ಹಾಸನ

ಪಕ್ಷ ಅಧಿಕಾರಕ್ಕೆ ತರಲು ಒಗ್ಗೂಡಿ ಕೆಲಸ ಮಾಡಿ: ಎಚ್. ವಿಶ್ವನಾಥ್

Published On :

ಆಲೂರು: ಭೇದ ಭಾವ ಮರೆತು ಪಕ್ಷದ ಕಾರ್ಯಕರ್ತರು ಒಗ್ಗೂಡಿ ಕೆಲಸಮಾಡಿ ಪಕ್ಷ ಬಲವರ್ಧನೆಗೊಳಿಸಿ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಸಂಸದ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ವಿಶ್ವನಾಥ್ ಕರೆನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗ ಕಾಲಕೂಡಿ ಬರುತ್ತಿದ್ದು ಜನರೇ ಚುನಾವಣೆಗೆ ಸಿಧ್ಧರಾಗಿದ್ದಾರೆ. ರಾಜ್ಯದಲ್ಲಿನ ಹೊಲಸು ರಾಜಕೀಯ ಕಂಡು ಜನರಲ್ಲಿ ಈ ಮನೋಭಾವನೆ ಬಂದಿದೆ. ಆದುದರಿಂದ ನಾವೆಲ್ಲ ಒಗ್ಗೂಡಿ ಈಗಲೇ ಚುನಾವಣೆಗೆ ಸಿದ್ದವಾಗಿರುವ ಜನರನ್ನು ನಮ್ಮ ಪಕ್ಷದ ಪರವಾಗುವಂತೆ ಮಾಡಬೇಕೆಂದರು.
ರಾಜ್ಯದಲ್ಲಿ ಭ್ರಷ್ಟ ಹಾಗೂ ದುರಾಡಳಿತ ನಡೆಯುತ್ತಿರುವುದಕ್ಕೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರೇ ಕಾರಣ. ಬಿಜೆಪಿಯವರಿಗೆ ಭ್ರಷ್ಟಾಚಾರ ಮಾಡುವುದನ್ನು ಕಲಿಸಿಕೊಟ್ಟವರು ಅವರೇ. ರಾಜ್ಯ ರಾಜಕಾರಣದ ದಿವಾಳಿತನಕ್ಕೆ ಕುಮಾರಸ್ವಾಮಿಯವರೇ ನೇರ ಹೊಣೆ ಎಂದರು.
ಕೆಜೆಪಿ ಪಕ್ಷ ನಿರ್ಮಾಣವಾಗಿರುವುದು ಜೆಡಿಎಸ್ ಪತನಕ್ಕೆ ಕಾರಣವಾಗುತ್ತದೆ. ಈ ಬಾರಿ ಜೆಡಿಎಸ್ 20 ಸ್ಥಾನಗಳನ್ನು ಸಹ ಗಳಿಸುವುದಿಲ್ಲ. ಹಳೇ ಮೈಸೂರು ಪ್ರಾಂತ್ಯದಲ್ಲಿ ಮಾತ್ರ ಜೆಡಿಎಸ್ ನಮಗೆ ಪ್ರತಿ ಸ್ಪರ್ಧೆಯಾಗಿದ್ದು ಇವರನ್ನು ಸೋಲಿಸಲು ಪ್ರತಿ ತಂತ್ರ ರೂಪಿಸುವುದನ್ನು ಬಿಟ್ಟು ನಮ್ಮ ಪಕ್ಷದವರು ಗರಬಡಿದವರಂತೆ ವರ್ತಿಸುತ್ತಿರುವುದು ವಿಷಾದನೀಯ.ಇತರೆ ಪಕ್ಷಗಳನ್ನು ಬಿಟ್ಟು ಕಾಂಗ್ರೆಸ್‌ಗೆ ಬರುತ್ತಿರುವವರನ್ನು ಗೌರವದಿಂದ ಸ್ವಾಗತಿಸಬೇಕೆಂದರು.   
ಪಕ್ಷ ಹಾಳಾಗಲು ಡಿಕೆಶಿ ಕಾರಣ: ತಾ. ಕಾಂಗ್ರೆಸ್ ಅಧ್ಯಕ್ಷ ಜಿ.ಆರ್. ರಂಗನಾಥ್ ಮಾತನಾಡಿ, ಜೆಡಿಎಸ್ ಮುಖಂಡ ದೇವೇಗೌಡರು ಜಿಲ್ಲೆಯ ಪ್ರತಿಯೊಂದು ಹಳ್ಳಿಹಳ್ಳಿಯಲ್ಲಿಯೂ ವ್ಯಾಪಕ ಪ್ರಚಾರ ಮಾಡುತ್ತಿದ್ದು ನಮ್ಮ ಮುಖಂಡರು ಕಾರ್ಯಕರ್ತರನ್ನು ಹುರಿದುಂಬಿಸುವುದನ್ನು ಬಿಟ್ಟು ತಮ್ಮ ಪಾಡಿಗೆ ತಾವಿರುವುದು ಕಾರ್ಯಕರ್ತರ ಅಸಮಾದಾನಕ್ಕೆ ಕಾರಣವಾಗಿದೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಪರ ನಿಂತಿದ್ದರೆ ನಾವಿಂದು ಅಧಿಕಾರ ಕಳೆದು ಕೊಳ್ಳುತ್ತಿರಲ್ಲಿಲ್ಲ. ಕೆಲ ರಾಜ್ಯ ಮಟ್ಟದ ನಾಯಕರು ನಾವು ಹೋಗಿ ಕೈಮುಗಿದರು ಮುಖ ತಿರುಗಿಸಿಕೊಂಡು ಹೋಗುತ್ತಾರೆ. ಅಂತಹವರಲ್ಲಿ ಅತ್ಯಂತ ದುರಹಂಕಾರಿ ನಾಯಕ ಎಂದರೆ ಡಿ.ಕೆ. ಶಿವಕುಮಾರ್. ಇಂತವರ ದುರಂಹಂಕಾರದ ಪರಮಾವಧಿಯಿಂದಲೇ ಪಕ್ಷ ಸಂಘಟನೆ ಸಾಧ್ಯವಾಗುತ್ತಿಲ್ಲವೆಂದು ತಮ್ಮ ನೋವು ತೋಡಿಕೊಂಡರು. ಮುಂದಿನ ದಿನಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯ ಬೇಕಾದರೆ ರಾಜ್ಯದ ಮುಖಂಡರು ಪ್ರತಿಯೊಂದು ಹಳ್ಳಿಗಳಲ್ಲಿ ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಬೇಕೆಂದರು. ಈ ಸಂದರ್ಭದಲ್ಲಿ ಮುಖಂಡರಾದ ಪಟೇಲ್ ಶಿವಪ್ಪ, ವಿಶ್ವನಾಥ್, ಧರ್ಮೇಗೌಡ, ಡಿ.ಸಿ.ಸಣ್ಣ ಸ್ವಾಮಿ, ಮುನಿಸ್ವಾಮಿ, ಹೆಚ್.ವಿ.ಶಿವರಾಮೇಗೌಡ, ಎಂ ಬಿ ವಿಜಯಕಾಂತ್, ನಿರ್ವಾಣೇಗೌಡ, ಶಾಂತ ಕೃಷ್ಣ ,ಇಸಾಕ್, ಟೀಕರಾಜ್, ಖಾಲಿದ್ ಪಾಷ ಹಾಗೂ ಬೊಮ್ಮರಾಯಿ ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.