ಹಾಸನ

ಕ್ಷೇತ್ರದ ಆಳ ಅರಿಯುವುದು ಸುಲಭದ ಮಾತಲ್ಲ

Published On :

ಸದ್ಯಕ್ಕೆ ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಅವರೇ ರೇವಣ್ಣಗೆ ಸ್ಪರ್ಧೆ ಒಡ್ಡಬಲ್ಲರು. ಆದರೆ ಜಿಪಂ ಮಾಜಿ ಅಧ್ಯಕ್ಷ ಹೆರಗು ವಾಸುಗೆ ಕಾಂಗ್ರೆಸ್ ಟಿಕೆಟ್  ನೀಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನೂ ಬಿಜೆಪಿ, ಕೆಜೆಪಿಗೆ ಹೊಳೆನರಸೀಪುರ ಕ್ಷೇತ್ರದ ರಾಜಕೀಯ ಭೂಪಟದ  ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂಬಂಥ ಪರಿಸ್ಥಿತಿ ಇದೆ

- ದಯಾಶಂಕರ ಮೈಲಿ
ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ  ಉದ್ದ-ಅಗಲ-ಆಳವನ್ನು ಅರಿಯುವುದು ಸುಲಭದ ಮಾತಲ್ಲ. ಇಲ್ಲಿ ರಾಜಕಾರಣದ ಎಲ್ಲಾ ಮುಖ್ಯ ಕಾಲುವೆಗಳು, ಉಪ ಕಾಲುವೆಗಳು ಹರಿದು ಹೋಗಿವೆ.
1994 ರವರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ದಿವಂಗತ ಮಾಜಿ ಸಚಿವ ಜಿ.ಪುಟ್ಟಸ್ವಾಮಿಗೌಡರ ಜಿದ್ದಾಜಿದ್ದಿಯ ರಾಜಕಾರಣಕ್ಕೆ ವೇದಿಕೆಯಾಗಿದ್ದಲ್ಲದೇ ಸಾಕ್ಷಿಯೂ ಆಗಿದ್ದ ಈ ಕ್ಷೇತ್ರ ಈಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣನವರ ರಾಜಕೀಯ ಅಖಾಡವಾಗಿದೆ.
ಅಖಾಡದಲ್ಲಿ ರೇವಣ್ಣಗೆ ಸಮ ಸಮನಾಗಿ ಕುಸ್ತಿ ಮಾಡುವ ಮಂದಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇತರೇ  ಪಕ್ಷಗಳಲ್ಲಿ ಕಾಣುತ್ತಿಲ್ಲ. ಇಲ್ಲಿ ಬಿಜೆಪಿ, ಕೆಜೆಪಿಯನ್ನು ದುರ್ಬಿನ್ ಹಾಕಿಕೊಂಡು ನೋಡಬೇಕಾದ ಪರಿಸ್ಥಿತಿ ಇದೆ. ಕ್ಷೇತ್ರ ಜೆಡಿಎಸ್ ಭದ್ರಕೋಟೆಯೇ. 1978 ರಿಂದ 2008 ರವರೆಗೆ ನಡೆದ 8 ಚುನಾವಣೆಗಳಲ್ಲಿ ಜನತಾದಳ 7 ಬಾರಿ ಗೆದ್ದಿದ್ದರೇ, ಕಾಂಗ್ರೆಸ್ 2 ಬಾರಿ ಗೆದ್ದಿದೆ.
ಸೋಲಿನ ರುಚಿಯನ್ನೂ ತೋರಿಸಿದೆ:  ಈ ಎಲ್ಲಾ ಚುನಾವಣೆಗಳಲ್ಲೂ ಜನತಾದಳ ಮತ್ತು ಕಾಂಗ್ರೆಸ್ ನಡುವೆಯೇ ಹೋರಾಟ ನಡೆದಿದೆ. ದೇವೇಗೌಡರು ಮತ್ತು ರೇವಣ್ಣಗೂ ಈ ಕ್ಷೇತ್ರ ಸೋಲಿನ ರುಚಿ ತೋರಿಸಿದೆ ಎಂಬುದು ಮುಖ್ಯ.  1994 ರಲ್ಲಿ ಘಟಾನುಘಟಿ ರಾಜಕಾರಣಿ ಮತ್ತು ತಂದೆಯ ಒರಗೆಯವರಾದ ಜಿ. ಪುಟ್ಟಸ್ವಾಮಿಗೌಡರ ವಿರುದ್ಧ 4 ಓಟುಗಳಿಂದ ಗೆದ್ದಿದ್ದ ರೇವಣ್ಣ, ದಿವಂಗತ ಅಣ್ಣೆಚಾಕೇನಹಳ್ಳಿ ದೊಡ್ಡೇಗೌಡರ ವಿರುದ್ಧ 1999 ರಲ್ಲಿ 22 ಸಾವಿರ ಮತಗಳಿಂದ ಸೋಲು ಕಂಡಿದ್ದರು. 1994 ರ ಚುನಾವಣೆಯಲ್ಲಿ ರೇವಣ್ಣ ಗೆದ್ದ ನಂತರ ದೇವೇಗೌಡರೆಂಬ ಹೋರಿ ಹೋಗಿ ಹೋರಿ ಕರು ಬಂತಂತೆ ಆಯಿತು.
ದೇವೇಗೌಡರು ಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಹೊಳೆನರಸೀಪುರ ತಾಲೂಕಿನ ಬಹುತೇಕ ಭಾಗ ನೀರಾವರಿ ಪ್ರದೇಶವಾಗಿದೆ. ಹೀಗಾಗಿ ಗೌಡರು ಆಧುನಿಕ ಭಗೀರಥನಂತೆ ನೀರಾವರಿ ವಿಷಯದಲ್ಲಿ ಕೆಲಸ ಮಾಡಿರುವುದನ್ನು ಜನತೆ ಈಗಲು ನೆನಪು ಮಾಡಿಕೊಳ್ಳುತ್ತಾರೆ. 1989 ರಲ್ಲಿ ಜಿ.ಪುಟ್ಟಸ್ವಾಮಿಗೌಡರ ವಿರುದ್ಧ  ದೇವೇಗೌಡರು 7 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋತಿದ್ದರು. ಜಿ. ಪುಟ್ಟಸ್ವಾಮಿಗೌಡ ಮತ್ತು ದಿ. ಮಾಜಿ ಸಚಿವ ಎಚ್.ಸಿ. ಶ್ರೀಕಂಠಯ್ಯ ನಿಧನ ನಂತರ ಕಾಂಗ್ರೆಸ್ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದು ಜೆಡಿಎಸ್ ಪ್ರಾಬಲ್ಯ ಮೆರೆಯಲು ಕಾರಣವಾಗಿದೆ ಎನ್ನಬಹುದು.
ಭೂಪಟದ ಹತ್ತಿರ ಸುಳಿಯಲೂ ಸಾಧ್ಯವಿಲ್ಲ:  ರೇವಣ್ಣ ಅಭಿವೃದ್ಧಿಯಲ್ಲಿ ಮುಂದು. ಆದರೆ ನಡವಳಿಕೆಯಲ್ಲಿ ತುಂಬಾ ಹಿಂದೆ. ತಮ್ಮ ನಡವಳಿಕೆಯಿಂದ ತಾವೇ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮರೆಯುವಂತೆ ಆಗುತ್ತಿದೆ ಎಂದು ಹೇಳುತ್ತಿದ್ದರೂ ರೇವಣ್ಣಗೆ ಅಧಿಕಾರ ಸಿಕ್ಕಾಗಲೆಲ್ಲಾ ಜಿಲ್ಲೆಯ ಅಭಿವೃದ್ಧಿ ಆಗಿದೆ. ಈ ಹಿನ್ನೆಲೆಯಲ್ಲಿ ರೇವಣ್ಣಗೆ ಅಧಿಕಾರ ಸಿಗಬೇಕು ಎಂಬ ಮಾತುಗಳು ಕೂಡ ಇದೇ ಕಾಲಕ್ಕೆ ಕೇಳಿ ಬರುತ್ತಿವೆ. ರೇವಣ್ಣಗೆ ಪತ್ನಿ ಭವಾನಿ  ರಾಜಕಾರಣದಲ್ಲಿ ಸಾಥ್ ನೀಡುತ್ತಿದ್ದಾರೆ.
ಸದ್ಯಕ್ಕೆ ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಅವರೇ ರೇವಣ್ಣಗೆ ಸ್ಪರ್ಧೆ ಒಡ್ಡಬಲ್ಲರು. ಆದರೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆರಗು ವಾಸು ಅವರಿಗೆ ಕಾಂಗ್ರೆಸ್ ಟಿಕೆಟ್  ನೀಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.  ಇನ್ನೂ ಬಿಜೆಪಿ, ಕೆಜೆಪಿಗೆ ಹೊಳೆನರಸೀಪುರ ಕ್ಷೇತ್ರದ ರಾಜಕೀಯ ಭೂಪಟದ  ಹತ್ತಿರ ಸುಳಿಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಮಾಜಿ ಪ್ರಧಾನಿ ದೇವೇಗೌಡರಿಗೆ ಉಜ್ವಲ ರಾಜಕೀಯ ಭವಿಷ್ಯಕೊಟ್ಟ ಹೊಳೆನರಸೀಪುರ ಕ್ಷೇತ್ರದಿಂದ ಕಳೆದ 3 ಅವಧಿಯಿಂದಲೂ ಸತತವಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿರುವ ಮಾಜಿ ಸಚಿವ ಎ.ಡಿ.ರೇವಣ್ಣ ಅವರೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ.
ಇಲ್ಲಿ ಹೇಳಿಕೊಳ್ಳುವ ಜ್ವಲಂತ ಸಮಸ್ಯೆಗಳೇನು ಇಲ್ಲ. ಆದರೆ ಕುಡಿಯುವ ನೀರಿನ ಸಮಸ್ಯೆ, ಆಶ್ರಯ ಮನೆ ಹಂಚಿಕೆ ಮೊದಲಾದ ಸಣ್ಣಪುಟ್ಟ ಕೊರತೆಗಳು ಇವೆ. ಯಗಚಿಯಿಂದ ಹೊಳೆನರಸೀಪುರ ತಾಲೂಕಿಗೆ ಕಾಲುವೆ ಮೂಲಕ ನೀರು ಹರಿಸುವ ಯೋಜನೆ ಪ್ರಗತಿಯಲ್ಲಿದ್ದು, ಅದು ಪೂರ್ಣವಾಗಬೇಕಿದೆ. ಇಲ್ಲಿ ಜೆಡಿಎಸ್‌ಗೆ   ಕಾಂಗ್ರೆಸ್ ಪೈಪೋಟಿ ನೀಡಲಿದೆ ಅನ್ನೋ ಮಾತಿದ್ದರೂ ಜೆಡಿಎಸ್ ಅಭ್ಯರ್ಥಿ ಗೆಲುವು ಕಷ್ಟವಾಗದು ಎಂದೇಳುವ ಸ್ಥಿತಿ ಇದೆ.

ಎಷ್ಟು ಹೋಬಳಿಗಳು, ಎಷ್ಟು ಜಿಪಂ ಕ್ಷೇತ್ರಗಳು
ಕ್ಷೇತ್ರದಲ್ಲಿ 5 ಹೋಬಳಿಗಳಿದ್ದು, 4 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿವೆ. ಕಸಬಾ, ಹಳೇಕೋಟೆ, ಹಾಸನ ತಾಲೂಕಿನ ಶಾಂತಿಗ್ರಾಮ ಮತ್ತು  ದುದ್ದ ಹಾಗೂ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಗಳು ಸೇರಿವೆ.

ಮತದಾರರು ಎಷ್ಟು
ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು 90 ಸಾವಿರ ಇದ್ದು, ಇವರೇ ಪ್ರಮುಖ ಪಾತ್ರ ವಹಿಸೋದು ಖಚಿತ. ಉಳಿದಂತೆ ಕುರುಬರು 30 ಸಾವಿರ, ಎಸ್ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ 35 ಸಾವಿರ ಮತ್ತು 15 ಸಾವಿರ ಮುಸ್ಲಿಂ ಮತದಾರರಿದ್ದಾರೆ. 2011 ರ ಜನಗಣತಿ ಪ್ರಕಾರ 1,89,986 ಜನಸಂಖ್ಯೆ ಇದ್ದು, ಅದರಲ್ಲಿ  96,449  ಪುರುಷರು, 93,537  ಮಂದಿ ಮಹಿಳೆಯರು ಇದ್ದಾರೆ.

ದೇವೇಗೌಡರು, ರೇವಣ್ಣ ಸೋತಿದ್ದು ಯಾವಾಗ, ಗೆದ್ದಿದ್ದು ಯಾವಾಗ?
1978ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಡಿ.ದೇವೇಗೌಡ 33, 992 ಮತ ಪಡೆದು ಗೆದ್ದರೇ, ಕಾಂಗ್ರೆಸ್‌ನ ಕೆ.ಕುಮಾರಸ್ವಾಮಿ 28,472 ಮತ ಪಡೆದು ಸೋತಿದ್ದರು.
1983ರಲ್ಲಿ ಜನತಾಪಕ್ಷದ ದೇವೇಗೌಡರು 37,239 ಮತ ಪಡೆದು ಚುನಾಯಿತರಾದರೆ, ಕಾಂಗ್ರೆಸ್‌ನ ಕೆ.ಕುಮಾರಸ್ವಾಮಿ 28,472 ಮತ ಪಡೆದು ಪರಾಜಿತರಾಗಿದ್ದರು.
1985ರಲ್ಲಿ  ಜನತಾದಳದ ಎಚ್.ಡಿ.ದೇವೇಗೌಡರು 41,230 ಪಡೆದು ವಿಜಯಿಯಾಗಿದ್ದರೇ, ಪಕ್ಷೇತರ ಅಭ್ಯರ್ಥಿ ಜಿ. ಪುಟ್ಟಸ್ವಾಮಿಗೌಡ 39,063 ಮತ ಪಡೆದು ಸೋಲು ಅನುಭವಿಸಿದ್ದರು.
1989ರಲ್ಲಿ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಗೌಡ 53,297 ಮತ ಪಡೆದು ಗೆದ್ದರೇ, ಜನತಾದಳದ ಎಚ್.ಡಿ.ದೇವೇಗೌಡ 45,461 ಮತ ಪಡೆದು ಸೋಲುಂಡರು.
1994ರಲ್ಲಿ ಪ್ರಥಮ ಬಾರಿಗೆ ಜನತಾದಳದ ಎಚ್.ಡಿ.ರೇವಣ್ಣನವರು 47,606 ಮತ ಪಡೆದು ಗೆದ್ದಿದ್ದರೇ, ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿಗೌಡ 47,484 ಮತ ಪಡೆದು ಸೋತರು.
1999ರಲ್ಲಿ ಕಾಂಗ್ರೆಸ್‌ನ ಅಣ್ಣೇಚಾಕೇನಹಳ್ಳಿ ದೊಡ್ಡೇಗೌಡರು 67,151 ಮತ ಪಡೆದು ಗೆದ್ದಿದ್ದರೇ, ಜೆಡಿಎಸ್‌ನ ಎಚ್.ಡಿ.ರೇವಣ್ಣ 44,964 ಮತ ಪಡೆದು ಸೋಲಿನ ರುಚಿ ನೋಡಿದರು.
2004ರಲ್ಲಿ ಜೆಡಿಎಸ್‌ನ ಎಚ್.ಡಿ. ರೇವಣ್ಣ 64,664 ಮತ ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಿ.ಪುಟ್ಟಸ್ವಾಮಿಗೌಡ 32,070 ಮತ ಪಡೆದು  ಪರಾಭವಗೊಂಡಿದ್ದರು.
2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್.ಡಿ.ರೇವಣ್ಣ 27,606 ಮತಗಳ ಅಂತರದಿಂದ  ಗೆಲವು ಸಾಧಿಸಿದ್ದರು. ರೇವಣ್ಣ 77,448 ಮತ ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ದಿ. ಜಿ. ಪುಟ್ಟಸ್ವಾಮಿಗೌಡರ ಸೊಸೆ  ಅನುಪಮ 49,842  ಮತ ಪಡೆದು ಪರಾಭವಗೊಂಡಿದ್ದರು.
----
ಮಹಿಳಾ ಕೋಟಾದ ವೇಷ: ಅಧಿಕಾರ ದಾಹದ ಆಟ
-ಎಸ್.ಎಂ. ಮಂಜನಾಥ್
ಸಕಲೇಶಪುರ: ಕಾಂಗ್ರೆಸ್ ಆತುರಾತುರವಾಗಿ  ಮಹಿಳಾ ಟಿಕೆಟ್ ಹಂಚಿಕೆ ಮಾಡುವುದರ ಮೂಲಕ ತನ್ನ ಗೋರಿಯನ್ನು ತಾನೇ  ತೋಡಿಕೊಳ್ಳಲು ಸಿದ್ಧವಾಗುತ್ತಿದೆಯೇ ಇಂಥದ್ದೊಂದು ಪ್ರಶ್ನೆ ಜಿಲ್ಲೆಯ ಕೆಲವು ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ.
ಸಕಲೇಶಪುರ ಮೀಸಲು ಕ್ಷೇತ್ರದ ಸ್ಥಳೀಯ ಚುನಾವಣೆಗೆ ವೀಕ್ಷಕರಾಗಿ ಬಂದಿದ್ದ ಮೋಟಮ್ಮನವರೇ ದಿಢೀರ್ ಅಭ್ಯರ್ಥಿಯಾಗಿ ಅವತರಿಸಿಬಿಟ್ಟರೇ ಹೇಗೆ ಎಂದು ಪ್ರಶ್ನಿಸುತ್ತಾರೆ ತಾಲೂಕಿನ ಕೆಲ ಮುಖಂಡರು.
ಕಾಂಗ್ರೆಸ್ ನಿಯಮದಂತೆ ತಾಲೂಕು ಮತ್ತು ಜಿಲ್ಲಾ ಸಮಿತಿಗಳ ಮೂಲಕ ಹೋದ ಅಭ್ಯರ್ಥಿಗಳ ಪಟ್ಟಿಯಲ್ಲಿ   ಮೋಟಮ್ಮ ಹೆಸರಿರಲಿಲ್ಲ. ಜಿಲ್ಲೆಯ ಮೂರು ಕ್ಷೇತ್ರಗಳಿಂದ ಮೂವರು ಮಹಿಳಾ ಅಭ್ಯರ್ಥಿ ಹೆಸರು ಇತ್ತು. ಹೊಳೆನರಸೀಪುರದಿಂದ ಒಕ್ಕಲಿಗ ಜನಾಂಗದಿಂದ ಅನುಪಮ, ಬೇಲೂರಿನಿಂದ ಹಿರಿಯ ಕಾಂಗ್ರೆಸ್ ನಾಯಕ ಲಿಂಗಾಯತ ಜನಾಂಗದ ಚಂದ್ರಕಲಾ ಮತ್ತು ಸಕಲೇಶಪುರ ಕ್ಷೇತ್ರದಿಂದ ಶಾರದಾ ಕಾಳಿಂಗಪ್ಪ ಹೆಸರು ಆಕಾಂಕ್ಷಿತರ ಪಟ್ಟಿಯಲ್ಲಿದ್ದವು.
ಮೋಟಮ್ಮ ಮೂಡಿಗೆರೆಯಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ವಿರುದ್ಧ  ಪರಾಭವಗೊಂಡ ನಂತರ ನಿರಂತರ ಎರಡು ಬಾರಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಇನ್ನು ಅವರಿಗೆ ನಾಲ್ಕು ವರ್ಷಗಳವರೆಗೆ ಪರಿಷತ್ತಿನ ಅಧಿಕಾರ ಇದೆ. ಆದರೆ ಅದಕ್ಕೂ ರಾಜಿನಾಮೆ ಕೊಟ್ಟು ಸ್ಪರ್ಧಿಸುವ ಔಚಿತ್ಯವೇನಿತ್ತು ಎಂದು ಕಾಂಗ್ರೆಸ್‌ನ ಒಂದು ವಲಯದಲ್ಲಿ  ಚರ್ಚೆಯಾಗುತ್ತಿದೆ. ಸಕಲೇಶಪುರ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲು. ಇಲ್ಲೇ ಮಹಿಳೆಗೆ ಏಕೆ ಅವಕಾಶ ಮಾಡಿಕೊಡಬೇಕು. ಇದಲ್ಲದೇ ಕಾಂಗ್ರೆಸ್ಸಿನಲ್ಲಿ ಈ ಜಿಲ್ಲೆಯಲ್ಲಿ ವೀರಶೈವರಿಗೆ ಎಲ್ಲೂ ಅನುಕೂಲ ಮಾಡಿಕೊಟ್ಟಿಲ್ಲ. ಆದ್ದರಿಂದ ಆ ಜನಾಂಗದ  ಚಂದ್ರಕಲಾ ಅವರಿಗೆ  ಬೇಲೂರಿನಲ್ಲಿ ಟಿಕೆಟ್ ಕೊಡಬಹುದಿತ್ತಲ್ಲ ಎಂಬ ಪ್ರಶ್ನೆಗಳು ಎದ್ದಿವೆ. ಮೋಟಮ್ಮ ವಿಧಾನಪರಿಷತ್ ಸ್ಥಾನ ಉಳಿಸಿಕೊಂಡು, ಅವರೇ ಇಲ್ಲಿನ ಚುನಾವಣಾ ಉಸ್ತುವಾರಿ ವಹಿಸಿಕೊಂಡು, ಅವರಿಗೆ ಸಾಮರ್ಥ್ಯ ಇದ್ದರೆ ಬೇರೊಬ್ಬ ಮಹಿಳೆಯನ್ನೇ ಗೆಲ್ಲಿಸಿಕೊಡಬಹುದಲ್ಲ ಎಂಬ ಪ್ರಶ್ನೆಗಳೂ ಎದ್ದಿವೆ. ಕೆಜೆಪಿಯಿಂದ ತಿಮ್ಮಯ್ಯನವರ ಹೆಸರು ಪ್ರಕಟವಾಗುತ್ತಿದ್ದಂತೆ ಮೋಟಮ್ಮ ಅಭ್ಯರ್ಥಿಯಾಗಬೇಕು ಎಂಬ ಕೂಗಿಗೆ ಬಲ ಬಂದಿತ್ತು. ನಿವೃತ್ತ ಐಎಎಸ್ ಅಧಿಕಾರಿ ತಿಮ್ಮಯ್ಯರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದುಕೊಂಡ ಒಂದು ವಲಯ, ಕಾಂಗ್ರೆಸ್ಸಿಗರ ಒಂದು ಗುಂಪನ್ನು ಎತ್ತಿ ಕಟ್ಟಿ ಮೋಟಮ್ಮರನ್ನು ಕರೆ ತರುವ ಪ್ರಯತ್ನ ತೀವ್ರಗೊಳಿಸಿದೆ.
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು  ಹೊಡೆಯುವ ತಂತ್ರವಿದು ಎಂದು ರಾಜಕೀಯ ವಲಯದಲ್ಲಿ  ಹೇಳಲಾಗುತ್ತಿದೆ. ದಳದ  ಬಲಾಢ್ಯ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿರನ್ನು ದುರ್ಬಲಗೊಳಿಸಿ, ತಿಮ್ಮಯ್ಯರನ್ನು ರಾಜಕೀಯವಾಗಿ  ಮುಗಿಸುವ ಆಲೋಚನೆ ಈ ತಂತ್ರದ ಹಿಂದೆ ಇದೆ ಎಂದೂ ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.