ಹಾಸನ

ಲಾರಿ - ಕಾರು ಮುಖಾಮುಖಿ ಡಿಕ್ಕಿ: 6 ಸಾವು

Published On :

ಕ.ಪ್ರ.ವಾರ್ತೆ ಹಾಸನ  ಮಾ. 20
ನಗರದ ಹೊರವಲಯದಲ್ಲಿರುವ ದೇವರಾಯಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ  ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿಯ ಇಂದ್ರೇಶ್ (18), ಪ್ರದೀಪ್ (20), ಬೆಂಗಳೂರಿನ ಅಂಬರೀಷ್ (22), ಶಶಿಕುಮಾರ್ (23) ಕೋಲಾರ ಜಿಲ್ಲೆಯ ರಾಜೇಶ್ (24), ಮಧುಕರ್ (24) ಎಂಬುವರೇ ಸಾವನ್ನಪ್ಪಿದ ದುರ್ದೈವಿಗಳು.
ಬಾಳ್ಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿಯ ಪ್ರದೀಪ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಮಂಗಳವಾರ ರಾತ್ರಿ ಬೆಂಗಳೂರಿನಿಂದ ಟಾಟಾ ಇಂಡಿಕಾ ಕಾರಿನಲ್ಲಿ ಬಾಳ್ಳುಪೇಟೆಗೆ ಇಂದ್ರೇಶ್, ಅಂಬರೀಷ್, ಶಶಿಕುಮಾರ್, ರಾಜೇಶ್ ಮಧುಕರ್ ಹಾಗೂ ಪ್ರದೀಪ್ ಈ ಆರು ಮಂದಿ ಕಾರಿನಲ್ಲಿ ಬರುತ್ತಿದ್ದರು.
ಬೆಳಗಿನ ಜಾವ ಹಾಸನ ತಾಲೂಕಿನ ಕಂದಲೀ ಸಮೀಪದ ದೇವರಾಯಪಟ್ಟಣದ ಬಳಿ ಕಾರು ಮತ್ತು ಸಕಲೇಶಪುರದಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ.
ಮುಖಾ ಮುಖಿ ಡಿಕ್ಕಿ ಪರಿಣಾಮ ಸ್ಥಳದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನಂತರ ಉಳಿದವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಕೊನೆಯಲ್ಲಿ ಉಳಿದಿದ್ದ ಪ್ರದೀಪ್‌ರನ್ನು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ಸಾಗಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವನ್ನಪ್ಪಿದರ ಪೈಕಿ ಕೆಲವರು ಚಾಲಕರಾಗಿದ್ದು, ಮತ್ತೊಬ್ಬ ಇಂದ್ರೇಶ್ ಬೆಂಗಳೂರಿನಲ್ಲಿ ಒಂದು ತಿಂಗಳ ಹಿಂದಷ್ಟೇ ಗಾರ್ಮೇಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಕೆಲಸಕ್ಕೆ ಸೇರಿದ್ದ ನಂತರ ಮೊದಲ ಬಾರಿಗೆ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
ಪ್ರದೀಪ್ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಬೆಂಗಳೂರಿನಿಂದ ಬಾಳ್ಳುಪೇಟೆಗೆ ಬರುವಾಗ ಅಪಘಾತ ಸಂಭವಿಸಿದ್ದು, ಕಾರು ಬಹುತೇಕ ಜಖಂಗೊಂಡಿದ್ದು, ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕುಟುಂಬದವರ ಆಕ್ರೋಶ:  ಅಪಘಾತ ಸಂಭವಿಸಿ ಬಹಳ ಸಮಯ ಕಳೆದರೂ ಪೊಲೀಸರು ಸ್ಥಳಕ್ಕೆ ಆಗಮಿಸದ ಕಾರಣ ಮೃತ ಕುಟುಂಬವರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆಗೆ ಗಂಟೆಗಳೇ ಕಳೆದರೂ ಪೊಲೀಸರು ಆಗಮಿಸದ ಕಾರಣ ಪೋಷಕರು ಬೇಸರಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.