ಹಾಸನ

ಎಸ್ಸೆಂ ಕೃಷ್ಣ ಬಡಾವಣೆಗೆ ಆದಿಶ್ರೀ ಹೆಸರಿಡಲು ಆಗ್ರಹ

Published On :

ಹಾಸನ: ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಎಸ್.ಎಂ. ನಗರ ಬಡಾವಣೆಗೆ ಆದಿಚುಂಚನಗಿರಿ ಬಾಲಗಂಗಾಧನಾಥ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡುವುದು ಸೇರಿದಂತೆ  ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಒಕ್ಕಲಿಗ ಹಿತರಕ್ಷಣಾ ಸೇನೆ ಕಾರ್ಯಕರ್ತರು ಮಂಗಳವಾರ ಕಾರು ಹಾಗೂ ಬೈಕ್ ರ್ಯಾಲಿ, ರಸ್ತೆ ತಡೆ ನಡೆಸಿದರು.
ಒಕ್ಕಲಿಗ ಹಿತರಕ್ಷಣಾ ಸೇನೆ ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆಯಿಂದ ರ್ಯಾಲಿ ಪ್ರಾರಂಭಿಸಿ ಎನ್.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನನೆಗುದಿಗೆ ಬಿದ್ದಿದ್ದ ಎಸ್.ಎಂ.ಕೃಷ್ಣ ನಗರ ಬಡಾವಣೆ ನಿರ್ಮಾಣ ವಿಚಾರ ನ್ಯಾಯಾಲಯದಲ್ಲಿ ತೀರ್ಮಾನಗೊಂಡು ರೈತರ ಪರವಾಗಿ ತೀರ್ಪು ಬಂದಿದ್ದು,  ಈಗಾಗಲೇ ಎಸ್.ಎಂ.ಕೃಷ್ಣನಗರ ಎಂದು ನಾಮಕರಣಗೊಂಡಿದ್ದು, ಮತ್ತೊಂದು ಬಡಾವಣೆಯಾದ ದೊಡ್ಡಪುರ, ಬಿ.ಕಾಟೀಹಳ್ಳಿ, ಸಂಕೇನಹಳ್ಳಿ ಭಾಗದಲ್ಲಿ  ಮತ್ತೆ ಎಸ್.ಎಂ.ಕೃಷ್ಣನಗರ ಎಂದು ನಾಮಕರಣ ಮಾಡಿದ್ದಾರೆ.
ಇದರ ಬದಲು ಈ ಬಡಾವಣೆಗೆ ಡಾ.ಬಾಲಗಂಗಾಧರನಾಥ ನಗರ ಎಂದು ನಾಮಕರಣ ಮಾಡಬೇಕು ಎಂದ ಪ್ರತಿಭಟನಾಕಾರರು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹೇಮಾವತಿ, ಯಗಚಿ, ವಾಟೇಹೊಳೆ ಮೂರು ಜಲಾಶಯಗಳಿದ್ದರೂ, ನಗರದಲ್ಲಿ ಮಾತ್ರ ಕುಡಿಯಲು ನೀರಿಲ್ಲ. ಜಲಾಶಯಗಳಿಂದ ಕುಡಿಯುವ ನೀರನ್ನು ಒದಗಿಸುವಲ್ಲಿ ಅಧಿಕಾರಿಗಳು ಸಂರ್ಪೂಣವಾಗಿ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನ ಸಾಮಾನ್ಯರ ಕಷ್ಟ ಅರಿತು ಜಲಾಶಯಗಳಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ನಗರದಲ್ಲಿ ರಸ್ತೆಗಳು ಸರಿ ಇಲ್ಲದೆ ಹಲವಾರು ಅಪಘಾತಗಳು ಸಂಭವಿಸಿ ಸಾವು-ನೋವು ಹೆಚ್ಚಾಗುತ್ತಿದ್ದಾವೆ. ಈಗಾಗಲೇ ಕೈಗೊಂಡಿರುವಂತಹ ನಗರದೊಳಗಿನ ರಸ್ತೆ ಕಾಮಗಾರಿಗಳು ಕಳೆಪೆ ಮಟ್ಟದಿಂದ ಕೂಡಿದ್ದು, ಕಾಮಗಾರಿ ವಿಳಂಬವಾಗುತ್ತಿದೆ ಎಂದು ಕಿಡಿಕಾರಿದರು.  
ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಿಳೆಯರು ಸಮಾಜದಲ್ಲಿ ನೆಮ್ಮದಿಯಿಂದ ಬಾಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಮವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಮಹಿಳೆಯರು ನೆಮ್ಮದಿಯಿಂದ ಜೀವಿಸುವಂತೆ ಮಾಡಬೇಕು ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಸೇನೆ ಅಧ್ಯಕ್ಷ ಮೈಲನಹಳ್ಳಿ ಮಂಜೇಗೌಡ, ಗೋಪಾಲ್‌ಕೃಷ್ಣ, ರಂಗೇಗೌಡ, ಹೇಮಂತ್‌ಗೌಡ, ಪ್ರಭು, ಬಳಗಟ್ಟಿ ಲೋಕೇಶ್, ಮಂಜುನಾಥ, ಚಂದ್ರು, ರಾಜು, ಮಹೇಶ್, ಕುಮಾರ್, ಚಂದ್ರಮ್ಮ, ಹೇಮಲತಾ ಹಾಗೂ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.