ಹಾಸನ

ತಾಲೂಕು ಆಡಳಿತದಿಂದ ಸಮಸ್ಯೆಗಳ ಸೃಷ್ಟಿ; ರೈತರ ಧರಣಿ

Published On :

ಕನ್ನಡಪ್ರಭ ವಾರ್ತೆ ಹಾಸನ  ಮಾ. 25
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ತೀವ್ರ ತೊಂದರೆ, ಜಾನುವಾರುಗಳಿಗೆ ಮೇವಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನೇಕ ರೀತಿಯಲ್ಲಿ ತಾಲೂಕು ಆಡಳಿತ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ರೈತಸಂಘದ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.
ತಾಲೂಕು ರೈತಸಂಘ ಮತ್ತು ಹಸಿರುಸೇನೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪಟ್ಟಣದ ಪ್ರವಾಸಿಮಂದಿರದ ಆವರಣದಿಂದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯ ಮೂಲಕ ಮೆರವಣಿಗೆಯಲ್ಲಿ ನಡೆದ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಘೋಷಣೆಗಳನ್ನು ಕೂಗಿದರು.
ನಂತರ ತಾಲೂಕು ಕಚೇರಿಗೆ ಬಂದ ಅವರು ತಾಲೂಕು ಆಡಳಿತ ಮೂಲಭೂತ ಸಮಸ್ಯೆಗಳ ನಿವಾರಣೆ ಬಗ್ಗೆ ಸೂಕ್ತ ಪರಿಹಾರ ಕೈಗೊಳ್ಳುವ ಭರವಸೆ ನೀಡಬೇಕೆಂದು ಆಗ್ರಹಿಸಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ತಾಲೂಕು ಹಸಿರು ಸೇನೆ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಬರಗಾಲಕ್ಕೆ ಸಿಕ್ಕಿ ನಲುಗಿರುವ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ದನಕರುಗಳಿಗೆ ಮೇವು ಇಲ್ಲದ ಪರಿಸ್ಥಿತಿ ಉಂಟಾಗಿದೆ. ಪ್ರತಿನಿತ್ಯದ ವಿದ್ಯುತ್ ಕಣ್ಣಾಮುಚ್ಚಾಲೆ ಆಟದಿಂದ ಆನೇಕ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿರುವ ಕಾರಣ ಸಮಸ್ಯೆಗಳು ಇನ್ನಷ್ಟು ತೀವ್ರವಾಗುತ್ತಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಗ್ರಾಮಾಂತರ ಪ್ರದೇಶದ ಪಡಿತರ ವಿತರಣೆ ಕಾರ್ಯ ಸರಿಯಾದ ಪ್ರಮಾಣದಲ್ಲಿ ನಡೆಯದೆ ಅನ್ಯಾಯ ಮಾಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಕಾರ್ಡ್‌ದಾರರು ಮತ್ತೆ ಮತ್ತೆ ಭಾವಚಿತ್ರಗಳನ್ನು ತೆಗೆಸುವ ಸೂಚನೆ ನೀಡಿ ಅನೇಕ ಜನರ ಪಡಿತರ ಚೀಟಿಗಳನ್ನು ತೆಗೆದು ಹಾಕುವ ಸಂಚನ್ನು ರೂಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ  ಪ್ರಸನ್ನಕುಮಾರ್ ಮಾತನಾಡಿ, ರೈತರಿಗೆ ಬೇಕಾದ ಬಿತ್ತನೆಬೀಜ, ರಸಗೊಬ್ಬರದ ಬೆಲೆಗಳು ಗಗನಕ್ಕೆ ಮುಟ್ಟಿದ್ದರು ಸರ್ಕಾರ ಕೈಕಟ್ಟಿ ಕುಳಿತು ರೈತ ವಿರೋಧಿ ನೀತಿ ಅನುಸರಿಸುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಲ್ಲದೆ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾಸುರಕ್ಷಾ ವೇತನ ಸೂಕ್ತ ಫಲಾನುಭವಿಗಳಿಗೆ ನೀಡದೆ ವಂಚನೆ ಮಾಡಿದೆ.
ವಾಸದ ದೃಢೀಕರಣ ಪತ್ರವನ್ನು ಪಡೆದುಕೊಳ್ಳಲು ರೈತರು ಇನ್ನಿಲ್ಲದ ತಾಪತ್ರಯ ಅನುಭವಿಸಿ ನೂರಾರು ರುಪಾಯಿ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಂತಹ ಹತ್ತಾರು ಸಮಸ್ಯೆಗಳನ್ನು ದಿನನಿತ್ಯ ಎದುರಿಸುತ್ತಿರುವ ರೈತರ ಸಂಕಷ್ಟಗಳಿಗೆ ತಾಲೂಕು ಆಡಳಿತ ತಕ್ಷಣ ಸ್ಪಂದಿಸುವ ಮೂಲಕ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಅವರು ಆಗ್ರಹಿಸಿದರು.
ತಹಸೀಲ್ದಾರ್ ಜಗದೀಶ್, ತಾಪಂ ಇಓ ಚಂದ್ರಶೇಖರ್, ಚೆಸ್ಕಾಂ ಇಲಾಖೆಯ ಎಇಇ ದೇವರಾಜು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿಪತ್ರ ಪಡೆದು ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿ ಮುಕ್ತಾಯಗೊಳಿಸಿದರು.
ರೈತ ಮುಖಂಡರಾದ ರಾಜ್ಯ ಸಂಚಾಲಕ ಆನೇಕೆರೆ ರವಿ, ಜಿಲ್ಲಾಧ್ಯಕ್ಷ ಹೊನ್ನಾವರ ಸಿದ್ದಪ್ಪ, ಹರಳಾಪುರ ಮಂಜು, ಕರಗುಂದ ಶಿವಲಿಂಗಪ್ಪ, ವಡೇರಹಳ್ಳಿ ಕಾಂತಪ್ಪ, ಬೋರನಕೊಪ್ಪಲು ಶಿವಲಿಂಗಪ್ಪ, ಸಿದ್ದಪ್ಪ, ಸ್ವಾಮಿ, ರವೀಶ್ ಬಾಬು, ಅಣ್ಣಾಯಕನಹಳ್ಳಿ ಶಿವಮೂರ್ತಿ, ಬಸವರಾಜು, ಮೇಳೇನಹಳ್ಳಿ ಸ್ವಾಮಿ, ಬಿ.ಡಿ.ಸಿದ್ದಪ್ಪ, ಜವನಹಳ್ಳಿ ನಿಂಗಪ್ಪ, ನೂರ್ ಉಲ್ಲಾಖಾನ್, ಬಸವಲಿಂಗಪ್ಪ, ನಹೀಮ್ಪಾಷ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.