ಉತ್ತಮ ನಡತೆಯಿಂದ ಸಂಬಂಧ ಗಟ್ಟಿ

Updated on: 

ಕನ್ನಡಪ್ರಭ ವಾರ್ತೆ೤ ಹಾಸನ೤ ಮಾ 30
ಒಡೆದು ಹೋಗಿರುವ ಎಲ್ಲಾ ಪ್ರಗತಿಪರ ಹಾಗೂ ಭಾಷಾ ಸಂಘಟನೆಗಳು ಪ್ರತಿಷ್ಠೆ ಬದಿಗಿಟ್ಟು ಕನ್ನಡ ಭಾಷೆ, ಸಂಸ್ಕೃತಿ, ಬದುಕು ಹಸನಾಗಲು ಒಗ್ಗೂಡಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಎಂ.ಎಸ್.ಶೇಖರ್ ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ನಡೆದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ಸಮಾಜದ ನಡುವೆ ಸಮಷ್ಟಿಯ ಒಳಿತಿಗಾಗಿ ಹಾತೊರೆಯುವ ಮನಸ್ಸುಗಳು ಎಲ್ಲ ಸಮುದಾಯಗಳಲ್ಲೂ ಇವೆ ಎನ್ನುವುದಕ್ಕೆ ಒಂದು ಜೀವಂತ ಉದಾಹಣೆ ನಮ್ಮ ಮುಂದಿದೆ. ನಮ್ಮೆಲ್ಲರ ಅತ್ಮಸಾಕ್ಷಿಯಂತಿರುವ ದೇವನೂರು ಮಹದೇವರ ಎದೆಗೆ ಬಿದ್ದ ಅಕ್ಷರ ಕೃತಿ ಎರಡೇ ತಿಂಗಳ ಅಂತರದಲ್ಲಿ ಆರು ಮರು ಮುದ್ರಣ ಕಂಡಿರುವುದು ಸಮಾಜದಲ್ಲಿ ಇನ್ನೂ ಉಳಿದಿರುವ ಸದಭಿರುಚಿಯ ಸಂಕೇತವಾಗಿದೆ ಎಂದರು.
ಮಾಧ್ಯಮಗಳು ಮನರಂಜನೆಯ ಹೆಸರಿನಲ್ಲಿ ಹಿಂಸೆ ಕ್ರೌರ್ಯ ಅತ್ಯಾಚಾರದ ಘಟನೆಗಳನ್ನು ವೈಭವಿಕರಿಸುತ್ತಿರುವುದು ಆತಂಕದ ಸಂಗತಿ. ಹೇಗೆ ವ್ಯಕ್ತಿಯ ಖಾಸಗಿ ಬದುಕಿನ ಕ್ಷಣಗಳನ್ನು ಈ ಮಾಧ್ಯಮಗಳು ಬೆತ್ತಲೆಗೊಳಿಸುವುದನ್ನು ನೋಡಿದರೆ ದಿಗಿಲಾಗುತ್ತದೆ. ನನ್ನ ಮನವಿ ಏನೆಂದರೆ, ಮಾಧ್ಯಮಗಳು ತಮಗೆ ತಾವೇ ನೈತಿಕ ಚೌಕಟ್ಟು ಹಾಕಿಕೊಳ್ಳುವುದು ಹೆಚ್ಚು ಆರೋಗ್ಯಕರ ಎನಿಸುತ್ತದೆ ಎಂದು ಹೇಳಿದರು.
ತೆರೆದ ಮನಸ್ಸಿನಿಂದ ನೋಡುವ: ಸಾಹಿತಿ ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಬಾರದು. ನಮ್ಮ ಬದುಕು ರೂಪಿಸುವ ಜಗತ್ತಿನ ಎಲ್ಲಾ ವಿದ್ಯಮಾನಗಳನ್ನು ತೆರೆದ ಮನಸ್ಸಿನಿಂದ ನೋಡುವ, ಹೃದಯ ವೈಶಾಲ್ಯತೆಯಿಂದ ಕಾಣುವ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು. ಸಾಹಿತ್ಯ, ಸಂಸ್ಕೃತಿ, ಕಲೆ, ವಿಚಾರ, ಧರ್ಮ, ಆಧ್ಯಾತ್ಮ, ಸಂಘಟನೆ, ಆಧುನಿಕತೆ, ವಿಜ್ಞಾನ ಮುಂತಾದವುಗಳ ಬಗೆಗಿನ ಚರ್ಚೆ, ಚಿಂತನೆ ಎಂದರೆ ಅವು ಬೇರೇನು ಅಲ್ಲದೆ ಬದುಕಿನ ಬಗೆಗಿನ ಚರ್ಚೆ, ಚಿಂತನೆ ಎಂತಲೇ ಅರ್ಥ. ನಿಜವಾದ ಮನುಷ್ಯ ಸಂಬಂಧ ಗಟ್ಟಿಗೊಳ್ಳುವುದು ಪ್ರೀತಿ, ಪ್ರೇಮ, ಪ್ರಾಮಾಣಿಕತೆ ಹಾಗೂ ಉತ್ತಮ ನಡವಳಿಕೆಗಳಿಂದ ವಿನಾ ಅರ್ಥವಿಲ್ಲದ ಜಾತಿ, ಅಸ್ಪೃಶ್ಯತೆ, ಲಿಂಗ ತಾರತಮ್ಯ, ಮತ, ಧರ್ಮ, ಅಂತಸ್ತು, ಐಶ್ವರ್ಯದಿಂದಲ್ಲ ಎಂದು ವಿಶ್ಲೇಷಿಸಿದರು.
ಜಿಲ್ಲೆಗೊಂದು ವಿವಿ ಸ್ಥಾಪಿತವಾಗಲಿ:   ಮಲೆನಾಡಿನ ಹೆಬ್ಬಾಗಿಲು ಗೊರೂರು ಜಲಾಶಯದ ಉದ್ಯಾನವನ್ನು ವಿಶ್ವಪ್ರಸಿದ್ಧಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಜಲಾಯದಂತೆ ಪ್ರವಾಸೋದ್ಯಮ ಕೇಂದ್ರವಾಗಿ ಪರಿವರ್ತಿಸಬೇಕು. 1992ರಲ್ಲಿ ಪ್ರಾರಂಭವಾಗಿರುವ ನಮ್ಮ ಜಿಲ್ಲೆಯ ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿಗೆ 21 ವರ್ಷಗಳು ತುಂಬುತ್ತಿವೆ. ಕರ್ನಾಟಕ ಸರ್ಕಾರದ ಜ್ಞಾನ ಆಯೋಗದ ವರದಿಯಂತೆ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಆಗಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಚಿಪ್ಸ್ ಉದ್ಯಮ:  ಜಿಲ್ಲೆಯ ವಾಣಿಜ್ಯ ಬೆಳೆ ಆಲೂಗೆಡ್ಡೆ. ಈ ಬೆಳೆಯಿಂದ ತಯಾರಿಸ ಬಹುದಾದ ಚಿಪ್ಸ್ ಉದ್ಯಮ ಜಿಲ್ಲೆಯಲ್ಲಿಯೇ ಪ್ರಾರಂಭವಾಗ ಬೇಕಾಗಿದೆ. ಇದರಿಂದ ಜಿಲ್ಲೆಯ ರೈತರು ಆರ್ಥಿಕವಾಗಿ ಸದೃಢವಾಗಲು ಸಾಧ್ಯ. ಹಾಸನ ನಗರಸಭೆ ಮಹಾನಗರ ಪಾಲಿಕೆಯಾಗಿ ಪರಿವರ್ತನೆಯಾಗಬೇಕು.
ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ಪರವಾದ ಧ್ವನಿ ಪಕ್ಕದ ತಮಿಳುನಾಡಿಗೆ ಹೋಲಿಸಿದರೆ ಯಾವಾಗಲು ಕಡಿಮೆಯೇ. ಹಾಗಾಗಿ ಅಂತಹ ವಾತಾವರಣ ಹೆಚ್ಚಾಗಬೇಕು. ಕೇಂದ್ರ ಸರ್ಕಾರ ನಾನಾ ಕಡೆ ಕೇಂದ್ರೀಯ ವಿಶ್ವವಿದ್ಯಾನಿಲಯ ಪ್ರಾರಂಭಿಸಲು ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಇಲ್ಲಿ ಪ್ರಾರಂಭಸಬೇಕು ಎಂದು ಆಶಿಸಿದರು.
ಕ್ರೀಡೆಗೆ ಜಿಲ್ಲೆಯಲ್ಲಿ ಅದರಲ್ಲೂ ಗ್ರಾಮೀಣ ಕ್ರೀಡೆಗೆ ಪ್ರೋತ್ಸಾಹ ನೀಡುವ ಕ್ರೀಡಾಕೇಂದ್ರಗಳು ಪ್ರಾರಂಭವಾಗಬೇಕು. ಜಿಲ್ಲೆಯ ಎಚ್.ಎನ್.ಗಿರೀಶ್  2012ರಲ್ಲಿ ಲಂಡನ್‌ನಲ್ಲಿ ನಡೆದ ಪ್ಯಾರಾ ಒಲಂಪಿಕ್‌ನ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಪಡೆದಿರುವುದು ಶ್ಲಾಘನೀಯ ಎಂದು ಹೇಳಿದರು.
ಐಕ್ಯತೆಯ ಭಾವನೆ ಮೊಳಗಿದಾಗ ಏಕೀಕರಣ: ಡಾ. ಲತಾ   
ಕರ್ನಾಟಕ ಏಕೀಕರಣವಾಗಿದೆ ಅಂತಾರೆ. ಆದ್ರೆ ಕನ್ನಡಿಗರ ಏಕೀಕರಣ ಇನ್ನೂ ಆಗಿಲ್ಲ ಎಂದು ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಡಾ.ಲತಾ ರಾಜಶೇಖರ್ ಹೇಳಿದರು. ಕನ್ನಡಿಗರೆಲ್ಲರ ಮನಸ್ಸಿನಲ್ಲಿ ಮೊದಲು ನಾವೆಲ್ಲರು ಕನ್ನಡಿಗರು ಎಂಬ ಐಕ್ಯತೆಯ ಭಾವನೆ ಮೊಳಗಿದಾಗ ಮಾತ್ರ ಕನ್ನಡಿಗರ ಏಕೀಕರಣ ಸಾಧ್ಯ. ಅಷ್ಟೇ ಅಲ್ಲದೆ ಸರ್ಕಾರ  ಮಕ್ಕಳ ಸಂಖ್ಯೆ ಕ್ಷೀಣಿಸಿದೆ ಎಂಬ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಈಗಾಗಲೇ ಸುಮಾರು 10 ಸಾವಿರಕ್ಕೂ ಹೆಚ್ಚು ಶಾಲೆಗಳು ಮುಚ್ಚಿವೆ. ಕನ್ನಡ ಶಾಲೆಗಳನ್ನು ಮುಚ್ಚುವಂತಹ ಕಾರ್ಯವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
 ಶಾಲೆಗಳನ್ನು ಮುಚ್ಚುತ್ತಿಲ್ಲ. ಇತರೆ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತದೆ ಎಂದು  ಸರ್ಕಾರ ಹೇಳುತ್ತಿದೆ. ವಿಲೀನಗೊಳಿಸುವುದು ಮತ್ತು ಅಂತ್ಯಗೊಳಿಸುವುದರ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಆದ್ದರಿಂದ ಕನ್ನಡವನ್ನು ಪೋಷಕರು ತಮ್ಮ ಮಕ್ಕಳಿಗೆ ಕಲಿಸುವಂತಹ ಕಾರ್ಯ ಮಾಡಬೇಕು. ಕನ್ನಡಕ್ಕೆ ಪ್ರೋತ್ಸಾಹ ನೀಡಿದಾಗ ಭಾಷೆ ಮತ್ತಷ್ಟು ಬೆಳೆಯಲು ಸಾಧ್ಯ ಎಂದ ಅವರು, ಕನ್ನಡದಲ್ಲಿರುವಷ್ಟು ಮಹಾಕಾವ್ಯಗಳು ಜಗತ್ತಿನ ಬೇರೆ ಯಾವುದೇ ಭಾಷೆಗಳಲ್ಲಿ ಇಲ್ಲ ಎಂದು ತಿಳಿಸಿದರು.  ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆಲಗು ನಟ ಚಿರಂಜೀವಿಯನ್ನು ಕರೆಸಿ ತೆಲುಗಿನಲ್ಲಿ ಭಾಷಣ ಮಾಡಿಸಿ ಮತಯಾಚಿಸುವಂತಹ ಕೆಟ್ಟ ಸಂಸ್ಕೃತಿಯನ್ನು ರಾಜಕೀಯ ಪಕ್ಷಗಳು ನಡೆಸುತ್ತಿದ್ದು, ಈ ರೀತಿಯ ಕಾರ್ಯಕ್ಕೆ ರಾಷ್ಟ್ರೀಯ ಪಕ್ಷಗಳು ಮುಂದಾದಲ್ಲಿ ಕರವೇ ಇದನ್ನು ಉಗ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಂತ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವಂತರನ್ನು ಗುರುತಿಸಿ ಅಂತವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.  ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಜನಾರ್ದನ್, ಉದಯರವಿ, ಜಿಲ್ಲಾ ಕಸಾಪ ಗೌರವಾಧ್ಯಕ್ಷ ಎಚ್.ಎಲ್.ಮಲ್ಲೇಶ್‌ಗೌಡ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ಜಿಲ್ಲಾ ಕಸಾಪ ಸಾಹಿತ್ಯ ಸಿರಿ ಸಂಪಾದಕ ಅರಕಲಗೂಡು ಜಯಕುಮಾರ್, ಕರವೇ ಜಿಲ್ಲಾಧ್ಯಕ್ಷ ರವೀಂದ್ರ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com