ಅಕ್ಕ, ತಂಗಿ ಜತೆ ಪ್ರೇಮ-ವಿವಾಹ ರಂಗ..
ಕ.ಪ್ರ. ವಾರ್ತೆ ಹಾಸನ ಮಾ 25
ಅಕ್ಕ-ತಂಗಿಯರನ್ನು ಪರಸ್ಪರ ಪ್ರೀತಿಸುತ್ತಿದ್ದ ಯುವಕನೊಬ್ಬ ಸೋಮವಾರ ಇಬ್ಬರನ್ನೂ ವಿವಾಹವಾದ ಅಚ್ಚರಿಯ ಘಟನೆ ಬೇಲೂರು ತಾಲೂಕಿನ ಘಟ್ಟಹಳ್ಳಿಯಲ್ಲಿ ನಡೆದಿದೆ.
ಕಳೆದ 5 ವರ್ಷಗಳಿಂದ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಬಸವರಾಜ್ ಅಲಿಯಾಸ್ ರಂಗಸ್ವಾಮಿ ಎಂಬಾತ ಪಕ್ಕದ ಗ್ರಾಮದ ಗೋಣಿಸೋಮನಹಳ್ಳಿಯ ಅಕ್ಕ-ತಂಗಿಯರಾದ ರೇಣುಕಾ ಮತ್ತು ಜ್ಯೋತಿಯನ್ನು ವಿವಾಹವಾದ ಇಬ್ಬರ ಹೆಂಡಿರ ಮುದ್ದಿನ ಪತಿರಾಯ. ಅಚ್ಚರಿ ಅಂದ್ರೆ ಎರಡೂ ಮನೆಯವರು ಒಪ್ಪಿ ಶಾಸ್ತ್ರೋಕ್ತವಾಗಿ ಈ ತ್ರಿಕೋನ ಮದುವೆ ಮಾಡಿದ್ದಾರೆ. ಆದರೆ ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಸವರಾಜು ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೇಕರಿ ನಡೆಸುತ್ತಿದ್ದು, ಕಳೆದ 5 ವರ್ಷಗಳಿಂದ ರೇಣುಕಾ ಮತ್ತು ಜ್ಯೋತಿ ಇಬ್ಬರನ್ನು ಪ್ರೀತಿಸಲು ಆರಂಭಿಸಿದ. ಇಬ್ಬರೂ ರಂಗಸ್ವಾಮಿಗೆ ದೂರದ ಸಂಬಂಧಿಗಳು. ಈ ಕಾರಣದಿಂದಲೇ ಆಗಾಗ ಮನೆಗೆ ಹೋಗುತ್ತಿದ್ದ ರಂಗಸ್ವಾಮಿ ಇಬ್ಬರನ್ನೂ ಪ್ರೇಮಿಸಿದ. ತಮ್ಮಿಬ್ಬರನ್ನೂ ಪ್ರೀತಿಸುತ್ತಿದ್ದ ವಿಷಯ ಅಕ್ಕ-ತಂಗಿಯರಿಗೆ ಮೊದಲೇ ತಿಳಿದಿತ್ತು. ಈ ವಿಷಯ ಗ್ರಾಮದೆಲ್ಲೆಡೆ ಪ್ರಚಾರಗೊಂಡಿತ್ತು. ಎಲ್ಲರೊಂದಿಗೆ ಚರ್ಚಿಸಿ ಮದುವೆಯಾಗಲು ಅನುಮತಿ ಪಡೆದು, ಒಬ್ಬಳನ್ನು ವಿವಾಹವಾಗಲು ತೀರ್ಮಾನಿಸಿದ. ಆದರೆ ರೇಣುಕಾ, ಜ್ಯೋತಿ ತಮ್ಮಿಬ್ಬರನ್ನು ವಿವಾಹವಾಗುವಂತೆ ಹೇಳಿದರು. ಕೊನೆಗೆ ಸಹೋದರಿಯರಿಬ್ಬರನ್ನೂ ವಿವಾಹವಾಗುವಂತೆ ಒಪ್ಪಿ ಎರಡೂ ಮನೆಯವರು, ಹಿರಿಯರು ಸೋಮವಾರ ಮುಹೂರ್ತ ನಿಗದಿ ಪಡಿಸಿ ವಿವಾಹ ಮಾಡಿಸಿದರು. ಅನೇಕರು ವಿವಾಹಕ್ಕೆ ಸಾಕ್ಷಿಯಾದರು. ಸುದ್ದಿ ತಿಳಿದು ಗ್ರಾಮಕ್ಕೆ ಭೇಟಿ ನೀಡಿದ್ದ ಹಳೇಬೀಡು ಪೊಲೀಸರು ಹಿಂದೂ ವಿವಾಹ ಕಾಯ್ದೆ ಪ್ರಕಾರ 2 ಮದುವೆಯಾಗುವಂತಿಲ್ಲ ಎಂದು ತಿಳಿ ಹೇಳಿದ್ದಾರೆ. ಆದರೂ ಮೊದಲು ಅಕ್ಕನಿಗೆ ತಾಳಿಭಾಗ್ಯ ಕರುಣಿಸಿದ ರಂಗಸ್ವಾಮಿ ತಂಗಿಯನ್ನೂ ಮದುವೆಯಾಗಿದ್ದಾನೆ. ಪ್ರೀತಿಸಿ ವಿವಾಹವಾದ ಮೂವರು ಸಂತೋಷದಿಂದ ಸಂಸಾರ ಮಾಡಲಿ ಅನ್ನೋದು ಎಲ್ಲರ ಹಾರೈಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

