ಹಾಸನ

ಹಾಸ್ಟೆಲ್‌ಗಳಲ್ಲಿ ಬಯೋವುಟ್ರಿಕ್ ವ್ಯವಸ್ಥೆ

Published On :

-ಪಿ.ರವಿಕುಮಾರ್
ಹಾಸನ: ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಇರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿ ನಡೆಯುವ ಅನ್ಯಾಯ, ಅವ್ಯವಹಾರಗಳನ್ನು ತಡೆಯಲು ಬಯೋವುಟ್ರಿಕ್ ಪದ್ಧತಿ  ಜಾರಿಗೊಳಿಸಲಾಗುತ್ತಿದೆ.
  ಪ್ರಥಮ ಬಾರಿಗೆ ಹಾಸನ ನಗರದ ಹಾಸ್ಟೆಲ್‌ನಲ್ಲಿ ಈ ಪದ್ದತಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದ್ದು, ಈ ಮೂಲಕ ಹಾಸ್ಟೆಲ್‌ಗಳಲ್ಲಿ ನಡೆಯುವ ಹಣ ದುರುಪಯೋಗಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.
  ಹಾಸ್ಟೆಲ್‌ನ ವಿದ್ಯಾರ್ಥಿಗಳ ಹಾಜರಾತಿ ಬಗ್ಗೆ ಸುಳ್ಳು ದಾಖಲೆ ತೋರಿಸಿ ಸರ್ಕಾರದಿಂದ ಹಣ ದುರುಪಯೋಗ ಮಾಡಿಕೊಳ್ಳುವ ಬಗ್ಗೆ ನಿರಂತರ ಆರೋಪಗಳು ಕೇಳಿ ಬರುತ್ತಿತ್ತು.
  ಇದರಿಂದ ಹಾಸ್ಟೆಲ್‌ಗಳಲ್ಲಿ ಉತ್ತಮ ಭವಿಷ್ಯದ ಕನಸು ಹೊತ್ತು ಬರುವ ವಿದ್ಯಾರ್ಥಿಗಳಿಗೆ ಮೋಸವಾಗುವುದನ್ನು ಬಯೋವುಟ್ರಿಕ್ ಮೂಲಕ ತಡೆಯಬಹುದು ಎಂದು ನಿರ್ಧರಿಸಲಾಗಿದೆ.
  ಹಾಸನ ನಗರದ ಬಾಲಕಿಯರ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿ ಮೊದಲ ಬಾರಿಗೆ ಬಯೋವುಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಕಳೆದ 15 ದಿನದಿಂದ ಇದು ಜಾರಿಯಲಿದ್ದು, ಯಶಸ್ಸಿನ ಹಾದಿಯಲ್ಲಿದೆ.  ಇದರಿಂದಾಗಿ ಸುಳ್ಳು ಹಾಜರಾತಿ ತೋರಿಸಿ ಮೇಲ್ವಿಚಾರಕರು ಮತ್ತು ಇತರರು ಬಿಲ್ ಪಡೆಯುವುದಕ್ಕೆ  ಮುಂದಿನ ದಿನಗಳಲ್ಲಿ ಅವಕಾಶವಿಲ್ಲದಂತಾಗಿದೆ.
ಅದು ಹೇಗೆ : ವಿದ್ಯಾರ್ಥಿಗಳು ಊಟ ಮಾಡುವ ಮುನ್ನ ತಮ್ಮ ಬೆರಳು ಮುದ್ರೆ ಒತ್ತಬೇಕಾಗಿದೆ. ಎಷ್ಟು ಮಂದಿ ವಿದ್ಯಾರ್ಥಿಗಳ ಬೆರಳು ಮುದ್ರೆ ಇರುತ್ತದೋ ಅಷ್ಟು ಮಂದಿಗೆ ಮಾತ್ರ ಬಿಲ್‌ಗಳನ್ನು ಇನ್ನು ಮುಂದೆ ಪಾವತಿಸಲಾಗುತ್ತದೆ.
 ಬೆರಳು ಮುದ್ರೆ ಒತ್ತಿದ ವಿದ್ಯಾರ್ಥಿಗಳಿಗಷ್ಟೇ ಊಟ ಸಿದ್ಧಪಡಿಸಿ ಬಡಿಸಬೇಕಿರುವುದರಿಂದ ಸುಳ್ಳು ಹಾಜರಾತಿ ತೋರಿಸಿ ವಂಚಿಸುವ ಕಳ್ಳಜಾಲ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರು.ಗಳು ಉಳಿತಾಯವಾಗಲಿದೆ.
 ಅಷ್ಟೇ ಅಲ್ಲದೆ ಹೆಚ್ಚಿನದಾಗಿ ಅಡುಗೆ ತಯಾರಿಸಿ ಪೋಲಾಗುವ ಪರಿಯೇ ಈ ವ್ಯವಸ್ಥೆಯಲ್ಲಿ ಇರುವುದಿಲ್ಲ. ಎಷ್ಟು ಮಂದಿ ಬಯೋವುಟ್ರಿಕ್ ಯಂತ್ರದಲ್ಲಿ ಮುದ್ರೆ ಒತ್ತುತ್ತಾರೆ ಅಷ್ಟು ಮಂದಿಗೆ ಮಾತ್ರ ಅಡುಗೆ ತಯಾರಿಸ
ಬೇಕಾಗುತ್ತದೆ. ವಿದ್ಯಾರ್ಥಿಗಳು ಬೆರಳು ಮುದ್ರಿ ಒತ್ತಿದ ಕೂಡಲೇ ಬೆಂಗಳೂರಿನ ಸಮಾಜ ಕಲ್ಯಾಣ ಆಯುಕ್ತರ ಕಚೇರಿಯಲ್ಲಿ ಅದು ನೋಂದಣೆಯಾಗಲಿದೆ. ಮಾಸಿಕವಾಗಿ ವಿದ್ಯಾರ್ಥಿಗಳ ಎಷ್ಟು ಮಂದಿ ಊಟ ಮಾಡುತ್ತಾರೋ ಅಷ್ಟಕ್ಕೆ ಮಾತ್ರ ಬಿಲ್ ಪಾವತಿಸಲಾಗುತ್ತದೆ.
  ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದ್ದು, ಸರಿಯಾದ ಸಮಯಕ್ಕೆ ಊಟ ಮತ್ತು ತಿಂಡಿ ಲಭ್ಯವಾಗಲಿದೆ. ಇದರಿಂದ ಶಿಸ್ತು ಮತ್ತು ಸಮಯ ಪಾಲನೆಯಾಗಲಿದೆ. ಒಟ್ಟಾರೆ ಹೊಸ ಗಣಕೀಕೃತ ವ್ಯವಸ್ಥೆಯಿಂದ ಅವ್ಯವಸ್ಥೆಗಳು ತಪ್ಪಲಿದೆ. ಇದರಿಂದ ಉಳಿತಾಯವಾಗುವ ಸರ್ಕಾರದ ಹಣವನ್ನು ಬೇರೆಡೆ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

ಬಯೋವುಟ್ರಿಕ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ನಗರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅನುಷ್ಠಾನಗೊಳಿಸಿದ್ದು, ಸಮಾಜ ಕಲ್ಯಾಣ ಇಲಾಖೆ ದೂರದೃಷ್ಟಿ ಹೊಂದಿದೆ. ಕಳೆದ 15 ದಿನಗಳಿಂದ ಬಯೋವುಟ್ರಿಕ್ ವ್ಯವಸ್ಥೆ ಅಳವಡಿಸಿದ್ದು, ಅಕ್ರಮಗಳಿಗೆ ಕಡಿವಾಣ ಬಿದ್ದಂತಾಗಿದೆ.
- ಎನ್.ಆರ್.ಪುರುಷೋತ್ತಮ್, ತಾ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
 
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆ ಬಯೋವುಟ್ರಿಕ್ ವ್ಯವಸ್ಥೆ ಜಾರಿಗೊಳಿಸಿದ್ದು, ಇದರಿಂದ ಅಕ್ರಮಕ್ಕೆ ಕಡಿವಾಣ ಬೀಳಲಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ಬಯೋವುಟ್ರಿಕ್ ಯಂತ್ರಕ್ಕೆ ಬೆರಳು ಮುದ್ರೆ ಒತ್ತಿದಾಗ ಮಾತ್ರ ಊಟ ಲಭ್ಯವಾಗಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆ ಬೆಳೆಯಲು ಸಹಕಾರಿ.
- ಪಲ್ಲವಿ, ಬಿ.ಎ. ಅಂತಿಮ ವಿದ್ಯಾರ್ಥಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.