ಮೈಸೂರು ವಿವಿಗೆ 33.17 ಕೋಟಿ ಕೊರತೆ ಬಜೆಟ್
ಕನ್ನಡಪ್ರಭ ವಾರ್ತೆ, ಮೈಸೂರು, ಮಾ.27
ಮೈಸೂರು ವಿಶ್ವವಿದ್ಯಾಲಯದ 33.17 ಕೋಟಿ ಕೊರತೆ ಆಯವ್ಯಯವನ್ನು ಬುಧವಾರ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರ ಅದ್ಯಕ್ಷತೆಯಲ್ಲಿ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ. ಎಂ. ಚಂದ್ರಕುಮಾರ್ ಮಂಡಿಸಿದರು.
ಈ ಸಾಲಿನಲ್ಲಿ ಯೋಜನೇತರ ವೆಚ್ಚ 191.28 ಕೋಟಿ ಎಂದು ಅಂದಾಜಿಸಿ, ಸರ್ಕಾರದಿಂದ 151.28 ಕೋಟಿ ಬ್ಲಾಕ್ ಅನುದಾನ ಕೋರಲಾಗಿತ್ತು. ಆದರೆ, ಸರ್ಕಾರ 105 ಕೋಟಿ ಮಾತ್ರ ನೀಡಿದೆ. ಅದರಂತೆ ಬಜೆಟ್ ತಯಾರಿಸಲಾಗಿದ್ದು, 144.05 ಕೋಟಿ ಆದಾಯ, 164.17 ಕೋಟಿ ವೆಚ್ಚ, ಆರಂಭಿಕ ಕೊರತೆ 13.04 ಕೋಟಿ ಸೇರಿ ಒಟ್ಟಾರೆ 33.17 ಕೋಟಿ ಕೊರತೆ ನಿರೀಕ್ಷಿಸಲಾಗಿದೆ. ಇದನ್ನು ಸಂಪನ್ಮೂಲ ಕ್ರೋಢೀಕರಣ ಮತ್ತು ಮಿತವ್ಯಯದ ಮೂಲಕ ಸರಿದೂಗಿಸಲಾಗುವುದು. ಸರ್ಕಾರ ಪೂರಕ ಅನುದಾನ ಬಿಡುಗಡೆ ಮಾಡಿದರೆ ಕೊರತೆ ನಿವಾರಣೆಯಾಗಬಹುದು ಎಂದು ಹೇಳಿದರು.
ವಿವಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಆಂತರಿಕ ಆದಾಯ ಹೆಚ್ಚಿಸಲು ದೂರಶಿಕ್ಷಣ ಕಾರ್ಯಕ್ರಮ ಜಾರಿ ಮಾಡಲು ಉದ್ದೇಶಿಸಲಾಗಿದೆ.
ಹೊಸ ಕಾರ್ಯಕ್ರಮಗಳು: 2016 ರಲ್ಲಿ ವಿವಿ ಶತಮಾನೋತ್ಸವ ಆಚರಿಸಿಕೊಳ್ಳುವುದರಿಂದ ವಿವಿಧ ಕಾರ್ಯಕ್ರಮ ರೂಪಿಸಲು ಈ ಸಾಲಿನಲ್ಲಿ 2 ಕೋಟಿ ಒದಗಿಸಲಾಗಿದೆ. ನೂತನ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರ ಮೂರು ಕಾರ್ಯಕ್ರಮಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ.
ಅವುಗಳೆಂದರೆ ಯುಜಿಸಿ ಪ್ರಾರಂಭಿಸಲು ಉದ್ದೇಶಿಸಿರುವ ಇನೋವೇಷನ್ ವಿವಿ ಯೋಜನೆಯಲ್ಲಿ ಮೈಸೂರು ವಿವಿಯನ್ನು ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಸಾಯನಿಕ ಜೀವಶಾಸ್ತ್ರ ಹಾಗೂ ಮೂಲ ಔಷಧಗಳ ಬಗ್ಗೆ ಸಂಶೋಧನಾ ಕಾರ್ಯ ಕೈಗೊಳ್ಳಲು ಅಂತಾರಾಷ್ಟ್ರೀಯ ರಾಸಾಯನಿಕ ಜೀವಶಾಸ್ತ್ರ ಮತ್ತು ಮೂಲ ಔಷಧಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ 30 ರಿಂದ 40 ಕೋಟಿ ಅಗತ್ಯವಿದ್ದು, ವಿವಿಧ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ಈ ಬಾರಿಯ ಬಟೆಟ್ನಲ್ಲಿ 2 ಕೋಟಿ ಒದಗಿಸಲಾಗಿದೆ. ಕುಲಸಚಿವ ಪ್ರೊ. ಪಿ.ಎಸ್. ನಾಯಕ್, ಜಯದೇವರಾಜ ಅರಸ್ ಇದ್ದರು.
'ರಾಸಾಯನಿಕ ಬಳಕೆಯಿಂದ ಆಹಾರ ಉತ್ಪಾದನೆ ಕುಂಠಿತ'
ಕ.ಪ್ರವಾರ್ತೆ ಚನ್ನರಾಯಪಟ್ಟಣ ಮಾ. 27
ಅತಿ ಹೆಚ್ಚಿನ ರಾಸಾಯನಿಕ ಪದಾರ್ಥ ಬಳಕೆಯಿಂದ ಭೂಮಿ ಹಾಳಾಗಿ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ಹಾಸನ ಕೃಷಿ ವಿಜ್ಞಾನ ಕಾಲೇಜಿನ ಡೀನ್ ಡಾ.ಎಲ್. ಮಂಜುನಾಥ್ ತಿಳಿಸಿದರು.
ಅವರು ಪಟ್ಟಣದ ಹೇಮಾವತಿ ಕಲ್ಯಾಣ ಮಂಟಪದಲ್ಲಿ ಆದಿಚುಂಚನಗಿರಿ ಕಾಲೇಜು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಅಕಾಡೆಮಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಆಹಾರ ಭದ್ರತೆ ಎಂಬ ವಿಚಾರವಾಗಿ ಉಪನ್ಯಾಸ ನೀಡಿ, 60ರ ದಶಕದಲ್ಲಿದ್ದ ರೈತ ಒಕ್ಕಲುತನ ನಿಷ್ಠೆ ಈಗ ಇಲ್ಲವಾಗಿದ್ದು ಕುಟುಂಬದ ಕಸುಬು ಇಲ್ಲವಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮೀಜಿ ಆಶೀರ್ವಚನ ನೀಡಿ, ದೇಶದಲ್ಲಿ ವಿಜ್ಞಾನಿಗಳ ಕೊರತೆ ಬಗ್ಗೆ ಮಾಜಿ ರಾಷ್ಟ್ರಪತಿ ಅಬ್ದುಲ್ಕಲಾಂ ತಿಳಿಸಿದ್ದನ್ನು ಸ್ಮರಿಸಿ ಈ ಬಗ್ಗೆ ಬಾಲಗಂಗಾಧರನಾಥ ಶ್ರೀಗಳು ರಾಜ್ಯದಲ್ಲಿ 37 ವಿಜ್ಞಾನ ಕಾಲೇಜುಗಳನ್ನು ಗ್ರಾಮೀಣ ಭಾಗದಲ್ಲಿ ಆರಂಭಿಸಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದನ್ನು ತಿಳಿಸಿದರು. ಶಿಕ್ಷಣ ಅಧಿಕಾರಿ ಪ್ರೊ. ಎನ್.ಜಯರಾಮ್, ಡಾ. ಮಹದೇವ್, ಮುನಿಸ್ವಾಮಿಗೌಡ, ಡಾ. ಎಲ್. ಮಂಜುನಾಥ ಅವರನ್ನು ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

