ಕೃಷಿ ವಿದ್ಯಾರ್ಥಿಗಳ ಮೇಲೆ ಗುರುತರ ಜವಾಬ್ದಾರಿ
ಕ.ಪ್ರವಾರ್ತೆ ಹಾಸನ ಮಾ. 23
ಪದವಿ ಮುಗಿಸಿ ಹೊರಹೋಗುತ್ತಿರುವ ವಿದ್ಯಾರ್ಥಿಗಳ ಮೇಲಿನ ಗುರುತರ ಜವಾಬ್ದಾರಿಯಿದ್ದು, ಅವರು ರೈತ ಸಮುದಾಯಕ್ಕೆ ಸೇವೆ ಸಲ್ಲಿಸುವಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಸಂಶೋಧನಾ ನಿರ್ದೇಶಕ ಡಾ.ಎಂ.ಎ.ಶಂಕರ್ ತಿಳಿಸಿದರು.
ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ನಡೆದ ಅಂತಿಮ ವರ್ಷದ ಕೃಷಿ, ಜೈವಿಕ ತಂತ್ರಜ್ಞಾನ ಹಾಗೂ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಪದವಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಬೀಳ್ಕೋಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅದರಲ್ಲೂ, ಕೃಷಿ ಮಹಾವಿದ್ಯಾಲಯ ಹಾಸನದ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರನ್ನು ಅತಿ ಹೆಚ್ಚು ಜೂನಿಯರ್ ರೀಸರ್ಚ್ ಫೆಲೋಶಿಫ್ ಪಡೆಯುವುದರ ಮೂಲಕ ದೇಶದಲ್ಲಿಯೇ ಎರಡನೇ ಸ್ಥಾನಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಹೊಸದಾಗಿ ಪದವಿ ಮುಗಿಸುತ್ತಿರುವ ವಿದ್ಯಾರ್ಥಿಗಳು ಸಹ ಹೆಚ್ಚಿನ ಪ್ರಯತ್ನದೊಂದಿಗೆ, ರಾಷ್ಟ್ರಮಟ್ಟದಲ್ಲಿ ಸ್ನಾತಕೊತ್ತರ ಪದವಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿ ದೇಶದಲ್ಲಿಯೇ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರನ್ನು ಉನ್ನತ ಸ್ಥಾನಕ್ಕೇರಿಸಲು ಅಧ್ಯಾಪಕರ ಮಾರ್ಗದರ್ಶನ ದೊಂದಿಗೆ ಶ್ರಮಿಸಲು ಕಿವಿಮಾತು ಹೇಳಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಣಕಾಸು ನಿಯಂತ್ರಾಣಾಧಿಕಾರಿ ಕೆ. ಸಿದ್ದಪ್ಪ ಮಾತನಾಡಿ, ಉತ್ತಮ ಪ್ರಜೆಗಳಾಗಿ ಸಮಾಜದ ಬೆಳವಣಿಗೆಯಲ್ಲಿ ಭಾಗಿಯಾಗಿ ರಾಷ್ಟ್ರ ನಿರ್ಮಾಣದಲ್ಲಿ ಕಾರ್ಯಪ್ರವೃತ್ತರಾಗಲು ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಪದವೀಧರರು ಹಾಗೂ ಪ್ರಸ್ತುತ ಹಾಸನ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎನ್. ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಂಡು, ನಾನಾ ನಾಗರಿಕ ಸೇವೆಗಳ ಹುದ್ದೆಗಳನ್ನು ಅಲಂಕರಿಸಲು ಪರಿಶ್ರಮಿಸಬೇಕೆಂದರು.
ನರಸಿಂಹಮೂರ್ತಿ ಶುಭ ಕೋರಿದರು. ಮುಖ್ಯ ಅತಿಥಿ ಜೈವಿಕ ಇಂಧನ ಉದ್ಯಾನದ ಮುಖ್ಯಸ್ಥ ಡಾ. ಬಾಲಕೃಷ್ಣೇಗೌಡರು ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯದಿಂದ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಹಾಸನ ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಎಲ್.ಮಂಜುನಾಥ್ ಮಾತನಾಡಿ, ಎಲ್ಲಾ ಕೃಷಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೃಷಿ ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಪದವಿ ಮುಗಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸುತ್ತಾ, ದೇಶದ ಆಹಾರ ಉತ್ಪಾದನೆ, ಸಂಸ್ಕರಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಅಪಾರ ಅವಕಾಶ ಇರುವುದರಿಂದ ಉದ್ಯಮಶೀಲ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಡಾ. ವೆಂಕಟೇಶ್ ಡಾ. ಉಮಾಶಂಕರ್, ಹಿರಿಯ ಪ್ರಾಧ್ಯಾಪಕ ಡಾ. ಮಹಬಲೇಶ್ವರ ಹೆಗಡೆ, ಡಾ. ತ್ಯಾಗರಾಜ್, ಡಾ. ವೆಂಕಯ್ಯ, ಹಾಸನ, ಕಂದಲಿ, ಮಡೇನೂರಿನ ಕೃಷಿ ಸಂಶೋಧನಾ ಕೇಂದ್ರ, ಜೈವಿಕ ಇಂಧನ ಉದ್ಯಾನ ವಿದ್ಯಾರ್ಥಿಗಳ ಪೋಷಕರಿದ್ದರು. ಶಶಿಕುಮಾರ್ ಪ್ರಾರ್ಥನೆ, ಅರ್ಪಿತ ಸ್ವಾಗತಿಸಿದರು. ಕೆ.ಶೃತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

