿ ಸಚಿವರು ಎರಡು ದಿನಗಳಲ್ಲಿ ಒಂದೆರಡು ಗಂಟೆಯಾದರೂ ಅಧಿಕಾರಿಗಳೊಟ್ಟಿಗೆ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದರೇ ಸಾಕಷ್ಟು ಅನುಕೂಲವಾಗುತ್ತಿತ್ತು ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
-ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.