ಮಂಜ್ರಾಬಾದ್ ಕೋಟೆ ಅಭಿವೃದ್ಧಿಗೆ ಮುಂದಾದ ಜಿಲ್ಲಾಡಳಿತ
ಸಕಲೇಶಪುರ: ತಾಲೂಕಿನ ಇತಿಹಾಸ ಪ್ರಸಿದ್ದ ಮಂಜ್ರಾಬಾದ್ ಕೋಟೆ ಅಭಿವೃದ್ಧಿಪಡಿಸಿ ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಹಲವು ಕ್ರಮಗಳ ಕೈಗೊಳ್ಳಲು ಮುಂದಾಗಿದೆ.
ತಾಲೂಕು ಕೇಂದ್ರದಿಂದ ಕೇವಲ 5 ಕಿ.ಮೀ. ಅಂತರದಲ್ಲಿ 18 ನೇ ಶತಮಾನದಲ್ಲಿ ನಿರ್ಮಿಸಲಾದ ಮಂಜ್ರಾ ಬಾದ್ ಕೋಟೆ ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ನಿರ್ಲಕ್ಷ್ಯದಿಂದ ಮೂಲ ಸೌಕರ್ಯಗಳಿಲ್ಲದೆ ಅಳಿವಿನ ಅಂಚಿನಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ಕೋಟೆ ರಕ್ಷಿಸುವಂತೆ ಹಾಗೂ ಇದನ್ನು ಅಂತಾ ರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಪರಿವರ್ತಿಸುವಂತೆ ಒತ್ತಾಯಿಸಿ ಚಳುವಳಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಮೋಹನ್ ರಾಜ್ ಕೋಟೆಯ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದ ಬಗ್ಗೆ ಮಾಹಿತಿ ಪಡೆದು ಇದರ ಅಭಿವೃದ್ಧಿಗಾಗಿ ಹೆಚ್ಚಿನ ಆಸಕ್ತಿ ವಹಿಸಿ, ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಕೋಟೆ ಸುತ್ತಲಿನ ಪರಿಸರವನ್ನು ಸುಂದರಗೊಳಿಸಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಿದ್ದಾರೆ.
ಪ್ರಥಮ ಹಂತವಾಗಿ ಈ ಯೋಜನೆಯ ವಿಶೇಷ ಅಧಿಕಾರಿಯನ್ನಾಗಿ ತಹಸೀಲ್ದಾರ್ ಡಾ.ಮಥಾಯಿ ಅವರನ್ನು ನೇಮಿಸಿದ್ದು, ಈ ಅಧಿಕಾರಿ ಕಳೆದ ಮೂರು ತಿಂಗಳಿನಲ್ಲಿ ನಾಲ್ಕು ಬಾರಿ ಇಲ್ಲಿಗೆ ಭೇಟಿ ನೀಡಿ ಪ್ರವಾಸಿಗರನ್ನು ಸೆಳೆಯಲು ಬೇಕಿರುವ ಸೌಕರ್ಯದ ಬಗ್ಗೆ ಅಧ್ಯಯನ ನಡೆಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪುರತಾತ್ವ ಇಲಾಖೆಯ ಸಮ್ಮತಿ ಪಡೆದು ಕೋಟೆಯೊಳಗೆ ಉದ್ಯಾನವನ ಹಾಗೂ ಕಾಲುದಾರಿ ನಿರ್ಮಿಸುವುದು, ಕೋಟೆ ಸುತ್ತಲಿನ ಸೊಬಗು ಸವಿಯಲು ಟೆಲಿಸ್ಕೋಪ್ ಸ್ಥಾಪಿಸುವುದು, ಕೋಟೆ ಮೆಟ್ಟಿಲು ಎರಡುಬದಿ ಹೂವಿನ ಗಿಡಗಳನ್ನು ನೆಡುವುದು ಕೋಟೆ ಕೆಳ ಭಾಗದಲ್ಲಿರುವ ಕಲ್ಯಾಣಿ ಸ್ವಚ್ಛಗೊಳಿಸಿ ಪೆಡಲ್ ಬೋಟ್ ವ್ಯವಸ್ಥೆ ಅಳವಡಿಸುವುದು, ಕಾವಲುಗಾರರನ್ನು ನೇಮಿಸುವ ಮೂಲಕ ಕೋಟೆ ಗೋಡೆ ಯನ್ನು ವಿಕೃತಿಗೊಳಿಸುವುದನ್ನು ನಿಷೇಧಿಸಿ ಸುಂದರವಾಗಿಡಲು ನಿರ್ಧರಿಸಲಾಗಿದೆ. ಜಿಲ್ಲಾಕೇಂದ್ರದ ಹುಣಸಿನಕೆರೆ ಹಾಗೂ ಮಂಜ್ರಾಭಾದ್ ಕೋಟೆ ಸೇರಿದಂತೆ ವಿವಿಧ ಸ್ಥಳಗಳ ಅಭಿವೃದ್ಧಿಗಾಗಿ 1.39 ಕೋಟಿ ರು. ಮೀಸಲಿದ್ದು. ರಾಜಧಾನಿಗೆ ತೆರಳಿ ಜೈವಿಕ ಇಲಾಖೆ ಹಿರಿಯ ಅಧಿಕಾರಿಗಳು,ಜಂಗಲ್ ಲಾಡ್ಜ್ ಅಧಿಕಾರಿಗಳು,ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮಥಾಯಿ, ಅಂತಿಮವಾಗಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರೊಂದಿಗೆ ಚರ್ಚಿಸಿದ್ದಾರೆ. ಅರವಿಂದ್ ಜಾಧವ್ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಂಜ್ರಾಬಾದ್ ಕೋಟೆ ಪರಿಶೀಲಿಸಲು ತಜ್ಞರೊಂದಿಗೆ ಆಗಮಿಸಲಿದ್ದು ನಂತರ ಯೋಜನೆಗೆ ಒಪ್ಪಿಗೆ ದೊರಕುವ ಭರವಸೆ ನೀಡಿದ್ದಾರೆ ಎಂಬುದು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳಿಂದ ತಿಳಿದುಬಂದಿದೆ. ಯೋಜನೆ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ಮುಖಖ್ಯಕಾರ್ಯದರ್ಶಿಗಳು ಆಸಕ್ತಿಹೊಂದಿದ್ದು ಇದಕ್ಕಾಗಿ ಕೋಟೆಯ ಸುತ್ತ ಒತ್ತುವರಿಯಾಗಿರುವ 18 ಎಕರೆ ಕಂದಾಯ ಭೂಮಿ ವಶಪಡಿಸಿಕೊಳ್ಳಲು ಸರ್ವೆ ಕಾರ್ಯ ಸಹ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

