ಹಾಸನ

ಆಟೋ-ಬೈಕ್ ಮುಖಾಮುಖಿ; ಸವಾರ ಸಾವು

Published On :

ಕ.ಪ್ರ. ವಾರ್ತೆ ಅರಕಲಗೂಡು  ಮಾ. 25
ಆಟೋವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಂಗನಾಳು ಬಳಿಯ ಬಾಲಾಜಿನಗರದ ಕ್ರಾಸ್ ಬಳಿ ಭಾನುವಾರ ನಡೆದಿದೆ.
ಹಾಸನ ತಾಲೂಕಿನ ನಾಯಕರಹಳ್ಳಿ ಗ್ರಾಮದ ದರ್ಶನ್ (17) ಎಂಬಾತನೇ ಮೃತಪಟ್ಟ ದುರ್ದೈವಿ.
ಈತ ಬೈಕಿನಲ್ಲಿ ಬಸವನಹಳ್ಳಿ ಗ್ರಾಮದಿಂದ ಗಂಗನಾಳು ಗ್ರಾಮಕ್ಕೆ ಕೋಳಿ ತರಲು ಬೈಕ್ ಹಿಂಬದಿಯಲ್ಲಿ ದೊಡ್ಡಪ್ಪನ ಮಗ ಸಂದೀಪನನ್ನು ಕೂರಿಸಿಕೊಂಡು ಎಚ್‌ಎನ್ ಪುರ-ಅರಕಲಗೂಡು ರಸ್ತೆ ಗಂಗನಾಳು ಬಳಿ ಬಾಲಾಜಿನಗರ ಕ್ರಾಸ್ ಹತ್ತಿರ ಹೋಗುತ್ತಿದ್ದ.
ಆಗ ಗಂಗನಾಳು ಕಡೆಯಿಂದ ಬಂದ ಆಪೆ ಆಟೋ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದೆ. ಇದರಿಂದ ತೀವ್ರ ಗಾಯಗೊಂಡ ದರ್ಶನ್‌ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನದ ಸರ ದರೋಡೆ
ಹಾಸನ: ಬೈಕನ್ನು ಅಡ್ಡಗಟ್ಟಿ ವ್ಯಕ್ತಿಯೊಬ್ಬರ 80 ಸಾವಿರ ಮೌಲ್ಯದ ಚಿನ್ನದ ಸರ ದರೋಡೆ ಮಾಡಿರುವ ಘಟನೆ ನಗರದ ಎಸ್‌ಜೆಪಿ ರಸ್ತೆಯ ವಾಸವಿ ಸ್ಕೂಲ್ ಮುಂಭಾಗ ಭಾನುವಾರ ರಾತ್ರಿ ನಡೆದಿದೆ.
ಕುವೆಂಪು ನಗರದ 24 ನೇ ಕ್ರಾಸಿನ ಎಲ್‌ಐಜಿ 270 ರ ವಾಸಿ ಧೀಮಂತ್‌ಕುಮಾರ್ ಎಂಬವರೇ ಚಿನ್ನದ ಸರ ಕಳೆದುಕೊಂಡವರು. ಅವರು ಬೈಕಿನಲ್ಲಿ ಮನೆಗೆ ಹೋಗಲು ಎಸ್‌ಜೆಪಿ ರಸ್ತೆ ವಾಸವಿ ಸ್ಕೂಲ್ ಮುಂಭಾಗ ಹೋಗುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬೈಕ್ ಅಡ್ಡಗಟ್ಟಿ ಪಂಚಮುಖಿ ಸರ್ಕಲ್ ಹತ್ತಿರದವರೆಗೆ ಡ್ರಾಪ್ ಕೊಡಲು ಕೇಳಿದ್ದಾನೆ.
ಆತನನ್ನು ಕೂರಿಸಿಕೊಂಡು ಸ್ವಲ್ಪ ದೂರ ಮುಂದೆ ಹೋಗುತ್ತಿದ್ದಂತೆ ಹಿಂದೆ ಕುಳಿತ್ತಿದ್ದ ಅಪರಿಚಿತ ವ್ಯಕ್ತಿಯು ಕಲ್ಲನ್ನು ತೋರಿಸಿ ಬೈಕನ್ನು ನಿಲ್ಲಿಸುವಂತೆ ಹೇಳಿ ಕೊರಳಲ್ಲಿದ್ದ ಚಿನ್ನದ ಚೈನ್ ಕೇಳಿದ್ದಾನೆ.
ಧೀಮಂತ್ ಕುಮಾರ್ ಅವರು ಕೊಡಲು ಒಪ್ಪದಿದ್ದಾಗ ಅಪರಿಚಿತ ವ್ಯಕ್ತಿಯು ಕಲ್ಲಿನಿಂದ ತಲೆಗೆ ಹೊಡೆದು ಕೊರಳಿನಲ್ಲಿದ್ದ 38 ಗ್ರಾಂ ತೂಕದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಕತ್ತಲಲ್ಲಿ ಪರಾರಿಯಾಗಿದ್ದಾನೆ ಎಂದು ಧೀಮಂತ್ ಕುಮಾರ್ ಅವರು ಬಡಾವಣೆ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿ, ಮಾರೇನಹಳ್ಳಿ ಗ್ರಾಮದ ಸಹಾದೇವ ಎಂಬವರ ಪುತ್ರಿ ಸೌಮ್ಯ  (19) ಮನೆಯಿಂದ ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.
5.6  ಅಡಿ ಎತ್ತರ, ಕೆಂಪು ಮೈ ಬಣ್ಣ, ಅಂತಿಮ ವರ್ಷದ ಬಿಬಿಎಂ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಮತ್ತು ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ಆಕೆಯ ತಂದೆ ಸಹಾದೇವ ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ ಸವಾರನಿಗೆ ಗಾಯ
ಬೇಲೂರು: ಪಟ್ಟಣದ ಸಕಲೇಶಪುರ ರಸ್ತೆಯ ವಿಷ್ಣುಸಮುದ್ರ ಕೆರೆ ಏರಿಯ ತಿರುವಿನ ಮಸೀದಿ ಬಳಿ ಲಾರಿ ಮತ್ತು ಬೈಕ್ ನಡುವೆ ಭಾನುವಾರ ಡಿಕ್ಕಿ ಸಂಭವಿಸಿ ಬೈಕ್ ಸವಾರನಿಗೆ ಪೆಟ್ಟು ಬಿದ್ದಿದ್ದು ಗಾಯಾಳು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಕಲೇಶಪುರ ಕಡೆಯಿಂದ ಬೇಲೂರು ಕಡೆಗೆ ಬರುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಬೇಲೂರಿನ ಚನ್ನಕೇಶವನಗರದ ಪೈಂಟರ್ ತೌಸಿಫ್ ಎಂಬಾತ ಗಾಯಗೊಂಡಿದ್ದಾನೆ. ಬೈಕ್, ಲಾರಿಯ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಗಿದೆ.
ಆದರೆ ಗಾಯಾಳು ಲಾರಿಯ ಮಧ್ಯಬಾಗದಿಂದ ಹೊರಬಂದು ನಡೆದುಕೊಂಡೆ ಆಸ್ಪತ್ರೆಗೆ ಹೋಗಿದ್ದು ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೆದೆಗೆ ಬೆಂಕಿ; ಅಪಾರ ನಷ್ಟ
ಹೊಳೆನರಸೀಪುರ: ಜಮೀನಿನಲ್ಲಿದ್ದ ಬತ್ತದ ಹುಲ್ಲಿನ ಮೆದೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮವಾಗಿ 5 ಎಕರೆಯಷ್ಟು ಪ್ರದೇಶದಲ್ಲಿನ 1ಲಕ್ಷ ಮೌಲ್ಯದ ಹುಲ್ಲು ನಾಶವಾಗಿರುವ ಘಟನೆ ತಾಲೂಕಿನ ಹಳ್ಳೀಮೈಸೂರು ಹೋಬಳಿಗೆ ಸೇರಿದ ಕಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಪಾಲಾಕ್ಷಪ್ಪ ಎಂಬವರಿಗೆ ಸೇರಿದ 5ಎಕರೆಯಷ್ಟು ಪ್ರದೇಶದಲ್ಲಿನ ಬತ್ತದ ಹುಲ್ಲಿಗೆ ಭಾನುವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಹುಲ್ಲಿನ ಮೆದೆಗೆ ಬೆಂಕಿ ಬಿದ್ದ ಕೂಡಲೇ ಪಟ್ಟಣದ ಅಗ್ನಿಶಾಮಕ ಇಲಾಖೆಗೆ ವಿಷಯ ಮುಟ್ಟಿಸಲಾಗಿ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಷ್ಟರಲ್ಲಿ ಹುಲ್ಲಿನ ಮೆದೆಯು ಬೆಂಕಿಗೆ ಆಹುತಿಯಾಗಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.