ಹಾಸನ

ಜೆಡಿಎಸ್ ಸ್ವತಂತ್ರ 'ಹಾಸ'ನ; ಆಲೂರು ಕೆಜೆಪಿ ಜೋರು

Published On :

ಕ.ಪ್ರ. ವಾರ್ತೆ, ಹಾಸನ, ಮಾ. 11
ಹದಿನೇಳು ವರ್ಷಗಳ ನಂತರ ಹಾಸನ ನಗರಸಭೆಯನ್ನು ಜೆಡಿಎಸ್ ಸ್ವತಂತ್ರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೂ 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳಲ್ಲಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಪಡೆದಿದೆ. ಅಚ್ಚರಿ ಎಂದರೆ ಈ ಚುನಾವಣೆಯಲ್ಲಿ ಆಲೂರು ಪಟ್ಟಣ ಪಂಚಾಯ್ತಿಯನ್ನು ವಶ ಮಾಡಿಕೊಂಡಿರುವ ಕೆಜೆಪಿ ಹಾಸನ ನಗರಸಭೆಯಲ್ಲೂ ತನ್ನ ಖಾತೆ ತೆರೆಯುವ ಮೂಲಕ ಅಚ್ಚರಿ ಮೂಡಿಸಿದೆ.
ಉಳಿದಂತೆ ಕಾಂಗ್ರೆಸ್ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ಬಾರಿ ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಸಾಧನೆ ಮಾಡಿದೆ. ಆದರೂ ಒಂದೇ ಒಂದು ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಯಲ್ಲಾಗಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಕಳೆದ ಚುನಾವಣೆಯಲ್ಲಿ ಹಾಸನ ನಗರಸಭೆಯ 11 ವಾರ್ಡ್‌ಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಸಲ 9 ಸ್ಥಾನಗಳನ್ನು ಗೆದ್ದಿದ್ದು 2 ಸ್ಥಾನಗಳನ್ನು ಕಳೆದುಕೊಂಡಿದೆ. 16 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ 19 ಸ್ಥಾನಗಳನ್ನು  ಗೆದ್ದು, 3 ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ.
 ಬಿಜೆಪಿ ಈ ಬಾರಿಯೂ ಒಂದೇ ಸ್ಥಾನವನ್ನು ಪಡೆದಿದೆ. 6 ಸ್ಥಾನಗಳನ್ನು ಗೆದ್ದಿದ್ದ ಪಕ್ಷೇತರರ ಸಂಖ್ಯೆ 5 ಕ್ಕೆ ಇಳಿದಿದೆ. ಆದರೆ 5 ಪುರಸಭೆಗಳಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದೆ.
ಹಾಸನ ನಗರಸಭೆಯ 35 ವಾರ್ಡ್‌ಗಳಲ್ಲಿ ಜೆಡಿಎಸ್ 19, ಕಾಂಗ್ರೆಸ್ 9, ಪಕ್ಷೇತರರು 5, ಕೆಜಿಪಿ 1 ಮತ್ತು ಬಿಜೆಪಿ 1ರಲ್ಲಿ ಗೆದ್ದಿದೆ. ನಾಲ್ಕು ಬಾರಿ ಸತತವಾಗಿ ನಗರಸಭೆ ಪ್ರವೇಶಿಸಿದ್ದ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಮತ್ತೊಬ್ಬ ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಅಕ್ಬರ್ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರೆ, ಇನ್ನಿಬ್ಬರು ನಗರಸಭೆ ಮಾಜಿ ಅಧ್ಯಕ್ಷರಾದ ನೇತ್ರಾವತಿ ಗಿರೀಶ್, ಅಂಬಿಕಾ ರವಿಶಂಕರ್ ಮತ್ತು ಮಾಜಿ ಉಪಾಧ್ಯಕ್ಷೆ ಶ್ರೀವಿದ್ಯಾ ಒಂದೇ ಒಂದು ಮತ ಅಂತರದಿಂದ ಜೆಡಿಎಸ್‌ನಿಂದ ಪುನಾರಾಯ್ಕೆ ಆಗಿದ್ದಾರೆ.
ನಗಣ್ಯರಾದ ಪಕ್ಷೇತರರು: 1996 ಮತ್ತು 2007ರ ಚುನಾವಣೆಯಲ್ಲಿ ಹಾಸನ ನಗರಸಭೆಯ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪಕ್ಷೇತರರು ಈ ಬಾರಿ ನಗಣ್ಯರಾಗಿದ್ದಾರೆ. ಏಕೆಂದರೆ, ಜೆಡಿಎಸ್ 19 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಮೂಲಕ 17 ವರ್ಷಗಳ ನಂತರ ಏಕಾಂಗಿಯಾಗಿ ನಗರಸಭೆ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 2001 ರ ಚುನಾವಣೆಯಲ್ಲಿ ಕಾಂಗ್ರೆಸ್ 21 ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.
ಹೊಳೆನರಸೀಪುರ ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 16, ಕಾಂಗ್ರೆಸ್ 5 ಮತ್ತು ಇಬ್ಬರು ಪಕ್ಷೇತರರು ಗೆದ್ದಿದ್ದಾರೆ. 2007ರ ಚುನಾವಣೆಯಲ್ಲಿ ಎಲ್ಲಾ 23 ಸ್ಥಾನಗಳು ಜೆಡಿಎಸ್ ಪಾಲಾಗಿದ್ದವು.
ಚನ್ನರಾಯಪಟ್ಟಣ: ಪುರಸಭೆಯ 23 ಸ್ಥಾನಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ 8, ಪಕ್ಷೇತರರು 3 ರಲ್ಲಿ ಗೆದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ 20, ಕಾಂಗ್ರೆಸ್ ಕೇವಲ ಮೂರರಲ್ಲಿ ಗೆದ್ದಿತ್ತು.
 

ಸಕಲೇಶಪುರ: ಪುರಸಭೆ 23 ಸ್ಥಾನಗಳಲ್ಲಿ ಜೆಡಿಎಸ್ 11, ಕಾಂಗ್ರೆಸ್- 5, ಬಿಜೆಪಿ 2, ಕೆಜೆಪಿ 2 ಮತ್ತು ಇಬ್ಬರು ಪಕ್ಷೇತರು ಗೆದ್ದಿದ್ದಾರೆ. ಕಳೆದ ಬಾರಿ ಜೆಡಿಎಸ್ 19, ಕಾಂಗ್ರೆಸ್ -2, ಬಿಜೆಪಿ-1 ಮತ್ತು ಒಬ್ಬ ಪಕ್ಷೇತರ ಗೆದ್ದಿದ್ದರು.
ಬೇಲೂರು: ಪುರಸಭೆಯ 23 ವಾರ್ಡ್ ಗಳಲ್ಲಿ ಜೆಡಿಎಸ್ 12, ಕಾಂಗ್ರೆಸ್ -9, ಇಬ್ಬರು ಪಕ್ಷೇತರರು ಚುನಾಯಿತರಾಗಿದ್ದಾರೆ. ಹೋದ ಸಲ ಜೆಡಿಎಸ್ 13, ಕಾಂಗ್ರೆಸ್ 8 ಮತ್ತು ಇಬ್ಬರು ಪಕ್ಷೇತರರು ಗೆದ್ದಿದ್ದರು.
ಅರಸೀಕೆರೆ: ಪುರಸಭೆ 27 ವಾರ್ಡ್‌ಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 11 ಸ್ಥಾನಗಳನ್ನು ಪಡೆದಿದ್ದು, ಪಕ್ಷೇತರರು ನಾಲ್ಕು ಮತ್ತು ಕೆಜಿಪಿ 1 ಸ್ಥಾನದಲ್ಲಿ ಗೆದ್ದಿದೆ. ಹೋದ ಬಾರಿ ಜೆಡಿಎಸ್ 22, ಕಾಂಗ್ರೆಸ್ 2, ಬಿಜೆಪಿ 2 ಮತ್ತು ಪಕ್ಷೇತರ ಒಬ್ಬರು ಗೆದ್ದಿದ್ದರು.
ಆಲೂರು: ಪಟ್ಟಣ ಪಂಚಾಯ್ತಿ 11 ಸ್ಥಾನಗಳಲ್ಲಿ ಕೆಜೆಪಿ 6, ಜೆಡಿಎಸ್ 4 ಮತ್ತು ಪಕ್ಷೇತರರು ಒಬ್ಬರು ಗೆದ್ದಿದ್ದಾರೆ. ಕಳೆದ ಸಲ ಜೆಡಿಎಸ್ 5, ಕಾಂಗ್ರೆಸ್ 1, ಬಿಜೆಪಿ 2 ಮತ್ತು ಮೂವರು ಪಕ್ಷೇತರರು ಗೆದ್ದಿದ್ದರು.
ಅರಕಲಗೂಡು: ಪಟ್ಟಣ ಪಂಚಾಯ್ತಿಯ 15 ಸ್ಥಾನಗಳಲ್ಲಿ ಜೆಡಿಎಸ್ 5, ಕಾಂಗ್ರೆಸ್ 7, ಪಕ್ಷೇತರರು ಮೂವರು ಗೆದ್ದಿದ್ದಾರೆ. ಕಳೆದ ಬಾರಿ ಜೆಡಿಎಸ್ 8, ಕಾಂಗ್ರೆಸ್ 6 ಮತ್ತು ಪಕ್ಷೇತರು ಒಬ್ಬರು ಗೆದ್ದಿದ್ದರು.
ಜೆಡಿಎಸ್‌ನಲ್ಲಿ ಟಿಕೆಟ್ ಸಿಗದೇ ಬಂಡಾಯವಾಗಿ ಹಾಸನ ನಗರಸಭೆ 3ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಎಚ್.ಎಂ. ಸುರೇಶ್ ಕುಮಾರ್, 12 ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಎಚ್.ಎಸ್. ಪ್ರಸನ್ನಕುಮಾರ್, 13 ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಪಾರ್ವತಿ ಮೂರ್ತಿ, 33 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಸಮೀರ್ ಪಕ್ಷೇತರರಾಗಿ ಗೆದ್ದಿದ್ದಾರೆ. ಈಗ ಜೆಡಿಎಸ್ ಅಗತ್ಯದಷ್ಟು ಸ್ಥಾನಗಳನ್ನು ಗೆದ್ದಿರುವುದರಿಂದ ಬಂಡಾಯವಾಗಿ ನಿಂತು ಗೆದ್ದಿರುವ ಸದಸ್ಯರ ಮುಂದಿನ ನಿಲುವು ಏನಾಗಿರುತ್ತದೆ  ಎಂಬ ಕುತೂಹಲ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.