ಹಾಸನ

ಕ್ಷಯರೋಗ ಮುಕ್ತ ಸಮಾಜಕ್ಕೆ ಕೈಗೂಡಿಸಿ

Published On :

ಕ.ಪ್ರ.ವಾರ್ತೆ ಹಾಸನ ಮಾ 24
ಕ್ಷಯರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಎಲ್.ಶ್ಯಾಮಲಾದೇವಿ ಕರೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆ ಮುಂಭಾಗ ಸ್ವಾಭಿಮಾನ ಭವನದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ ಹಾಗೂ ಕ್ಯಾಥೋಲಿಕ್ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ವಯಂ ಸೇವಾ ಸಂಸ್ಥೆ, ಜೆಸಿಐ ಹಾಸನ ಸಂಜೀವಿನಿ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷಯರೋಗ ತಡೆಗಟ್ಟುವಲ್ಲಿ ಸರ್ಕಾರ ಹಾಗೂ ಖಾಸಗಿ ವೈದ್ಯರು ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕೈ ಜೋಡಿಸಿ ಜನರಲ್ಲಿ ಕ್ಷಯರೋಗ ಹಾಗೂ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ ಕ್ಷಯರೋಗ ಮುಕ್ತ ಸಮಾಜ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು.
ಡಾಡ್ಸ್ ಎಂಬ ಹೊಸ ಚಿಕಿತ್ಸೆ:  ಟಿಬಿ ಕಾಯಿಲೆ ಅಂದ್ರೆ ಹಿಂದೆ ಅವರನ್ನು ಅಸ್ಪೃಷ್ಯರಂತೆ ಕಾಣುತ್ತಿದ್ದರು. ಈಗ ಹೆದರಬೇಕಾಗಿಲ್ಲ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಇದಕ್ಕೆ ಚಿಕಿತ್ಸೆ ಲಭ್ಯವಿದೆ. ಡಾಡ್ಸ್ ಎಂಬ ಹೊಸ ಚಿಕಿತ್ಸೆಯಿಂದ ಕ್ಷಯರೋಗವನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ತರಲಾಗಿದೆ. ರೋಗಿಗಳಿರುವ ಸ್ಥಳಗಳಿಗೆ ಕಾರ್ಯಕರ್ತರು ಹೋಗಿ ಔಷಧಿ ವಿತರಿಸುತ್ತಾರೆ. ಎಚ್‌ಐವಿ ಜೊತೆಗೆ ಕ್ಷಯ ರೋಗವಿದ್ದಲ್ಲಿ ಮಾತ್ರ ಅದನ್ನು ನಿಯಂತ್ರಿಸಲು ಕಷ್ಟ ಸಾಧ್ಯವಾಗುತ್ತದೆ. ಕೇವಲ ಟಿಬಿ ಕಾಯಿಲೇ ಇದ್ದಲ್ಲಿ ರೋಗಿಗಳು ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಡಿ.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಕ್ಷಯರೋಗದ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು. ಕ್ಷಯ ಪೂರ್ಣ ನಿರ್ಮೂಲನೆಗೆ ಕೇವಲ ಸರ್ಕಾರವೊಂದರಿಂದಲೇ ಸಾಧ್ಯವಿಲ್ಲ, ಜೊತೆಗೆ ಖಾಸಗಿ ವೈದ್ಯರು ಮತ್ತು ಸರ್ಕಾರೇತರ ಸಂಸ್ಥೆಗಳು ಒಟ್ಟಾಗಿ ಕೈ ಜೋಡಿಸಿದರೆ ಮಾತ್ರ ನಿಯಂತ್ರಿಸಲು ಸಾಧ್ಯ ಎಂದು ನುಡಿದರು.
ಸೂಕ್ಷ್ಮ ರೋಗಾಣು ಕಂಡು ಹಿಡಿದ ದಿನ:  ವಿಜ್ಞಾನಿ ರಾಬರ್ಟ್ ಕಾಕ್ ಈ ದಿನ ಕ್ಷಯರೋಗಕ್ಕೆ ಕಾರಣವಾಗುವ ಸೂಕ್ಷ್ಮ ರೋಗಾಣುವನ್ನು ಕಂಡು ಹಿಡಿದ ದಿನ. ಕ್ಷಯರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ. ಕ್ಷಯರೋಗದ ಲಕ್ಷಣಗಳೆಂದರೆ ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತವಾದ ಕೆಮ್ಮು, ಜ್ವರ, ಅದರಲ್ಲೂ ಸಂಜೆ ವೇಳೆ ಹೆಚ್ಚಾಗಿರುವುದು. ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು. ಕಫದಲ್ಲಿ ರಕ್ತ ಬೀಳುವುದು ಮತ್ತು ಕುತ್ತಿಗೆಯಲ್ಲಿ ಹಾಗೂ ಕಂಕುಳಿನಲ್ಲಿ ಗಂಟುಗಳಾವುದಾಗಿದೆ ಎಂದು ವಿವರಿಸಿದರು.
ರೋಗದ ಬಗ್ಗೆ ಉಡಾಫೆ ಸಲ್ಲದು:  ಕ್ಷಯರೋಗ ದೇಹದ ಯಾವುದೇ ಭಾಗಕ್ಕಾದರೂ ಬರಬಹುದು. ಕ್ಷಯರೋಗವನ್ನು ಎರಡು ಬಾರಿ ಕಫ ಪರೀಕ್ಷೆ ಮಾಡುವುದರಿಂದ ಹಾಗೂ ಕ್ಷ ಕಿರಣ ಪರೀಕ್ಷೆ, ಬಯಾಪ್ಸಿ, ಎಫ್‌ಎನ್‌ಎಸಿ, ಸ್ಕ್ಯಾನಿಂಗ್ ಮಾಡುವುದರ ಮೂಲಕ ಕಂಡು ಹಿಡಿಯಬಹುದು. ಕ್ಷಯರೋಗದ ಚಿಕಿತ್ಸೆ 6 ರಿಂದ 8 ತಿಂಗಳಾಗಿದೆ. ನೇರ ನಿಗಾವಣಾ ಅಲ್ಪಾವಧಿ ಚಿಕಿತ್ಸೆಯನ್ನು ಆರೋಗ್ಯ ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ನಿಗದಿತ ಅವಧಿಯವರೆಗೆ ಪಡೆದರೆ ಕ್ಷಯರೋಗ ಪೂರ್ಣ ಗುಣಪಡಿಸಬಹುದು. ಕ್ಷಯರೋಗದ ಪರೀಕ್ಷೆ ಹಾಗೂ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿವಾಗಿ ದೊರೆಯುತ್ತದೆ. ಪ್ರತಿಯೊಬ್ಬರೂ ಈ ರೋಗದ ಬಗ್ಗೆ ಉಡಾಫೆ ಮಾಡದೆ ಮಾಹಿತಿ ಪಡೆದು ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. ಕ್ಷಯರೋಗ ತಜ್ಞ ಡಾ.ನಾರಾಯಣ್, ಹಿಮ್ಸ್ ಅಸೋಸಿಯೇಟ್ ಉಪನ್ಯಾಸಕ ಚನ್ನವೀರಪ್ಪ, ಸಹ ಪ್ರಾಧ್ಯಾಪಕ ಡಾ.ಪ್ರವೀಣ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಬ್ಬೀರ್ ಅಹಮದ್, ಸಮಾಜ ಸೇವಕ ಹಾಗೂ ಭಜರಂಗ ದಳದ ಅಂದಾನಿಗೌಡ, ಡಾ.ಪ್ರವೀಣ್ ಇತರರು ಇದ್ದರು.
ವಿಶ್ವ ಕ್ಷಯರೋಗ ಅರಿವಿನ ಜಾಥಾ:  ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಕ್ಷಯ ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.