ಹಾಸನ

ಗೋವು ಸಂರಕ್ಷಣೆಯಲ್ಲಿ ತಾಲೂಕು ಆಡಳಿತ ವಿಫಲ

Published On :

ಕನ್ನಡಪ್ರಭವಾರ್ತೆ೤ ಹೊಳೆನರಸೀಪುರ೤ ಮಾ. 18
ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಇಲ್ಲಿನ ಜನ ಜಾನುವಾರುಗಳು ಬರದ ಬೇಗೆಯಿಂದ ತತ್ತರಿಸುತ್ತಿವೆ. ಸಂಬಂಧಿಸಿದ ಇಲಾಖೆಗಳು ಸಮರ್ಪಕವಾಗಿ ಗೋವುಗಳ ಸಂರಕ್ಷಣೆಗೆ ಮುಂದಾಗುತ್ತಿಲ್ಲ. ಗೋವುಗಳ ಸಂರಕ್ಷಣೆ ಮಾಡುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ನಂಜುಂಡಪ್ಪ ಆಕ್ಷೇಪಿಸಿದರು.
 ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಕೆ.ಎಂ.ಚಂದ್ರಮತಿ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಅರಕಲಗೂಡು ಕ್ಷೇತ್ರಕ್ಕೆ ಸೇರಿರುವ  ಹಳ್ಳೀಮೈಸೂರು ಹೋಬಳಿಯ ರಂಗೇನಹಳ್ಳಿ ಮತ್ತು ಗುಲಗಂಜಿಹಳ್ಳಿಗಳಲ್ಲಿ ಸರ್ಕಾರ ಗೋವುಗಳನ್ನು ಸಂರಕ್ಷಿಸುವ ಸಲುವಾಗಿ ಗೋಶಾಲೆಗಳನ್ನು ಆರಂಭಿಸಲಾಯಿತಾದರೂ ಗೋವುಗಳಿಗೆ ಸರಿಯಾಗಿ ಮೇವು ವಿತರಣೆ ಮಾಡುವಲ್ಲಿ ವಿಫಲವಾಯಿತೆಂದು ಆರೋಪಿಸಿದರು.
  ಇದಕ್ಕೆ ಉತ್ತರಿಸಿದ ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವರಾಜು ಮಾತನಾಡಿ ಜಿಲ್ಲಾಡಳಿತ ರಂಗೇನಹಳ್ಳಿ ಮತ್ತು ಗುಲಗಂಜಿಹಳ್ಳಿ ಗೋವು ಸಂರಕ್ಷಣಾ ಕೇಂದ್ರವನ್ನು ಆರಂಭಿಸಿತು. ರಂಗೇನಹಳ್ಳಿಯಲ್ಲಿ ಒಂದು ತಿಂಗಳ ಕಾಲ ಮೇವು ವಿತರಣೆ ನಡೆಯಿತು.
  ಆದರೆ ಗುಲಗಂಜಿಹಳ್ಳಿಯಲ್ಲಿ ಮಾತ್ರ ಕೇವಲ ಇಪ್ಪತ್ತು ದಿನಗಳು ನಡೆದು ಸಮಾಪ್ತಿಯಾಯಿತು. ಈ ಎರಡು ಕೇಂದ್ರದಲ್ಲಿ ಸಂರಕ್ಷಣೆ ಮತ್ತು ಮೇವು ವಿತರಣೆಗೆ ಸರಕಾರ ಇಪತ್ತು ಲಕ್ಷ ರು  ಮಾತ್ರ ಮೀಸಲಿಟ್ಟಿತೆಂದು ಮಾಹಿತಿ ನೀಡಿದರು.
 ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಬವಣೆ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಆದರೆ ವಿದ್ಯುತ್ ಇಲಾಖೆ ಮಾತ್ರ ಪಂಪ್‌ಸೆಟ್ಟುಗಳಿಗೆ ಅವಶ್ಯಕವಾಗಿ ಬೇಕಾದ ವಿದ್ಯುತ್ ವಿತರಿಸಲು ವಿಫಲವಾಗಿದೆ. ಈ ಸಭೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಬರಬೇಕೆಂದು ಹಲವು ಭಾರಿ ಲಿಖಿತವಾಗಿ ಮಾಹಿತಿ ನೀಡಿದ್ದರೂ ಯಾವೊಬ್ಬ ಅಧಿಕಾರಿಗಳು ಸಾಮಾನ್ಯ ಸಭೆಗೆ ಬರುತ್ತಿಲ್ಲ ಎಂದು  ಸದಸ್ಯರು ಆಕ್ಷೇಪಿಸಿ ಇಂತಹ ಅಧಿಕಾರಿ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
  ರೇಷ್ಮೆ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿ ತಾಲೂಕಿನಲ್ಲಿ ರೇಷ್ಮೆ ಬೆಳೆಯುವ ರೈತನಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ಕೆ.ಜಿ ರೇಷ್ಮೆಗೆ ನಲವತ್ತು ರೂಪಾಯಿ ನೀಡಲು ಮುಂದಾಗಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
 ಕಳೆದ ವಾರ ತಾಲುಕಿನ ನಿಡುವಣಿ ಗ್ರಾಮದಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಿರುಗಾಳಿ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.
 ಈ ಬಗ್ಗೆ ತೋಟಗಾರಿಕೆ ಇಲಾಖೆ ನಷ್ಟವುಂಟಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಉಪಾಧ್ಯಕ್ಷ ಹುಚ್ಚೇಗೌಡ ತೋಟಗಾರಿಕೆ ಇಲಾಖೆಯ ಕಿರಿಯ ಅಧಿಕಾರಿ ಚಂದ್ರಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡರು.
  ಶಿಕ್ಷಣ, ಸಮಾಜಕಲ್ಯಾಣ, ಅಬಕಾರಿ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು ಉಪಾಧ್ಯಕ್ಷ ಹುಚ್ಚೆಗೌಡ ಇದ್ದರು. ಇಓ ತಮ್ಮಣ್ಣಗೌಡ ಸಭೆಯ ಕಲಾಪ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.