ನಟ್ಟೆಕೆರೆಯಲ್ಲಿ ಕಳ್ಳಬಟ್ಟಿ ಮಾರಾಟ; ಕ್ರಮಕ್ಕೆ ಮಹಿಳೆಯರ ಆಗ್ರಹ
ಕ.ಪ್ರ. ವಾರ್ತೆ ಹಾಸನ ಮಾ. 25
ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೇಲೂರು ತಾಲೂಕಿನ ನಟ್ಟೆಕೆರೆ ಗ್ರಾಮದ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿ ಕೆ.ಜಿ.ಮೋಹನ್ ರಾಜ್ ಅವರಿಗೆ ಮನವಿ ನೀಡಿದರು.
ಬೇಲೂರು ತಾಲೂಕಿನ ಕಸಾಬಾ ಹೋಬಳಿಯ ನಟ್ಟೆಕೆರೆ ಗ್ರಾಮದಲ್ಲಿ ರವಿ, ವಿಶ್ವನಾಥ್, ರಂಗಯ್ಯ, ಸಣ್ಣತಮ್ಮ ಇವರು ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮ್ಮ ಗಂಡಂದಿರು ಎಲ್ಲಾ ಹಣವನ್ನು ಕುಡಿಯುವುದಕ್ಕೆ ವ್ಯಯ ಮಾಡಿ ಮನೆಗೆ ಬಂದು ಕುಟುಂಬದ ಸದಸ್ಯರಿಗೆಲ್ಲಾ ಅವ್ಯಾಚ ಪದಗಳಲ್ಲಿ ನಿಂದಿಸುತ್ತಿದ್ದಾರೆ ಎಂದು ದೂರಿದರು.
ಅಲ್ಲದೆ, ಸುತ್ತಮುತ್ತಲ ಗ್ರಾಮಗಳ ಗಂಡಸರು ಕುಡಿದು ಹತ್ತು ಹಲವು ಸಮಸ್ಯೆಗೆ ಕಾರಣರಾಗುತ್ತಿದ್ದಾರೆ. ಗ್ರಾಮಗಳಲ್ಲಿ ನೆಮ್ಮದಿ ಇಲ್ಲದಂತಾಗಿದ್ದು, ಜಗಳ, ಹೊಡೆದಾಟ ಮಾಮೂಲಾಗಿದೆ. ಹಲವು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡದರು.
ಪೊಲೀಸ್ ಇಲಾಖೆಯಾಗಲಿ ಹಾಗೂ ಅಬಕಾರಿ ಇಲಾಖೆ ಅಧಿಕಾರಿಯಾಗಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಲವು ಬಾರಿ ಸಂಬಂಧಪಟ್ಟಂತಹ ಇಲಾಖೆಗಳಿಗೆ ದೂರನ್ನು ನೀಡಿದ್ದರು ಸಹ ಈವರೆಗೂ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ದೂರಿದರು.
ಗ್ರಾಮದಲ್ಲಿ ಕಳ್ಳಬಟ್ಟಿ ಮಾರಾಟ ಹೆಚ್ಚಾಗಿರುವುದರಿಂದ ರಸ್ತೆಗಳಲ್ಲಿ ಮಹಿಳೆಯರು ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿತದ ಅಮಲಿನಲ್ಲಿ ಮಹಿಳೆಯರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ಈ ಬಗ್ಗೆ ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎಂದ ಅವರು, ಕೂಡಲೇ ಗ್ರಾಮ್ಕಕೆ ಬಂದು ಕಳ್ಳಬಟ್ಟಿ ಮಾರಾಟ ಮಾಡುತ್ತಿರುವವರು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಆರ್ಪಿಐ ಜಿಲ್ಲಾಧ್ಯಕ್ಷ ಕೆ.ಎಚ್.ಸತೀಶ್, ಆರ್.ಮರಿಜೋಸೇಫ್, ಗ್ರಾಮಸ್ಥರಾದ ಸಿದ್ಧಮ್ಮ, ಕವಿತಾ, ಲಕ್ಷ್ಮಿ, ನಾಗಮಣಿ, ಶಾಂತಮ್ಮ, ಸರೋಜ, ಸುಮಿತ್ರ, ಚಿಕ್ಕಮ್ಮ, ಕಲ್ಯಾಣಿ ಸೇರಿದಂತೆ ನಾನಾ ಸ್ತ್ರೀಶಕ್ತಿ ಸಂಘದ ಕಾರ್ಯಕರ್ತರು ಹಾಗೂ ಇತರರು ಇದ್ದರು.
ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ನಟ್ಟೆಕೆರೆ ಗ್ರಾಮಸ್ಥರ ದೂರನ್ನು ಸ್ವೀಕರಿಸಿ ಕೂಡಲೇ ಕಳ್ಳಬಟ್ಟಿ ಮಾರಾಟ ಮಾಡುತ್ತಿರುವವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

